ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ಸಿರಿಧಾನ್ಯ ಕಲೆ

Last Updated 27 ಜನವರಿ 2018, 10:04 IST
ಅಕ್ಷರ ಗಾತ್ರ

ದಾವಣಗೆರೆ: ಹಣ್ಣು, ತರಕಾರಿಗಳು ಇರುವುದೇ ಹೊಟ್ಟೆ ತುಂಬಿಸಿಕೊಳ್ಳಲು ಎಂದುಕೊಂಡಿರುವವರೇ ಹೆಚ್ಚು. ಈಗ ಅವನ್ನು ಆಲಂಕಾರಿಕ ಪರಿಕರಗಳಾಗಿ ಬಳಸುವ ಕುಶಲಮತಿಗಳೂ ಇದ್ದಾರೆ. ಹೊಟ್ಟೆ ತುಂಬಿಸಿಕೊಳ್ಳುವ ಜತೆಗೆ ಕಣ್ತುಂಬಿಕೊಂಡೂ ಖುಷಿ ಪಡಬಹುದಾದ ಫಲ–ಪುಷ್ಪ ಪ್ರದರ್ಶನ ನಗರದಲ್ಲಿ ನಡೆಯುತ್ತಿದೆ.

ಇಂಥದೊಂದು ಫಲಪುಷ್ಪ ಪ್ರದರ್ಶನವನ್ನು ನಗರದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಜ. 26ರಿಂದ 28ರವರೆಗೆ ಮೂರುದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ₹ 12 ಲಕ್ಷ ಖರ್ಚಾಗಿದೆ. ಪ್ರದರ್ಶನವನ್ನು ಶುಕ್ರವಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಉದ್ಘಾಟಿಸಿದರು.

ಪ್ರದರ್ಶನದ ವಿಶೇಷ; ಸಿರಿಧಾನ್ಯ ಕಲೆ: ‘ನವಣೆ, ಸಜ್ಜೆ, ರಾಗಿ, ಸಾವೆ, ಬರಗು, ಅಕ್ಕಿ, ಹೆಸರು, ಜೋಳದಂತಹ ಸಿರಿಧಾನ್ಯಗಳನ್ನು ಬಳಸಿಕೊಂಡು 7–8 ಅಡಿ ಎತ್ತರದ ಗೊಮ್ಮಟೇಶ, ಬಸವಣ್ಣನ ಪ್ರತಿಮೆ ಹಾಗೂ ಹಂಪಿ ಕಲ್ಲಿನ ರಥವನ್ನು ಮಾಡಲಾಗಿದೆ. ಒಟ್ಟು ಈ ಕಲಾಕೃತಿಗೆ 2 ಕ್ವಿಂಟಲ್‌ ಸಿರಿಧಾನ್ಯ ಬಳಸಿಕೊಂಡಿದ್ದು ಥರ್ಮೊಕೋಲ್‌, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಸಹಾಯದಿಂದ ನಿರ್ಮಿಸಲಾಗಿದೆ. 2 ತಿಂಗಳ ಕಾಲ ಹಗಲು ರಾತ್ರಿ ಕುಟುಂಬ ಸದಸ್ಯರು ಸೇರಿ ಈ ಕಲಾಕೃತಿಗಳನ್ನು ತಯಾರಿಸಿದ್ದೇವೆ. ಶೇ 80ರಷ್ಟು ತಯಾರಿಯನ್ನು ಹುಬ್ಬಳ್ಳಿಯಲ್ಲಿ ನಡೆಸಲಾಯಿತು. ಅಂತಿಮ ಹಂತದ ಸಿದ್ಧತೆಯನ್ನು ದಾವಣಗೆರೆಯಲ್ಲಿ ಪೂರ್ಣಗೊಳಿಸಲಾಯಿತು’ ಎಂದು ಸಿರಿಧಾನ್ಯ ಕಲಾವಿದ ಹುಬ್ಬಳ್ಳಿಯ ಶಿವಲಿಂಗಪ್ಪ ಎ. ಬಡಗೇರಾ ಮಾಹಿತಿ ನೀಡಿದರು.

ಗುಲಾಬಿ, ಜರ್ಬೇರಾ, ಕಾರ್ನೇಷನ್‌ ಹೂವುಗಳನ್ನು ಬಳಸಿ ನೀರಿನ ಮಹತ್ವವನ್ನು ಸಾರುವ ಪುಪ್ಷ ಜಲಪಾತ ಮತ್ತು ಪ್ರಾಣಿ ಪಕ್ಷಿಗಳು ನೀರು ಕುಡಿಯುವ ಕಲಾಕೃತಿಗಳು, ಹೃದಯ, ಸಂಗೀತ ವಾದ್ಯಗಳಾದ ತಬಲಾ, ವೀಣೆ, ಗಿಟಾರುಗಳಂತಹ ಪುಷ್ಪ ಕಲೆಗಳನ್ನು ಇಲ್ಲಿವೆ. ರಂಗೋಲಿಯಿಂದ ಬಿಡಿಸಿದ ಕನ್ನಡ ನಾಡಿನ ದಿಗ್ಗಜರಾದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಪುಟ್ಟರಾಜು ಗವಾಯಿ, ವೀರೇಂದ್ರ ಹೆಗ್ಗಡೆ ಅವರ ಚಿತ್ರಕಲೆಗಳು ಗಮನ ಸೆಳೆಯುತ್ತಿವೆ.

ಕೃಷಿ ಶಿಕ್ಷಣ: ಕೃಷಿಕರಿಗೆ ಮಾರ್ಗದರ್ಶನ ನೀಡುವಂತಹ ಜಲ ಕೃಷಿಯ ಪ್ರಾತ್ಯಕ್ಷಿಕೆ, ಮೀನುಗಾರಿಕೆಯತ್ತ ರೈತರಿಗೆ ಆಸಕ್ತಿಯನ್ನು ಮೂಡಿಸುವಂತಹ ಪ್ರಯೋಗಿಕ ಮಾಹಿತಿ ನೀಡುವ ವ್ಯಸ್ಥೆಯನ್ನು ಈ ಪ್ರದರ್ಶನದಲ್ಲಿ ಮಾಡಲಾಗಿದೆ. ಇದರೊಂದಿಗೆ ರೈತರನ್ನು ಪ್ರೋತ್ಸಹಿಸುವ ನಿಟ್ಟಿನಲ್ಲಿ ತೋಟಗಾರಿಕಾ ಬೆಳೆಗಾರರು ಬೆಳೆದ ವಿವಿಧ ಹಣ್ಣು, ತರಕಾರಿ, ಸಾಂಬಾರು ಬೆಳೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಾವಯವ ಬೆಳೆಗಳ ಕುರಿತು ಮಾಹಿತಿಗೆ ಹೆಚ್ಚು ಒತ್ತು ಕೊಟ್ಟಿದ್ದು, ರೈತರಿಗೆ ತೋಟಗಾರಿಕೆ ಬಗ್ಗೆ ಅಭಿರುಚಿ ಹೆಚ್ಚಿಸುವ ಉದ್ದೇಶವನ್ನು ಈ ಪ್ರದರ್ಶನ ಹೊಂದಿದೆ ಎನ್ನುತ್ತಾರೆ ತೋಟಗಾರಿಕ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ.

ಜಯಪ್ರಕಾಶ್‌ ಬಿರಾದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT