ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ತಡೆ, ಪ್ರತಿಕೃತಿ ದಹನ, ರ‍್ಯಾಲಿ

ಬಂದ್‌ಗೆ ಮಿಶ್ರ ಪ್ರತಿಕ್ರಿಯೆ‌; ಎಂದಿನಂತೆ ವಹಿವಾಟು; ರಸ್ತೆಗೆ ಇಳಿಯದ ಸರ್ಕಾರಿ ಬಸ್‌ಗಳು
Last Updated 26 ಜನವರಿ 2018, 11:57 IST
ಅಕ್ಷರ ಗಾತ್ರ

ಮಂಡ್ಯ: ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‌ ಕರೆಗೆ ಗುರುವಾರ ನಗರದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಸಾರಿಗೆ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬಂದ್‌ ವಿಷಯ ಅರಿಯದ ಕೆಲ ಪ್ರಯಾಣಿಕರು ಬಸ್‌ ಸಿಗದೆ ಪರದಾಡಿದರು. ನಗರದ ಎಲ್ಲಾ ಚಿತ್ರಮಂದಿರಗಳು ಬಂದ್‌ ಆಗಿದ್ದವು. ಅಂಗಡಿ ಮುಂಗಟ್ಟುಗಳ ಕಾರ್ಯ ನಿರ್ವಹಣೆಗೆ ಯಾವುದೇ ತೊಂದರೆಯಾಗಲಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಕೆಲಕಾಲ ಅಂಚೆಕಚೇರಿಗೆ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶೀಘ್ರ ಮಧ್ಯಪ್ರವೇಶಿಸಿ ಮಹದಾಯಿ ಯೋಜನೆ ಜಾರಿಗೊಳಿಸಬೇಕು. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಉತ್ತರ ಕರ್ನಾಟಕದ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಶೀಘ್ರ ರಾಜ್ಯಕ್ಕೆ ಮಹದಾಯಿ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಂಕರೇಗೌಡ, ರಾಜ್ಯ ಘಟಕದ ಉಪಾಧ್ಯಕ್ಷ ಚಿದಂಬರಂ, ಮುಖಂಡರಾದ ರಮೇಶ್‌ ಕಾಮಧೇನು, ಜೆ.ನಾಗರಾಜು, ಅಶೋಕ್‌, ಸತೀಶ್, ಪುನೀತ್‌ಗೌಡ ಹಾಜರಿದ್ದರು.

ಕದಂಬ ಸೈನ್ಯ ಕಾರ್ಯಕರ್ತರು ನಗರದ ಸಂಜಯ್‌ ವೃತ್ತದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಪ್ರತಿಕೃತಿ ದಹಿಸಿದರು. ಕನ್ನಡ ಸೇನೆ ಕಾರ್ಯಕರ್ತರು ನಗರದ ವಿವಿಧೆಡೆ ಬೈಕ್‌ ರ‍್ಯಾಲಿ ನಡೆಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್‌, ಮುಖಂಡರಾದ ಅಂದಾನಿ, ಸುಂಡಹಳ್ಳಿ ನಾಗರಾಜ್‌, ವೆಂಕಟಾಚಲಯ್ಯ, ಭಗವಾನ್‌ ಹಾಜರಿದ್ದರು.‌

ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯರ ಜಿಲ್ಲಾ ಘಟಕದ ಸದಸ್ಯರು ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಪ್ರಧಾನ ಮಂತ್ರಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ನ್ಯಾಯ ಬಗೆಹರಿಸಬೇಕು. ಕಾಲಕ್ಕೆ ತಕ್ಕಂತೆ ನೀರು ಶೇಖರಣೆ ಹಾಗೂ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಯರಹಳ್ಳಿ ಶಿವಕುಮಾರ್‌, ದಯಾನಂದ್‌, ಪುರುಷೋತ್ತಮ, ಸಿದ್ದಪ್ಪ, ರಾಧಾಕೃಷ್ಣ ಹಾಜರಿದ್ದರು.

ನೀರಸ ಪ್ರತಿಕ್ರಿಯೆ

ನಾಗಮಂಗಲ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರೆ ನೀಡಲಾಗಿದ್ದ ಬಂದ್‌ಗೆ ಪಟ್ಟಣದಲ್ಲಿ ನೀರಸ  ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾರಿಗೆ ವಾಹನ ಓಡಾಟ ಸಂಪೂರ್ಣವಾಗಿ ನಿಂತಿತ್ತು, ಅಂಗಡಿ– ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಖಾಸಗಿ ಕಾಲೇಜುಗಳು ಎಂದಿನಂತೆ ನಡೆದವು. ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಕಡಿಮೆ ಇತ್ತು.

ಸ್ಪಂದನೆ ಇಲ್ಲ

ಪಾಂಡವಪುರ: ಕನ್ನಡಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು. ಆದರೆ, ಬಂದ್‌ಗೆ ಪಟ್ಟಣದ ಜನತೆಗೆ ಸ್ಪಂದಿಸಲಿಲ್ಲ.

ಪಟ್ಟಣ ಮತ್ತು ತಾಲ್ಲೂಕಿನಾದ್ಯಂತ ಶಾಲಾ–ಕಾಲೇಜುಗಳು ತೆರೆದಿರಲಿಲ್ಲ. ಪಟ್ಟಣದಲ್ಲಿ ಅಂಗಡಿಗಳು ತೆರೆದಿದ್ದವು. ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಕೇಂದ್ರ ಸರ್ಕಾರದ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದವು. ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಇರಲಿಲ್ಲ. ಪ್ರಯಾಣಿಕರು ಖಾಸಗಿ ವಾಹನಗಳನ್ನು ಆಶ್ರಯಿಸಬೇಕಾಗಿತ್ತು.

ಪ್ರತಿಭಟನೆ: ಮಹದಾಯಿ ವಿವಾದವನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ, ಡಾ.ವಿಷ್ಣುವರ್ಧನ್‌ ಅಭಿಮಾನಿ ಬಳಗ ಸೇರಿದಂತೆ ಇನ್ನಿತರ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು ಕೇಂದ್ರ ಸರ್ಕಾರ
ಮತ್ತು ನರೇಂದ್ರಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಉಪಾಧ್ಯಕ್ಷ ವಡ್ಡರಹಳ್ಳಿ ಕಾಳಪ್ಪ, ಆಟೊ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಹಿರೇಮರಳಿ ಯೋಗೇಶ್, ಡಾ.ವಿಷ್ಟುವರ್ಧನ್‌ ಸಂಘದ ವಿಷ್ಣು ವಿಠಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
***
ಬೈಕ್‌ ರ‍್ಯಾಲಿ

ಕನ್ನಡ ಸೇನೆ ಕಾರ್ಯಕರ್ತರು ಸಂಜಯ್‌ ವೃತ್ತದಿಂದ ನಗರದ ವಿವಿಧೆಡೆ ಬೈಕ್‌ ರ್‍ಯಾಲಿ ನಡೆಸಿ ಮಹದಾಯಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ವಿವಿ ರಸ್ತೆ, ಜಿಲ್ಲಾಧಿಕಾರಿ ಕಚೇರಿ, ಆರ್‌ಪಿ ರಸ್ತೆ, ನೂರು ಅಡಿ ರಸ್ತೆಯಲ್ಲಿ ಸಂಚರಿಸಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಹರೀಶ್‌ ಚೇತನ್‌ ಕುಮಾರ್, ಶಿವಾನಿ, ದೇವಮ್ಮ ಸೌಭಾಗ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT