ಹೊಡೆದಾಟ: ಪಾಲಿಕೆ ಸದಸ್ಯೆ ಶಿಲ್ಪಾ ಪತಿ ಬಂಧನ

7
ಕಾಮಗಾರಿ ಸ್ಥಳದಲ್ಲಿ ಹೊಡೆದಾಟ; ದೂರು– ಪ್ರತಿ ದೂರು

ಹೊಡೆದಾಟ: ಪಾಲಿಕೆ ಸದಸ್ಯೆ ಶಿಲ್ಪಾ ಪತಿ ಬಂಧನ

Published:
Updated:

ಬೆಂಗಳೂರು: ಅಗ್ರಹಾರ ದಾಸರಹಳ್ಳಿಯ (ವಾರ್ಡ್ ಸಂಖ್ಯೆ 105) 9ನೇ ಅಡ್ಡರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಸ್ಥಳದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಸೋಮವಾರ ಹೊಡೆದಾಡಿಕೊಂಡಿದ್ದು, ಈ ಸಂಬಂಧ ಪಾಲಿಕೆ ಸದಸ್ಯೆ ಶಿಲ್ಪಾ ಪತಿ ಶ್ರೀಧರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕಾಮಗಾರಿ ಸ್ಥಳಕ್ಕೆ ಬಂದಿದ್ದ ಬಿಜೆಪಿಯ ಶ್ರೀಧರ್‌ ರಾಡ್‌ನಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಕೃಷ್ಣಮೂರ್ತಿ ದೂರು ನೀಡಿದ್ದರು. ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದ್ದು, ಅದನ್ನು ಆಧರಿಸಿ ಶ್ರೀಧರ್‌ ಅವರನ್ನು ಬಂಧಿಸಿರುವುದಾಗಿ ಮಾಗಡಿ ರಸ್ತೆಯ ಪೊಲೀಸರು ತಿಳಿಸಿದರು.

ಘಟನೆ ವಿವರ: ಗೋವಿಂದರಾಜ ನಗರ ಶಾಸಕರ ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಈ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು, ಪಾಲಿಕೆ ಸದಸ್ಯೆ ಶಿಲ್ಪಾ ಅವರಿಗೆ ದೂರು ನೀಡಿದ್ದರು. ಅವರ ಪತಿ ಶ್ರೀಧರ್, ಪರಿಶೀಲನೆಗಾಗಿ ಕಾಮಗಾರಿ ಸ್ಥಳಕ್ಕೆ ಸೋಮವಾರ ಮಧ್ಯಾಹ್ನ ಬಂದಿದ್ದರು.

‘ಕಾಮಗಾರಿ ಸರಿಯಾಗಿ ಮಾಡಿ’ ಎಂದು ಸ್ಥಳದಲ್ಲಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಶ್ರೀನಿವಾಸ್‌ಗೆ ಸೂಚಿಸಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ಕೃಷ್ಣಮೂರ್ತಿ, ‘ಇದು ಶಾಸಕರ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿ. ಇಲ್ಲಿ ನಿಮಗೇನು ಕೆಲಸ. ವಾಪಸ್‌ ಹೋಗಿ’ ಎಂದು ಹೇಳಿದ್ದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಪೊಲೀಸರು ತಿಳಿಸಿದರು.

‘ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಇಬ್ಬರ ಬೆಂಬಲಿಗರು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಅದೇ ವೇಳೆ ಕೃಷ್ಣಮೂರ್ತಿ  ಮೇಲೆ ಶ್ರೀಧರ್‌ ಹಲ್ಲೆ ಮಾಡಿದ್ದಾರೆ’ ಎಂದು ಹೇಳಿದರು.

‘ಚುನಾವಣೆಯಲ್ಲಿ ಕೃಷ್ಣಮೂರ್ತಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಅಂದಿನಿಂದಲೇ ಪಾಲಿಕೆ ಸದಸ್ಯೆ ಹಾಗೂ ಅವರ ನಡುವೆ ವೈಷಮ್ಯವಿದೆ. ಗಲಾಟೆ ಬಗ್ಗೆ ಶ್ರೀಧರ್‌ ಸಹ ಪ್ರತಿ ದೂರು ನೀಡಿದ್ದು, ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry