ಹೆಲ್ಮೆಟ್‌ ಆದೇಶ ಹಂತ ಹಂತವಾಗಿ ಜಾರಿ

5
ಹೆಲ್ಮೆಟ್‌ ಧರಿಸುವ ಬಗ್ಗೆ ಜನರಲ್ಲಿ ಅರಿವು; ಸಾರಿಗೆ ಅದಾಲತ್‌ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಾಲಕೃಷ್ಣನ್‌ ಹೇಳಿಕೆ

ಹೆಲ್ಮೆಟ್‌ ಆದೇಶ ಹಂತ ಹಂತವಾಗಿ ಜಾರಿ

Published:
Updated:

ಕೋಲಾರ: ‘ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಆದೇಶವನ್ನು ಜಿಲ್ಲೆಯಲ್ಲಿ ಹಂತ ಹಂತವಾಗಿ ಜಾರಿಗೊಳಿ ಸಲಾಗುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಎನ್‌.ಬಾಲಕೃಷ್ಣನ್‌ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಸಾರಿಗೆ ಅದಾಲತ್‌ನಲ್ಲಿ ಮಾತನಾಡಿ, ‘ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ಹೆಲ್ಮೆಟ್‌ ಧರಿಸು ವುದನ್ನು ಕಡ್ಡಾಯಗೊಳಿಸಿದೆ. ಈ ಆದೇಶವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದೇಶ ಜಾರಿಗೂ ಮುನ್ನ ಹೆಲ್ಮೆಟ್‌ ಧರಿಸುವ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಗಣನೀ ಯವಾಗಿ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಸಾರಿಗೆ ಅದಾಲತ್‌ ಬಗ್ಗೆ ಮಾಹಿತಿಯೇ ಇಲ್ಲ. ಅಧಿಕಾರಿಗಳು ಅದಾಲತ್‌ನ ಬಗ್ಗೆ ಪ್ರಚಾರ ಮಾಡದೆ ಕಾಟಚಾರಕ್ಕೆ ಅದಾಲತ್‌ ನಡೆಸುತ್ತಾರೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣನ್‌, ಸಂಚಾರ ನಿಯಮ ಪಾಲನೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ತಪ್ಪದೆ ಸಾರಿಗೆ ಅದಾಲತ್‍ ನಡೆಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಸಮಸ್ಯೆ ಬಗೆಹರಿಸುತ್ತೇವೆ. ಜತೆಗೆ ಅದಾಲತ್‌ನ ಬಗ್ಗೆ ವ್ಯಾಪಕ ಪ್ರಚಾರ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಆದಾಯ ಖೋತಾ: ‘ಖಾಸಗಿ ಬಸ್‌ ಮಾಲೀಕರು ಪರವಾನಗಿ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ಮಾರ್ಗಗಳಲ್ಲಿ ವಾಹನ ಓಡಿಸುತ್ತಿದ್ದಾರೆ. ಈ ಅಕ್ರಮಕ್ಕೆ ರಾಜಕಾರಣಿಗಳು ರಕ್ಷಣೆ ನೀಡುತ್ತಿದ್ದಾರೆ. ಖಾಸಗಿ ಬಸ್‌ಗಳ ಓಡಾಟಕ್ಕಾಗಿಯೇ ಪ್ರತ್ಯೇಕ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಇದಕ್ಕೆ ಅಧಿಕಾರಿಗಳು ಶ್ರೀರಕ್ಷೆಯಾಗಿದ್ದಾರೆ. ಇದರಿಂದ ಸರ್ಕಾರಕ್ಕೆ ಆದಾಯ ಖೋತಾ ಆಗುತ್ತಿದೆ’ ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಮುನಿಯಪ್ಪ ದೂರಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿದೆ. ಅಲ್ಲದೇ, ವಿಶೇಷ ತರಗತಿಗಳು ನಡೆಯುತ್ತಿವೆ. ಗ್ರಾಮೀಣ ಭಾಗದಿಂದ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರದಲ್ಲಿನ ಶಾಲೆ ಕಾಲೇಜುಗಳಿಗೆ ಬರುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು, ಖಾಸಗಿ ವಾಹನಗಳಲ್ಲಿ ಹೆಚ್ಚಿನ ಹಣ ಕೊಟ್ಟು ಪ್ರಯಾಣಿಸುವಂತಾಗಿದೆ ಎಂದು ಆರೋಪಿಸಿದರು.

ಹೊರ ರಾಜ್ಯಗಳಲ್ಲಿ ನೋಂದಣಿಯಾಗಿರುವ ವಾಹನಗಳನ್ನು ಜಿಲ್ಲೆಯಲ್ಲಿ ಓಡಿಸಲಾಗುತ್ತಿದೆ. ಇದರಿಂದ ಸಾರಿಗೆ ಇಲಾಖೆಗೆ ಆದಾಯ ಬರುತ್ತಿಲ್ಲ. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು. ಸಾರಿಗೆ ಅದಾಲತ್‌ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಹಿರಿಯ ಮೋಟಾರು ವಾಹನ ನಿರೀಕ್ಷಕ ಶ್ರೀನಿವಾಸ್, ಸಾರಿಗೆ ಅಧಿಕಾರಿಗಳಾದ ಚಂದ್ರಶೇಖರ್, ಚಂದನಾ ಹಾಜರಿದ್ದರು.

*

ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಚಾಲನಾ ಪರವಾನಗಿ ಇಲ್ಲದೆ ಚಾಲನೆ ಮಾಡುತ್ತಾರೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಬೇಕು.

–ಎಸ್‌.ಮುನಿಯಪ್ಪ, ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry