ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದಲ್ಲಿ ಒಲಿದ ಹೃದಯಗಳ ‘ಬಂಧನ’

Last Updated 26 ಜನವರಿ 2018, 19:31 IST
ಅಕ್ಷರ ಗಾತ್ರ

ಮಂಡ್ಯ: ಹೋರಾಟ, ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಅಂತರ್‌ ಧರ್ಮೀಯ ಪ್ರೇಮಿಗಳಿಬ್ಬರು ಶುಕ್ರವಾರ ಕುವೆಂಪು ಸಂದೇಶಗಳ ಮಂತ್ರ ಮಾಂಗಲ್ಯ ಸೂತ್ರದೊಂದಿಗೆ ವಿವಾಹ ಬಂಧನಕ್ಕೆ ಒಳಗಾದರು.

ಮಳವಳ್ಳಿ ತಾಲ್ಲೂಕು ಗುಳಘಟ್ಟ ಗ್ರಾಮದ ಶಿವಕುಮಾರ್‌ ಹಾಗೂ ಬಳ್ಳಾರಿ ಜಿಲ್ಲೆ ಹೊಸಪೇಟೆ ನಸ್ರೀನ್‌ ನಗರದ ಹಿಂದಿ ಪ್ರಚಾರ ಸಭಾಂಗಣದಲ್ಲಿ ಮದುವೆಯಾದರು. ಜನಶಕ್ತಿ ಸಂಘಟನೆಯ ನಗರಕೆರೆ ರಮೇಶ್‌ ಕುವೆಂಪು ಅವರ ಮಂತ್ರಮಾಂಗಲ್ಯ ಸಂದೇಶ ಬೋಧಿಸಿದರು. ಹಾರ ಬದಲಾಯಿಸಿಕೊಳ್ಳುವ ಮೂಲಕ ಸರಳವಾಗಿ ಹೊಸ ಬಾಳಿಗೆ ಕಾಲಿಟ್ಟರು. ಜನಶಕ್ತಿ ಸಂಘಟನೆಯಲ್ಲಿ ಶಿವಕುಮಾರ್, ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಲ್ಲಿ ನಸ್ರಿನ್‌ ಸಕ್ರಿಯರು. ಎರಡು ಸಂಘಟನೆ ಸೇರಿ, ಮಹಿಳಾ ಮುನ್ನಡೆ ಸಂಘಟನೆ ಸದಸ್ಯರು ಈ ವಿವಾಹಕ್ಕೆ ಸಾಕ್ಷಿಯಾದರು.

ನೋವಿನಲ್ಲಿ ಒಂದಾದವರು: ನಸ್ರಿನ್‌ಗೆ ಕೆಲ ವರ್ಷಗಳ ಹಿಂದೆ ತಂದೆ ತೀರಿಹೋಗಿದ್ದರು. ಮಹಿಳಾ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದು, ಸಾಕಷ್ಟು ಸವಾಲುಗಳ ಜೊತೆ ವಯಸ್ಸಾಗಿದ್ದ ತಾಯಿ, ತಮ್ಮ ಹಾಗೂ ತಂಗಿಯನ್ನು ಸಲಹುತ್ತಿದ್ದರು. ಶಿವಕುಮಾರ್‌ಗೆ ನಸ್ರಿನ್‌ ಪರಿಚಯ ಬಹಳ ಅನಿರೀಕ್ಷಿತವಾದುದು. 2017, ಮಾರ್ಚ್‌ನಲ್ಲಿ ಕೊಪ್ಪಳದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಇಬ್ಬರೂ ಮೊದಲ ಬಾರಿ ಭೇಟಿಯಾದರು.

ಧರ್ಮಾತೀತರು: ‘ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಪುಸ್ತಕಗಳೇ ಸಂಗಾತಿಯಾಗಿದ್ದವು. ಓದಿನಿಂದ ಪ್ರಭಾವಿತನಾಗಿ ಹೋರಾಟದ ದಾರಿ ಹಿಡಿದೆ. ಅದೇ ಹಾದಿಯಲ್ಲಿ ನಸ್ರಿನ್‌ ಸಿಕ್ಕಿದಳು. ನಮಗೆ ಯಾವ ಧರ್ಮವೂ ಬೇಡ. ನಾವಿಬ್ಬರು ಧರ್ಮಾತೀತರು’ ಎಂದು ಶಿವಕುಮಾರ್‌ ತಿಳಿಸಿದರು.

‘ನನಗೊಂದು ಸಾಮಾಜಿಕ ಜವಾಬ್ದಾರಿ ಇದೆ, ಅದು ಶಿವಕುಮಾರ್‌ಗೂ ಇದೆ. ಅದಕ್ಕಾಗಿ ನಾವು ಒಂದಾಗಿದ್ದೇವೆ. ನಮಗೆ ಧರ್ಮ ಮುಖ್ಯವಲ್ಲ, ಉದ್ದೇಶ ಮುಖ್ಯ’ ಎಂದು ನಸ್ರಿನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT