ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಯೋಗಿ ಹಟ್ಟಿ ತಿಪ್ಪೇಶನ ದೊಡ್ಡ ರಥಕ್ಕೆ ಕಾಯಕಲ್ಪ

ಮಾರ್ಚ್‌ 5ರಂದು ತಿಪ್ಪೇರುದ್ರಸ್ವಾಮಿ ಮಹಾಜಾತ್ರೆಗೆ ರಥ ಸಜ್ಜು
Last Updated 26 ಜನವರಿ 2018, 8:58 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಹಟ್ಟಿ ತಿಪ್ಪೇಶನ ಜಾತ್ರೆಯ ಆಕರ್ಷಣೆಯ ಬಿಂದು ದೊಡ್ಡ ರಥ. ಈ ಭಾರೀ ಗಾತ್ರದ ರಥ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಶಿಥಿಲಾವಸ್ಥೆಗೆ ತಲುಪುವ ಆತಂಕ ಎದುರಾಗಿತ್ತು. ಇದರಿಂದ ಎಚ್ಚೆತ್ತ ದೇವಾಲಯ ವ್ಯವಸ್ಥಾಪನಾ ಸಮಿತಿ ಮತ್ತು ಜಿಲ್ಲಾಡಳಿತ ರಥದ ಕಾಯಕಲ್ಪಕ್ಕೆ ಮುಂದಾಗಿರುವುದು ಭಕ್ತರಲ್ಲಿ ಸಂತಸವನ್ನು ಉಂಟುಮಾಡಿದೆ.

ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ಶ್ರೀಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾ ಜಾತ್ರೆ ಪ್ರತಿವರ್ಷ ಮಾರ್ಚ್‌ ತಿಂಗಳ ಚಿತ್ತಾನಕ್ಷತ್ರದಲ್ಲಿ ನಡೆಯುತ್ತದೆ. ರಥೋತ್ಸವಕ್ಕೆ ಹರಕೆ ಹೊತ್ತು ಲಕ್ಷಾಂತರ ಭಕ್ತರು, ರಾಜ್ಯದ ನಾನಾ ಭಾಗಗಳಿಂದ ಬಂದು ದೇಗುಲದ ಜೊತೆಗೆ ಸುಂದರವಾಗಿ ಅಲಂಕಾರಗೊಂಡ ರಥವನ್ನು ವೀಕ್ಷಿಸುತ್ತಾರೆ. ಜಾತ್ರೆ ವೇಳೆ  ಅಲಂಕೃತ ರಥವು ನೋಡುಗರ ಕಣ್ಮನ ಸೆಳೆಯುತ್ತದೆ.

ಇಂತಹ ಬೃಹತ್‌ ರಥವು ಹಲವು ವರ್ಷಗಳಿಂದ ದುರಸ್ತಿ ಕಾಣದೇ ಹಾಗೇ ಇತ್ತು. ಜಾತ್ರೆ ವೇಳೆ ಅಪಾಯ ಸಂಭವಿಸದಂತೆ ರಥ ನಡೆಸಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದರು. ಆದರೆ ಪ್ರಸಕ್ತ ಸಾಲಿನ ಜಾತ್ರೆಗೆ ಹೊಸದಾದ ಮರಮುಟ್ಟುಗಳನ್ನು ಬಳಸಿ ರಥವನ್ನು ಕಟ್ಟುತ್ತಿರುವುದರಿಂದ ರಥ ನಡೆಸುವವರಲ್ಲಿ ಸಂತಸ ಮನೆಮಾಡಿದೆ ಎಂದು ಗ್ರಾಮಸ್ಥರಾದ ದೊರೆ ತಿಪ್ಪೇಸ್ವಾಮಿ, ದಳವಾಯಿ ರುದ್ರಮುನಿ ಹೇಳುತ್ತಾರೆ.

ರಥದ ವಿಶೇಷತೆ: ಸುಮಾರು 75 ಅಡಿ ಎತ್ತರದ ಈ ಬೃಹತ್‌ ರಥ ಐದು ಚಕ್ರಗಳನ್ನು ಹೊಂದಿರುವುದು ವಿಶೇಷ. ಪ್ರತಿ ಚಕ್ರವು 11 ಅಡಿ ಎತ್ತರ, 18 ಇಂಚು ದಪ್ಪ, 11 ಟನ್‌ ತೂಕವನ್ನು ಹೊಂದಿವೆ. ಈ ಮಹಾ ರಥದ ಒಟ್ಟು ತೂಕ 80 ಟನ್‌ ಇದ್ದು, ರಥೋತ್ಸವದ ಸಂದರ್ಭದಲ್ಲಿ 11 ವಿವಿಧ ಬಣ್ಣದ ಬಾವುಟಗಳಿಂದ ನವ ವಧುವಿನಂತೆ ಸಿಂಗಾರಗೊಳ್ಳುತ್ತದೆ. ಅಂತಿಮವಾಗಿ 5 ಅಡಿ ಎತ್ತರದ ಸುಂದರ ಕಳಸ ಸ್ಥಾಪನೆ ಮಾಡಿದಾಗ ರಥವು ಪೂರ್ಣತ್ವ ಪಡೆದು ಆಕರ್ಷಕವಾಗಿ ಕಾಣುತ್ತದೆ.

ರಥದ ದುರಸ್ತಿ ಕಾರ್ಯ: ಕಳೆದ ವರ್ಷ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಸವೇಶ್ವರ ಜಾತ್ರೆಯಲ್ಲಿ ಸಂಭವಿಸಿದ ದುರಂತದಿಂದ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಅಂದಿನ ಉಪವಿಭಾಗಾಧಿಕಾರಿ ಟಿ.ರಾಘವೇಂದ್ರ, ನಾಯಕನಹಟ್ಟಿ ಬೃಹತ್‌ ರಥವನ್ನು ಸಂಪೂರ್ಣ ದುರಸ್ತಿಗೆ  ಕ್ರಿಯಾಯೋಜನೆ ತಯಾರಿಸಿದರು.

ರಥವು 9 ಅಂತಸ್ತುಗಳನ್ನು ಹೊಂದಿದ್ದು, ಮೇಲಿಂದ 5 ಅಂತಸ್ತುಗಳ ಮರಮುಟ್ಟುಗಳು ಹುಳು ಹಿಡಿದಿವೆ. ಅವುಗಳನ್ನು ಬದಲಾಯಸಿ ರಥವನ್ನು ಸುಸಜ್ಜಿತವಾಗಿ ದುರಸ್ತಿ ಮಾಡಲು ₹ 19.25 ಲಕ್ಷದ ಕ್ರಿಯಾಯೋಜನೆಯನ್ನು ತಯಾರಿಸಿದರು. ನಂತರ ಬಂದ ವ್ಯವಸ್ಥಾಪನಾ ಸಮಿತಿಯು ಸರ್ಕಾರದಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆಗಳನ್ನು ಪಡೆದು ರಥ ದುರಸ್ತಿಗೆ ಚಾಲನೆ ನೀಡಲಾಯಿತು.

ಹೊನ್ನೆ ಮರದ ಮುಟ್ಟುಗಳ ಬಳಕೆ

ರಥದ ದುರಸ್ಥಿಗೆ ಬೇಕಾದ ಅಗತ್ಯ ಮರಮುಟ್ಟುಗಳನ್ನು ಅರಣ್ಯ ಇಲಾಖೆ ಮತ್ತು ಸರ್ಕಾರದಿಂದ ಅನುಮತಿ ಪಡೆದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಿಂದ ಹೊನ್ನೆಮರದ ಮುಟ್ಟುಗಳನ್ನು ವಿಶೇಷವಾಗಿ ತರಲಾಗಿದೆ. ನಂತರ ಬೇಕಾದ ಅಳತೆಗೆ ಕತ್ತರಿಸಿ ಪ್ರತಿ ಮುಟ್ಟಿಗೂ 90 ಡಿಗ್ರಿ ಕೋನದಲ್ಲಿ 304 ಗ್ರೇಡ್‌ ಸಾಮರ್ಥ್ಯದ ಸ್ಟೀಲ್‌ ಪಟ್ಟಿಗಳನ್ನು ಅಳವಡಿಸಲಾಗಿದೆ. ಬೋಲ್ಟ್‌ ನಟ್‌ಗಳಿಂದ ರಥವನ್ನು ಬಿಗಿಗೊಳಿಸಲಾಗುತ್ತಿದೆ.

ಜತೆಗೆ ಗುಣಮಟ್ಟದ ರಸಾಯನಿಕಗಳನ್ನು ಮರಮುಟ್ಟುಗಳಿಗೆ ಲೇಪನ ಮಾಡಲಾಗಿದೆ. ಇದರಿಂದ ಮರಕ್ಕೆ ಯಾವುದೇ ಹುಳುಗಳ ಬಾಧೆ ಇರುವುದಿಲ್ಲ. ರಥವು ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ದುರಸ್ತಿಯ ಹೊಣೆಹೊತ್ತ ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಎಂಜಿನಿಯರ್ ಕೃಷ್ಣಮೂರ್ತಿ ಹೇಳುತ್ತಾರೆ.

*

ರಥ ದುರಸ್ತಿಯಾಗಿರುವ ಕಾರಣ ಜಾತ್ರೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಜಾತ್ರೆ ಸುಸೂತ್ರವಾಗಿ ನಡೆಯಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ.

–ಎ.ಬಿ.ವಿಜಯಕುಮಾರ್, ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT