4

ಆನಂದ ಸಿಂಗ್ ರಾಜೀನಾಮೆ ಅಂಗೀಕರಿಸಿದ ಸ್ಪೀಕರ್‌

Published:
Updated:
ಆನಂದ ಸಿಂಗ್ ರಾಜೀನಾಮೆ ಅಂಗೀಕರಿಸಿದ ಸ್ಪೀಕರ್‌

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಬಿಜೆಪಿ ಶಾಸಕ ಆನಂದ ಸಿಂಗ್ ಶನಿವಾರ ಇಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರನ್ನು ಭೇಟಿ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

‘ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಆನಂದ್ ಸಿಂಗ್ ತಿಳಿಸಿದ್ದಾರೆ. ನಿಯಮ ಪ್ರಕಾರವೇ ಸಲ್ಲಿಸಿದ್ದಾರೆ. ಹೀಗಾಗಿ ಅದನ್ನು ಅಂಗೀಕರಿಸಲಾಗಿದೆ’ ಎಂದು ಕೋಳಿವಾಡ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿ ಮುಖಂಡರ ಆಂತರಿಕ ಕಲಹ ಮತ್ತು ಮಲತಾಯಿ ಧೋರಣೆಯಿಂದ ಬೇಸತ್ತಿದ್ದು, ಯಾವುದೇ ಆಸೆ– ಆಕಾಂಕ್ಷೆಗಳಿಗೆ ಒಳಗಾಗದೇ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಸಿಂಗ್ ತಿಳಿಸಿದರು. ಹೊಸಪೇಟೆಯ ವಿಜಯನಗರ ವಿಧಾನಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ, ಯಾವ ಪಕ್ಷದಿಂದ ಎಂಬುದನ್ನು ಕ್ಷೇತ್ರದ ಮತದಾರರ ಅಭಿಪ್ರಾಯ ಪಡೆದು ನಿರ್ಧರಿಸಲಾಗುವುದು’ ಎಂದು ಅವರು ತಿಳಿಸಿದರು.

ಬೆದರಿಸಿ ರಾಜೀನಾಮೆ

ಹುಬ್ಬಳ್ಳಿ: ‘ಶಾಸಕ ಆನಂದ್ ಸಿಂಗ್‌ ಮೇಲೆ ಹಲವು ಪ್ರಕರಣಗಳಿವೆ. ಹೀಗಾಗಿ ಅವರನ್ನು ಬೆದರಿಸಿ, ರಾಜೀನಾಮೆ ಪಡೆಯಲಾಗಿದೆ’ ಎಂದು ಸಂಸದ ಪ್ರಹ್ಲಾದ ಜೋಶಿ ದೂರಿದರು.

‘ಸಿಂಗ್‌ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಯವರೆಗೆ ಪಾದಯಾತ್ರೆ ಹೋಗಿದ್ದರು. ಈಗ ಅವರನ್ನೇ ಏಕೆ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ’ ಎಂದು ಜೋಶಿ ಪ್ರಶ್ನಿಸಿದರು.

‘ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯುವ ತೀರ್ಮಾನದಿಂದಲೇ ದೇಶದಲ್ಲಿ ಕೊಲೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಿವೆ’ ಎಂದು ಅವರು ಟೀಕಿಸಿದರು.

‘ಪಾಕಿಸ್ತಾನದ ಪ್ರಧಾನಿಗಿಂತ ಕೆಟ್ಟ ಆಡಳಿತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುತ್ತಿದ್ದಾರೆ. ಒಂದು ಕೋಮಿನ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry