ಕಲ್ಯಾಣ ಕಾರ್ಯ: ಸಿಡಿದೆದ್ದ ಸದಸ್ಯರು

7
ಯಾರ ಉದ್ಧಾರಕ್ಕಾಗಿ ವಿಭಾಗ: ಪಾಲಿಕೆ ಸಭೆಯಲ್ಲಿ ಸದಸ್ಯರ ಒಕ್ಕೊರಲ ಪ್ರಶ್ನೆ

ಕಲ್ಯಾಣ ಕಾರ್ಯ: ಸಿಡಿದೆದ್ದ ಸದಸ್ಯರು

Published:
Updated:
ಕಲ್ಯಾಣ ಕಾರ್ಯ: ಸಿಡಿದೆದ್ದ ಸದಸ್ಯರು

ಬೆಂಗಳೂರು: ‘2017–18ನೇ ಸಾಲಿನ ಅವಧಿ ಮುಗಿಯುವ ಹಂತ ತಲುಪಿದರೂ ಕಲ್ಯಾಣ ಕಾರ್ಯಕ್ರಮಗಳು ಈವರೆಗೆ ಅನುಷ್ಠಾನಗೊಂಡಿಲ್ಲ. ಕಲ್ಯಾಣ ಇಲಾಖೆ ಯಾರ ಕಲ್ಯಾಣಕ್ಕಾಗಿ ಇದೆ ಎಂಬುದು ಗೊತ್ತಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಜನರ ಮುಂದೆ ನಾವು ತಲೆತಗ್ಗಿಸುವಂತಾಗಿದೆ.’

ಬಿಬಿಎಂಪಿ ಸದಸ್ಯರ ಒಕ್ಕೊರಲ ಅಭಿಪ್ರಾಯವಿದು. ಸೋಮವಾರ ನಡೆದ ಪಾಲಿಕೆ ಸಭೆಯಲ್ಲಿ ಈ ವಿಷಯ ಪ್ರತಿ ಧ್ವನಿಸಿತು.

ಕಲ್ಯಾಣ ಕಾರ್ಯಕ್ರಮದಡಿ ಈ ವೇಳೆಗಾಗಲೇ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ಗಳನ್ನು ವಿತರಿಸಬೇಕಿತ್ತು. ಆದರೆ, ಈವರೆಗೂ ಟೆಂಡರ್‌ ಕರೆದಿಲ್ಲ ಎಂದು ಆಡಳಿತ ಪಕ್ಷದ ನಾಯಕ ರಿಜ್ವಾನ್‌ ಮೊಹಮ್ಮದ್‌ ದೂರಿದರು.

ಇದಕ್ಕೆ ಉತ್ತರಿಸಿದ ವಿಶೇಷ ಆಯುಕ್ತ (ಆಸ್ತಿಗಳು) ರವೀಂದ್ರ, ‘ಲ್ಯಾಪ್‌ಟಾಪ್‌ ಖರೀದಿಗಾಗಿ ಕಾರ್ಯಾದೇಶ ಕೊಡುವ ವೇಳೆಗೆ, ಹೆಚ್ಚುವರಿ ಆಯುಕ್ತರಾಗಿ (ಆ‌ಡಳಿತ) ಸಾವಿತ್ರಿ ಅಧಿಕಾರ ವಹಿಸಿಕೊಂಡರು. ಬಳಿಕ, ಏನಾಗಿದೆ ಎಂಬುದು ಗೊತ್ತಿಲ್ಲ’ ಎಂದರು.

ಮಧ್ಯ ಪ್ರವೇಶಿಸಿದ ಸದಸ್ಯ ಎಂ.ಕೆ.ಗುಣಶೇಖರ್‌, ‘ಲ್ಯಾಪ್‌ಟಾಪ್‌ಗಳನ್ನು ಕಿಯೋನಿಕ್ಸ್‌ ಸಂಸ್ಥೆ ಮೂಲಕ ಖರೀದಿಸಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದ ವೇಳೆ ಅನುಮೋದನೆ ನೀಡಿದ್ದೆ. ನಾಲ್ಕು ತಿಂಗಳು ಕಳೆದರೂ ಅದು ಏಕೆ ಜಾರಿಯಾಗಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಕಲ್ಯಾಣ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಲ್ಯಾಣ ಕಾರ್ಯಕ್ರಮ

ದಡಿ ಅಂಗವಿಕಲರಿಗಾಗಿ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹30 ಲಕ್ಷ ನೀಡಲಾಗಿದೆ. ಆದರೆ, ಆ ಕ್ಷೇತ್ರದಲ್ಲಿ ಅಂಗವಿಕಲರು ಸಿಗುತ್ತಿಲ್ಲ. ಈ ಅನುದಾನವನ್ನು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ಹೊಲಿಗೆ ಯಂತ್ರ, ಇಸ್ತ್ರಿ ಪೆಟ್ಟಿಗೆ, ಎಲೆಕ್ಟ್ರಿಕಲ್‌ ಕಿಟ್‌, ಸೈಕಲ್‌ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡಬೇಕು. ಪಾಲಿಕೆ ನೀಡುವುದು ₹5,000. ಆದರೆ, ಜಾತಿ, ಆದಾಯ ಪ್ರಮಾಣಪತ್ರಕ್ಕಾಗಿ ಫಲಾನುಭವಿಗಳು ₹3,000 ಖರ್ಚು ಮಾಡಬೇಕಿದೆ ಎಂದು ಹೇಳಿದರು.

ಒಣ ಕಸ ನಿರ್ವಹಣಾ ಕೇಂದ್ರಗಳಿಗಾಗಿ 565 ಆಟೊಗಳ ಖರೀದಿಗೆ ಟೆಂಡರ್‌ ನೀಡಲಾಗಿದೆ. ಇಂದಿರಾ ಕ್ಯಾಂಟೀನ್‌

ಗಳಿಗಾಗಿ ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿದೆ. ಈ ವಿಷಯಗಳನ್ನು ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ ಸಭೆಯ ಗಮನಕ್ಕೆ ತಂದಿಲ್ಲ. ಆದರೆ, ಅಧಿಕಾರಿಗಳು ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಪಾರದರ್ಶಕತೆ ನೆಪವನ್ನು ಹೇಳುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಮೇಯರ್‌ ಆರ್‌.ಸಂಪತ್‌ ರಾಜ್‌, ‘ಕಾಲೇಜೊಂದರಲ್ಲಿ ಓದುತ್ತಿರುವ ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರು ಅನುದಾನಕ್ಕಾಗಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಪ್ರವೇಶಾತಿ ದಾಖಲೆ, ಗುರುತಿನ ಚೀಟಿ ನೀಡಿದ್ದರು. ಆದರೆ, ಅವರು ಲೈಂಗಿಕ ಅಲ್ಪಸಂಖ್ಯಾತೆ ಎಂಬುದನ್ನು ದೃಢೀಕರಿಸುವ ಪ್ರಮಾಣಪತ್ರ ನೀಡಿ ಎಂದು ಅಧಿಕಾರಿಗಳು ಕೇಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಲ್ಯಾಪ್‌ಟಾಪ್‌ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಕಿಯೋನಿಕ್ಸ್‌ ಮೂಲಕ ಖರೀದಿ ಮಾಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ದೇವಲೋಕದಿಂದ ಇಳಿದು ಬಂದಿದ್ದಾರೆಯೇ?’: ‘ಹೆಚ್ಚುವರಿ ಆಯುಕ್ತೆ ಸಾವಿತ್ರಿ ನಿರ್ಲಕ್ಷ್ಯ ಧೋರಣೆಯಿಂದಾಗಿ ಕಲ್ಯಾಣ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿಲ್ಲ. ಅವರೇನು ದೇವಲೋಕದಿಂದ ಬಂದಿದ್ದಾರೆಯೇ. ಅವರಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆಡೆ ಹೋಗಲಿ’ ಎಂದು ಬಿಜೆಪಿಯ ಕಟ್ಟೆ ಸತ್ಯನಾರಾಯಣ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಝಾಕೀರ್, ‘ಸಾವಿತ್ರಿ ಅವರು ಯಾವುದೇ ಸಭೆಗಳಿಗೆ ಬರುವುದಿಲ್ಲ’ ಎಂದು ದೂರಿದರು.

15 ದಿನಗಳಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿ

ಮೇಯರ್ ನಿಧಿಯಡಿ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಬಡ ರೋಗಿಗಳು ಅರ್ಜಿ ಸಲ್ಲಿಸಿ ಚಾತಕ ಪಕ್ಷಗಳಂತೆ ಕಾಯುತ್ತಿದ್ದಾರೆ. ಆರೋಗ್ಯ ಇನ್‌ಸ್ಪೆಕ್ಟರ್‌ಗಳು ಮಹಜರು ಮಾಡಿದ್ದಾರೆ. ಆದರೂ ಅವರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುತ್ತಿಲ್ಲ ಎಂದು ಪದ್ಮನಾಭ ರೆಡ್ಡಿ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ರಿಜ್ವಾನ್‌ ಮೊಹಮ್ಮದ್‌, ‘ಮನುಷ್ಯರಿಗೇ ಕಾಯಿಲೆ ಬರುವುದು. ಹೀಗಾಗಿ, ವೈದ್ಯಕೀಯ ವೆಚ್ಚ ಮರುಪಾವತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ‘ರೋಗಿಗಳು ಹೈಟೆಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಬಿಲ್‌ಗಳನ್ನು ಸಲ್ಲಿಸುತ್ತಾರೆ’ ಎಂದರು. ಈ ಹೇಳಿಕೆಗೆ ಎಲ್ಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಮಂಜುನಾಥ ರೆಡ್ಡಿ, ಜಿ.ಪದ್ಮಾವತಿ ಅವರು ಮೇಯರ್‌ ಆಗಿದ್ದ ಅವಧಿಯಲ್ಲಿನ ಕಡತಗಳೂ ವಿಲೇವಾರಿಯಾಗಿಲ್ಲ. ಇಂತಹ ಕಡತಗಳನ್ನು ಒಂದು ವಾರದಲ್ಲಿ ವಿಲೇವಾರಿ ಮಾಡುವಂತೆ ನಿರ್ಣಯ ಕೈಗೊಳ್ಳಿ’ ಎಂದು ಶಾಸಕ ಕೆ. ಗೋಪಾಲಯ್ಯ ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಮೇಯರ್‌, ‘ವೈದ್ಯಕೀಯ ವೆಚ್ಚ ಮರುಪಾವತಿಯ ಎಲ್ಲ ಕಡತಗಳನ್ನು 15 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಸಮಸ್ಯೆ–ಸ್ಪಂದನ

ರಿಜ್ವಾನ್‌: 14ನೇ ಹಣಕಾಸಿನ ಆಯೋಗದ ಅನುದಾನದಡಿ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕ ಕೈಗೊಳ್ಳಲು ಸರ್ಕಾರದ ಅನುಮೋದನೆ ಸಿಕ್ಕಿಲ್ಲ. ಇದರಿಂದ ಕಾಮಗಾರಿಗಳ ಅನುಷ್ಠಾನ ಸಾಧ್ಯವಾಗುತ್ತಿಲ್ಲ.

ವಿಜಯಶಂಕರ್‌, ವಿಶೇಷ ಆಯುಕ್ತ: ಪ್ರಸಕ್ತ ಸಾಲಿನ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕ ಕೈಗೊಳ್ಳಲು ಅನುಮತಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ.

========

ವಾಣಿ ವಿ.ರಾವ್‌: ಲಿಂಕ್‌ ವರ್ಕರ್ಸ್‌ಗಳಿಗೆ ಎರಡು ವರ್ಷಗಳಿಂದ ಸಂಬಳ ನೀಡಿಲ್ಲ. ಬ್ಯಾಂಕ್‌ ಖಾತೆ ಮಾಡಿಸಿ ಎಂದಿದ್ದ ಅಧಿಕಾರಿಗಳು, ಈಗ ಗುಂಪು ಖಾತೆ ಮಾಡಿಸಬೇಕು ಎಂದು ಹೇಳುತ್ತಿದ್ದಾರೆ.

ಮೇಯರ್‌: ಪಾಲಿಕೆ ಆಯುಕ್ತರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ.

======

ಎಂ.ಕೆ.ಗುಣಶೇಖರ್‌: ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿಸಿಲ್ಲ. ಇದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ.

ಮಹದೇವ್‌, ಮುಖ್ಯ ಲೆಕ್ಕಾಧಿಕಾರಿ: ₹800 ಕೋಟಿ ಅನುದಾನವನ್ನು ನೀಡುವಂತೆ ಕೋರಿ ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಹಣಕಾಸು ಇಲಾಖೆಯ ಅನುಮೋದನೆ ಸಿಗಬೇಕಿದೆ.

=======

ಆರ್‌.ರಮಿಳಾ ಉಮಾಶಂಕರ್‌: ಕಾವೇರಿಪುರ ವಾರ್ಡ್‌ನಲ್ಲಿ 2 ತಿಂಗಳ ಹಿಂದೆ ಹೆರಿಗೆ ಆಸ್ಪತ್ರೆಯ ಉದ್ಘಾಟನೆಗೊಂಡಿದೆ. ಆದರೆ, ಅಲ್ಲಿ ಯಾವುದೇ ಉಪಕರಣ ಇಲ್ಲ. ಸಿಬ್ಬಂದಿಯನ್ನೂ ನೇಮಿಸಿಲ್ಲ.

ಡಾ.ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯ ಅಧಿಕಾರಿ: ತುರ್ತು ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಿದ್ದೇವೆ. ಹೊಸ ಉಪಕರಣಗಳ ಖರೀದಿಗೆ ಟೆಂಡರ್‌ ನೀಡಿದ್ದು, 20 ದಿನಗಳಲ್ಲಿ ಅಳವಡಿಸಲಾಗುತ್ತದೆ. ವೈದ್ಯರನ್ನು ನಿಯೋಜನೆ ಮೇರೆಗೆ ನೇಮಕ ಮಾಡಲಾಗಿದೆ.

***

ವೈಟ್‌ಟಾಪಿಂಗ್‌: ಮುನಿರತ್ನ ಅಸಮಾಧಾನ

‘ನನ್ನ ಕ್ಷೇತ್ರದಲ್ಲಿ 13 ಕಿ.ಮೀ. ವೈಟ್‌ಟಾಪಿಂಗ್‌ ಮಾಡುತ್ತಿದ್ದು, 3 ತಿಂಗಳಿಂದ ಕೇವಲ 500 ಮೀಟರ್‌ ಉದ್ದದ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಶಾಸಕ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದರು.

ಉಪಕರಣಗಳ ಮೂಲಕ ಕಾಮಗಾರಿ ನಡೆಸುವ ಬದಲು, ಮಾನವಶ್ರಮ ಬಳಸಿ ಮಾಡಲಾಗುತ್ತಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಎನ್‌ಸಿಸಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್‌ ಬಳಿ ರಸ್ತೆ ಕಾಮಗಾರಿಯನ್ನು ಆರ್‌ಎನ್‌ಎಸ್‌ ಸಂಸ್ಥೆಯು 8 ವರ್ಷಗಳಿಂದ ನಡೆಸುತ್ತಿದೆ. ಅದನ್ನೂ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

‘ಕಡತಗಳಿಗೆ ಹಿಂದಿನ ಎಇ ಸಹಿ’

‘ಜೆ.ಪಿ. ಉದ್ಯಾನ ವಾರ್ಡ್‌ನಲ್ಲಿ ನಗರೋತ್ಥಾನ ಯೋಜನೆಯ ಕಡತಗಳಿಗೆ ಹಿಂದಿನ ಎಇ ಸಹಿ ಹಾಕುತ್ತಿದ್ದಾರೆ. 15 ವರ್ಷಗಳಿಂದ ಇದ್ದ ವಾರ್ಡ್‌ ಕಚೇರಿ ದಿಢೀರನೆ ಕಂದಾಯ ಕಚೇರಿಯಾಗಿ ಪರಿವರ್ತನೆಯಾಗಿದೆ. ನಾನು ಬೀದಿಯಲ್ಲಿ ಕೆಲಸ ಮಾಡುವ ಸ್ಥಿತಿ ಇದೆ. ಪ್ರತ್ಯೇಕ ಕಟ್ಟಡ ಒದಗಿಸಿಕೊಡುವಂತೆ ಜಂಟಿ ಆಯುಕ್ತರಿಗೆ ಕೇಳುತ್ತಿದ್ದರೂ ಸ್ಪಂದಿಸುತ್ತಿಲ್ಲ. ಧೈರ್ಯ ಇರುವ ಅಧಿಕಾರಿಗಳನ್ನು ನಮ್ಮ ವಾರ್ಡ್‌ಗೆ ನಿಯೋಜನೆ ಮಾಡಿ. ನಾನೇ ಭದ್ರತೆ ಒದಗಿಸುತ್ತೇನೆ’ ಎಂದು ಬಿಜೆಪಿಯ ಮಮತಾ ವಾಸುದೇವ್‌ ಹೇಳಿದರು.

‘ಜೆ.ಪಿ. ಉದ್ಯಾನದ ಮೈದಾನವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳ

ಲಾಗುತ್ತಿದೆ’ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಪದ್ಮನಾಭ ರೆಡ್ಡಿ, ‘ಆರ್‌.ಆರ್‌.ನಗರ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಆ ಕ್ಷೇತ್ರಕ್ಕೇ ಒಂದು ಕಾನೂನು. ಎಲ್ಲ ವಾರ್ಡ್‌ಗಳ ರೋಗಿಗಳ ವೈದ್ಯಕೀಯ ವೆಚ್ಚ ಮರುಪಾವತಿಯು ಆರ್‌ಟಿಜಿಎಸ್‌ ಮೂಲಕ ನಡೆದರೆ, ಆರ್‌.ಆರ್‌.ನಗರಕ್ಕೆ ಮಾತ್ರ ಚೆಕ್‌ಗಳ ಮೂಲಕ ಪರಿಹಾರ ನೀಡಲಾಗುತ್ತಿದೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry