ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ನೌಕರರ ಪ್ರತಿಭಟನೆ

ಮಾಸಿಕ ವೇತನ ನೀಡದಿರುವುದಕ್ಕೆ ಆಕ್ರೋಶ
Last Updated 26 ಜನವರಿ 2018, 12:24 IST
ಅಕ್ಷರ ಗಾತ್ರ

ಮಂಗಳೂರು: ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಗುರುವಾರ ನಗರದ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ವೇತನ ನೀಡದೆ ದುಡಿಸುವುದು ಅಪರಾಧ. ಬಂಟ್ವಾಳ ತಾಲ್ಲೂಕಿನ ಅಂಗನವಾಡಿ ನೌಕರರಿಗೆ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳ ವೇತನವನ್ನು ನೀಡದಿರುವ ಅಧಿಕಾರಿಗಳ ಬೇಜವಾಬ್ದಾರಿತನ ಖಂಡನೀಯ. ಮಾಸಿಕ ವೇತನದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿರುವ ಅಂಗನವಾಡಿ ನೌಕರರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿ ಮಾಡುವ ಈ ಮಹಿಳಾ ನೌಕರರಿಗೆ ವೇತನ ನೀಡದೆ ಶೋಷಣೆ ಮಾಡುವುದು ಅಮಾನವೀಯ ಕೃತ್ಯ ಎಂದರು.

ಇದೇ 30ರೊಳಗಡೆ ವೇತನ ಪಾವತಿಸದಿದ್ದರೆ, ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮನೆಯ ಎದುರು ಕುಟುಂಬ ಸಮೇತರಾಗಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ಮುಂದಾಳುಗಳಾದ ವಸಂತ ಆಚಾರಿ, ರಾಮಣ್ಣ ವಿಟ್ಲ, ಅಶೋಕ ಶ್ರೀಯಾನ್‌ ಮಾತನಾಡಿದರು. ನಂತರ ಅಂಗನವಾಡಿ ನೌಕರರ ಸಂಘದ ಮುಂದಾಳುಗಳು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಕೂಡಲೇ ವೇತನ ಪಾವತಿ ಆಗದಿದ್ದರೆ ಪಲ್ಸ್ ಪೋಲಿಯೊ ಕೆಲಸವನ್ನು ಸ್ಥಗಿತಗೊಳಿಸುವುದು ಮಾತ್ರವಲ್ಲದೆ, 31ರಂದು ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು. 30ರೊಳಗೆ ವೇತನ ಪಾವತಿ ಮಾಡಲಾಗುವುದೆಂಬ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷೆ ರವಿಕಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋರಾಟದ ನೇತೃತ್ವವನ್ನು ಲಕ್ಷ್ಮಿ ಭಟ್, ಸಾವಿತ್ರಿ, ಮೂಕಾಂಬಿಕ, ಲಿಡಿಯ, ವಸಂತಿ ವಿಟ್ಲ, ರೇವತಿ ಪೆರುವಾಯಿ, ಲಲಿತ ಮಾಣಿ, ಆಶಾ ಅಡಿಕೆಮಜಲು, ಭವಾನಿ ಇಡ್ಕಿಡು, ಶಕುಂತಳ ದೈವಸ್ಥಳ, ಸುಜಾತ ಗಾಡಿಪಲ್ಕೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT