ಚೀನಾ ಹಿತ್ತಿಲಲ್ಲಿ ಇಸ್ರೊ ಕೇಂದ್ರ

7

ಚೀನಾ ಹಿತ್ತಿಲಲ್ಲಿ ಇಸ್ರೊ ಕೇಂದ್ರ

Published:
Updated:
ಚೀನಾ ಹಿತ್ತಿಲಲ್ಲಿ ಇಸ್ರೊ ಕೇಂದ್ರ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಯೆಟ್ನಾಂನಲ್ಲಿ ಸ್ಥಾಪಿಸಿರುವ ಉಪಗ್ರಹ ನಿಗಾ ಕೇಂದ್ರದ ಕಾರ್ಯಾರಂಭಕ್ಕೆ ಭಾರತ ಸಿದ್ಧತೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ವಿಯೆಟ್ನಾಂ ಪ್ರಧಾನಿ ಗುವೆನ್‌ ಕ್ಸುವನ್‌ ಫುಕ್‌ ಅವರು ಗುರುವಾರ ನವದೆಹಲಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳ ನಡುವೆ ನಡೆದಿರುವ ಎರಡು ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು.

ಈ ಒಪ್ಪಂದಗಳ ಪೈಕಿ, ವಿಯೆಟ್ನಾಂನ ಹೊ ಚಿ ಮಿನ್ಹ್‌ ಸಿಟಿಯಲ್ಲಿ ಇಸ್ರೊ ಸ್ಥಾಪಿಸಿರುವ ದತ್ತಾಂಶ ಸ್ವೀಕಾರ, ನಿಗಾ ಮತ್ತು ಟೆಲಿಮೆಟ್ರಿ (ದೂರಸ್ಥಮಾಪಕ) ಕೇಂದ್ರದ ಕಾರ್ಯಾಚರಣೆಗೆ ಸಂಬಂಧಿಸಿದ ಒಪ್ಪಂದವೂ ಸೇರಿದೆ.

‌ಇಸ್ರೊ ಮತ್ತು ವಿಯೆಟ್ನಾಂನ ರಾಷ್ಟ್ರೀಯ ದೂರ ಸಂವೇದಿ ಇಲಾಖೆಯ ನಡುವೆ ನಡೆದಿರುವ ಒಪ್ಪಂದ, ಹೊ ಚಿ ಮಿನ್ಹ್‌ ಸಿಟಿಯಲ್ಲಿ ‘ಉಪಗ್ರಹ ನಿಗಾ ಮತ್ತು ದತ್ತಾಂಶ ಸ್ವೀಕಾರ ಕೇಂದ್ರ ಹಾಗೂ ದತ್ತಾಂಶಗಳ ಸಂಸ್ಕರಣೆ ಸೌಲಭ್ಯ’ ಸ್ಥಾಪನೆಯ ರೂಪು ರೇಷೆಯ ಚೌಕಟ್ಟು ಮತ್ತು ಪರಸ್ಪರ ಸಹಕಾರದ ಷರತ್ತುಗಳನ್ನು ವ್ಯಾಖ್ಯಾನಿಸುತ್ತದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತು ಆಸಿಯಾನ್‌ ರಾಷ್ಟ್ರಗಳ ನಡುವಣ ಸಹಕಾರ ಒಪ್ಪಂದದ ಭಾಗವಾಗಿ 2015ರಲ್ಲಿ ಈ ಅತ್ಯಾಧುನಿಕ ಕೇಂದ್ರವನ್ನು ಇಸ್ರೊ ಸ್ಥಾಪಿಸಿತ್ತು.

ಇದನ್ನು ಇಂಡೊನೇಷ್ಯಾದ ಬಿಯಾಕ್‌ನಲ್ಲಿರುವ ಇಸ್ರೊದ ಕೇಂದ್ರದೊಂದಿಗೆ ಜೋಡಣೆ ಮಾಡಿದರೆ ಭಾರತದಿಂದ ಉಡಾವಣೆ ಮಾಡುವ ಉಪಗ್ರಹಗಳ ಮೇಲೆ ನಿಗಾ ಇಡುವುದರ ಜೊತೆಗೆ ಅವುಗಳು ರವಾನಿಸುವ ದತ್ತಾಂಶಗಳನ್ನು ಸ್ವೀಕರಿಸಲು ಇಸ್ರೊಗೆ ಸಾಧ್ಯವಾಗಲಿದೆ.

ಜೊತೆಗೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಸಾಗರದ ಅಧ್ಯಯನ ಮತ್ತು ಆಗ್ನೇಯ ಏಷ್ಯಾದಲ್ಲಿ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ ಉಪಗ್ರಹಗಳು ರವಾನಿಸಿರುವ ದತ್ತಾಂಶಗಳನ್ನು ವಿಯೆಟ್ನಾಂ ಮತ್ತು ಆಸಿಯಾನ್‌ನ ಇತರ ರಾಷ್ಟ್ರಗಳೊಂದಿಗೂ ಹಂಚಿಕೊಳ್ಳಲೂ ಈ ಕೇಂದ್ರ ಇಸ್ರೊಗೆ ನೆರವಾಗಲಿದೆ.

ದಕ್ಷಿಣ ಚೀನಾ ಸಮುದ್ರದ ಮೇಲೂ ಕಣ್ಣು:  ಈ ಎರಡು ಪ್ರಯೋಜನಗಳನ್ನು ಬಿಟ್ಟು, ಉಪಗ್ರಹ ಕೇಂದ್ರವನ್ನು ಬಳಸಿಕೊಂಡು ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲೆ ಕಣ್ಣಿಡಲೂ ಭಾರತಕ್ಕೆ ಸಾಧ್ಯವಾಗಲಿದೆ.

ದಕ್ಷಿಣ ಚೀನಾ ಸಮುದ್ರವು ಚೀನಾ ಮತ್ತು ಅದರ ನೆರೆಯ ರಾಷ್ಟ್ರಗಳಾದ ವಿಯೆಟ್ನಾಂ, ಬ್ರೂನೈ, ಮಲೇಷ್ಯಾ, ಫಿಲಿಪ್ಪೀನ್ಸ್‌ ಮತ್ತು ತೈವಾನ್‌ ನಡುವಣ ಗಡಿ ವಿವಾದದ ಕೇಂದ್ರ ಬಿಂದುವಾಗಿದೆ.

ಚೀನಾ ವಿರೋಧ...

ಇಸ್ರೊದ ಈ ಕೇಂದ್ರಕ್ಕೆ ಚೀನಾ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.

ಚೀನಾದ ಭೂಭಾಗಕ್ಕೆ ಸಮೀಪದಲ್ಲಿ ಉಪಗ್ರಹ ನಿಗಾ ಕೇಂದ್ರ ಇರುವುದರಿಂದ ಸೇನಾ ಕಾರ್ಯತಂತ್ರದ ದೃಷ್ಟಿಯಿಂದ ಭಾರತಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

2016ರ ಜನವರಿಯಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್‌ ಟೈಮ್ಸ್‌’ ಪತ್ರಿಕೆ ಈ ಯೋಜನೆಯ ವಿರುದ್ಧ ಲೇಖನ ಬರೆದಿತ್ತು.

‘ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದ ಪ್ರಾದೇಶಿಕ ಬಿಕ್ಕಟ್ಟನ್ನು ಇನ್ನಷ್ಟು ಸಂಕೀರ್ಣಗೊಳಿಸಲು ಭಾರತ ನಡೆಸಿರುವ ಯತ್ನ ಇದು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ’ ಎಂದು ಅದು ಹೇಳಿತ್ತು.

ಚೀನಾದ ಆಕ್ಷೇಪದಿಂದಾಗಿ ಈ ಯೋಜನೆಯನ್ನು ಮುಂದುವರೆಸಲು ವಿಯೆಟ್ನಾಂ ಹಿಂದೇಟು ಹಾಕಿತ್ತು. ನಿಗಾ ಕೇಂದ್ರದ ಕಾರ್ಯಾಚರಣೆಗೆ ಬೇಕಾದ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬ ಮಾಡಿತ್ತು.

ಆದರೆ, ಭಾರತವು ಸತತ ಎರಡು ವರ್ಷಗಳ ಕಾಲ ವಿಯೆಟ್ನಾಂ ಜೊತೆ ಮಾತನಾಡಿ ಕೇಂದ್ರದ ಕಾರ್ಯಾರಂಭಕ್ಕೆ ಸಂಬಂಧಿಸಿದ ಒಪ್ಪಂದ ಏರ್ಪಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry