ಭುವನೇಶ್ವರ್‌, ಜಸ್‌ಪ್ರೀತ್ ಬಿರುಗಾಳಿ

7
ಮೂರನೇ ಟೆಸ್ಟ್ ಪಂದ್ಯ: ಭಾರತ ತಂಡಕ್ಕೆ ಮುನ್ನಡೆ; ಹಾಶೀಂ ಆಮ್ಲಾ ಅರ್ಧಶತಕ

ಭುವನೇಶ್ವರ್‌, ಜಸ್‌ಪ್ರೀತ್ ಬಿರುಗಾಳಿ

Published:
Updated:
ಭುವನೇಶ್ವರ್‌, ಜಸ್‌ಪ್ರೀತ್ ಬಿರುಗಾಳಿ

ಜೊಹಾನ್ಸ್‌ಬರ್ಗ್‌: ಕೊಹ್ಲಿ ಬಳಗವನ್ನು ಕಡಿಮೆ ಮೊತ್ತಕ್ಕೆ ಉರುಳಿಸಿ ಮೊದಲ ದಿನ ಕೇಕೆ ಹಾಕಿದ್ದ ದಕ್ಷಿಣ ಆಫ್ರಿಕಾ ತಂಡ ಇಲ್ಲಿನ ವಾಂಡರರ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಗುರುವಾರ ನಿರಾಸೆಗೆ ಒಳಗಾಯಿತು. ವೇಗಿದ್ವಯರಾದ ಭುವನೇಶ್ವರ್‌ ಕುಮಾರ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ದಾಳಿಗೆ ನಲುಗಿದ ಆತಿಥೇಯರು ಮೊದಲ ಇನಿಂಗ್ಸ್‌ನಲ್ಲಿ ಕೇವಲ ಏಳು ರನ್‌ಗಳ ಮುನ್ನಡೆ ಗಳಿಸಲು ಮಾತ್ರ ಶಕ್ತವಾಯಿತು.

ಎರಡನೇ ದಿನದಾಟದ ಮುಕ್ತಾಯಕ್ಕೆ ಭಾರತ ಒಂದು ವಿಕೆಟ್ ಕಳೆದುಕೊಂಡು 49 ರನ್‌ ಗಳಿಸಿದ್ದು 42 ರನ್‌ ಮುನ್ನಡೆ ಸಾಧಿಸಿತು. ಮುರಳಿ ವಿಜಯ್‌ ಮತ್ತು ಕೆ.ಎಲ್‌.ರಾಹುಲ್‌ ಕ್ರೀಸ್‌ನಲ್ಲಿದ್ದಾರೆ.

ಮೊದಲ ದಿನ ಕೊಹ್ಲಿ ಬಳಗವನ್ನು ಬೇಗನೇ ಔಟ್ ಮಾಡಿ ಮೆರೆದಿದ್ದ ಆತಿಥೇಯರು ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡಿತ್ತು. ತಂಡದ ಖಾತೆಯಲ್ಲಿ ಆಗ ಕೇವಲ ಆರು ರನ್‌ಗಳಿದ್ದವು.

ಗುರುವಾರ ಬೆಳಿಗ್ಗೆ 13 ರನ್‌ ಸೇರಿಸುವಷ್ಟರಲ್ಲಿ ಅಪಾಯಕಾರಿ ಡೀನ್ ಎಲ್ಗರ್‌ ವಿಕೆಟ್ ಉರುಳಿಸಿ ಭುವನೇಶ್ವರ್‌ ಕುಮಾರ್ ಭಾರತ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಎಲ್ಗರ್‌ ಬ್ಯಾಟಿನ ಹೊರ ಅಂಚನ್ನು ಸವರಿದ ಚೆಂಡು ಪುಟಿದು ಹಿಂದಕ್ಕೆ ಚಿಮ್ಮಿದಾಗ ವಿಕೆಟ್ ಕೀಪರ್‌ ಪಾರ್ಥಿವ್ ಪಟೇಲ್‌ ನಿರಾಯಾಸವಾಗಿ ಹಿಡಿತಕ್ಕೆ ಪಡೆದರು.

ರಬಾಡ ಜೊತೆಗೂಡಿದ ಹಾಶೀಂ ಆಮ್ಲಾ ಉತ್ತಮ ಹೊಡೆತಗಳ ಮೂಲಕ ವೇಗವಾಗಿ ರನ್ ಸೇರಿಸಿದರು. ರಬಾಡ ಕೂಡ ಬೌಂಡರಿಗಳನ್ನು ಬಾರಿಸಿ ಮಿಂಚಿದರು. ಹೀಗಾಗಿ ಮೂರನೇ ವಿಕೆಟ್‌ಗೆ 64 ರನ್‌ಗಳು ಹರಿದು ಬಂದವು. ತಂಡ ಸುಲಭವಾಗಿ ಭಾರತದ ಮೊತ್ತವನ್ನು ಹಿಂದಿಕ್ಕುವ ಭರವಸೆ ಮೂಡಿದ್ದಾಗ ಇಶಾಂತ್ ಶರ್ಮಾ ಪೆಟ್ಟು ನೀಡಿದರು.

ಗಲ್ಲಿಯಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಅಜಿಂಕ್ಯ ರಹಾನೆ ಪಡೆದ ಸುಂದರ ಕ್ಯಾಚ್‌ಗೆ ರಬಾಡ ಔಟ್‌ ಆದರು. ಸ್ಫೋಟಕ ಬ್ಯಾಟ್ಸ್‌ಮನ್‌ ಡಿವಿಲಿಯರ್ಸ್‌ ಅವರನ್ನು ಭುವನೇಶ್ವರ್‌ ಕುಮಾರ್ ಬೌಲ್ಡ್ ಮಾಡಿ ವಾಪಸ್ ಕಳುಹಿಸಿದರು. ನಾಯಕ ಫಾಫ್ ಡು ಪ್ಲೆಸಿ ಮತ್ತು ಕ್ವಿಂಟನ್‌ ಡಿಕಾಕ್‌ ಕೂಡ ಬೇಗನೇ ಪೆವಿಲಿಯನ್‌ ಸೇರಿದಾಗ ಕೊಹ್ಲಿ ಬಳಗದಲ್ಲಿ ಸಂಭ್ರಮ ಕಳೆಗಟ್ಟಿತು.

ಹಾಶೀಂ ಆಮ್ಲಾ ದಿಟ್ಟ ಆಟ

ಒಂದು ಬದಿಯಲ್ಲಿ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ಹಾಶೀಂ ಆಮ್ಲಾ (61; 121 ಎ, 7 ಬೌಂ) ದಿಟ್ಟ ಆಟವಾಡಿ ತಂಡಕ್ಕೆ ಆಸರೆಯಾದರು. ಅಮೋಘ ಆಟವಾಡಿದ ಅವರು ವೆರ್ನಾನ್‌ ಫಿಲಾಂಡರ್‌ ಜೊತೆ ಏಳನೇ ವಿಕೆಟ್‌ಗೆ 44 ರನ್‌ ಜೋಡಿಸಿ ಮುನ್ನಡೆ ಗಳಿಸುವ ಭರವಸೆ ಮೂಡಿಸಿದರು.

ಇವರಿಬ್ಬರು ಆರು ರನ್‌ಗಳ ಅಂತರದಲ್ಲಿ ಔಟಾದಾಗ ಭಾರತ ಮತ್ತೆ ಹಿಡಿತ ಬಿಗಿಗೊಳಿಸಿತು. ಆದರೆ ಆ್ಯಂಡಿಲೆ ಪಿಶುವಾಯೊ ಮತ್ತು ಮಾರ್ನೆ ಮಾರ್ಕೆಲ್‌ ಆತಿಥೇಯರಿಗೆ ಮುನ್ನಡೆ ಗಳಿಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry