ಕಾಬೂಲ್‍ನಲ್ಲಿ ಸ್ಫೋಟ: 40 ಜನರ ಸಾವು; 140 ಮಂದಿಗೆ ಗಾಯ

7

ಕಾಬೂಲ್‍ನಲ್ಲಿ ಸ್ಫೋಟ: 40 ಜನರ ಸಾವು; 140 ಮಂದಿಗೆ ಗಾಯ

Published:
Updated:
ಕಾಬೂಲ್‍ನಲ್ಲಿ ಸ್ಫೋಟ: 40 ಜನರ ಸಾವು; 140 ಮಂದಿಗೆ ಗಾಯ

ಕಾಬೂಲ್‌ : ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಶನಿವಾರ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ 40 ಜನ ಸಾವನಪ್ಪಿದ್ದಾರೆ. 140 ಜನ ಗಾಯಗೊಂಡಿದ್ದಾರೆ.

ಭಯೋತ್ಪಾದಕ ಆಂಬ್ಯುಲೆನ್ಸ್‌ನಲ್ಲಿ ಸ್ಫೋಟಕಗಳನ್ನು ತುಂಬಿ ತಂದು, ಜನನಿಬಿಡ ಪ್ರದೇಶದಲ್ಲಿ ಸಿಡಿಸಿದ್ದರಿಂದ ಈ ದುರಂತ ನಡೆದಿದೆ. ಈ ಕೃತ್ಯದ ಹೊಣೆಯನ್ನು ತಾಲಿಬಾನ್‌ ಸಂಘಟನೆ ಹೊತ್ತುಕೊಂಡಿದೆ.

ಕಳೆದ ವರ್ಷ ಮಾರ್ಚ್‌ 31ರಲ್ಲಿ ಟ್ರಕ್‌ನಲ್ಲಿ ಬಾಂಬ್‌ ಅಡಗಿಸಿ ಸ್ಫೋಟಿಸಿದ ಬಳಿಕ ನಡೆದ ದೊಡ್ಡ ದುಷ್ಕೃತ್ಯ ಇದಾಗಿದೆ.

‘ಸ್ಫೋಟದಿಂದಾಗಿ ಸಮೀಪದ ಜಮುರಿಯೆಟ್‌ ಆಸ್ಪತ್ರೆ ಶವ ಮತ್ತು ಗಾಯಾಳುಗಳಿಂದ ತುಂಬಿತು. ರಕ್ತಸಿಕ್ತವಾಗಿ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಮಲಗಿದ್ದ ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡಲು ಅಲ್ಲಿನ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು’ ಎಂದು ಪ್ರತ್ಯಕ್ಷದರ್ಶಿ ಎಎಫ್‌ಪಿ ಸುದ್ದಿಸಂಸ್ಥೆಯ ವರದಿಗಾರ ತಿಳಿಸಿದ್ದಾರೆ.

ಈ ಸ್ಫೋಟದ ತೀವ್ರತೆಗೆ ಎರಡು ಕಿ.ಮೀ. ಸುತ್ತಳತೆಯಲ್ಲಿನ ಕಟ್ಟಡಗಳಲ್ಲಿ ವಾಸಿಸುವ ಜನರು ಬೆಚ್ಚಿಬಿದ್ದರು. ಘಟನೆ ನಡೆದ ಸ್ಥಳದಿಂದ ನೂರು ಮೀ. ಸುತ್ತಳತೆಯಲ್ಲಿನ ಸಣ್ಣ ಕಟ್ಟಡಗಳು ಕುಸಿದಿವೆ. ಕೆಲವು ಕಟ್ಟಡದ ಕಿಟಕಿಗಳ ಗಾಜುಗಳು ಪುಡಿಯಾಗಿವೆ.

‘ಭದ್ರತಾ ಪಡೆಗಳ ಕಣ್ತಪ್ಪಿಸಲು ಆತ್ಮಾಹುತಿ ಬಾಂಬರ್‌ ಆ್ಯಂಬುಲೆನ್ಸ್‌ನಲ್ಲಿ ಸ್ಫೋಟಕ ಸಾಗಿಸಿದ್ದಾನೆ. ಮೊದಲ ಚೆಕ್‌ ಪಾಯಿಂಟ್‌ನಲ್ಲಿ ರೋಗಿಯೊಬ್ಬರನ್ನು ಜಮುರಿಯೆಟ್‌ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ನೆಪ ಹೇಳಿ ಸಾಗಿದ್ದಾನೆ. ವಾಹನದಲ್ಲಿ ಸ್ಫೋಟಕವಿರುವುದು ಎರಡನೆ ಚೆಕ್‌ ಪಾಯಿಂಟ್‌ನ ಭದ್ರತಾ ಸಿಬ್ಬಂದಿಗೆ ಗೊತ್ತಾಗುತ್ತಿದ್ದಂತೆ ಸ್ಫೋಟಿಸಿಕೊಂಡಿದ್ದಾನೆ’ ಎಂದು ಆಂತರಿಕ ಭದ್ರತಾ ಸಚಿವಾಲಯದ ವಕ್ತಾರ ನಸ್‌ರತ್‌ ರಹಿಮ್‌ ತಿಳಿಸಿದ್ದಾರೆ.

ಒಂದು ವಾರದ ಅಂತರದಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್‌ ನಡೆಸಿದ ಎರಡನೇ ದಾಳಿ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry