ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟು ಬಿದ್ದಿದೆ

7

ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟು ಬಿದ್ದಿದೆ

Published:
Updated:
ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟು ಬಿದ್ದಿದೆ

ಬೆಂಗಳೂರು: ‘ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟು ಬಿದ್ದಿದೆ. ಈ ಬಗ್ಗೆ ನಾವೆಲ್ಲರೂ ಆತ್ಮಶೋಧನೆ ಮಾಡಿಕೊಳ್ಳಬೇಕು. ಸಂಘಗಳನ್ನು ಕಟ್ಟಿಕೊಂಡು, ಭಾಷಣ ಮಾಡುತ್ತ ದೇಶ ಕಟ್ಟುವ ನಾಟಕ ಮಾಡಿದರೆ ಯಾವ ಪ್ರಯೋಜನವೂ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋ‍ಪಾಲಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಮತ್ತು ಕಲಾವಿದರ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಭಾರತ–ಬಹುತ್ವ–ಸಂವಿಧಾನ ಒಂದು ಚಿಂತನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಕೇಂದ್ರದ ಸಚಿವರೊಬ್ಬರು ಹೇಳುತ್ತಾರೆ. ಜಾತ್ಯತೀತರ ಅಪ್ಪ–ಅಮ್ಮ ಯಾರು ಎಂದೂ ಕೇಳುತ್ತಾರೆ. ಇದನ್ನು ವಕೀಲರು ಪ್ರಶ್ನಿಸುತ್ತಿಲ್ಲ ಏಕೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

‘ಅಖಿಲ ಭಾರತ ವಕೀಲರ ಸಂಘದಲ್ಲಿ ಎಷ್ಟು ಮಂದಿ ಇದ್ದೀರಿ. ಇಲ್ಲಿ ಬೆರಳೆಣಿಕೆಯ ವಕೀಲರಷ್ಟೇ ಇದ್ದಾರಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌, ‘ಸರ್ಕಾರಕ್ಕೆ ಯಾವುದೇ ಧರ್ಮ ಇರಬಾರದು. ರಾಜಕಾರಣದ ಜತೆ ಧರ್ಮ ಬೆರೆತರೆ ಜಾತ್ಯತೀತ ತತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಆದರೆ, ಇಂದು ಧರ್ಮವೇ ರಾಜಕಾರಣವನ್ನು ಆಳುತ್ತಿರುವುದು ವಿಪರ್ಯಾಸ’ ಎಂದು ಅಭಿಪ್ರಾಯಪಟ್ಟರು. 

ಸಂವಿಧಾನವನ್ನು ಹಲವರು ಓದಿಲ್ಲ. ಓದಿರುವ ಕೆಲವರು ಅದನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ದೇಶವನ್ನು ಅರ್ಥ ಮಾಡಿಕೊಳ್ಳದೇ ಸಂವಿಧಾನ ಅರ್ಥವಾಗುವುದಿಲ್ಲ ಎಂದರು.

‘ಅನ್ಯ ದೇಶಗಳ ಜನರು ಕೃಷಿ ಮತ್ತು ವ್ಯಾಪಾರದ ಉದ್ದೇಶಕ್ಕಾಗಿ ಇಲ್ಲಿಗೆ ಬಂದರೆ, ನಿರಾಶ್ರಿತರು ಆಸರೆಗಾಗಿ ಬಂದರು. ವಿವಿಧ ಉದ್ದೇಶಗಳಿಂದ ನಮ್ಮ ದೇಶಕ್ಕೆ ಬಂದವರು ಒಬ್ಬರ ಜತೆ ಮತ್ತೊಬ್ಬರು ಬೆರೆತರು. ಒಬ್ಬರ ಹೋರಾಟಕ್ಕೆ ಮತ್ತೊಬ್ಬರು ಹೆಗಲಾದರು. ಪ್ರತ್ಯೇಕ ಸಂಸ್ಕೃತಿ, ಧರ್ಮ ಎಂದು ಪ್ರತ್ಯೇಕ ರಾಷ್ಟ್ರ ಕಟ್ಟಲಿಲ್ಲ. ಇದನ್ನೇ ನಾವು ಜಾತ್ಯತೀತ ಎಂದು ಕರೆದೆವು’ ಎಂದು ವಿಶ್ಲೇಷಿಸಿದರು.

ವಕೀಲ ಪ್ರೊ. ರವಿವರ್ಮ ಕುಮಾರ್‌, ‘ಸಂವಿಧಾನಕ್ಕೆ ಹೊರಗಿನಿಂದ ಮಾತ್ರವಲ್ಲ, ಒಳಗಿನಿಂದಲೂ ಅಪಾಯ ಎದುರಾಗಿದೆ. ಇದನ್ನು ಎದುರಿಸಲು ವಕೀಲರು ಮತ್ತು ಯುವಜನರು ಮಾನಸಿಕವಾಗಿ ಸಿದ್ಧರಾಗಬೇಕು’ ಎಂದರು.

* ಸುಲಭವಾಗಿ ಅರ್ಥವಾಗುವುದಕ್ಕೆ ಸಂವಿಧಾನವು ಕಥೆ, ಕಾದಂಬರಿ ಅಥವಾ ಕವಿತೆಯಲ್ಲ. ಅದು ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ ಕಾರ್ಯಕ್ರಮ

–ಎಚ್‌.ಎನ್‌. ನಾಗಮೋಹನದಾಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry