7
ಕಣ್ಣಿಂದ ಗುಣಮಟ್ಟ ಪತ್ತೆ ಅಸಾಧ್ಯ: ಬಿಐಎಸ್‌

‘ಹೆಲ್ಮೆಟ್‌ ನಿಷೇಧ ಸದ್ಯಕ್ಕಿಲ್ಲ’

Published:
Updated:
‘ಹೆಲ್ಮೆಟ್‌ ನಿಷೇಧ ಸದ್ಯಕ್ಕಿಲ್ಲ’

ಬೆಂಗಳೂರು: ನಗರದಲ್ಲಿ ಫೆ. 1ರಿಂದ ಐಎಸ್‌ಐ ಗುರುತು ಇಲ್ಲದ ಹಾಗೂ ಕಳಪೆ ಹೆಲ್ಮೆಟ್‌ ನಿಷೇಧಿಸುವುದಾಗಿ ಹೇಳಿದ್ದ ಸಂಚಾರ ಪೊಲೀಸರು, ತಮ್ಮ ತೀರ್ಮಾನವನ್ನು ಹಿಂಪಡೆದಿದ್ದಾರೆ. ಹೆಲ್ಮೆಟ್‌ ಕಳಪೆಯದ್ದೆಂಬ ಕಾರಣಕ್ಕೆ ದಂಡ ವಿಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

‘ಮೈಸೂರು ಪೊಲೀಸರು ಪ‍ರಿಚಯಿಸಿದ್ದ ‘ಆಪರೇಷನ್ ಸೇಫ್‌ ರೈಡ್‌’ ಮಾದರಿಯ ಕಾರ್ಯಾಚರಣೆಯನ್ನು ಗೃಹ ಸಚಿವರ ಸೂಚನೆಯಂತೆ ನಗರದಲ್ಲಿ ಜಾರಿಗೆ ತರಲು ಮುಂದಾಗಿದ್ದೆವು. ಆದರೆ, ಹೆಲ್ಮೆಟ್‌ ಪರೀಕ್ಷೆ ಮಾಡುವುದು ಕಠಿಣವಾಗಿರುವುದರಿಂದ ಕಾರ್ಯಾಚರಣೆ ನಡೆಸುವುದನ್ನು ಸದ್ಯಕ್ಕೆ ಕೈಬಿಟ್ಟಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌. ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಲ್ಮೆಟ್‌ ಗುಣಮಟ್ಟ ಸರಿ ಇಲ್ಲವೆಂದು ಯಾವುದೇ ಪೊಲೀಸ್ ನಿಮ್ಮನ್ನು (ಸವಾರರನ್ನು) ಪ್ರಶ್ನಿಸುವುದಿಲ್ಲ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಐಎಸ್‌ಐ ಗುರುತು ಇರುವ ಹೆಲ್ಮೆಟ್‌ ಧರಿಸುವುದು ಒಳ್ಳೆಯದು. ಆ ಬಗ್ಗೆ ಜಾಗೃತಿ ಮೂಡಿಸುತ್ತೇವೆ’ ಎಂದರು.

ಬಿಐಎಸ್‌ ಅಧಿಕಾರಿಗಳಿಂದ ಪತ್ರ: ಹೆಲ್ಮೆಟ್‌ ಗುಣಮಟ್ಟದ ಪರೀಕ್ಷೆ ಹಾಗೂ ಕಳಪೆ ಗುಣಮಟ್ಟದ ಹೆಲ್ಮೆಟ್‌ ನಿಷೇಧಿಸುವ ಬಗ್ಗೆ ಮಾಹಿತಿ ಕೋರಿ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್‌) ಅಧಿಕಾರಿಗಳಿಗೆ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ಪತ್ರ ಬರೆದಿರುವ ಬಿಐಎಸ್‌ ಅಧಿಕಾರಿಗಳು, ಹೆಲ್ಮೆಟ್‌ ಪರೀಕ್ಷೆಯ ವಿಧಾನವನ್ನು ವಿವರಿಸಿದ್ದಾರೆ.

‘ಹೆಲ್ಮೆಟ್‌ಗಳನ್ನು ಸ್ಪರ್ಶಿಸಿ, ಕಣ್ಣಿನಿಂದ ನೋಡಿ ಗುಣಮಟ್ಟದ ಬಗ್ಗೆ ತೀರ್ಮಾನಿಸುವುದು ಅಸಾಧ್ಯ. ಪರೀಕ್ಷೆಗೆಂದೇ ಪ್ರತ್ಯೇಕ ವಿಧಾನಗಳಿವೆ. ರಸ್ತೆಯಲ್ಲಿ ಸವಾರರನ್ನು ಏಕಾಏಕಿ ತಡೆದು ಅವರ ಹೆಲ್ಮೆಟ್‌ ಕಳಪೆಯದ್ದು ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ‘ಹೆಲ್ಮೆಟ್‌ ತಯಾರಿಕೆಗಾಗಿ ಕೆಲ ಕಂಪನಿಗಳಿಗೆ ಪರವಾನಗಿ ನೀಡಿದ್ದೇವೆ. ಆ ಕಂಪನಿಗಳ ಹೆಲ್ಮೆಟ್‌ ಮಾದರಿಗಳನ್ನು ಪರೀಕ್ಷೆ ಮಾಡಿ ಐಎಸ್‌ಐ ಗುರುತಿನ ಸ್ಟಿಕ್ಕರ್‌ ಸಮೇತ ಮಾರಾಟ ಮಾಡಲು ಒಪ್ಪಿಗೆ ನೀಡುತ್ತೇವೆ. ಕೆಲವು ಬಾರಿ ಸ್ಟಿಕ್ಕರ್‌ ಕಳಚಿ ಬೀಳುತ್ತದೆ. ಐಎಸ್‌ಐ ಗುರುತು ಇಲ್ಲವೆಂದು ಅಂಥ ಹೆಲ್ಮೆಟ್‌ ಕಳಪೆಯದ್ದು ಎಂದು ಹೇಳಲು ಬರುವುದಿಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ದಂಡ ವಿಧಿಸದಿರುವುದೇ ಲೇಸು’

‘ಕಳಪೆ ಹೆಲ್ಮೆಟ್‌ ಎಂಬ ಕಾರಣಕ್ಕೆ ದಂಡ ವಿಧಿಸಿದರೆ, ಅದನ್ನು ಸಾಬೀತು ಪಡಿಸಬೇಕಾಗುತ್ತದೆ. ಅದಕ್ಕಾಗಿ ಪ್ರಯೋಗಾಲಯಕ್ಕೆ ಹೆಲ್ಮೆಟ್‌ ಕಳುಹಿಸಬೇಕು. ಅಲ್ಲಿಂದ ವರದಿ ಬರುವವರೆಗೂ ಕಾಯಬೇಕು. ಅದರ ಬದಲು, ದಂಡ ವಿಧಿಸದೆ ಸುಮ್ಮನಿರುವುದೇ ಲೇಸು’ ಎಂದು ಸಂಚಾರ ಪೊಲೀಸರು ಹೇಳಿದರು.

‘ಪ್ರಯೋಗಾಲಯಕ್ಕೆ ಕಳುಹಿಸಿದ ಹೆಲ್ಮೆಟ್‌ ವಾಪಸ್‌ ಬರುತ್ತದೆಂಬ ಖಾತ್ರಿ ಇಲ್ಲ. ಪರೀಕ್ಷೆಗೆ ಕಳುಹಿಸಿದ ಬಳಿಕ ₹100 ದಂಡ ಕಟ್ಟುತ್ತೇನೆಂದು ಸವಾರ ಹೇಳಿದರೆ, ವಾಪಸ್‌ ಕೊಡಲು ಹೆಲ್ಮೆಟ್‌ ಇರುವುದಿಲ್ಲ. ಆಗ, ಹೊಸ ಹೆಲ್ಮೆಟ್‌ ಖರೀದಿಗೆ ನಾವೇ ಹಣ ನೀಡಬೇಕಾದ ಪರಿಸ್ಥಿತಿ ಬರಬಹುದು’ ಎಂದರು.

*

ಐಎಸ್‌ಐ ಗುರುತು ಇರುವ ಅಸಲಿ ಹೆಲ್ಮೆಟ್‌ ಜತೆಗೆ ನಕಲಿಗಳೂ ಇವೆ. ಅವುಗಳನ್ನು ಗುರುತಿಸುವುದು ಕಷ್ಟ.

-ಆರ್‌.ಹಿತೇಂದ್ರ, ಹೆಚ್ಚುವರಿ ಪೊಲೀಸ್‌ ಕಮಿಷನರ್‌(ಸಂಚಾರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry