ಜಿಲ್ಲೆಯಲ್ಲಿ 8 ಇಂದಿರಾ ಕ್ಯಾಂಟೀನ್‌

7

ಜಿಲ್ಲೆಯಲ್ಲಿ 8 ಇಂದಿರಾ ಕ್ಯಾಂಟೀನ್‌

Published:
Updated:
ಜಿಲ್ಲೆಯಲ್ಲಿ 8 ಇಂದಿರಾ ಕ್ಯಾಂಟೀನ್‌

ಚಿಕ್ಕಮಗಳೂರು: ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಲು ಸಿದ್ಧತೆ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 8 ಕ್ಯಾಂಟೀನ್‌ ತೆರೆಯಲು ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ರೋಷನ್‌ ಬೇಗ್‌ ಹೇಳಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣರಾಜ್ಯೋತ್ವದಲ್ಲಿ ಅವರು ಮಾತನಾಡಿದರು. ಚಿಕ್ಕಮಗಳೂರಿನಲ್ಲಿ ಎರಡು, ಕಡೂರು, ತರೀಕೆರೆ, ಕೊಪ್ಪ, ಮೂಡಿಗೆರೆ, ಎನ್.ಆರ್. ಪುರ, ಶೃಂಗೇರಿಗಳಲ್ಲಿ ತಲಾ ಒಂದು ಕ್ಯಾಂಟೀನ್‌ಗಳು ಆರಂಭವಾಗಲಿವೆ. ಈ ಕ್ಯಾಂಟೀನ್‌ಗಳಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ತಿಂಡಿ ಹಾಗೂ ಊಟ ಲಭಿಸುತ್ತದೆ ಎಂದರು.

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್ಯದಲ್ಲಿ ರಾಜ್ಯವು ದೇಶಕ್ಕೆ ಮಾದರಿಯಾಗಿದೆ. 9,300 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದೇವೆ, ಇದರಿಂದ 1.5 ಕೋಟಿ ಜನರಿಗೆ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ದೊರಕುತ್ತಿದೆ ಎಂದರು.

ಸರ್ವ ಧರ್ಮಗಳನ್ನು ಗೌರವಿಸಬೇಕು. ಕೋಮು ಗಲಭೆಗಳಿಗೆ ಅವಕಾಶ ನೀಡಬಾರದು. ಸರ್ವಧರ್ಮ ಸಮನ್ವಯ ಭಾವ ಬೆಳೆಸಿಕೊಳ್ಳಬೇಕು. ಜಾತಿ, ಭಾಷೆ, ಪಂಗಡದ ಸಂಕುಚಿತ ಭಾವನೆ ಇರಬಾರದು. ಸ್ನೇಹ ಹಾಗೂ ಸೌಹಾರ್ದ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಕಾಪಾಡಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಲ್ಯಾಪ್‌ಟಾಪ್ ಉಚಿತವಾಗಿ ನೀಡಲಾಗುತ್ತಿದೆ. ಗರ್ಭಿಣಿ, ಬಾಣಂತಿಯರಿಗೆ ‘ಮಾತೃಪೂರ್ಣ’ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರವನ್ನು ಉಚಿತವಾಗಿ ನೀಡುತ್ತಿದ್ದೇವೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಇಡೀ ದೇಶದಲ್ಲೇ ಹೆಚ್ಚಿನ ಬಂಡವಾಳವನ್ನು ತಂದ ರಾಜ್ಯಗಳ ಪೈಕಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಯಶಸ್ವಿನಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲಾಗಿದೆ ಎಂದರು.

ರಾಜ್ಯ ಸರ್ಕಾರವು ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿ, ವಿದ್ಯಾಸಿರಿ, ಕ್ಷೀರಧಾರೆ, ನಿರ್ಮಲಭಾಗ್ಯ, ವಸತಿಭಾಗ್ಯದಂಥ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಮಾಜಿಕ ನ್ಯಾಯ, ಗ್ರಾಮೀಣಾಭಿವೃದ್ಧಿ , ರೈತರು, ಮತ್ತು ಮಹಿಳೆಯರ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.

ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿಸಿದ್ದರು. ಅರಣ್ಯವಸತಿ ಮತ್ತು ವಿಹಾರಾಧಾಮ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈ.ಆರ್‌.ಮಹೇಶ್‌, ಉಪಾಧ್ಯಕ್ಷ ವೈ.ಜಿ.ಸುರೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇದ್ದರು.

ಪಥಸಂಚಲನ: ಬಹುಮಾನ ಪಡೆದ ತಂಡಗಳು

ಎನ್‌ಸಿಸಿ ವಿಭಾಗ: ಐಡಿಎಸ್‌ಜಿ ಕಾಲೇಜು ತಂಡ, ಉಪ್ಪಳ್ಳಿಯ ಜ್ಞಾನರಶ್ಮಿ ಪ್ರೌಢಶಾಲೆಯ ಸ್ಕೌಟ್ಸ್ ತಂಡ, ಉಪ್ಪಳ್ಳಿಯ ಮಾಡೆಲ್ ಆಂಗ್ಲ ಪ್ರೌಢಶಾಲೆಯ ಗೈಡ್ಸ್ ತಂಡ, ಬಸವನಹಳ್ಳಿಯ ಶಾಸಕರ ಮಾದರಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಸೇವಾದಳ ತಂಡ, ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಪ್ರೌಢಶಾಲೆಯ ತಂಡ, ಚಿಕ್ಕಮಗಳೂರಿನ ಕುವೆಂಪು ವಿದ್ಯಾನಿಕೇತನ ಪ್ರೌಢಶಾಲೆಯ ಶಾಲಾ ಬ್ಯಾಂಡ್ ವಿಭಾಗಕ್ಕೆ ಬಹುಮಾನ ಸಂದಿದೆ. ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ತಂಡಕ್ಕೆ ಸಮಾಧಾನಕರ ಬಹುಮಾನ ಸಂದಿದೆ.

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಾಜಗೋಪಾಲ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್, ಜಿಲ್ಲಾ ಆಸ್ಪತ್ರೆಯ ಶುಶ್ರೂಷಕಿ ಪದ್ಮಿನಿ, ಅರಣ್ಯ ವಲಯ ಅಧಿಕಾರಿ ಎಚ್.ಕೆ.ಜಯಕುಮಾರ್, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ಬೇಲೀಫ್ ಎಚ್.ಕೆ.ವಸಂತಕುಮಾರ್, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಯೋವನ್ ಜಾನ್ ಅವರಿಗೆ ಜಿಲ್ಲಾವಾರು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ: ಸಾಧಕ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ

ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕೊಪ್ಪ ತಾಲ್ಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ಪಿಡಿಒ ಡಿ.ಎನ್‌.ಕೃಷ್ಣಪ್ಪ, ಕಡೂರು ತಾಲ್ಲೂಕಿನ ನಿಡುವಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಂ.ಬಿ.ಸತೀಶ್, ಎನ್.ಆರ್.ಪುರ ತಾಲ್ಲೂಕಿನ ಕರ್ಕೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ಕೆ.ಬಿ.ಲೋಕೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಐಡಿಎಸ್‌ಜಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ವಾಲಿಬಾಲ್‌ ಸ್ಪರ್ಧೆ ಬಹುಮಾನ ಪಡೆದವರು

ಜಿಲ್ಲಾ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಗಗನಚುಂಬಿ ತಂಡ ಪ್ರಥಮ ಹಾಗೂ ಮಾಗಡಿ ಹೋಬಳಿ ಸತ್ತಿಹಳ್ಳಿಯ ತಂಡ ದ್ವಿತೀಯ ಸ್ಥಾನ ಪಡೆದಿದೆ. ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಕೆ.ಎಲ್‌.ಅರುಣ್ ಕುಮಾರ್– ಪ್ರಥಮ, ಕುಲದೀಪ್ ದ್ವಿತೀಯ, ಪುರುಷರ ಡಬಲ್ಸ್‌ನಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಂಡ ಪ್ರಥಮ, ಕುಲದೀಪ್ ತಂಡ ದ್ವಿತೀಯ, ಮಹಿಳೆಯರ ಸಿಂಗಲ್ಸ್ ನಲ್ಲಿ ಜಿ.ಪೂರ್ಣಿಮಾ–ಪ್ರಥಮ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಜೀವರಕ್ಷಕ, ಆಶಾ ಕಾರ್ಯಕರ್ತೆಯರಿಗೆ ಪ್ರಶಸ್ತಿ

ಮುಖ್ಯಮಂತ್ರಿ ಸಾಂತ್ವಾನ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಸಹಾಯ ಮಾಡಿದ ಪರೋಪಕಾರಿಗಳಿಗೆ ನೀಡುವ ಜೀವರಕ್ಷಕ ಪ್ರಶಸ್ತಿಯನ್ನು ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿಯ ಗುರುಪ್ರಸಾದ್ ಹಾಗೂ ಸಖರಾಯಪಟ್ಟಣದ ಸುಮನ್ ಪಡೆದಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜನಸಾಮಾನ್ಯರ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಿದ ಆಶಾ ಕಾರ್ಯಕರ್ತೆಯರಾದ ಕೆ.ಆರ್.ಪೇಟೆ ಮಂಜುಳ, ಬಳ್ಳಾವರ ನಿರ್ಮಲಾ ಹಾಗೂ ದೇವನೂರಿನ ಗೌರಮ್ಮ, ಆಶಾ ಸುಗಮಕಾರರಾದ ಬೇಗಾರದ ಭಾಗ್ಯಮ್ಮ , ಜೈಪುರದ ಶ್ರೀಮತಿ ಅವರನ್ನು ಸನ್ಮಾನಿಸಲಾಯಿತು.

ಮಿಷನ್ ಯೋಜನೆ: ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ: ನವಕರ್ನಾಟಕ ಮಿಷನ್ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ತರೀಕೆರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಚಂದನ್ ಹಾಗೂ ಕಡೂರಿನ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ಆರ್‌. ಯಶವಂತ್‌ ಅವರಿಗೆ ಪ್ರಶಸ್ತಿ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry