ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕ್ರೀಡಾಂಗಣ, ಇಂದಿರಾ ವೃತ್ತ ಅಭಿವೃದ್ಧಿ

Last Updated 27 ಜನವರಿ 2018, 9:35 IST
ಅಕ್ಷರ ಗಾತ್ರ

ಬಳ್ಳಾರಿ: ‘ಒಂದು ದಶಕದ ಬಳಿಕ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಚಾಲನೆ ನೀಡಲಾಗಿದೆ. ನಗರದ ಇಂದಿರಾ ವೃತ್ತವನ್ನು ಕೂಡ ಅಭಿವೃದ್ಧಿಪಡಿಸಿ ಸಿಗ್ನಲ್‌ ಮುಕ್ತಗೊಳಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 69ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘₹4 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲಾಗುವುದು. ಜಿಂದಾಲ್‌ ಸಂಸ್ಥೆಯು ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ಅಡಿ ₹90 ಲಕ್ಷವನ್ನು ನೀಡಿದೆ. ಉಳಿದ ಮೊತ್ತವನ್ನು ಜಿಲ್ಲಾ ಖನಿಜ ನಿಧಿಯಿಂದ ಭರಿಸಲಾಗುವುದು’ ಎಂದು ಹೇಳಿದರು.

‘₹40 ಲಕ್ಷ ವೆಚ್ಚದಲ್ಲಿ ಇಂದಿರಾ ವೃತ್ತವನ್ನು ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಲಿದೆ. ಅದಕ್ಕಾಗಿ ಗಡಿಗಿ ಚೆನ್ನಪ್ಪ ವೃತ್ತದಿಂದ ಇಂದಿರಾ ವೃತ್ತದವರೆಗೂ ರಸ್ತೆ ವಿಸ್ತರಣೆ ಮಾಡಬೇಕು. ಆದರೆ ವರ್ತಕರು ವಿರೋಧಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರೊಂದಿಗೆ ಸಮಾಲೋಚಿಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ನೀರು ಪೂರೈಕೆಯಲ್ಲಿ ವಿಫಲ: ’ನಗರದಲ್ಲಿ 24x7 ನೀರು ಪೂರೈಕೆ ಯೋಜನೆಯು ಆರಂಭವಾಗಿ ಆರು ವರ್ಷ ಕಳೆದರೂ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ನಾವು ಸೋತಿದ್ದೇವೆ’ ಎಂದು ಸಚಿವರು ವಿಷಾದಿಸಿದರು.

‘ತಾಂತ್ರಿಕ ಕಾರಣಗಳಿಂದ ಈ ಸಮಸ್ಯೆ ಎದುರಾಗಿದೆ. ಮುಖ್ಯಕಾರ್ಯದರ್ಶಿ ಮಟ್ಟದಲ್ಲೇ ಈ ಬಗ್ಗೆ ಚರ್ಚೆ ನಡೆದಿದೆ. ಗುತ್ತಿಗೆದಾರರು ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವುದೂ ಇದಕ್ಕೆ ಕಾರಣ. ಅವರ ಬದಲಿಗೆ ಬೇರೊಬ್ಬರಿಗೆ ಹೊಣೆ ಹೊರಿಸಿದರೆ ಇನ್ನಷ್ಟು ವಿಳಂಬವಾಗಬಹುದು ಎಂಬ ಕಾರಣಕ್ಕೆ ಅವರನ್ನೇ ಮುಂದುವರಿಸಲಾಗಿದೆ’ ಎಂದು ಅವರು ವಿಷಾದಿಸಿದರು.

ಫೆಬ್ರುವರಿ 5 ಕೊನೇ ದಿನ: ‘ಮುಂಡರಿಗಿ ಪ್ರದೇಶದಲ್ಲಿ ಆಶ್ರಯ ಯೋಜನೆ ಅಡಿ 2ಜಿ ಮನೆಗಳ ನಿರ್ಮಾಣಕ್ಕಾಗಿ ಫಲಾನುಭವಿಗಳು ವಂತಿಗೆ ಪಾವತಿಸಲು ಫೆಬ್ರುವರಿ 5 ಕೊನೇ ದಿನ. 6000 ಮಂದಿ ಪೈಕಿ ಇದುವರೆಗೂ ಕೇವಲ 76 ಮಂದಿ ಮಾತ್ರ ದುಡ್ಡು ಪಾವತಿಸಿದ್ದಾರೆ. ಉಳಿದವರು ಕನಿಷ್ಠ ₹ 10 ಸಾವಿರವನ್ನಾದರೂ ಪಾವತಿಸಿದರೆ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಹೇಳಿದರು.

‘ವಂತಿಗೆ ಪ್ರಮಾಣ ಹೆಚ್ಚಾಯಿತು ಎಂದು ಹೇಳಿರುವ ನಗರ ಶಾಸಕ ಅನಿಲ್‌ಲಾಡ್‌ ಅವರ ಮಾತಿಗೆ ಅವರೇ ಹೊಣೆ. ನಾವಲ್ಲ’ ಎಂದು ಇದೇ ಸಂದರ್ಭದಲ್ಲಿ ಸಚಿವ ಸಂತೋಷ್ ಲಾಡ್‌ ಸ್ಪಷ್ಟಪಡಿಸಿದರು.

24x7 ನೀರು ಪೂರೈಕೆಯಲ್ಲಿ ವಿಫಲ: ವಿಷಾದ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕುಡಿವ ನೀರಿನ ಘಟಕ ಸ್ಥಾಪನೆ
ಅನಧಿಕೃತ ಫ್ಲೆಕ್ಸ್‌: ಕ್ರಿಮಿನಲ್‌ ಪ್ರಕರಣ ದಾಖಲಿಸಲು ಹೊಸಪೇಟೆ ಎ.ಸಿ.ಗೆ ಸೂಚನೆ

ಡಿ.ಸಿ ಸ್ಪಷ್ಟನೆ

ಗಣಿಬಾಧಿತ ಸಂತ್ರಸ್ತರಿಗೆ ಮತ್ತು ಅವರ ಮಕ್ಕಳಿಗೆ ಜಿಲ್ಲಾ ಖನಿಜ ನಿಧಿ ಅಡಿ ಉದ್ಯೋಗ ಕಲ್ಪಿಸುವ ಯೋಜನೆಗೆ ಹಿಂದಿನ ವರ್ಷ ಜೂನ್‌ನಲ್ಲೇ ಅನುಮೋದನೆ ದೊರಕಿತ್ತು. ಈ ನಿಧಿಯ ಬಳಕೆಯ ನಿಯಮಗಳ ಉಲ್ಲಂಘನೆ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ‌ಡಾ.ರಾಮಪ್ರಸಾದ್‌ ಮನೋಹರ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT