ಆಸ್ತಿ ತೆರಿಗೆ ಮೇಲೆ ಕಸದ ಸೆಸ್‌

7
ಪಾಲಿಕೆಯ ಕೌನ್ಸಿಲ್‌ ಸಭೆಯ ಅನುಮೋದನೆಗೆ ಸಲ್ಲಿಕೆ

ಆಸ್ತಿ ತೆರಿಗೆ ಮೇಲೆ ಕಸದ ಸೆಸ್‌

Published:
Updated:
ಆಸ್ತಿ ತೆರಿಗೆ ಮೇಲೆ ಕಸದ ಸೆಸ್‌

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಕಟ್ಟಡ ಹಾಗೂ ಖಾಲಿ ನಿವೇಶನಗಳಿಗೆ ಆಸ್ತಿ ತೆರಿಗೆಯ ಮೇಲೆ ಶೇ 15ರಷ್ಟು ಕಸ ನಿರ್ವಹಣಾ ಉಪಕರವನ್ನು(ಸೆಸ್‌) ವಿಧಿಸಲು ಪಾಲಿಕೆ ಮುಂದಾಗಿದೆ. ಇದರ ಪ್ರಸ್ತಾವವನ್ನು ಇದೇ 29ರಂದು ನಡೆಯಲಿರುವ ಕೌನ್ಸಿಲ್‌ ಸಭೆಯ ಅನುಮೋದನೆಗಾಗಿ ಸಲ್ಲಿಸಲಾಗಿದೆ.

ಈವರೆಗೆ ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಕಸದ ಮೇಲೆ ಉಪಕರ ಸಂಗ್ರಹಿಸಲಾಗುತ್ತಿತ್ತು. ಒಂದು ವೇಳೆ ಕೌನ್ಸಿಲ್‌ ಒಪ್ಪಿಗೆ ನೀಡಿದರೆ ನಾಗರಿಕರು 2017–18ನೇ ಸಾಲಿನಿಂದ ಆಸ್ತಿ ತೆರಿಗೆ ಮೇಲೆ ಕಸದ ಉಪಕರ ಪಾವತಿಸಬೇಕಾಗುತ್ತದೆ.

2011–12ನೇ ಸಾಲಿನಿಂದ 2014–15ನೇ ಸಾಲಿನವರೆಗೂ ಕಸದ ನಿರ್ವಹಣೆಗೆ ಮಾಡಿರುವ ವೆಚ್ಚಕ್ಕೆ ಹೋಲಿಸಿದರೆ ಸಂಗ್ರಹವಾಗಿರುವ ಘನತ್ಯಾಜ್ಯ ಉಪಕರ ಮೊತ್ತವು ಶೇ 9ರಿಂದ ಶೇ 15ರಷ್ಟಿದೆ. ಪಾಲಿಕೆಯ ಹಿತದೃಷ್ಟಿಯಿಂದ ಆಸ್ತಿ ತೆರಿಗೆ ಮೇಲೆ ಉಪಕರ ವಿಧಿಸಬೇಕಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ರಾಜಸ್ಥಾನ ಸರ್ಕಾರವು ಘನತ್ಯಾಜ್ಯ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ದಂಡ ವಿಧಿಸುತ್ತಿದ್ದು, ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ಪಾಲಿಕೆ ಉದ್ದೇಶಿಸಿದೆ.

ಶೇ 50ರಷ್ಟು ವಿನಾಯಿತಿ: ದೊಡ್ಡ ಪ್ರಮಾಣದ ಕಸ ಉತ್ಪಾದಕರಿಗೆ ಘನತ್ಯಾಜ್ಯದ ಉಪಕರಗಳಲ್ಲಿ ಶೇ 50ರಷ್ಟು ವಿನಾಯಿತಿ ನೀಡಲು ಸಹ ಯೋಜಿಸಲಾಗಿದೆ. 10 ಕೆ.ಜಿ.ಗಿಂತ ಹೆಚ್ಚು ಕಸ ಉತ್ಪಾದಿಸುವ ವಾಣಿಜ್ಯ ಕಟ್ಟಡ ಹಾಗೂ ಅಪಾರ್ಟ್‍ಮೆಂಟ್ ಸಮುಚ್ಚಯಗಳನ್ನು ದೊಡ್ಡ ಪ್ರಮಾಣದ ಕಸ ಉತ್ಪಾದಕರು ಎಂದು ವರ್ಗೀಕರಿಸಲಾಗಿದೆ. ಹಸಿ ಕಸ ಸಂಸ್ಕರಿಸಲು ಉತ್ತೇಜನ ನೀಡುವ ಉದ್ದೇಶದಿಂದ ಈ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ. ಉಳಿದಂತೆ, ಮನೆಗಳಲ್ಲಿ ಹಸಿ ಕಸದಿಂದ ತಯಾರಿಸಿದ ಗೊಬ್ಬರವನ್ನು ಪಾಲಿಕೆ ವತಿಯಿಂದಲೇ ಖರೀದಿಸಲು ನಿರ್ಧರಿಸಲಾಗಿದೆ.

ವಿನಾಯಿತಿಗೆ ಒಳಪಡುವ ಉತ್ಪಾದಕರು: 50 ಯೂನಿಟ್ ಅಥವಾ ಫ್ಲ್ಯಾಟ್‍ಗಿಂತ ಹೆಚ್ಚು ಇರುವ ಅಪಾರ್ಟ್‍ಮೆಂಟ್‍ ಸಮುಚ್ಚಯಗಳು, ವಾಣಿಜ್ಯ ಮಳಿಗೆಗಳು (ಪ್ರತಿ ವರ್ಷ ₹12 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ ಮಳಿಗೆಗಳು), ಸಂಸ್ಥೆಗಳು, ಕಾರ್ಖಾನೆ, ಹೋಟೆಲ್‌, ರೆಸ್ಟೊರೆಂಟ್‌, ಕಲ್ಯಾಣ ಮಂಟಪಗಳು, ಶೈಕ್ಷಣಿಕ ಸಂಸ್ಥೆಗಳು, ಮಾಲ್‍ಗಳು, ಸೂಪರ್ ಮಾರ್ಕೆಟ್‌, ಪೇಯಿಂಗ್‌ ಗೆಸ್ಟ್‌ ಹೌಸ್‌, ಕ್ಲಬ್‍ಗಳು, ವಿದ್ಯಾರ್ಥಿ ನಿಲಯಗಳು, ಕೇಟರರ್ಸ್‌, ಸಭಾಂಗಣ, ಪೆಟ್ರೋಲ್ ಬಂಕ್‌ಗಳು, ಸರ್ವಿಸ್‍ ಗ್ಯಾರೇಜ್, ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮಾರಾಟ ಮಳಿಗೆ, ಕ್ಷೌರ ಅಂಗಡಿ ಹಾಗೂ ಸಲೂನ್‌ಗಳು ಮತ್ತು ಅಂಗಡಿಗಳು ಉಪಕರ ವಿನಾಯಿತಿ ವ್ಯಾಪ್ತಿಗೆ ಒಳಪಡುತ್ತವೆ.

ನಿವಾಸಿಗಳ ವಿರೋಧ: ಉಪಕರ ವಿಧಿಸುವುದರಿಂದ ತೆರಿಗೆದಾರರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಅಲ್ಲದೆ, ಈ ತೆರಿಗೆಯ ಹಣ ದುರುಪಯೋಗವಾಗುವ ಸಾಧ್ಯತೆಯೂ ಇದೆ. ಆಯಾ ವಾರ್ಡ್‌ನಲ್ಲಿ ಉತ್ಪತ್ತಿಯಾಗುವ ಹಸಿಕಸವನ್ನು ಅಲ್ಲೇ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಬೇಕು. ಅದನ್ನು ಉದ್ಯಾನ ಹಾಗೂ ತಾರಸಿ ತೋಟಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸಂಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವಿಜ್ಞಾನ್‌ ಗೌಡ ಸಲಹೆ ನೀಡಿದರು.

ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಊಟ

ಪೌರಕಾರ್ಮಿಕರಿಗೆ ಅಕ್ಷಯ ಪಾತ್ರೆ ಪ್ರತಿಷ್ಠಾನದ ಮೂಲಕ ನೀಡುತ್ತಿರುವ ಬಿಸಿಯೂಟವನ್ನು ಸ್ಥಗಿತಗೊಳಿಸಿ, ಇಂದಿರಾ ಕ್ಯಾಂಟೀನ್‌ ಮೂಲಕವೇ ವಿತರಿಸುವ ಪ್ರಸ್ತಾವವನ್ನು ಕೌನ್ಸಿಲ್‌ ಸಭೆಯ ಅನುಮೋದನೆಗಾಗಿ ಸಲ್ಲಿಸಲಾಗಿದೆ.

ಬೆಲ್ಲಹಳ್ಳಿ ಕ್ವಾರಿಯಲ್ಲಿ ರೇಸ್‌ ಟ‍್ರ್ಯಾಕ್‌

ಬೆಲ್ಲಹಳ್ಳಿ ಕ್ವಾರಿಯಲ್ಲಿ ಕಸವನ್ನು ಭೂಭರ್ತಿ ಮಾಡುತ್ತಿದ್ದು, ಈ ಸ್ಥಳದಲ್ಲಿ ರೇಸ್‌ ಟ‍್ರ್ಯಾಕ್‌ ನಿರ್ಮಿಸಲು ಪಾಲಿಕೆ ನಿರ್ಧರಿಸಿದೆ. ಯುವಕರು ಮುಖ್ಯರಸ್ತೆಗಳಲ್ಲಿ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದು, ಇದು ಕಾನೂನುಬಾಹಿರವಾಗಿದೆ. ಅವರಿಗೆ ಅನುಕೂಲ ಕಲ್ಪಿಸಲು ರೇಸ್‌ ಟ‍್ರ್ಯಾಕ್‌ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನವನ್ನು 2018-19ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿರಿಸಬೇಕು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.

*

ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಿಸುವ ದೃಷ್ಟಿಯಿಂದ ಆಸ್ತಿ ತೆರಿಗೆ ಮೇಲೆ ಕಸದ ಉಪಕರ ಹೆಚ್ಚಳ ಅನಿವಾರ್ಯ.

–ಎಂ.ಮಹಾದೇವ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry