ರಸ್ತೆಗೆ ಇಳಿಯದ ಬಸ್, ಜನಜೀವನ ಸಹಜ

7
ಜಿಲ್ಲೆಯ ವಿವಿಧೆಡೆ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತ; ಉಳಿದ ಸೇವೆ ಅಬಾಧಿತ

ರಸ್ತೆಗೆ ಇಳಿಯದ ಬಸ್, ಜನಜೀವನ ಸಹಜ

Published:
Updated:
ರಸ್ತೆಗೆ ಇಳಿಯದ ಬಸ್, ಜನಜೀವನ ಸಹಜ

ಕೆ.ಆರ್. ನಗರ: ವಿವಿಧ ಸಂಘಟನೆಗಳು ಗುರುವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ಅಂಗವಾಗಿ ಬಸ್ಸುಗಳು ರಸ್ತೆಗೆ ಇಳಿಯದೇ ಇರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಆಟೊ, ಜೀಪು, ಟ್ಯಾಕ್ಸಿ, ದ್ವಿಚಕ್ರ ವಾಹನಗಳ ಮೂಲಕ ಪಟ್ಟಣಕ್ಕೆ ಬಂದ ಪ್ರಯಾಣಿಕರು ದೂರದ ಊರುಗಳಿಗೆ ಹೋಗುವವರು ಪರದಾಡಿದರು.

ಬಸ್ ಸಂಚಾರ ಹೊರತುಪಡಿಸಿದರೆ ಉಳಿದಂತೆ ವಾಣಿಜ್ಯ ಮಳಿಗೆಗಳು, ಶಾಲಾ– ಕಾಲೇಜುಗಳು, ಪೆಟ್ರೋಲ್ ಬಂಕ್, ಚಿತ್ರಮಂದಿರಗಳು ಎಂದಿನಂತೆ ತೆರೆದಿದ್ದವು.

ಪ್ರತಿಭಟನೆ

ಹುಣಸೂರು: ನಗರದಲ್ಲಿ ಸಂಪೂರ್ಣ ವಾಗಿ ಬಂದ್ ವಿಫಲವಾಗಿತ್ತು. ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಸರ್ಕಾರಿ ಶಾಲೆಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದರೂ ವಿದ್ಯಾರ್ಥಿ ಗಳ ಕೊರತೆಯಿತ್ತು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಸಂಖ್ಯೆ ಕಡಿಮೆಯಿತ್ತು. ಸಾರ್ವಜನಿಕ ಆಸ್ಪತ್ರೆಯಲ್ಲೂ ಹೊರರೋಗಿಗಳ ಸಂಖ್ಯೆ ವಿರಳವಾಗಿತ್ತು. ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ಬೆಳಗ್ಗೆ 9ರವರೆಗೆ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಸಂಚರಿಸಿವು. ನಂತರ ಸ್ಥಗಿತಗೊಂಡವು. ಬೇರೆ ಕಡೆಗಳಿಂದ ಬಂದಿದ್ದ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುವಂತಾಯಿತು.

ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ಯ ಕಾರ್ಯಕರ್ತರು ತಾಲ್ಲೂಕು ಘಟಕದ ಅಧ್ಯಕ್ಷ ಪುರುಷೋತ್ತಮ್‌ ನೇತೃತ್ವದಲ್ಲಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪುರುಷೋತ್ತಮ್ ಮಾತನಾಡಿ, ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಪ್ರಧಾನಿ ನರೇಂದ್ರಮೋದಿ ಮೌನ ಮುರಿಯಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಬಲರಾಮ, ಮುನ್ನಾ, ಆಟೊ ವೆಂಕಟೇಶ್, ಮಹದೇವಮ್ಮ, ಜಯಮ್ಮ, ಗಿರೀಶ್ ಇತರರಿದ್ದರು. ಉಪವಿಭಾಗಾಧಿಕಾರಿ ಕೆ.ನಿತೀಶ್‌ರಿಗೆ ಮನವಿ ಸಲ್ಲಿಸಲಾಯಿತು.

ನೀರಸ ಪ್ರತಿಕ್ರಿಯೆ

ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಸ್ಥಗಿತಗೊಂಡಿದ್ದವು. ಉಳಿದ ಎಲ್ಲ ವಾಹನಗಳ ಸಂಚಾರ ಇತ್ತು.

ಎಚ್.ಡಿ.ಕೋಟೆ ಪಟ್ಟಣ ಸೇರಿದಂತೆ ಸರಗೂರು ತಾಲ್ಲೂಕಿನಲ್ಲಿ ಯಾವುದೇ ಕನ್ನಡ ಪರ ಸಂಘಟನೆಗಳ ಮುಖಂಡರು, ವರ್ತಕರ ಸಂಘಗಳಿಗೆ ಬಂದ್ ಮಾಡುವ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಯಾವುದೇ ಪರ ಸಂಘಟನೆಗಳಿಂದ ಮೆರವಣಿಗೆ, ಪ್ರತಿಭಟನೆ ನಡೆಯಲಿಲ್ಲ.

ರಾತ್ರಿ ವೇಳೆ ಗ್ರಾಮಾಂತರ ಪ್ರದೇಶಗಳಲ್ಲಿ ತಂಗಿದ್ದು, ಬೆಳಿಗಿನ ವೇಳೆಗೆ ಎಚ್.ಡಿ.ಕೋಟೆಗೆ ಬರುವ ಬಸ್ ಚಾಲಕರು ಮತ್ತು ನಿರ್ವಾಹಕರನ್ನು ಬೆಳಿಗ್ಗೆಯೇ ಬಸ್ ನಿಲ್ದಾಣದಲ್ಲಿ ನಿಯಂತ್ರಾಧಿಕಾರಿ ತಡೆ ಒಡ್ಡಿದರು.

ನಿರ್ವಾಹಕರು ಮಾತನಾಡಿ, ಇಲ್ಲಿ ಯಾವುದೇ ಪ್ರತಿಭಟನೆ ಇಲ್ಲ. ನಾವು ಬಸ್ ಓಡಿಸುತ್ತೇವೆ. ನಿಜವಾಗಿ ಪ್ರತಿಭಟನೆ ನಡೆಯುವ ದಿನ ಬಸ್ ಓಡಿಸಿ ಎನ್ನುತ್ತೀರಿ. ಅಂದು ಪ್ರತಿಭಟನೆ ನಡೆಯುತ್ತದೆ. ಇಂದು ಯಾವ ಪ್ರತಿಭಟನೆ ನಡೆಯುವುದಿಲ್ಲ. ಆದರೂ ಬಸ್ ಸಂಚಾರಕ್ಕೆ ತಡೆ ಒಡ್ಡುತ್ತೀದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ವಿಭಾಗಾಧಿಕಾರಿ ಯಾವುದಕ್ಕೂ ಜಗ್ಗದೇ ಇದ್ದುದರಿಂದ ಚಾಲಕರು ಬಸ್ಗಳನ್ನು ಡಿಪೋಗೆ ತೆಗೆದುಕೊಂಡು ಹೋದರು.

ಬಸ್ಸಗಳು ಡಿಪೊಗೆ ಹೋದ ನಂತರ ಮ್ಯಾಕ್ಸಿಕ್ಯಾಬ್ ಚಾಲಕರು, ಆಟೊ, ಜೀಪುಗಳು ರಸ್ತೆ ಇಳಿದವು. ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಸರ್ಕಾಕಾರಿ ಕಚೇರಿಗಳು, ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕುಗಳು ಎಂದಿನಂತೆ ಕೆಲಸ ನಿರ್ವಹಿಸಿದವು. ಸಂಜೆ 4 ಗಂಟೆ ನಂತರ ಸಾರಿಗೆ ಸಂಸ್ಥೆ ಬಸ್ಸುಗಳು ರಸ್ತೆಗೆ ಇಳಿದವು.

ಸಂಚಾರ ವಿರಳ

ವರುಣಾ: ಹೋಬಳಿಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ವಾಹನ ಸಂಚಾರ ಇರಲಿಲ್ಲ. ಬೆಳಿಗ್ಗೆ ಕೆಲವು ಖಾಸಗಿ ವಾಹನಗಳು ಸಂಚರಿಸಿದವು. ಆದರೆ, ನಗರ ಸಾರಿಗೆ ಬಸ್ ಮತ್ತು ವೇಗದೂತ ವಾಹನ ಸಂಚರಿಸಲಿಲ್ಲ. ನಾಡ ಕಚೇರಿ, ಗ್ರಾಮ ಪಂಚಾಯಿತಿ, ಶಾಲಾ– ಕಾಲೇಜು ಕಾರ್ಯ ನಿರ್ವಹಿಸಿದವು.

ಮಧ್ಯಾಹ್ನದ ನಂತರ ಸಂಚಾರ

ಸರಗೂರು: ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆಯಿಂದಲೇ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದ್ದವು. ಖಾಸಗಿ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿದ್ದವು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದವು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಬರಲು ಸಾಧ್ಯವಾಗಿಲ್ಲ. ಮಧ್ಯಾಹ್ನದ ನಂತರ ಬಸ್ ಸಂಚಾರ ಆರಂಭವಾಯಿತು.

ತಿ.ನರಸೀಪುರದಲ್ಲಿ ಬಂದ್ ಇಲ್ಲ

ತಿ.ನರಸೀಪುರ: ಮಹದಾಯಿ ನೀರು ಹಂಚಿಕೆ ಅನ್ಯಾಯ ಖಂಡಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಪಟ್ಟಣದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಪಟ್ಟಣದಲ್ಲಿ ಖಾಸಗಿ ಬಸ್, ಆಟೊ ಪ್ರಯಾಣ ಎಂದಿನಂತಿತ್ತು. ಸರ್ಕಾರಿ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ವಾಣಿಜ್ಯ ಮಂಡಳಿ ಸೂಚನೆ ಹಿನ್ನೆಲೆ ಯಲ್ಲಿ ಸಿನಿಮಾ ಮಂದಿರಗಳು ಬಂದ್ ಆಗಿದ್ದವು.

ಸರ್ಕಾರಿ, ಕಚೇರಿಯ ಕಾರ್ಯವೈಖರಿ ಎಂದಿನಂತಿತ್ತು. ಕೆಲವು ಖಾಸಗಿ ಶಾಲಾ ಕಾಲೇಜುಗಳು ರಜೆ ಘೋಷಿಸಿಲಾಗಿತ್ತು. ಹಲವು ಶಾಲಾ ಕಾಲೇಜುಗಳು ಎಂದಿ ನಂತೆ ನಡೆದವು. ವ್ಯಾಪಾರ ವಹಿವಾಟು ಸಾಮಾನ್ಯವಾಗಿತ್ತು.

ವಿಫಲ

ಪಿರಿಯಾಪಟ್ಟಣ: ಪಟ್ಟಣದಲ್ಲಿ ಬಂದ್ ವಿಫಲವಾಯಿತು. ಕೆಎಸ್ಆರ್‌ಟಿಸಿ ಬಸ್ ಸಂಚಾರ ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳು ಎಂದಿನಂತೆ ನಡೆದವು.

ಗ್ರಾಮಾಂತರ ಪ್ರದೇಶದಿಂದ ಪಟ್ಟಣಕ್ಕೆ ವಿದ್ಯಾರ್ಥಿಗಳು ಸಾರಿಗೆ ಬಸ್ ಇಲ್ಲದೆ ಖಾಸಗಿ ವಾಹನಗಳ ಮೊರೆ ಹೋದರು. ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾ ಡುವಂತಾಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ ಮೇಲಧಿಕಾರಿಗಳ ಸೂಚನೆ ಮೇರೆಗೆ ಬೆರಳೆಣಿಕೆಯ ಬಸ್‌ಗಳು ರಸ್ತೆಗಿಳಿದವು.

ಮಾರುಕಟ್ಟೆ, ಅಂಗಡಿ ಮುಂಗಟ್ಟು ವ್ಯವಹಾರ ನಡೆಸಿದವು. ಚಿತ್ರಮಂದಿರ, ಸರ್ಕಾರಿ ಕಚೇರಿಗಳು ಯಾವುದೇ ಅಡ್ಡಿ ಇಲ್ಲದೆ ಕಾರ್ಯನಿರ್ವಹಿಸಿದವು.

ರಸ್ತೆ ತಡೆ

ನಂಜನಗೂಡು: ನಗರದಲ್ಲಿ ಯಾವುದೆ ಬೆಂಬಲ ವ್ಯಕ್ತವಾಗಲಿಲ್ಲ. ಬಂದ್ ಸಂಪೂರ್ಣ ವಿಫಲವಾಯಿತು.

ಬೆಳಿಗ್ಗೆ ಎಂದಿನಂತೆ ಶಾಲೆ – ಕಾಲೇಜುಗಳು, ಬ್ಯಾಂಕ್, ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ರೈಲುಗಳು ಯಾವುದೇ ಅಡ್ಡಿಯಿಲ್ಲದೆ ಸಂಚರಿಸಿದವು. ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಗಳು ನಡೆದವು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ನೇತೃತ್ವದಲ್ಲಿ ಹುಲ್ಲಹಳ್ಳಿ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲಕಾಲ ರಸ್ತೆ ತಡೆ ನಡೆಸಿ, ಟೈರ್ ಗಳಿಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಶ್ರೀನಿವಾಸ, ಪ್ರಸನ್ನ, ಮಂಜುನಾಥ್, ಕುಮಾರ್, ದೀಲಿಪ್, ಸಚಿನ್, ಅಜಯ್, ಸುಪ್ರೀತ್, ಶಿವು, ನಂಜುಂಡ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry