‘ಕೈ ಉತ್ಪನ್ನ ಉಳಿವಿಗೆ ಪಾದಯಾತ್ರೆ’

7

‘ಕೈ ಉತ್ಪನ್ನ ಉಳಿವಿಗೆ ಪಾದಯಾತ್ರೆ’

Published:
Updated:

ಕೊಟ್ಟೂರು(ಕೂಡ್ಲಿಗಿ): ‘ಯಾಂತ್ರಿಕರಣದಿಂದ ನಲುಗಿರುವ ಕೈ ಉತ್ಪನ್ನಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅವುಗಳನ್ನು ಉಳಿಸಿ ಬೆಲೆ ಬರುವಂತೆ ಮಾಡುವುದು ಅವಶ್ಯವಾಗಿದೆ. ಹಾಗಾಗಿ ಹಸಿರು ಹೆಜ್ಜೆಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದರು.

ಪಟ್ಟಣದ ಗುರು ಕೊಟ್ಟೂರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಶುಕ್ರವಾರ ಸ್ಥಳೀಯ ಸಂಘಟನೆಯರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ‘ಕೈ ಉತ್ಪನ್ನಗಳಿಗೆ ಮತ್ತು ಯಂತ್ರಗಳಿಂದ ತಯಾರಾದ ಉತ್ಪನ್ನಗಳಿಗೆ ಒಂದೇ ವಿಧದಲ್ಲಿ ತೆರಿಗೆ ಹೇರುವುದು ಸರಿಯಲ್ಲ.

ಕೈ ಮಗ್ಗ ಉತ್ಪನ್ನಗಳಿಗೆ ವಿಧಿಸಿದ್ದ ಜಿಎಸ್‌ಟಿಯನ್ನು ತಮ್ಮ ಸತ್ಯಾಗ್ರಹದಿಂದ ಹಿಂದಕ್ಕೆ ಪಡೆಯಲಾಯಿತು. ಅದೇ ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಚದುರಿರುವ ಕೈ ಉತ್ಪನ್ನಗಳಿಗೆ ಮಹತ್ವ ಸಿಗುವಂತೆ ಮಾಡುವುದು ಮತ್ತು ಉಳಿಕೆಗಾಗಿ ಎಲ್ಲರೂ ಪ್ರಯತ್ನಿಸಬೇಕಾಗಿದೆ’ ಎಂದರು.

‘ನಮ್ಮ ಬದುಕನ್ನ ಸರಳೀಕರಗೊಳಿಸಿಕೊಳ್ಳುವುದು ಅಗತ್ಯವಿದೆ. ಜಗತ್ತಿನಲ್ಲಿ ಉಂಟಾಗಿರುವ ಪರಿಹಾರ ಹಾನಿ ಕುರಿತು ಯಾವುದೇ ದೇಶ ಗಂಭೀರ ಯೋಜನೆಗಳನ್ನು ರೂಪಿಸುತ್ತಿಲ್ಲ. ಬದಲಾಗಿ ಕೇವಲ ಆರ್ಥಿಕತೆಗೆ ಹೆಚ್ಚು ಒತ್ತು ನೀಡುತ್ತಿವೆ. ಜಗತ್ತಿನ ಅನೇಕ ವಿಜ್ಞಾನಿಗಳು ಸಹ ಪರಿಸರ ಉಳಿಕೆಗೆ ಒತ್ತಾಯಿಸಿದ್ದಾರೆ’ ಎಂದು ಹೇಳಿದರು.

‘ಕೈ ಉತ್ಪನ್ನಗಳಿಗೆ ಬೆಲೆ ಸಿಗುವಂತಾಗಲು ಬಸವಣ್ಣ ಅವರು ಶ್ರಮಿಸಿದರು. ಬಳಿಕ ಯಾದಗಿರಿ ತಾಲೂಕಿನ ಕೊಡೆಕಲ್, ಕೊಟ್ಟೂರು ಬಸವೇಶ್ವರ, ಮಂಡ್ಯದ ಮಂಟೆಸ್ವಾಮಿಗಳು ಪ್ರಯತ್ನಿಸಿದರು. ಸಮಾಜ ಒಳಿತಿಗಾಗಿ ಮಂಟೆಸ್ವಾಮಿ ಅವರು ಕೊಡೆಕಲ್‌ನಿಂದ ಕೊಟ್ಟೂರು ಮಾರ್ಗವಾಗಿ ತೆರಳಿದ್ದರು. ಅದೇ ಹಿನ್ನಲೆಯಲ್ಲಿ ಜ.30 ರಿಂದ ಕೊಡೆಕಲ್‌ನಿಂದ ಪಾದಯಾತ್ರೆ ನಡೆಸಿ ಫೆ. 15ಕ್ಕೆ ಕೊಟ್ಟೂರಿನಲ್ಲಿ ಸಮಾಪ್ತಿಗೊಳಿಸಲಾಗುವುದು.

ರಾಜ್ಯ ಚುನಾವಣೆ ನಂತರ 2ನೇ ಹಂತದಲ್ಲಿ ಮತ್ತೆ ಪಾದಯಾತ್ರೆಯನ್ನು ಮಂಡ್ಯದವರೆಗೆ ನಡೆಸಲಾಗುವುದು’ ಎಂದು ತಿಳಿಸಿದರು. ಪಿ. ನೂರುಲ್ಲಾ ಖಾನ್, ಲೇಖಕ ವಿಶ್ವನಾಥ ಅಡಿಗ, ವರ್ತಕ ಪಿ. ಶ್ರೀಧರಶೆಟ್ಟಿ ಮಾತನಾಡಿದರು.

ರಂಗಕರ್ಮಿಗಳಾದ ಶ್ರೀಕಾಂತ, ಎನ್.ವಿ. ಅಬ್ದುಲ್, ಶಿವಶಂಕರ ಬಣಗಾರ, ಸ್ಥಳೀಯ ಸಂಘಟಕರಾದ ಅಂಚೆ ಕೊಟ್ರೇಶ, ಎಂ.ಎಸ್. ಶಿವನಗುತ್ತಿ, ಎ. ಶಾಂತಕುಮಾರ, ಬನ್ನಿಹಟ್ಟಿ ವೀರೇಶ, ಬಿ. ಪ್ರಭಾಕರ, ಕೊಟ್ರೇಶ, ಕಾಶೀನಾಥ, ವೇಣುಗೋಪಾಲ ಶೆಟ್ಟಿ, ಎಸ್.ಎಂ. ಮರುಳಸಿದ್ದಯ್ಯ, ವಿಶ್ವಾರಾಧ್ಯ, ಬಾವಿಕಟ್ಟಿ ಶಿವಾನಂದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry