ಬಾಲಕಿ ಅತ್ಯಾಚಾರ: ಬಂಧನ

7

ಬಾಲಕಿ ಅತ್ಯಾಚಾರ: ಬಂಧನ

Published:
Updated:
ಬಾಲಕಿ ಅತ್ಯಾಚಾರ: ಬಂಧನ

ಬೆಂಗಳೂರು: ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಶ್ರೀಲಂಕಾದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಸತೀಶ್‌ ಪಾಟೀಲ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಸಂತ್ರಸ್ತೆಯ ತಾಯಿ, ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಹಾಗೂ ಅತ್ಯಾಚಾರ (ಐಪಿಸಿ 376) ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಪ್ರಕರಣದ ವಿವರ: 2015ರಲ್ಲಿ ಸತೀಶ್‌ಗೆ ಫೇಸ್‌ಬುಕ್‌ನಲ್ಲಿ ಬಾಲಕಿಯ ಪರಿಚಯವಾಗಿತ್ತು. ಆತ, ‘ಬಾಲಿವುಡ್‌ ಫಿಕ್ಸರ್‌’ ಎಂದು ಸ್ಟೇಟಸ್‌ ಹಾಕಿಕೊಂಡಿದ್ದನ್ನು ನೋಡಿದ್ದ ಆಕೆ, ಸಿನಿಮಾಗಳಲ್ಲಿ ನಟಿಸಬೇಕೆಂದು ಕೇಳಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದರು.

‘ಬಾಲಿವುಡ್‌ನ ನಿರ್ದೇಶಕರು ನನಗೆ ಗೊತ್ತಿದ್ದಾರೆ. ಭಾರತಕ್ಕೆ ಬಂದರೆ ಅವರನ್ನು ಪರಿಚಯ ಮಾಡಿಕೊಡುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ಸಂತ್ರಸ್ತೆ, ತಾಯಿ ಜತೆಗೆ 2017ರ ನವೆಂಬರ್‌ನಲ್ಲಿ ಮುಂಬೈಗೆ ಬಂದಿದ್ದಳು.

ತಾಯಿ–ಮಗಳಿಗೆ ಹೋಟೆಲ್‌ನಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದ ಸತೀಶ್‌, ಅವರ ಪಕ್ಕದ ಕೊಠಡಿಯಲ್ಲೇ ತಾನು ತಂಗಿದ್ದ. ಸಿನಿಮಾ ಬಗ್ಗೆ ಮಾತನಾಡುವ ನೆಪದಲ್ಲಿ ಸಂತ್ರಸ್ತೆಯನ್ನು ತನ್ನ ಕೊಠಡಿಗೆ ಕರೆಸಿಕೊಂಡಿದ್ದ ಆತ, ಮತ್ತು ಬರುವ ಔಷಧ ಬೆರೆಸಿದ ತಂಪು ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದ.

ಪ್ರಜ್ಞೆ ಕಳೆದುಕೊಂಡಿದ್ದ ಬಾಲಕಿ ಎರಡು ಗಂಟೆಯ ಬಳಿಕ ಎಚ್ಚರವಾದಾಗ ಅತ್ಯಾಚಾರವಾಗಿರುವುದು ಗೊತ್ತಾಗಿತ್ತು. ಆದರೆ, ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿಂದ ಆ ವಿಚಾರವನ್ನು ತಾಯಿ ಬಳಿ ಹೇಳಿಕೊಂಡಿರಲಿಲ್ಲ ಎನ್ನಲಾಗಿದೆ.

ಮರುದಿನ ಆರೋಪಿ, ಅವರಿಬ್ಬರನ್ನು ಕರೆದುಕೊಂಡು ಬಸ್ಸಿನಲ್ಲಿ ಬೆಂಗಳೂರಿನತ್ತ ಹೊರಟಿದ್ದ. ಮಾರ್ಗ ಮಧ್ಯೆ, ‘ಸಿನಿಮಾ ಆಡಿಷನ್‌ಗೆ ಒಳ್ಳೆಯ ಬಟ್ಟೆ ಬೇಕು. ₹2 ಲಕ್ಷ ಕೊಟ್ಟರೆ ಖರೀದಿಸುತ್ತೇನೆ’ ಎಂದು ಹೇಳಿ ಹಣ ಪಡೆದಿದ್ದ. ಮೆಜೆಸ್ಟಿಕ್‌  ಬರುತ್ತಿದ್ದಂತೆ, ನಿಲ್ದಾಣದಲ್ಲೇ ಅವರಿಬ್ಬರನ್ನು ಬಿಟ್ಟು ಪರಾರಿಯಾಗಿದ್ದ.

ಆನಂತರ ತಾಯಿ ದೂರು ನೀಡಿದ್ದರು. ಇದೇ ವೇಳೆ ಬಾಲಕಿ, ತನ್ನ ಮೇಲೆ ಅತ್ಯಾಚಾರ ನಡೆದಿದ್ದ ಸಂಗತಿಯನ್ನೂ ತಿಳಿಸಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry