ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಕ್ಕೆ ಮದ್ದೂರು ರೇಣುಕಾ ಯಲ್ಲಮ್ಮದೇವಿ ಜಾತ್ರೆ

ಚಂಡಿಕಾ ಹೋಮಕ್ಕೆ ಸಿದ್ಧತೆ
Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ಶಕ್ತಿ ದೇವತೆ ರೇಣುಕಾ ಯಲ್ಲಮ್ಮದೇವಿಯ 46ನೇ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರುವರಿ 2ರಂದು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. 19ನೇ ವರ್ಷದ ಮಹಾಚಂಡಿಕಾ ಹೋಮ ಸಹ ನೆರವೇರಲಿದೆ.

ಪಟ್ಟಣದ ಶಿಂಷಾ ನದಿ ದಂಡೆಯಲ್ಲಿ ನೆಲೆಸಿರುವ ದೇವಿಗೆ ರಾಜ್ಯದ ವಿವಿಧೆಡೆ ಅಪಾರ ಭಕ್ತರು ಇದ್ದಾರೆ. ಪ್ರತಿ ವರ್ಷ ಫೆಬ್ರುವರಿ ತಿಂಗಳು ವ್ಯಾಸ ಪುರ್ಣಿಮೆ ದಿನ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ರೇಣುಕಾದೇವಿ ಸೇವಾ ಟ್ರಸ್ಟ್‌ ಇದರ ನೇತೃತ್ವ ವಹಿಸಲಿದೆ.

ಜಾತ್ರೆ ವಿವರ: ಫೆ. 2ರಂದು ಬೆಳಿಗ್ಗೆ 5 ಗಂಟೆಗೆ ಗಣಪತಿ ಪ್ರಾರ್ಥನೆ, ರಕ್ಷಾಬಂಧನ, ದೇವಿಗೆ ವಿಶೇಷ ಅಭಿಷೇಕ ನಡೆಯಲಿದೆ. 7.40ರಿಂದ ಶುಭ ಕುಂಭ ಲಗ್ನದಲ್ಲಿ ಚಂಡಿಕಾಹೋಮ ನಡೆಯಲಿದ್ದು, ಮಧ್ಯಾಹ್ನ 12.40ಕ್ಕೆ ಮಹಾ ಪೂರ್ಣಾಹುತಿ, ಮಹಾಮಂಗಳಾರತಿ, ಮುತ್ತೈದೆಯರಿಂದ ತಂಬಿಟ್ಟಿನ ಆರತಿ ಸೇವೆ ನಡೆಯಲಿದೆ. ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3.30ರಿಂದ ದೇವಿಗೆ ನಿಂಬೆ ಹಣ್ಣಿನ ದೀಪದ ಆರತಿಯ ಹರಕೆ ಸಲ್ಲಿಕೆಯಾಗಲಿದ್ದು, ಅದೇ ದಿನ ಉಯ್ಯಾಲೆ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ.

ಮುತ್ತಿನ ಪಲ್ಲಕ್ಕಿ ಉತ್ಸವ: ಶುಕ್ರವಾರ ಸಂಜೆ ಹೊಳೆ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿ ದೇವಿಯ ಅಲಂಕೃತ ಉತ್ಸವ ಮೂರ್ತಿಯನ್ನು ವಿಶೇಷ ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ದಸರಾ ಆನೆಯ ಮೆರವಣಿಗೆಯೊಂದಿಗೆ ಕೇರಳದ ಚಂಡೆಮದ್ದಳೆ, ಆಂಧ್ರಪ್ರದೇಶದ ಮಂಜು ಬಾಲಾಜಿ ವೃಂದದಿಂದ ನಾದಸ್ವರ, ಸ್ಥಳೀಯ ತಮಟೆ ನಗಾರಿ, ರಾಣೆಬೆನ್ನೂರಿನ ವೀರಗಾಸೆ, ಡೊಳ್ಳು, ಗಾರುಡಿ ಗೊಂಬೆ, ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನ ನಡೆಯಲಿದೆ. ಸ್ಥಳೀಯ ದೇವತೆಗಳಾದ ಮದ್ದೂರಮ್ಮ, ದಂಡಿನ ಮಾರಮ್ಮ ಪೂಜಾ ಕುಣಿತವೂ ಇರಲಿದೆ.

ತೆರೆ: ಇಡೀ ರಾತ್ರಿ ಪಟ್ಟಣದ ಎಲ್ಲ ಬೀದಿಗಳಲ್ಲಿ ಉತ್ಸವ ನಡೆಯಲಿದ್ದು, ಮಾರನೇ ದಿನ (ಫೆ.3ರಂದು) ಸ್ವಸ್ಥಾನಕ್ಕೆ ದೇವಿ ಮೆರವಣಿಗೆ ಹಿಂದಿರುಗಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ದೇವಿಗೆ ವಿಶೇಷ ಕ್ಷೀರಾಭಿಷೇಕ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ದೇಗುಲದ ಧರ್ಮದರ್ಶಿ ಟಿ.ಶ್ರೀನಿವಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT