ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಿ

Last Updated 28 ಜನವರಿ 2018, 6:52 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆದಿದ್ದು, ರೈತರಿಗೆ ನಷ್ಟ ಆಗುವುದನ್ನು ತಪ್ಪಿಸಲು ಕೂಡಲೇ ಬೆಂಬಲ ಬೆಲೆ ನೀಡಿ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಬಿ.ವಿ.ನಾಯಕ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಸಹ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕವಿತಾಳದಲ್ಲಿ ತೊಗರಿ ಖರೀದಿ ಕೇಂದ್ರ ಕೆಲಸ ಮಾಡುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ. ನಿಯಮಾನುಸಾರ ರೈತರಿಂದ ತೊಗರಿ ಖರೀದಿಸಬೇಕು. ರೈತರು ನೋಂದಣಿ ಮಾಡುವ ಅವಧಿ ವಿಸ್ತರಿಸಬೇಕು. ಕೃಷಿ ಹೊಂಡ, ಚೆಕ್‌ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿಶತ ಸಾಧನೆ ಮಾಡಬೇಕು ಎಂದರು.

‘ಪ್ರಸಕ್ತ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್‌ಆರ್‌ಇಜಿಎ)ಯಡಿ ಮಾನವ ದಿನಗಳಿಗೆ ಸಂಬಂಧಿಸಿದಂತೆ ಶೇ 51.74 ರಷ್ಟು ಸಾಧನೆಯಾಗಿದೆ. ಮಾರ್ಚ್‌ ಅಂತ್ಯದೊಳಗೆ ಗುರಿ ಸಾಧನೆ ಮಾಡಲಾಗುವುದು. ಕೂಲಿಕಾರರ ಶೇ 99 ರಷ್ಟು ಕಾರ್ಡ್‌ಗಳು ಆಧಾರ್‌ ಸಂಖ್ಯೆಗೆ ಜೋಡಣೆ ಆಗಿವೆ’ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಭೆಗೆ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ 38 ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ. 76 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

2016–17 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷ ಫಸಲ್‌ ಭಿಮಾ ಯೋಜನೆ ಅಡಿ ಜಿಲ್ಲೆಯಲ್ಲಿ 78,187 ಪ್ರಸ್ತಾವನೆಗಳು ನೋಂದಣಿಯಾಗಿದ್ದು, ₹465.83 ಲಕ್ಷ ವಿಮಾಮೊತ್ತ ಪಾವತಿಸಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಿಲ್ಲಾಧಿಕಾರಿಗಳು ಸೂಚಿಸಿರುವಂತೆ ಜಿಲ್ಲಾ ನೀರಾವರಿ ಯೋಜನೆಯ ಮಾಹಿತಿಯನ್ನು ಎಲ್ಲ ಜನಪ್ರತಿನಿಧಿಗಳಿಗೆ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.

ರಾಯಚೂರು ಗ್ರಾಮೀಣ ವಿಭಾಗದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 346 ಕೊಳವೆಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಬಾಕಿ ಇದೆ. ಕಾಮಗಾರಿಗಾಗಿ ಈಗಾಗಲೇ ಗುತ್ತಿಗೆ ನೀಡಲಾಗಿದ್ದು, 100 ಈಗಾಗಲೇ ಪೂರ್ಣವಾಗಿವೆ. ಇನ್ನುಳಿದ ಕೆಲಸಗಳನ್ನು ಮಾರ್ಚ್‌ಗೆ ಪೂರ್ಣಗೊಳಿಸಲಾಗುವುದು ಎಂದು ಜೆಸ್ಕಾಂ ಎಂಜಿನಿಯರ್‌ ಹೇಳಿದರು.

ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅನುದಾನದ ಕೊರತೆಯಿಲ್ಲ. 94,807 ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಅದರಲ್ಲಿ 26,616 ಪೂರ್ಣಗೊಂಡಿವೆ. ಪ್ರೋತ್ಸಾಹ ಧನ ಬಿಡುಗಡೆಯಲ್ಲಿ ಸಮಸ್ಯೆಗಳನ್ನು ಪರಿಹಾರ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತಿಯೊಂದು ಕಡತಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಮ್‌ ಜಿ.ಶಂಕರ ತಿಳಿಸಿದರು.

ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯಡಿ 2,353 ಕಾಮಗಾರಿಗಳನ್ನು ಮಾಡಬೇಕಿದ್ದು, ಅದರಲ್ಲಿ 1,883 ಪೂರ್ಣಗೊಂಡಿವೆ. 284 ಕಾಮಗಾರಿಗಳು ಪ್ರಗತಿಯಲ್ಲಿವೆ. 186 ಕಾಮಗಾರಿಗಳು ಟೆಂಡರ್‌ ಹಂತದಲ್ಲಿವೆ. ದೇವದುರ್ಗ ತಾಲ್ಲೂಕಿನಲ್ಲಿ ಎನ್‌ಆರ್‌ಬಿಸಿಯಿಂದ ಕೆರೆಗಳನ್ನು ತುಂಬಿಕೊಂಡು ಜನರಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು, ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಫಾತಿಮಾ ಹುಸೇನ್‌, ಹನುಮಂತಪ್ಪ, ಹನುಮಂತ್ರಾಯ, ಆನಂದ ಜಲದುರ್ಗ ಇದ್ದರು.

ಸರ್ವರ್‌ ಸಮಸ್ಯೆ: ‘ಶೌಚಾಲಯ ನಿರ್ಮಿಸಿಕೊಂಡವರಿಗೆ ಹಣ ಪಾವತಿಸಲು ಪಿಡಿಒ ಹಾಗೂ ಅಧ್ಯಕ್ಷರು ಕಂಪ್ಯೂಟರ್‌ ಸಾಫ್ಟ್‌ವೇರ್‌ನಲ್ಲಿ ಒಪ್ಪಿಗೆ ಕೊಟ್ಟ ಬಳಿಕ ಅದು ಸೆಂಟ್ರಲ್‌ ಬ್ಯಾಂಕ್‌ಗೆ ಹೋಗುತ್ತದೆ. ಸೆಂಟ್ರಲ್‌ ಬ್ಯಾಂಕ್‌ ಸರ್ವರ್‌ನಲ್ಲಿ ಎಲ್ಲ ಜಿಲ್ಲೆಗಳ ಬಿಲ್‌ಗಳು ಬಂದಿರುತ್ತವೆ. ಅದರಲ್ಲಿ ಪ್ರತಿದಿನ ಸುಮಾರು 5 ಸಾವಿರ ಬಿಲ್‌ಗಳು ಮಾತ್ರ ಪಾವತಿ ಆಗುತ್ತಿವೆ. ಈ ಕಾರಣದಿಂದ ಜಿಲ್ಲೆಯಲ್ಲಿ ಶೌಚಾಲಯ ಕಟ್ಟಿಸಿಕೊಂಡವರಿಗೆ ಹಣ ಬರುವುದು ಸ್ವಲ್ಪ ತಡವಾಗುತ್ತಿದೆ. ಸರ್ವರ್‌ ಸಾಮರ್ಥ್ಯ ಹೆಚ್ಚಿಸುವಂತೆ ಕೋರಿಕೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ.ಶಂಕರ ಹೇಳಿದರು.

ಫಲಕ ಹಾಕಿಲ್ಲ

ಗ್ರಾಮ ಪಂಚಾಯಿತಿಗಳಲ್ಲಿ ಗಾಂಧಿಸಾಕ್ಷಿ ಕಾಯಕ ಯೋಜನೆಯಡಿ ಕೆಲಸ ಮಾಡುವುದಕ್ಕೆ ಸರ್ಕಾರವು ನಿರ್ದೇಶನ ನೀಡಿದೆ. ಯಾವ ಪಂಚಾಯಿತಿಯಲ್ಲಿ ಈ ಬಗ್ಗೆ ಫಲಕ ಹಾಕಿಲ್ಲ ಎಂದು ಸಮಿತಿಯ ನಾಮನಿರ್ದೇಶಿತ ಸದಸ್ಯ ಹಣಮಂತ್ರಾಯ ಸಭೆಯಲ್ಲಿ ತಿಳಿಸಿದರು.

* * 

ಕಳೆದ ವರ್ಷಕ್ಕಿಂತ ಈ ವರ್ಷ ತೊಗರಿ ಬೆಂಬಲ ಬೆಲೆ ಮಾರಾಟಕ್ಕೆ ನೋಂದಾಯಿಸಿದ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೋಂದಣಿ ಅವಧಿ ವಿಸ್ತರಿಸುವಂತೆ ಪತ್ರ ಬರೆಯಲಾಗಿದೆ.
ಡಾ.ಬಗಾದಿ ಗೌತಮ್‌
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT