ಚುನಾವಣೆ ನೆನಪಾಯಿತೇ?

7

ಚುನಾವಣೆ ನೆನಪಾಯಿತೇ?

Published:
Updated:

ಬೆಳಗಾವಿ: ‘ನಿನ್ನೆಯವರೆಗೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆಯಲ್ಲ; ಈಗ ಚುನಾವಣೆ ನೆನಪಾಯಿತೇ?’ 

ಮರಾಠಿಯಲ್ಲಿ ಮಾತನಾಡಿದ ಖಾನಾಪುರ ಶಾಸಕ ಅರವಿಂದ ಪಾಟೀಲ (ಎಂಇಎಸ್‌) ಅವರನ್ನು,  ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತರಾಟೆಗೆ ತೆಗೆದುಕೊಂಡ ಪರಿ ಇದು.

ಸೋಮವಾರ, ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯುತ್ತಿತ್ತು. ಕುಡಿಯುವ ನೀರು ಪೂರೈಕೆ ಕುರಿತ ಚರ್ಚೆ ವೇಳೆ ಮರಾಠಿಯಲ್ಲಿ ಮಾತನಾಡಿದ ಅರವಿಂದ, ತಮ್ಮ ಕ್ಷೇತ್ರದಲ್ಲಿ ಕೊಳವೆಬಾವಿ ಕೊರೆಯಲು ತಕ್ಷಣವೇ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಲಕ್ಷ್ಮಣ ಸವದಿ, ‘ವೇದಿಕೆ ಮೇಲಿರುವವರಿಗೆ ಮರಾಠಿ ಬರುವುದಿಲ್ಲ. ಕನ್ನಡದಲ್ಲಿ ಹೇಳಿ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಇಎಸ್‌ ಶಾಸಕ, ‘ಮರಾಠಿಯಲ್ಲಿ ತಿಳಿಯುವುದಿಲ್ಲವೆಂದು ಠರಾವು ಮಾಡಿ, ಸರ್ಕಾರಕ್ಕೆ ಕಳುಹಿಸಿ’ ಎಂದು ಮರಾಠಿಯಲ್ಲಿಯೇ ಹೇಳಿದರು.

ಆಗ, ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಮಾತನಾಡಿ, ‘ನಮಗೆ ಮರಾಠಿ ಬರುವುದಿಲ್ಲ. ಕನ್ನಡ ಅಥವಾ ಹಿಂದಿಯಲ್ಲಿ ಹೇಳಿರಿ’ ಎಂದರು. ಈ ಹಂತದಲ್ಲಿ ಮಾತನಾಡಿದ ಸಚಿವ ಜಾರಕಿಹೊಳಿ, ‘ಚುನಾವಣೆ ಹತ್ತಿರ ಬಂದಿದ್ದರಿಂದ ಮರಾಠಿ ನೆನಪಾಯಿತೇ?’ ಎಂದು ತರಾಟೆಗೆ ತೆಗೆದುಕೊಂಡರು.

‘ನಾವು ಬೇರೆ ಭಾಷೆಗಳ ವಿರೋಧಿಗಳಲ್ಲ. ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ಕನ್ನಡದಲ್ಲಿಯೇ ಮಾತಾಡುವುದು ಉತ್ತಮ’ ಎಂದು ಹೇಳುವ ಮೂಲಕ ಶಾಸಕ ಪಿ.ರಾಜೀವ ಚರ್ಚೆಗೆ ತೆರೆ ಎಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry