3.15 ಲಕ್ಷ ಮಕ್ಕಳಿಗೆ ಲಸಿಕಾ ಗುರಿ

7

3.15 ಲಕ್ಷ ಮಕ್ಕಳಿಗೆ ಲಸಿಕಾ ಗುರಿ

Published:
Updated:
3.15 ಲಕ್ಷ ಮಕ್ಕಳಿಗೆ ಲಸಿಕಾ ಗುರಿ

ಬಳ್ಳಾರಿ: ‘ಐದು ವರ್ಷದೊಳಗಿನ ಮಕ್ಕಳಿಗೆ ಪಾಲಕರು ಕಡ್ಡಾಯವಾಗಿ ಪೋಲಿಯೊ ಲಸಿಕೆಯನ್ನು ಹಾಕಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಭಾಗ್ಯ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ನವಜಾತ ಶಿಶುಗಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಭಾನುವಾರದಿಂದ(ಜ.28) ಜ.31ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನ ನಡೆಯಲಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ರಮೇಶ್ ಬಾಬು ಮಾತನಾಡಿ, ‘ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಿಸಿದೆ. ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ 3,15, 254 ಮಕ್ಕಳಿಗೆ ಲಿಸಿಕೆ ಹಾಕುವ ಗುರಿ ಹೊಂದಲಾಗಿದೆ. ಹಾಗಾಗಿ 1,337 ತಂಡಗಳು ರಚನೆ ಮಾಡಿದ್ದು, ಅವುಗಳು ಮನೆಗಳಿಗೆ ಭೇಟಿ ನೀಡಲಿವೆ’ ಎಂದರು.

‘94 ಟ್ರಾನ್ಸಿಟ್ ತಂಡಗಳು ಹಾಗೂ 21 ಸಂಚಾರಿ ತಂಡಗಳು ಸೇರಿದಂತೆ ಒಟ್ಟು 1,811 ತಂಡಗಳನ್ನು ನಿಯೋಜಿಸಿಲಾಗಿದೆ. 3,622 ಜನರು ಲಸಿಕಾ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 295 ಕ್ಲಿಷ್ಟಕರ ಪ್ರದೇಶಗಳನ್ನು ಗುರುತಿಸಲಾಗಿದ್ದು, 179 ಮನೆಗಳಿಗೆ ತಂಡಗಳು ಭೇಟಿ ನೀಡಲಿವೆ. ಇದರ ಅನುಕೂಲತೆಗಾಗಿ 324 ಮೇಲುಸ್ತುವಾರಿ ತಂಡಗಳು ಮತ್ತು 9 ತಾಲ್ಲೂಕು ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಿ 3,84,610 ಡೋಸ್ ಲಸಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಅವರು ವಿವರಿಸಿದರು.

ಕುಷ್ಠರೋಗ ವಿಭಾಗದ ಉಪ ನಿರ್ದೇಶಕ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಡಾ.ಬಿ.ಎನ್.ರಜಿನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಎಸ್.ಎಂ.ಒ ಡಾ.ಆರ್.ಎಸ್.ಶ್ರೀಧರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ವೆಂಕಟೇಶ್ ಮೂರ್ತಿ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ರವೀಂದ್ರನಾಥ್ ಎಂ.ಎಚ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಜಯಲಕ್ಷ್ಮಿ, ಆರ್.ಎಂ.ಒ ಡಾ.ಸೌಭಾಗ್ಯವತಿ ಇದ್ದರು.

‘ಅಂಗವಿಕಲತೆ ತಡೆಗೆ ಕೈಜೋಡಿಸಿ’

ಕುರುಗೋಡು: ‘ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿ ಅಂಗವಿಕಲತೆ ತಡೆಯಲು ಕೈ ಜೋಡಿಸಿ’ ಎಂದು ಸ್ಥಳೀಯ ಪುರಸಭೆ ಅಧ್ಯಕ್ಷೆ ವಿ.ಮಹೇಶ್ವರಿ ಮನವಿ ಮಾಡಿದರು. ಪಟ್ಟಣದ ಮುಖ್ಯವೃತ್ತದ ಪ್ರಾರಂಭಿಸಿದ ಬೂತ್ ನಲ್ಲಿ ಭಾನುವಾರ ಮಗುವಿಗೆ ಪೋಲಿಯೊ ಹನಿಹಾಕಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೈದ್ಯಾಧಿಕಾರಿ ಡಾ. ವೀರೇಂದ್ರ ಕುಮಾರ್ ಮಾತನಾಡಿ, ‘ಪಟ್ಟಣದಲ್ಲಿ ಒಟ್ಟು 6,150 ಮಕ್ಕಳಿಗೆ ಪೋಲಿಯೊ ಹಾಕುವ ಗುರಿ ಹೊಂದಲಾಗಿದೆ. 26 ತಂಡಗಳನ್ನು ರಚಿಸಲಾಗಿದೆ. ಅವರು ಭಾನುವಾರ ಬೂತ್‌ಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸೋಮವಾರದಿಂದ ಮೂರುದಿನ ಮನೆಗಳಿಗೆ ತೆರಳಿ ಅಭಿಯಾನ ನಡೆಸಲಿದ್ದಾರೆ. ಒಟ್ಟು 52 ಕಾರ್ಯಕರ್ತರು ಮತ್ತು ಐವರು ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು. ವಿಶೇಷ ತಹಶೀಲ್ದಾರ್ ಆರ್.ಎಂ. ಬಸವರಾಜ, ಪುರಸಭೆ ಉಪಾಧ್ಯಕ್ಷೆ ಎನ್.ಗಾದಿಲಿಂಗಮ್ಮ, ಸಿಬ್ಬಂದಿ ಕೆ ಮಂಜುನಾಥ, ಬಸವರಾಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry