‘ಟಿಆರ್‌ಪಿ ರಾಜು’ ಬಳಿ ₹90 ಕೋಟಿ ಆಸ್ತಿ!

7

‘ಟಿಆರ್‌ಪಿ ರಾಜು’ ಬಳಿ ₹90 ಕೋಟಿ ಆಸ್ತಿ!

Published:
Updated:
‘ಟಿಆರ್‌ಪಿ ರಾಜು’ ಬಳಿ ₹90 ಕೋಟಿ ಆಸ್ತಿ!

ಬೆಂಗಳೂರು: ರಾಜ್ಯದಾದ್ಯಂತ ವ್ಯಾಪಿಸಿದ್ದ ಟಿಆರ್‌ಪಿ ಅಕ್ರಮ ಜಾಲದ ಕಿಂಗ್‌ಪಿನ್‌ ರಾಜು ಅಲಿಯಾಸ್‌ ‘ಟಿಆರ್‌ಪಿ ರಾಜು’ ಗಳಿಸಿದ್ದ ಆಸ್ತಿಯ ಮೌಲ್ಯ ಸುಮಾರು ₹90 ಕೋಟಿ.

ಬಾರ್ಕ್‌ (ಬ್ರಾಡ್‌ಕಾಸ್ಟಿಂಗ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌) ಸಂಸ್ಥೆಯನ್ನು ವಂಚಿಸಿ ಟಿಆರ್‌ಪಿ ತಿರುಚುತ್ತಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ರಾಜು ಹಾಗೂ ಆತನ ಸಹಚರ ಸುರೇಶ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತನ ಆಸ್ತಿ ಮೌಲ್ಯದ ಮಾಹಿತಿಯನ್ನು ಪತ್ತೆ ಹಚ್ಚಿದ್ದಾರೆ.

8ನೇ ತರಗತಿ ಅನುತ್ತೀರ್ಣ ಆಗಿದ್ದ ರಾಜು, ಖಾಸಗಿ ವಾಹಿನಿಯೊಂದರಲ್ಲಿ 2008ರಲ್ಲಿ ಕಚೇರಿ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ. ಅದೇ ಕಚೇರಿಯಲ್ಲೇ ಸಹಾಯಕರ ಮುಖ್ಯಸ್ಥನೂ ಆದ. ನಂತರ, ಪ್ರಭಾವಿಗಳೊಂದಿಗೆ ಒಡನಾಟವಿಟ್ಟುಕೊಂಡು ಧಾರಾವಾಹಿ ನಿರ್ಮಾಣಕ್ಕೂ ಕೈ ಹಾಕಿದ. ಹತ್ತೇ ವರ್ಷದಲ್ಲೇ ಕೋಟ್ಯಧೀಶನಾದ. ಆತನದ್ದು ಎನ್ನಲಾದ ಸುಮಾರು ₹90 ಕೋಟಿಯಷ್ಟು ಆಸ್ತಿ ಸದ್ಯ ಪತ್ತೆಯಾಗಿದೆ. ಇನ್ನಷ್ಟು ಆಸ್ತಿ ಇರಲೂಬಹುದು ಎಂದು ಸಿಸಿಬಿಯ ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ‘ಪ‍್ರಜಾವಾಣಿ’ಗೆ ತಿಳಿಸಿದರು.

’ಉತ್ತರಹಳ್ಳಿಯಲ್ಲಿ ಭವ್ಯ ಬಂಗಲೆ ಕಟ್ಟಿಸಿದ್ದಾನೆ. ನಗರದ ಐದು ಕಡೆ ನಿವೇಶನಗಳಿವೆ. ಆತನ ಕೆಲ ಆಸ್ತಿಯ ದಾಖಲೆಗಳಷ್ಟೇ ಸಿಕ್ಕಿವೆ. ಉಳಿದ ದಾಖಲೆಗಳನ್ನು ಹುಡುಕುತ್ತಿದ್ದೇವೆ. ಐದು ಐಷಾರಾಮಿ ಕಾರುಗಳನ್ನು ಆತ ಬಳಸುತ್ತಿದ್ದ, ಅದರಲ್ಲಿ ಫಾರ್ಚೂನ್‌ ಹಾಗೂ ಬಿಎಂಡಬ್ಲೂ ಕಾರುಗಳನ್ನು ಜಪ್ತಿ ಮಾಡಿದ್ದೇವೆ. ಆತನ ಐಷಾರಾಮಿ ಜೀವನ ನೋಡಿ ನಾವೇ ಬೆರಗಾದೆವು’ ಎಂದರು.

ಪೊಲೀಸರನ್ನು ಮೂರು ಗಂಟೆ ಕಾಯಿಸಿದ: ಪ್ರಕರಣ ದಾಖಲಾಗುತ್ತಿದ್ದಂತೆ ‍ಪುರಾವೆ ಕಲೆಹಾಕಿದ್ದ ಪೊಲೀಸರು, ರಾಜುನನ್ನು ವಶಕ್ಕೆ ಪಡೆಯುವುದಕ್ಕಾಗಿ ಉತ್ತರಹಳ್ಳಿಯಲ್ಲಿರುವ ಆತನ ಮನೆಗೆ ಹೋಗಿದ್ದರು. ಬೆಲ್‌ ಮಾಡಿದರೂ ಯಾರೊಬ್ಬರೂ ಬಾಗಿಲು ತೆರೆದಿರಲಿಲ್ಲ.

ಮೂರು ಗಂಟೆ ಕಾದು ಹೈರಾಣಾದ ಪೊಲೀಸ್‌ ಅಧಿಕಾರಿ, ‘ತನಿಖೆಗೆ ಸಹಕರಿಸದಿದ್ದರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮತ್ತೊಂದು ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು. ಅದಾದ ನಂತರವೇ ಆತ ಬಾಗಿಲು ತೆರೆದಿದ್ದ.

‘ಮನೆಯೊಳಗೆ ಆರೋಪಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದೆವು. ಆರಂಭದಲ್ಲಿ ಸಮರ್ಪಕ ಉತ್ತರ ನೀಡಲಿಲ್ಲ. ಪ್ರಕರಣದ ಕೆಲ ದಾಖಲೆಗಳನ್ನು ಆತನ ಎದುರು ಹಾಜರುಪಡಿಸಿದಾಗ ಕೃತ್ಯವೆಸಗಿದ್ದನ್ನು ಒಪ್ಪಿಕೊಂಡ. ವಿಶೇಷ ತಂಡವೊಂದು ಆತನ ಆಸ್ತಿಯ ಮೌಲ್ಯದ ಬಗ್ಗೆಯೇ ಪ್ರತ್ಯೇಕವಾಗಿ ಮಾಹಿತಿ ಕಲೆಹಾಕುತ್ತಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

‘ಟಿಆರ್‌ಪಿ’ ಅಡ್ಡ ಹೆಸರು: ದೇಶದಲ್ಲಿ ಈ ಹಿಂದೆ ‘ಟೆಲಿವಿಷನ್‌ ಆಡಿಯನ್ಸ್‌ ಮೆಜರ್‌ಮೆಂಟ್‌’ (ಟಿಎಎಂ) ಎಂಬ ಸಂಸ್ಥೆಯು ಟಿಆರ್‌ಪಿ ನಿಗದಿ ಮಾಡುತ್ತಿತ್ತು. ಆ ಕಂಪನಿಯ ನೌಕರನೊಬ್ಬನನ್ನು ರಾಜು ಪರಿಚಯ ಮಾಡಿಕೊಂಡಿದ್ದ. ಆತನಿಂದಲೇ ಟಿಆರ್‌ಪಿ ಅಕ್ರಮದ ಬಗ್ಗೆ ತಿಳಿದುಕೊಂಡಿದ್ದ. ಬಳಿಕ ತನ್ನದೇ ಸಹಚರರ ತಂಡ ಕಟ್ಟಿಕೊಂಡು ಅಕ್ರಮವೆಸಗಲು ಆರಂಭಿಸಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ.

‘ಕೆಲ ವಾಹಿನಿಗಳ ಮುಖ್ಯಸ್ಥರು, ಧಾರಾವಾಹಿ ಹಾಗೂ ರಿಯಾಲಿಟಿ ಶೋ ನಿರ್ದೇಶಕರು, ನಿರ್ಮಾಪಕರು ಆರೋಪಿ ರಾಜುವಿಗೆ ‘ಟಿಆರ್‌ಪಿ ರಾಜು’ ಎಂದೇ ಅಡ್ಡ ಹೆಸರಿಟ್ಟಿದ್ದರು. ಹೊಸ ಧಾರಾವಾಹಿಗಳು ಆರಂಭವಾದಾಗಲೆಲ್ಲ, ನಿರ್ಮಾಪಕರು ಹಾಗೂ ನಿರ್ದೇಶಕರು ರಾಜುನನ್ನು ಸಂಪರ್ಕಿಸುತ್ತಿದ್ದರು. ಆತನೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕವೇ ಶೂಟಿಂಗ್‌ ಆರಂಭಿಸುತ್ತಿದ್ದರು’ ಎಂದು ಅಧಿಕಾರಿ ವಿವರಿಸಿದರು.

‘ಅಂಥ ಧಾರಾವಾಹಿಗಳು ಆರಂಭವಾಗುತ್ತಿದ್ದಂತೆ ಹೆಚ್ಚಿನ ಟಿಆರ್‌ಪಿ ಬರುತ್ತಿತ್ತು. ಅದಕ್ಕೆ ಪ್ರತಿಯಾಗಿ ಜಾಹೀರಾತು ಹಣದಲ್ಲೂ ರಾಜುವಿಗೆ ಕಮಿಷನ್‌ ಹೋಗುತ್ತಿತ್ತು. ಬೇರೆಯವರ ಧಾರಾವಾಹಿಗಳಿಗೆ ಹೆಚ್ಚಿನ ಹಣ ಬರುತ್ತಿರುವುದನ್ನು ನೋಡಿ ಆತನೇ ‘ಕಾವೇರಿ’ ಎಂಬ ಹೊಸ ಧಾರಾವಾಹಿ ನಿರ್ಮಾಣ ಮಾಡಿದ್ದ. ಕೆಲವೇ ದಿನಗಳಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಜಾಹೀರಾತುಗಳು ಬಂದಿದ್ದವು’ ಎಂದು ವಿವರಿಸಿದರು.

ಹಂಸ ಕಂಪನಿ ಉದ್ಯೋಗಿ ಶಾಮೀಲು: ‘ಪ್ರಕರಣದಲ್ಲಿ ಬಂಧಿಸಲಾಗಿರುವ ಇನ್ನೊಬ್ಬ ಆರೋಪಿ ಸುರೇಶ್‌, ಹಂಸ ರಿಸರ್ಚ್‌ ಗ್ರೂಪ್‌ ಕಂಪನಿಯ ಉದ್ಯೋಗಿ. ಟಿಆರ್‌ಪಿ ಪ್ಯಾನಲ್‌ ಮೀಟರ್ ಅಳವಡಿಸಿದ್ದ ಮನೆಗಳ ಮಾಹಿತಿ ಆತನಿಗೆ ಗೊತ್ತಿತ್ತು. ಆತನಿಗೆ ಹಣದ ಆಮಿಷವೊಡ್ಡಿದ್ದ ರಾಜು, ತನ್ನ ಕೆಲಸಕ್ಕೆ ಬಳಸಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

‘ಆತನ ಪೂರ್ವಾಪರದ ಬಗ್ಗೆ ಮಾಹಿತಿ ನೀಡುವಂತೆ ಹಂಸ ಕಂಪನಿಯವರನ್ನು ಕೋರಿದ್ದೇವೆ. ಕೃತ್ಯ ಬಯಲಾದ ಬಳಿಕ ಆತನನ್ನು ಕೆಲಸದಿಂದ ವಜಾ ಮಾಡಿರುವ ಮಾಹಿತಿ ಇದೆ’ ಎಂದರು.

ವಾಹಿನಿಗಳ ಪಾತ್ರದ ಬಗ್ಗೆ ತನಿಖೆ: ಕೆಲ ವಾಹಿನಿಗಳ ಮುಖ್ಯಸ್ಥರು ಈ ಪ್ರಕರಣದಲ್ಲಿ ಶಾಮೀಲಾಗಿರುವ ಅನುಮಾನಗಳು ಇವೆ. ಆ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ರಾಜು ವಿಚಾರಣೆ ವೇಳೆ ಹಲವರ ಹೆಸರು ಬಾಯ್ಬಿಟ್ಟಿದ್ದಾನೆ. ಇದೊಂದು ದೊಡ್ಡ ಅಕ್ರಮ ಎಂಬುದು ಹೇಳಿಕೆಯಿಂದ ಗೊತ್ತಾಗುತ್ತಿದೆ. ಸಮಗ್ರ ತನಿಖೆ ನಡೆಸಿದ ಬಳಿಕವೇ ಜಾಲದ ನೈಜ ರೂವಾರಿಗಳು ಯಾರು ಎಂಬುದು ತಿಳಿಯಲಿದೆ’ ಎಂದರು.

‘ಕಾವೇರಿ’ ಜನಪ್ರಿಯಗೊಳಿಸಲು ಅಕ್ರಮ: ಆರೋಪಿ

‘ಧಾರಾವಾಹಿ ನಿರ್ಮಾಣ ಮಾಡಬೇಕೆಂಬುದು ಬಹುದಿನದ ಕನಸಾಗಿತ್ತು. ಕಾವೇರಿ ಮೂಲಕ ಅದು ಈಡೇರಿತ್ತು. ಸಾಲ ಮಾಡಿ ಹಣ ಹಾಕಿದ್ದೆ. ಅದನ್ನೆಲ್ಲ ವಾಪಸ್‌ ಪಡೆಯಬೇಕು ಎಂಬ ಕಾರಣಕ್ಕೆ ಟಿಆರ್‌ಪಿ ತಿರುಚಲು ಮುಂದಾದೆ’ ಎಂದು ಆರೋಪಿ ರಾಜು ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.

‘ಕಾವೇರಿ’ ಧಾರಾವಾಹಿ ತಂಡಕ್ಕೆ ಎಚ್ಚರಿಕೆ‌

ರಾಜು ನಿರ್ಮಾಪಕನಾಗಿದ್ದ ‘ಕಾವೇರಿ’ ಧಾರಾವಾಹಿಯನ್ನು ಕನ್ನಡ ಧಾರಾವಾಹಿಗಳ ಪಟ್ಟಿಯಿಂದ ತೆಗೆಯುವುದಾಗಿ ಬಾರ್ಕ್‌ ಸಂಸ್ಥೆಯು ಎಚ್ಚರಿಕೆಯ ನೋಟಿಸ್‌ ನೀಡಿದೆ. ಇದರ ಪ್ರತಿಯನ್ನು ಬಾರ್ಕ್‌ ಸಂಸ್ಥೆಯು ಸಿಸಿಬಿ ಪೊಲೀಸರಿಗೆ ನೀಡಿದೆ.

‘ಜೂನ್‌ 26ರಿಂದ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದ್ದ ಕಾವೇರಿ ಧಾರಾವಾಹಿಯ ಟಿಆರ್‌ಪಿ ಕೆಲವೇ ದಿನಗಳಲ್ಲಿ ಹೆಚ್ಚಾಗಿತ್ತು. ಇನ್ನೊಂದು ಧಾರಾವಾಹಿಯ ಟಿಆರ್‌ಪಿ ಅದೇ ರೀತಿ ಇತ್ತು. ಒಂದರ ಹೆಸರನ್ನು ಮಾತ್ರ ಬಾರ್ಕ್‌ ಸಂಸ್ಥೆಯವರು ಖಚಿತಪಡಿಸಿದ್ದಾರೆ. ಇನ್ನೊಂದರ ಹೆಸರನ್ನು ಸದ್ಯದಲ್ಲೇ ನಮಗೆ ತಿಳಿಸಲಿದ್ದಾರೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry