ಸೌರ ವಿದ್ಯುತ್ ಫಲಕಗಳ ಸ್ವಚ್ಛತೆಗೆ ‘ಡಸ್ಟೀ’

7

ಸೌರ ವಿದ್ಯುತ್ ಫಲಕಗಳ ಸ್ವಚ್ಛತೆಗೆ ‘ಡಸ್ಟೀ’

Published:
Updated:
ಸೌರ ವಿದ್ಯುತ್ ಫಲಕಗಳ ಸ್ವಚ್ಛತೆಗೆ ‘ಡಸ್ಟೀ’

ಕಾರವಾರ: ಈಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಸೌರ ವಿದ್ಯುತ್ ಉತ್ಪಾದನೆ ಕ್ಷೇತ್ರವು ಎದುರಿಸುತ್ತಿರುವ ಸವಾಲುಗಳಲ್ಲಿ ಫಲಕಗಳ ಸ್ವಚ್ಛತೆಯೂ ಪ್ರಮುಖವಾದುದು. ಕಾರ್ಮಿಕರನ್ನು ಬಳಸಿ ಸೌರ ಫಲಕಗಳನ್ನು ಸ್ವಚ್ಛಗೊಳಿಸುವುದು ಹೆಚ್ಚು ಶ್ರಮದಾಯಕ, ಅಸುರಕ್ಷಿತ ಹಾಗೂ ವೆಚ್ಚದಾಯಕ ಎಂಬ ಭಾವನೆಯಿದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ನೀರು ಸಹ ಬೇಕು. ಇದಕ್ಕೆ ಪರಿಹಾರವಾಗಿ ಕಾರವಾರದ ಯುವಕ ವಿಶಿಷ್ಟ ರೋಬೋಟ್ ಅಭಿವೃದ್ಧಿ ಪಡಿಸಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ.

ಇಲ್ಲಿನ ಬಾಡ್ ದೇವಳಿವಾಡದ ನಿವಾಸಿ ನಿಹಾಲ್ ರೇವಣಕರ್ ಈ ಸಾಧನೆ ಮಾಡಿದ್ದು, ತಮ್ಮ ಪರಿಕಲ್ಪನೆಯ ರೋಬೋಟ್‌ಗೆ ‘ಡಸ್ಟೀ ಎಸಿಎಸ್ 1’ ಎಂದು ಹೆಸರಿಟ್ಟಿದ್ದಾರೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?: ಡಸ್ಟೀಗೆ ಮೈಕ್ರೊ ಫೈಬರ್ ಬ್ರಷ್‌ಗಳನ್ನು ಜೋಡಿಸಿದ್ದು, ರೋಬೋಟ್‌ ಚಲಿಸಿದಾಗ ಸೌರಫಲಕದ ಮೇಲಿರುವ ದೂಳನ್ನು ಗುಡಿಸುತ್ತದೆ. ಈ ಯಂತ್ರವನ್ನು ಕಂಪ್ಯೂಟರ್ ಅಥವಾ ಮೊಬೈಲ್‌ ಫೋನ್‌ಗೆ ಸಂಪರ್ಕಿಸಿಯೂ ಚಾಲನೆ ಮಾಡಲು ಸಾಧ್ಯ ಎಂದು ಅವರು ವಿವರಿಸುತ್ತಾರೆ.

ರೋಬೋಟ್‌ನಲ್ಲಿ ಸೌರ ವಿದ್ಯುತ್ ಫಲಕ ಅಳವಡಿಸಲಾಗಿದೆ. ಹೀಗಾಗಿ ಅದರ ಬ್ಯಾಟರಿಯೂ ನಿರಂತರವಾಗಿ ರೀಚಾರ್ಜ್ ಆಗುತ್ತಿರುತ್ತದೆ. ಇದು ರಾತ್ರಿಯೂ ಸುಲಭವಾಗಿ ಕೆಲಸ ಮಾಡುತ್ತದೆ. ರೋಬೋಟ್‌ನಲ್ಲಿ ಸೆನ್ಸರ್ ಅಳವಡಿಸಿದ್ದು, ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲಿ ತನ್ನಿಂತಾನೇ ಕೆಲಸ ಸ್ಥಗಿತಗೊಳಿಸಿ ಫಲಕಗಳ ತುದಿಯಲ್ಲಿ ಬಂದು ನಿಲ್ಲುತ್ತದೆ ಎಂದು ಹೇಳುತ್ತಾರೆ.

ಈಗಿನ ಕ್ರಮ ವೆಚ್ಚದಾಯಕ: ನವೀಕರಿಸಬಹುದಾದ ಇಂಧನಗಳ ಕುರಿತಾದ ಅಂತರರಾಷ್ಟ್ರೀಯ ನಿಯತಕಾಲಿಕೆ ‘ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಸಸ್ಟೆನಬಲ್ ಎನರ್ಜಿ’ಯ ವರದಿ ಪ್ರಕಾರ, ಸೌರ ಫಲಕದ ಒಂದು ಚದರ ಮೀಟರ್ ಅಳತೆಯಲ್ಲಿ ಕೇವಲ ಒಂದು ಗ್ರಾಂನಷ್ಟು ದೂಳು ಅಂಟಿದರೂ ಶೇ 40ರಷ್ಟು ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ. ಆದ್ದರಿಂದ ಫಲಕಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲೇಬೇಕಾಗುತ್ತದೆ.

ಒಂದು ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಫಲಕಗಳನ್ನು ತೊಳೆಯಲು 20 ಸಾವಿರ ಲೀಟರ್‌ಗಳಷ್ಟು ನೀರು ಬೇಕಾಗುತ್ತದೆ. ಸಾಮಾನ್ಯವಾಗಿ ಬೃಹತ್ ಘಟಕಗಳನ್ನು ಬರಪೀಡಿತ ಪ್ರದೇಶಗಳಲ್ಲೇ ಸ್ಥಾಪಿಸಲಾಗಿದೆ. ಅಲ್ಲಿ ಪದೇಪದೇ ಇಷ್ಟು ಪ್ರಮಾಣದ ನೀರು ಸಿಗುವುದು ಕಷ್ಟ ಸಾಧ್ಯ. ಆದರೆ, ಡಸ್ಟೀ ನೀರು ಬಳಸದೇ ಸ್ವಚ್ಛ ಮಾಡುತ್ತದೆ ಎನ್ನುವ ಹೆಮ್ಮೆ ಅವರದ್ದು.

‘2022ರ ವೇಳೆಗೆ ನಮ್ಮ ದೇಶದಲ್ಲಿ ಸೌರ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು 20 ಸಾವಿರ ಮೆಗಾವಾಟ್‌ಗೆ ಹೆಚ್ಚಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಅದನ್ನು ತಲುಪಲು ಮತ್ತಷ್ಟು ಘಟಕಗಳ ಸ್ಥಾಪನೆಯಾಗಬೇಕಾಗುತ್ತದೆ. ಅವುಗಳ ಸ್ವಚ್ಛತೆಗೆ ಪ್ರತಿವರ್ಷ 30 ಕೋಟಿಯಿಂದ 40 ಕೋಟಿ ಲೀಟರ್‌ಗಳಷ್ಟು ನೀರು ಬೇಕಾಗಲಿದೆ’ ಎಂದು ಅವರು ಲೆಕ್ಕಾಚಾರ ಮುಂದಿಡುತ್ತಾರೆ.

ಪದೇಪದೇ ತೊಳೆದರೂ ಹಾನಿ: ಸೌರಫಲಕಗಳನ್ನು ಪದೇಪದೇ ತೊಳೆದರೆ ನೀರಿನಲ್ಲಿರುವ ಲವಣ ಮತ್ತು ಖನಿಜಾಂಶಗಳಿಂದ ಅವುಗಳ ಕಾರ್ಯ ನಿರ್ವಹಣೆ ಅವಧಿ ಕುಂಠಿತವಾಗುತ್ತದೆ. ಹೀಗಾಗಿ ಕೆಲವು ಸಂಸ್ಥೆಗಳು ‘ಡಿಸ್ಟಿಲ್ಡ್ ವಾಟರ್‌’ ಬಳಸುತ್ತವೆ. ಇದರಿಂದ ನಿರ್ವಹಣೆಯ ವೆಚ್ಚ ಅಧಿಕವಾಗಿ ಹೊರೆಯಾಗುತ್ತದೆ.

ಗಟ್ಟಿ ಕೋಲಿನಂತಹ ವಸ್ತುಗಳ ತುದಿಗೆ ಬಟ್ಟೆ ಸುತ್ತಿ ಬಳಸಿ ಫಲಕಗಳನ್ನು ತೊಳೆಯುವುದು ಸಾಮಾನ್ಯ ಪದ್ಧತಿ. ಆದರೆ, ಆ ಸಂದರ್ಭದಲ್ಲಿ ಒಂಚೂರು ಎಚ್ಚರ ತಪ್ಪಿದರೂ ಫಲಕಗಳಿಗೆ ಹಾನಿಯಾಗುವ ಆತಂಕವಿರುತ್ತದೆ. ಬಿಸಿಲಿಗೆ ಕಾದಿರುವ ಅವುಗಳ ಮೇಲೆ ನೀರು ಹೊಯ್ದರೆ ಅತಿಸಣ್ಣ ಬಿರುಕುಗಳು ಉಂಟಾಗಿ ನೀರು ಒಳಹೋಗಿ ಶಾರ್ಟ್ ಸರ್ಕೀಟ್ ಆಗುವ ಸಂಭವವೂ ಇರುತ್ತದೆ ಎನ್ನುತ್ತಾರೆ ಅವರು.

ಪ್ರೇರಣೆಯಾಗಿದ್ದೇನು?: ‘ಧಾರವಾಡದಲ್ಲಿ ನನ್ನ ಗೆಳೆಯನ ಸಂಬಂಧಿಯೊಬ್ಬರು ಸ್ಥಾಪಿಸಿರುವ ಐದು ಮೆಗಾವಾಟ್ ಸಾಮರ್ಥ್ಯದ ಘಟಕವನ್ನು ನೋಡಿದ್ದೆ. ಅದರ ಸ್ವಚ್ಛತೆಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಅವರು ಹೇಳಿದ್ದರು. ಇದೇ ಪ್ರೇರಣೆಯಾಯಿತು. ನನ್ನ ಆವಿಷ್ಕಾರಕ್ಕೆ ಶೀಘ್ರವೇ ಪೇಟೆಂಟ್‌ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವೋದ್ಯಮದ ಮಹದಾಸೆ

ಧಾರವಾಡದ ಎಸ್‌ಡಿಎಂ ಕಾಲೇಜಿನಿಂದ 2016ರಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ನಿಹಾಲ್, ‘ಫೆಯ್ನ್‌ಮನ್ ಇನೋವೇಷನ್ಸ್’ ಎಂಬ ಸ್ಟಾರ್ಟ್ ಅಪ್ (ನವೋದ್ಯಮ) ಕಂಪನಿಯನ್ನು ಆರಂಭಿಸಿದ್ದಾರೆ. ‘ಡಸ್ಟೀ ಎಸಿಎಸ್ 1’ ಅನ್ನು ಅದೇ ಕಾಲೇಜಿನಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ಇದು ಬೃಹತ್ ಘಟಕಗಳಿಗೆ ಮಾತ್ರ ಅನುಕೂಲವಾಗುವಂತಹ ವಿನ್ಯಾಸ ಹೊಂದಿದೆ.

ಅಂತರರಾಷ್ಟ್ರೀಯ ಮನ್ನಣೆ

* ದಕ್ಷಿಣ ಕೊರಿಯಾದ ಡೀಗು ನಗರದಲ್ಲಿ ಕಳೆದ ನ. 3 ಮತ್ತು 4ರಂದು ಆಯೋಜಿಸಲಾಗಿದ್ದ ಸ್ಟಾರ್ಟ್ ಅಪ್‌ಗಳ ನಾಲ್ಕನೇ ಜಾಗತಿಕ ಉತ್ಸವದಲ್ಲಿ ನಿಹಾಲ್ ಅವರ ‘ಫೆಯ್ನ್‌ಮನ್ ಇನೋವೇಷನ್ಸ್’ ಮೊದಲ 10 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಸ್ಪರ್ಧೆಯಲ್ಲಿ 40 ದೇಶಗಳ 200 ಕಂಪನಿಗಳಿದ್ದವು.

* ಚೆನ್ನೈನ ಐಐಟಿ ಮದ್ರಾಸ್ ಕಳೆದ ಅ.14 ಮತ್ತು 15ರಂದು ಆಯೋಜಿಸಿದ್ದ ‘ರಾಷ್ಟ್ರೀಯ ಸ್ಟಾರ್ಟ್ ಅಪ್ ಸಮ್ಮೇಳನ’ದಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡಿದ್ದರು. ಐದು ಸಾವಿರ ಸ್ಪರ್ಧಿಗಳು ಅಲ್ಲಿ ಭಾಗವಹಿಸಿದ್ದರು.

* ರಾಜ್ಯ ಸರ್ಕಾರವು ಆ.29 ಮತ್ತು 30ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಎಲವೇಟ್ 100’ ಸ್ಟಾರ್ಟ್ ಅಪ್ ಕಾರ್ಯಕ್ರಮದಲ್ಲಿ 1,700 ಅಭ್ಯರ್ಥಿಗಳ ಪೈಕಿ ಮೊದಲ 200ರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry