ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಸಂಜೆ ಮಬ್ಬಿನಲ್ಲಿ ಸೀತನಿಯ ಸವಿ..!

Last Updated 28 ಜನವರಿ 2018, 7:15 IST
ಅಕ್ಷರ ಗಾತ್ರ

ಇದೀಗ ಸೀತನಿ ಸವಿಯುವ ಸಮಯ. ಪಡುವಣದ ಬಾನಂಚಿನಲ್ಲಿ ಭಾಸ್ಕರ ಹೊಂಬಣ್ಣದೊಂದಿಗೆ ಇಳಿಜಾ ರಾಗುವ ವೇಳೆಗೆ ಜೋಳದ ಹೊಲಗಳಲ್ಲಿ ಎತ್ತ ನೋಡಿದರೂ ಸ್ನೇಹಿತರು, ಒಡ ನಾಡಿಗಳು, ಕುಟುಂಬ ವರ್ಗದವರ ದಂಡು.

ಜನವರಿ ಆರಂಭಗೊಂಡ ಬೆನ್ನಿಗೆ ಜಿಲ್ಲೆಯ ಗ್ರಾಮೀಣ ಪರಿಸರ ಸೇರಿದಂತೆ ನಗರ, ಪಟ್ಟಣದ ಹೊರ ವಲಯದಲ್ಲಿನ ಹಿಂಗಾರಿ ಜೋಳದ ಹೊಲಗಳಲ್ಲಿ ‘ಸೀತನಿ’ ಸವಿಯುವವರ ತಂಡಗಳನ್ನು ನಿತ್ಯವೂ ಕಾಣಬಹುದು.

ಮಾಘ ಮಾಸದ ಆರಂಭದಲ್ಲಿ ಜೋಳದ ತೆನೆ ಎಳೆಯಿದ್ದರೆ, ಮಕರ ಸಂಕ್ರಮಣದ ವೇಳೆಗೆ ಸ್ವಾದಿಷ್ಟ ಕಾಳು. ಗಣರಾಜ್ಯೋತ್ಸವ ಮುಗಿದ ವಾರದ ಬಳಿಕ ಸಂಪೂರ್ಣ ಬಲಿತ ಕಾಳು. ಈ ನಂತರದ ಸೀತನಿ ಸವಿ ಎನಿಸುವುದಿಲ್ಲ. ಒಟ್ಟಾರೆ ಜನವರಿ ವಿಜಯಪುರಿಗರ ಪಾಲಿಗೆ ‘ಸೀತನಿ’ ಸವಿಯುವ ಸಮಯ.

ಯಾರೊಬ್ಬರೂ ಈ ಅವಕಾಶ ತಪ್ಪಿಸಿಕೊಳ್ಳಲು ಇಷ್ಟಪಡಲ್ಲ. ಒಮ್ಮೆ ಕರೆದರೇ ಸಾಕು, ನಿಗದಿತ ಸಮಯಕ್ಕೆ ಹೊಲದಲ್ಲಿ ಹಾಜರು. ತಮ್ಮ ಜತೆಗೆ ಆತ್ಮೀಯರನ್ನು ಕರೆ ತರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಹೊಲದ ಬದಿಯಲ್ಲಿ ಗುಂಡಿ ತೋಡಿ, ಅದರೊಳಗೆ ಕುಳ್ಳು, ಕಟ್ಟಿಗೆ ಹಾಕಿ ಗಟ್ಟಿ ಕೆಂಡ ಮಾಡಿ ಜೋಳದ ತೆನೆ ಸುಡಲು ಸಜ್ಜಾಗುವುದು ವಿಶೇಷ.

ಈ ಸೀತನಿ ತಿನ್ನಬೇಕಾದರೆ ಅದಕ್ಕೆ ಪ್ರಶಸ್ತ ಕಾಲವಿದೆ. ಸಂಕ್ರಮಣದ ನಂತರ ಜೋಳದ ಬೆಳೆಯ ತೆನೆಗಳು ಸೀತನಿ ರೂಪ ಪಡೆಯುತ್ತವೆ. ಅದಕ್ಕೆ ಬಹುತೇಕ ಜನರು ಸಂಜೆಯ ಹೊತ್ತಿಗೆ ಹೊಲಕ್ಕೆ ಲಗ್ಗೆ ಇಟ್ಟು ಬಲಿತ ಕಾಳುಗಳಿದ್ದರೆ ಅವುಗಳನ್ನು ಬಿಟ್ಟು, ಸೀತನಿ ತೆನೆಗಳನ್ನು ಆಯ್ದು ತಂದು ಸುಡಲಾಗುತ್ತದೆ.

ಸುಟ್ಟು ತಿಂದರೇ ಅದರ ಮಜವೇ ಬೇರೆ. ಹೆಚ್ಚಾಗಿ ಈ ಭಾಗದಲ್ಲಿ ಜೋಳದ ತೆನೆಗಳ ಸೀತನಿಯನ್ನೇ ಸುಡಲಾಗುತ್ತದೆ. ‘ಸೀತನಿ’ ಹೊಲದಲ್ಲೇ ತಯಾರಿಸಿ, ಬಿಸಿ ಬಿಸಿಯಾಗಿದ್ದಾಗಲೇ ಹಸಿರು ಕಾಳು ಸವಿಯಬೇಕಾದ ಖಾದ್ಯ. ಇದರ ಜತೆಗೆ ಬೆಲ್ಲ, ಉಪ್ಪು, ಶೇಂಗಾ ಹಿಂಡಿ, ಬದನೆಕಾಯಿಯ ಅಡಗಾಯಿಯನ್ನು ತಿನ್ನುವವರು ಇದ್ದಾರೆ. ಒಂದೊಂದು ಭಾಗದಲ್ಲಿ ಒಂದೊಂದು ಪದಾರ್ಥವನ್ನು ಸೀತನಿ ಜತೆ ತಿನ್ನುತ್ತಾರೆ. ಮುಸ್ಸಂಜೆಯ ಕುಳಿರ್ಗಾಳಿಯ ನಡುವೆ ಬೆಚ್ಚನೆಯ ಕೆಂಡದ ಮುಂಭಾಗ ಕುಳಿತು, ಸುಡುವ ಎಳೆಯ ಜೋಳದ ಕಾಳುಗಳನ್ನು ಸವಿಯುವ ಮಜ ವರ್ಣಿಸಲಾಸಾಧ್ಯ.

ಆಶ್ರಮದಲ್ಲಿ ‘ಸೀತನಿ’ ಜಾತ್ರೆ...

ವಿಜಯಪುರ ಹೊರ ವಲಯದ ಸಿಂದಗಿ ಬೈಪಾಸ್‌ ಬಳಿಯಿರುವ ಮುನೀಶ್ವರ ಆಶ್ರಮದಲ್ಲಿ ಭೋಗಿ ದಿನದಂದು (ಮಕರ ಸಂಕ್ರಮಣದ ಮುನ್ನಾ ದಿನ) ‘ಸೀತನಿ’ ಜಾತ್ರೆ ನಡೆಯುತ್ತದೆ. ಇದಕ್ಕೆ ಮೂರು ದಶಕದ ಐತಿಹ್ಯವಿದೆ.

‘ಆಶ್ರಮದ ಗುರುಪಾದೇಶ್ವರ ಗುರೂಜಿ ಭಕ್ತರಿಗೆ ‘ಸೀತನಿ’ ಸವಿಯಲಿಕ್ಕಾಗಿ ಯೇ ಎಂಟು ಎಕರೆ ಭೂಮಿಯಲ್ಲಿ ಹಿಂಗಾರಿ ಬಿಳಿಜೋಳ ಬೆಳೆಯುತ್ತಿದ್ದರು. ಜನವರಿ ತಿಂಗಳಿಡಿ ಸೀತನಿ ಸಮಾರಂಭ ನಡೆಯುತ್ತಿತ್ತು. ಭಕ್ತರಿಗೆ ಸವಿಯುವ ಅವಕಾಶವಿತ್ತು. ಗುರೂಜಿ ನಿಧನದ ನಂತರ 2005ರಿಂದ ವರ್ಷಕ್ಕೆ ಒಂದು ದಿನ ಮಾತ್ರ ಸೀತನಿ ಸಮಾರಂಭ ನಡೆಯುತ್ತಿದೆ.

ಇದೀಗ ಇದಕ್ಕಾಗಿ 2ಎಕರೆ ಭೂಮಿ ಯಲ್ಲಿ ಬಿಳಿ ಜೋಳ ಬೆಳೆಯುತ್ತಾರೆ’ ಎಂದು ಆಶ್ರಮದ ಭಕ್ತ ಶರಣು ಮಾಳಶೆಟ್ಟಿ ತಿಳಿಸಿದರು. ‘ಭೋಗಿ ದಿನ ನಡೆದ ಸೀತನಿ ಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಂಡಿದ್ದೆ. ಕನಿಷ್ಠ 2000 ಮಂದಿ ಪಾಲ್ಗೊಂಡಿದ್ದರು. ಬಿಸಿ ಬಿಸಿ ಸೀತನಿ ಜತೆ ಕಬ್ಬಿನ ಹಾಲನ್ನು ಆಶ್ರಮದ ವತಿಯಿಂದ ನೀಡಿದರೆ, ಭಕ್ತರು ತಮ್ಮ ಮನೆಗಳಿಂದ ತಂದಿದ್ದ ದ್ರಾಕ್ಷಿ, ಖಜೂರಿ, ಶೇಂಗಾ ಹಿಂಡಿ, ಕರದಂಟು, ಬಾರಿಕಾಯಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸವಿದರು’ ಎಂದು ಬಸವನಬಾಗೇವಾಡಿಯ ಪ್ರತಿಭಾ ಮಸಬಿನಾಳ ತಿಳಿಸಿದರು.

* * 

ಕುಳ್ಳು–ಕಟ್ಟಿಗೆ ಕೆಂಡವನ್ನಾಗಿಸಿ ಜೋಳದ ತೆನೆ ಸುಡುವುದು, ಸುಟ್ಟ ಕಾಳನ್ನು ಬರಿಗೈಯಲ್ಲಿ ತಿಕ್ಕಿ, ಸ್ವಚ್ಛ ಮಾಡುವುದು ಸಾಮಾನ್ಯ ಕೆಲಸವಲ್ಲ
ಆಕಾಶ ಅಶೋಕ ತಿಮ್ಮಶೆಟ್ಟಿ ರೈತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT