ಲಿಂಗತಾರತಮ್ಯವೂ ಲಿಂಗಾಯತವೂ

7

ಲಿಂಗತಾರತಮ್ಯವೂ ಲಿಂಗಾಯತವೂ

Published:
Updated:

ಲಿಂಗತಾರತಮ್ಯ ನೀತಿ ಎಂಬುದು ಈ ಲೋಕದ ಬದುಕಿನಲ್ಲಿ ವರ್ಣನೀತಿಗಿಂತಲೂ ಹೀನವಾದುದು. ಏಕೆಂದರೆ ವರ್ಣನೀತಿ ಕಾಣುವ ಬಣ್ಣಕ್ಕೆ ಸಂಬಂಧಿಸಿದ್ದು, ಕಡೆಗಣಿಸುವ ಧೋರಣೆಗೆ ಒಳಗಾಗಿದ್ದು. ಆದರೆ ಲಿಂಗತಾರತಮ್ಯದಲ್ಲಿ ತಿರಸ್ಕರಿಸುವ ಧೋರಣೆ ಎಂಬುದು ಕಾಣುವ ಬಣ್ಣದಲ್ಲಿ ಮೈತಾಳುವುದಿಲ್ಲ; ಒಡಲೊಳಗಿನ ಒಲವು ಚೆಲುವಿನ ಫಲವಾಗಿ ಹೊರಬಂದು ಕಡೆಗೆ ಆ ಒಡಲನ್ನೇ ಧಿಕ್ಕರಿಸಿ ಕಾಣುವ ಕೃತಘ್ನತೆಯ ವಿದ್ರೋಹದಲ್ಲಿ ಅದು ಮೈತಾಳಿದೆ. ಈ ತಾರತಮ್ಯ ನೀತಿಯು ಮಾತೃಹಂತಕ ಬುದ್ಧಿಯ ಮೂಲದ್ದು. ಇಂಥ ಬುದ್ಧಿಯನ್ನು ಹುಟ್ಟುಹಾಕಿದ ಆ ಪುರುಷಸಿಂಹ ಯಾವನಿದ್ದರೂ ಅವನು ಮಾನವೀಯತೆಯ ವಿದ್ರೋಹಿಯೇ ಸರಿ. ಏಕೆಂದರೆ ಜಗತ್ತು ಇಂದಿಗೂ ಅಂಥ ನೀಚ ಸಣ್ಣ ಅಮಾನವೀಯ ಮನೋಸ್ಥಿತಿಯಿಂದ ಬಿಡುಗಡೆ ಪಡೆಯಲಾಗಿಲ್ಲ. ಈ ಹೊತ್ತಿಗೂ ಹೆಣ್ಣುಭ್ರೂಣ ಹತ್ಯೆಯ ಕರ್ಮಕಾಂಡಗಳನ್ನು ಮುಂದುವರೆಸಿಕೊಂಡು ನಡೆದಿರುವ ಈ ಮನೋಸ್ಥಿತಿಗಳನ್ನು ನೆನೆಯುವಾಗ ನಸ್ತ್ರೀ ಸ್ವಾತಂತ್ರ್ಯಮರ್ಹತಿ ಎಂದವನ ತಾಯಿದ್ರೋಹ ಬುದ್ಧಿಯ ಕ್ರೌರ್ಯವನ್ನು ನೆನೆದು ಮನಸ್ಸು ಸಂತೃಪ್ತವಾಗುತ್ತದೆ. ಇಂಥ ಈ ಮಾತು ಆ ಮಾತಿನ ಹಿಂದಿನ ಹುನ್ನಾರ ಅರಿವಿಗೆ ಬಾರದಷ್ಟರ ಮಟ್ಟಿಗೆ ಜಗತ್ತಿನ ಬದುಕಿನಲ್ಲಿ ತನ್ನ ವಿಷಮತೆಯ ಬೀಜವನ್ನು ಬಿತ್ತಿ ಬೆಳೆದಿದೆ. ಇಂದು ಜಗತ್ತಿನಲ್ಲಿ ಇದು ಹೇಳಿಕಳೆಯಲಾಗದ ವಿಷವರ್ತುಲದ ಮೈಂಡ್‌ಸೆಟ್ ಆಗಿ ಹಬ್ಬಿ ಹರಡಿದೆ. ಈ ಕ್ರೌರ್ಯದ ಒಂದು ಮುಖ ಹೆಣ್ಣಭ್ರೂಣ ಹತ್ಯೆ. ಲಿಂಗತಾರತಮ್ಯಕ್ಕೆ ಸಂಬಂಧಿಸಿದಂತೆ ಶರಣಧರ್ಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಸ್ತರದಲ್ಲಿ ಚಿಂತನೆ ನಡೆದಿದೆ.ಮೊಲೆ ಮೂಡಿ ಬಂದರೆ ಹೆಣ್ಣೆಂಬರು |

ಗಡ್ಡ ಮೀಸೆ ಬಂದರೆ ಗಂಡೆಂಬರು |

ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎಂದು ಜೇಡರ ದಾಸಿಮಯ್ಯ ಹೇಳುತ್ತಾನೆ.

ಅಂದರೆ ಜೀವಾತ್ಮದ ಕಡೆಗೆ ಬೆರಳು ತೋರಿ ಮಾತನಾಡಿದ್ದಾನೆ ದಾಸಿಮಯ್ಯ. ಆದರೆ ಶರಣೆ ಗೊಗ್ಗವ್ವೆ ಈ ಭೇದನೀತಿಯನ್ನು ಹುಟ್ಟುಹಾಕಿದ ಬುದ್ಧಿಯ ಕಡೆಗೆ ನೇರವಾಗಿ ಬೆರಳು ತೋರಿ ಮಾತನಾಡಿದ್ದಾಳೆ. ಅವಳ ವಚನ ಇಂತಿದೆ: ಮೊಲೆ ಮೂಡಿ ಬಂದರೆ ಹೆಣ್ಣೆಂಬರು| ಮೀಸೆ ಕಾಸೆ ಬಂದಡೆ ಗಂಡೆಂಬರು| ಈ ಉಭಯದ ಜ್ಞಾನ ಹೆಣ್ಣೋ ಗಂಡೋ ನಾಸ್ತಿನಾಥ? ಎಂದು ಪ್ರಶ್ನಿಸಿದ್ದಾಳೆ. ಇದು ಮುಖ್ಯವಿಚಾರ. ಈ ಭೇದವೆಸಗಿದ ಜ್ಞಾನಮೂಲದಲ್ಲಿ ದೋಷವಿದೆ. ಆ ಜ್ಞಾನಮೂಲ ಯಾವ ಕಡೆಯದು? ನೊಂದ ನೋವ ನೊಂದವರೇ ತಿಳಿಸಿದ ಹೊತ್ತಿನಲ್ಲಿ ಸತ್ಯದ ನೆರಳಿಗಿಂತ ಸತ್ಯದ ಬೆತ್ತಲೆಯೇ ಬಯಲಾಗುತ್ತದೆ. ಗೊಗ್ಗವ್ವೆಯ ಇನ್ನೊಂದು ವಚನ ಈ ಲಿಂಗತಾರತಮ್ಯ ನೀತಿಯನ್ನು ನೀಗಿಕೊಳ್ಳುವ ಮನಸ್ಥಿತಿಗೆ ಸಂಬಂಧಿಸಿದ್ದು. ಅದು ಇಂತಿದೆ:

ಗಂಡು ಮೋಹಿಸಿ ಹೆಣ್ಣು ಹಿಡಿದಡೆ

ಅದು ಒಬ್ಬರ ಒಡವೆ ಎಂದು ಅರಿಯಬೇಕು

ಹೆಣ್ಣು ಮೋಹಿಸಿ ಗಂಡ ಹಿಡಿದಡೆ

ಉತ್ತರವಾವುದೆಂದರಿಯಬೇಕು?

ಈ ಎರಡರ ಉಭಯವ ಕಳೆದು ಸುಖಿತಾನಾಗಬಲ್ಲಡೆ

ನಾಸ್ತಿನಾಥನು ಪರಿಪೂರ್ಣನೆಂಬೆ

ಯಾವ ಬುದ್ಧಿ ಮೂಲದಲ್ಲಿ ಭೇದಜ್ಞಾನ ಬೆಳೆಯಿತೋ ಆ ಬುದ್ಧಿ ಮೂಲಕ್ಕೆ ಚಿಕಿತ್ಸೆ ಕೊಡದೆ ಬದಲಾವಣೆ ಸಾಧ್ಯವಿಲ್ಲ. ಅಂಥ ಚಿಕಿತ್ಸೆಗೆ ಮುಂದಾದ ಚಿಂತನೆ ಗೊಗ್ಗವ್ವೆಯದು. ಇದು ಲಿಂಗಾಯತ ಪ್ರತಿಪಾದಿಸುವ ಲಿಂಗಸಮಾನತೆಯ ಅಧ್ಯಾತ್ಮ ಜೀವನಮಾರ್ಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry