ಮೊದಲ ಸೀ ವಾಕ್ ವೇ ಉದ್ಘಾಟನೆ

7

ಮೊದಲ ಸೀ ವಾಕ್ ವೇ ಉದ್ಘಾಟನೆ

Published:
Updated:
ಮೊದಲ ಸೀ ವಾಕ್ ವೇ ಉದ್ಘಾಟನೆ

ಉಡುಪಿ: ಪಡುಕರೆ ಬೀಚ್‌ಗೆ ಶೀಘ್ರದಲ್ಲಿ ಬ್ಲೂ ಫ್ಲಾಗ್‌ ನೋಂದಣಿ ಸಿಗಲಿದ್ದು, ವಿದೇಶಿ ಪ್ರವಾಸಿಗರೂ ಇಲ್ಲಿಗೆ ಬರಲಿದ್ದಾರೆ ಎಂದು ಕ್ರೀಡೆ ಮತ್ತು ಯುವಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಮಲ್ಪೆ ಅಭಿವೃದ್ಧಿ ಸಮಿತಿ ಶುಕ್ರವಾರ ಮಲ್ಪೆ ಪ್ರವಾಸಿ ಜೆಟ್ಟಿ ಬಳಿ ಆಯೋಜಿಸಿದ್ದ ರಾಜ್ಯದ ಪ್ರಥಮ ಸೀ ವಾಕ್ ವೇ ಉದ್ಘಾಟಿಸಿ ಅವರು ಮಾತನಾಡಿದರು.

ಮಲ್ಪೆಯಂತೆ ಪಡುಕರೆ ಬೀಚ್‌ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಪ್ರದೇಶಕ್ಕೆ ಅಗತ್ಯವಿರುವ ಮೂಲ ಸೌಕರ್ಯವನ್ನು ಒದಗಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಒಮ್ಮೆ ಅಂತರರಾಷ್ಟ್ರಿಯ ಮಟ್ಟದ ಬ್ಲೂ ಫ್ಲಾಗ್‌ ನೋಂದಣಿ ಆದ ನಂತರ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಈ ಪ್ರದೇಶದಲ್ಲಿ ಯುವಕರು ಪ್ರವಾಸೋದ್ಯಮದ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದರು.

‘ದೇಶದಲ್ಲಿ ಕೇರಳ ಬಿಟ್ಟರೆ ಮಲ್ಪೆಯಲ್ಲಿ ಮಾತ್ರ ಸೀ ವಾಕ್ ವೇ ಇದೆ. ಮಲ್ಪೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ₹22 ಕೋಟಿಯಲ್ಲಿ ರಸ್ತೆ, ಸೇತುವೆ, ಮೀನುಗಾರಿಕಾ ಜೆಟ್ಟಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಮಲ್ಪೆ ಬಂದರು ದೇಶದಲ್ಲೇ ಅತೀ ಹೆಚ್ಚು ಮೀನುಗಾರಿಕಾ ದೋಣಿಗಳಿರುವ 2ನೇ ಬಂದರು ಹಾಗೂ ದೇಶದ ಅತ್ಯಂತ ಸ್ವಚ್ಛ ದೀಪಗಳಲ್ಲಿ ಸೈಂಟ್ ಮೇರಿಸ್‌ ದ್ವೀಪವೂ ಒಂದಾಗಿದೆ’ ಎಂದರು.

ಪ್ರಾಕೃತಿಕ ಸೌಂದರ್ಯದ ಸೊಬಗು: ಮಲ್ಪೆ ಬೋಟ್ ಜೆಟ್ಟಿಯ ಬಳಿ ಸಮುದ್ರದಲ್ಲಿ ಹಿಂದೆ ಇದ್ದ ಬ್ರೇಕ್ ವಾಟರ್ ಕಲ್ಲಿನ ಹಾದಿಯ ಮೇಲೆ, ರಾಜ್ಯದ ಮೊದಲ ಸೀ ವಾಕ್ ವೇ ನಿರ್ಮಾಣಗೊಂಡಿದ್ದು, ಸಮುದ್ರದ ಮೇಲ್ಭಾಗದಲ್ಲಿ 450 ಮೀ. ಉದ್ದ ಹಾಗೂ 2.4 ಮೀ. ಅಗಲ ಹೊಂದಿದೆ.

ಇಲ್ಲಿ ಪ್ರವಾಸಿಗರು ನಡೆದಾಡಲು ಅನುಕೂಲವಾಗುವಂತೆ ಇಂಟರ್ ಲಾಕ್ ಅಳವಡಿಸಲಾಗಿದ್ದು, ಸಮುದ್ರದ ಸೌಂದರ್ಯವನ್ನು ಕುಳಿತು ವೀಕ್ಷಿಸಲು ಕಲ್ಲಿನ ಬೆಂಚ್‌ಗಳ ವ್ಯವಸ್ಥೆ ಮಾಡಲಾಗಿದೆ.

ವಾಕ್ ವೇ ಅಂತ್ಯದಲ್ಲಿ ಸುಂದರ ಕಲಾಕೃತಿ, ಅಲಂಕಾರಿಕಾ ದೀಪಗಳನ್ನು ಅಳವಡಿಸಲಾಗಿದೆ. ಸೈಂಟ್ ಮೇರಿಸ್ ಐಲ್ಯಾಂಡ್ ಸೇರಿದಂತೆ ಸಮೀಪದ 3 ದ್ವೀಪಗಳನ್ನು ವೀಕ್ಷಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry