ವಿಜೃಂಭಣೆಯ ಪಟ್ಟಲದಮ್ಮನ ಸಿಡಿಹಬ್ಬ

7

ವಿಜೃಂಭಣೆಯ ಪಟ್ಟಲದಮ್ಮನ ಸಿಡಿಹಬ್ಬ

Published:
Updated:

ಮಳವಳ್ಳಿ: ಪಟ್ಟಣದಲ್ಲಿರುವ ಪಟ್ಟಲದಮ್ಮನ ಸಿಡಿಹಬ್ಬ ಶುಕ್ರವಾರ ಹಾಗೂ ಶನಿವಾರ ಬೆಳಿಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಿಡಿರಣ್ಣ ತಿರುಗಿಸುವ ಮತ್ತು ಕೊಂಡೋತ್ಸವ ನಡೆಯುವ ಪಟ್ಟಣದ ದೊಡ್ಡಕೆರೆ ಸಮೀಪದ ಪಟ್ಟಲದಮ್ಮನ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ವಿಶೇಷ ಕೈಂಕರ್ಯಗಳು ನಡೆದವು. ಸಹಸ್ರಾರು ಭಕ್ತರು ಸರದಿಯಲ್ಲಿ ನಿಂತು ಪಟ್ಟಲದಮ್ಮನ ದರ್ಶನ ಪಡೆದರು. ಸಂಜೆ 5ಗಂಟೆ ವೇಳೆಗೆ ತಮ್ಮಡಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಕೊಂಡೋತ್ಸವಕ್ಕೆ ರಾಸುಗಳ ಮೂಲಕ ಸೌದೆ ಎಳೆದು ತಂದರು.

ಪಟ್ಟಣದ ಎಲ್ಲಾ ಕೋಮಿನ ಮಹಿಳೆಯರು ಪ್ರತ್ಯೇಕವಾಗಿ ಮಂಗಳ ವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಪಟ್ಟಲದಮ್ಮನ ದೇವಸ್ಥಾನಕ್ಕೆ ಘಟ್ಟಗಳನ್ನು ಹೊತ್ತು ತರುವುದು ಹಬ್ಬದ ವಿಶೇಷವಾಗಿತ್ತು.

ರಾತ್ರಿ 9 ಗಂಟೆಗೆ ಪೇಟೆ ಒಕ್ಕಲಿಗ ಸಮುದಾಯದ ಸಾವಿರಕ್ಕೂ ಹೆಚ್ಚು ಮಹಿಳೆಯರು ಘಟಗಳನ್ನು ಹೊತ್ತು ಅನಂತರಾಂ ವೃತ್ತದ ಬಳಿಗೆ ಬರುತ್ತಿದ್ದಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಐಪಿಎಸ್ ಅಧಿಕಾರಿ ನಂಜುಂಡಸ್ವಾಮಿ, ಪುರಸಭೆ ಅಧ್ಯಕ್ಷ ರಿಯಾಜಿನ ಸೇರಿದಂತೆ ಹಲವರು ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ನಂತರ ಕ್ರಮವಾಗಿ ಸಿದ್ಧಾರ್ಥನಗರ ನಗರ, ಕೀರ್ತಿನಗರ, ಅಶೋಕನಗರ, ಗಂಗಾಮತ ಬೀದಿ, ಬಸವಲಿಂಗಪ್ಪ ನಗರದ ಮಹಿಳೆಯರು ಘಟಗಳನ್ನು ಹೊತ್ತು ಪ್ರತ್ಯೇಕ ಮೆರವಣಿಗೆಯಲ್ಲಿ ಸಾಗಿದರು.

ರಾತ್ರಿ 1 ಗಂಟೆ ವೇಳೆಗೆ ಕೋಟೆ ಬೀದಿ ಚಿನ್ನೇಗೌಡರ ಮನೆ ಮುಂದೆ ಅಲಂಕೃತಗೊಳಿಸಿದ್ದ ಸಿಡಿಬಂಡಿಗೆ ಸಿಡಿರಣ್ಣನ ಕಂಚಿನ ಪ್ರತಿಮೆಯನ್ನು ಕಟ್ಟಿ ಸಿಡಿಬಂಡಿಗೆ ಚಾಲನೆ ನೀಡುತ್ತಿದ್ದಂತೆ ಪಟ್ಟಣದ ಅನಂತ ರಾಂ ವೃತ್ತದ ಮೂಲಕ ಪೇಟೆ ಬೀದಿಯನ್ನು ಪ್ರವೇಶಿಸಿ ಪ್ರಮುಖ ಬಡಾವಣೆಯಲ್ಲಿ ಸಂಚರಿಸಿ ಶನಿವಾರ ಬೆಳಿಗ್ಗೆ 10.30 ರ ವೇಳೆಗೆ ದೇವಸ್ಥಾನವನ್ನು ತಲುಪಿತು.

ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಸಿಡಿರಣ್ಣನಿಗೆ ಹಣ್ಣು – ದವನ ಎಸೆದು ಭಕ್ತಿ ಸಮರ್ಪಿಸಿದರು. ನಂತರ ದೇವಸ್ಥಾನದ ಮುಂಭಾಗ ಸಿದ್ಧಗೊಂಡಿದ್ದ ಕೊಂಡೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅರ್ಚಕರು ಸೇರಿದಂತೆ ದೇವರಿಗೆ ಹರಕೆ ಹೊತ್ತ ಹಲವು ಭಕ್ತರು ಕೊಂಡ ಹಾಯ್ದು ಸೇವೆ ಸಲ್ಲಿಸಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಸೋಮಶೇಖರ್ ಹಾಗೂ ವಿವಿಧ ಗಣ್ಯರು ಪಟ್ಟಲದಮ್ಮನಿಗೆ ವಿಶೇಷ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಸಿ.ಲಾವಣ್ಯ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry