ಧರ್ಮ ಜಾಗೃತಿಯ ‘ಧರ್ಮಚಕ್ರ’

7

ಧರ್ಮ ಜಾಗೃತಿಯ ‘ಧರ್ಮಚಕ್ರ’

Published:
Updated:

ಶ್ರವಣಬೆಳಗೊಳ : ಮಾನವನನ್ನು ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಬಾಹುಬಲಿ ಮೂರ್ತಿಯಂತೆ ಧರ್ಮಚಕ್ರವೂ ಇದ್ದು, ಇದು ಬೆಳಗೊಳದ ಮಹಾವೀರ ಸ್ತಂಭದ ಮೇಲೆ ಸ್ಥಾಪಿತವಾಗಿದೆ. ಪಟ್ಟಣದ ಮುಖ್ಯರಸ್ತೆಯ ಚಂದ್ರಗಿರಿ ಮತ್ತು ವಿಂಧ್ಯಗಿರಿ ಬೆಟ್ಟದ ನಡುವಿನ ಒಂದು ಎಕರೆ ಜಾಗದ ಸುಂದರ ವನದಲ್ಲಿ ಅಷ್ಟಭುಜಾಕೃತಿಯ ಅಮೃತಶಿಲೆಯಿಂದ ನಿರ್ಮಿಸಿದ ಮಹಾವೀರ ಸ್ತಂಭದ ಮೇಲೆ ಸ್ಥಾಪನೆಗೊಂಡಿದೆ.

ಬಿಹಾರದ ಪಾವಾಪುರಿಯಲ್ಲಿ ನಿರ್ವಾಣ (ಮೋಕ್ಷ) ಹೊಂದಿದ ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರರ 2500ನೇ ನಿರ್ವಾಣ ಮಹೋತ್ಸವದ ಅಂಗವಾಗಿ ಮಹಾವೀರರ ಸಂದೇಶವನ್ನು ಜನರಿಗೆ ತಲುಪಿಸಿ ಧರ್ಮ ಪ್ರಭಾವನೆ ಮತ್ತು ಜಾಗೃತಿ ಉದ್ದೇಶದಿಂದ ಸ್ಥಾಪಿಸಲಾಯಿತು. ಏಲಾಚಾರ್ಯ ಮುನಿ, ವಿದ್ಯಾನಂದ ಮುನಿ ಮಹಾರಾಜರ ಪ್ರೇರಣೆಯಿಂದ ಹಾಗೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ 1974ರ ಡಿ. 22 ರಂದು ಶ್ರವಣಬೆಳಗೊಳದಿಂದ ಧರ್ಮಚಕ್ರ ವಿಹಾರ ಪ್ರಾರಂಭವಾಯಿತು.

ಈ ಧರ್ಮಚಕ್ರದ ಯಾತ್ರಾ ಕಾರ್ಯಕ್ರಮವನ್ನು ಅಂದಿನ ರಾಜ್ಯಪಾಲ ಮೋಹನ್‌ಲಾಲ್‌ ಸುಖಾಡಿಯಾ ಉದ್ಘಾಟಿಸಿದ್ದರು, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ವಿಹಾರದ ಮಂಗಳ ಪೂಜೆ ನೆರವೇರಿಸಿದ್ದರು.

ಆಯುಧ ರೂಪವಾದ ಚಕ್ರ ಶತ್ರು ನಾಶ ಮಾಡಲು ಉಪಯೋಗಿಸುವುದಾದರೆ, ಧರ್ಮಚಕ್ರವು ಎಲ್ಲಾ ಜೀವಿಗಳಿಗೆ ಅಭಯದಾನ ನೀಡುವಂತಹುದ್ದಾಗಿದೆ. ಇದನ್ನು ನೋಡಿದಾಗ ಧರ್ಮದ ಸ್ಮರಣೆಯಾಗಿ ಧರ್ಮಜಾಗೃತಿ ಆಗುತ್ತದೆ.

ಪಂಚಲೋಹದ ಧರ್ಮಚಕ್ರದಲ್ಲಿ 24 ಗೆರೆಗಳಿವೆ. ಧರ್ಮೋಪದೇಶ ಮಾಡಿದ ಜೈನ ಧರ್ಮದ ವೃಷಭಾದಿ ಮಹಾವೀರರವರೆಗಿನ 24 ತೀರ್ಥಂಕರರನ್ನು ಸೂಚಿಸುತ್ತದೆ. ಮಧ್ಯಭಾಗದಲ್ಲಿ ಓಂಕಾರವಿದ್ದು, ಇದನ್ನು ಸುಂದರವಾದ ರಥದಲ್ಲಿರಿಸಿ ಅದರ ಮುಂದೆ ಧರ್ಮ ಮಂಗಲಮಯವಾಗಿದೆ ಎಂಬುದನ್ನು ಸೂಚಿಸಲು ಸುವರ್ಣ ಪೂರ್ಣಕುಂಭ ಸ್ಥಾಪನೆ ಮಾಡಲಾಗಿದೆ.

ಮಹಾವೀರರ ಲಾಂಛನವಾದ ಸಿಂಹದ ಪ್ರತಿಕೃತಿ, ಪಂಚಪರಮೇಷ್ಠಿಗಳ ಹಾಗೂ ಪಂಚವ್ರತಗಳ ಸಂಕೇತವಾಗಿ ಪಂಚವರ್ಣದ ಧರ್ಮಧ್ವಜ ಇರಿಸಿ ಚಕ್ರದ ಮೇಲೆ ರಜತ ಛತ್ರಿ ಸ್ಥಾಪಿಸಲಾಯಿತು.

ಹಾಗೆಯೇ ಜೈನಧರ್ಮದ ಸಂಕೇತವಾದ ತ್ರಿಲೋಕಕಾರದ ನಕ್ಷೆ ತಯಾರಿಸಿ ಅದರಲ್ಲಿ ಮೂರು ಲೋಕದ ಜೀವಿಗಳಿಗೆ ಅಭಯ ನೀಡುವ ತೀರ್ಥಂಕರರ ಹಸ್ತ, ನಾಲ್ಕುಗತಿ ಸೂಚಿಸುವ ಸ್ವಸ್ತಿಕ, ರತ್ನತ್ರಯ ಸೂಚಕ ಮೂರು ಬಿಂದುಗಳು, ಅರ್ಧಚಂದ್ರಾಕರದ ಸಿದ್ಧಶಿಲೆಯ ಚಿತ್ರ ರಚಿಸಿ ಪ್ರತಿಷ್ಠಾಪಿಸಲಾಗಿತ್ತು.

ರಥದ ನಾಲ್ಕೂ ದಿಕ್ಕಿನಲ್ಲಿಯೂ ಲೋಕ ಶಾಂತಿಯ ಪಾಠವಾದ ‘ಸಂಪೂಜಕಾನಾಂ ಪ್ರತಿಪಾಲಕಾನಾಂ | ಯತೀಂದ್ರ ಸಾಮಾನ್ಯ ತಪೋಧನಾನಾಂ || ದೇಶಸ್ಯ ರಾಷ್ಟ್ರಸ್ಯ ಪುರಸ್ಯರಾಜ್ಞಃ | ಕರೋತು ಶಾಂತಿಂ ಭಗವಾನ್‌ ಜಿನೇಂದ್ರಃ || ಶ್ಲೋಕ ಬರೆದು ರಥವನ್ನು ಶ್ರೀ ವಿಹಾರಕ್ಕೆ ಸಿದ್ಧಗೊಳಿಸಲಾಯಿತು.

‘ಈ ವಿಹಾರವು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಯಶಸ್ವಿಯಾಗಿ ದಕ್ಷಿಣ ಭಾರತದ ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಸಂಚರಿಸಿ ಜನರಲ್ಲಿ ಧರ್ಮ ಜಾಗೃತಿ ಉಂಟು ಮಾಡಿತು. ಇದರ ಪರಿಣಾಮ ಹಾಳುಬಿದ್ದ ಜಿನ ಬಸದಿಗಳ ಕಡೆಗೆ ಜನರ ಗಮನ ಹಾಗೂ ಬಸದಿಗಳು ಜೀರ್ಣೋದ್ಧಾರಗೊಂಡವು. ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿ, ನೂರಾರು ಪುಸ್ತಕಗಳು ಪ್ರಕಟಗೊಂಡವು. ಜೈನ ಸಮಾಜದಲ್ಲಿ ಐಕ್ಯತೆ ಬಂದಿತು. ಧರ್ಮದ ತಿರುಳು ತಿಳಿದು ಕರ್ನಾಟಕದ ಎಲ್ಲಾ ಮತದವರು ಸದ್ಭಾವನೆಯಿಂದ ಈ ರಥಯಾತ್ರೆಗೆ ಸಹಕರಿಸಿದರು. ಈ ವಿಹಾರ ಮತ್ತೆ ಶ್ರವಣಬೆಳಗೊಳಕ್ಕೆ ಆಗಮಿಸಿ ನಂತರ ಧರ್ಮಚಕ್ರವನ್ನು 20.01.1977 ರಂದು ಸುಂದರವಾದ ವನದಲ್ಲಿ ಸ್ಥಾಪನೆ ಮಾಡಲಾಗಿದೆ’ ಎಂದು ನಿವೃತ್ತ ಧರ್ಮಚಕ್ರವನದ ಮೇಲ್ವಿಚಾರಕ, ಶ್ರಾವಕ ಪಿ.ದೇವರಾಜ್‌ ಹೇಳಿದರು.

ಶ್ರೀ ಧರ್ಮಚಕ್ರದ ಬಗ್ಗೆ ‘ಹರಡಿಕೊಂಡ ಕೆಟ್ಟ ಮತಗಳೆಂಬ ಕತ್ತಲೆಯನ್ನು ಚದುರಿಸಿ, ಭವ್ಯರ ಸಮೂಹವೆಂಬ ಕಮಲಗಳಿಗೆ ಜ್ಞಾನದ ಪ್ರಾಪ್ತಿಯನ್ನು ಹೊಂದಿಸಿ ವಿಶದವಾದ ವಿಭವವನ್ನು ತೇಜಸ್ಸನ್ನೂ, ತನ್ನ ಸುತ್ತಲೂ ಹೊಂದಿರುವ ಧರ್ಮಚಕ್ರವು ಸೂರ್ಯನ ಹಾಗೆ ಸಕಲ ಭೂಮಂಡಲದಲ್ಲಿ ಬೆಳಕನ್ನೂ ಬೀರಲಿ’ ಎಂದು ಕವಿ ಜಿ.ಪಿ.ರಾಜರತ್ನಂ ತಮ್ಮ ಆಶಯ ವ್ಯಕ್ತಪಡಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry