ವಿನಾಯ್ತಿಗೆ ಕಾದಿದೆ ರಿಯಾಲ್ಟಿ ಲೋಕ

7

ವಿನಾಯ್ತಿಗೆ ಕಾದಿದೆ ರಿಯಾಲ್ಟಿ ಲೋಕ

Published:
Updated:
ವಿನಾಯ್ತಿಗೆ ಕಾದಿದೆ ರಿಯಾಲ್ಟಿ ಲೋಕ

‌ರೇರಾ ಕಾಯ್ದೆ, ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ, ಜಿಎಸ್‍ಟಿ ಜಾರಿ ಮತ್ತು ಆರ್ಥಿಕತೆ ಬಲಪಡಿಸುವ ನಿಟ್ಟಿನಲ್ಲಿ ಕೈಗೊಂಡ ಅನೇಕ ಕ್ರಮಗಳು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಿಗುತ್ತಿದ್ದ ಲಾಭದ ಪ್ರಮಾಣವನ್ನು ಕಡಿಮೆ ಮಾಡಿವೆ. ಹೀಗಾಗಿ ಆಸ್ತಿ ಕೊಳ್ಳಲು ಜನರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಅಪಾರ್ಟ್‌ಮೆಂಟ್‌ಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ. ತೆರಿಗೆಗೆ ಸಂಬಂಧಿಸಿದ ನಿಯಮಗಳು ಬಿಗಿಯಾಗುತ್ತಿರುವುದರಿಂದ ಡೆವಲಪರ್‌ಗಳು ಹೊಸ ಪ್ರಾಜೆಕ್ಟ್‌ಗಳತ್ತ ಮೊದಲಿನ ಉತ್ಸಾಹದಿಂದ ಗಮನ ಹರಿಸುತ್ತಿಲ್ಲ.

ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲರೂ ಕುತೂಹಲದಿಂದ ಕಾಯುವ ಮತ್ತೊಂದು ಸಂದರ್ಭ ಎಂದರೆ ಬಜೆಟ್‌. ಸ್ವಂತ ಮನೆ ಖರೀದಿಸಬೇಕು ಎಂಬ ನಿರೀಕ್ಷೆ ಇರಿಸಿಕೊಂಡವರು ಕೇಂದ್ರ ಬಜೆಟ್‌ನತ್ತ ಆಸೆಗಣ್ಣಿನಿಂದ ನೋಡುತ್ತಿರುತ್ತಾರೆ. ಕಳೆದ ವರ್ಷ ರಿಯಾಲ್ಟಿ ಕ್ಷೇತ್ರದಲ್ಲಿ ಭಾರಿ ತಲ್ಲಣ ಎದುರಾಗಿತ್ತು. ಆದರೆ, ಈ ಬಾರಿಯ ಬಜೆಟ್‌ ಇಡೀ ಕ್ಷೇತ್ರದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಒಳ್ಳೇ ಸುದ್ದಿ ನೀಡಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಬಜೆಟ್ ನಿರೀಕ್ಷೆ ಕುರಿತು ಉದ್ಯಮ ವಲಯದ ಗಣ್ಯರು ಏನು ಹೇಳಿದ್ದಾರೆ ಗೊತ್ತೆ?

ತೆರಿಗೆ ಲೆಕ್ಕಾಚಾರ

‘2017ರ ಬಜೆಟ್‌ನಲ್ಲಿ ₹12 ಲಕ್ಷ ವರೆಗಿನ ಗೃಹಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವ ನಿರ್ಧಾರ ಪ್ರಕಟಿಸಲಾಗಿತ್ತು. ಇದರಿಂದ, ದೇಶದ ಅನೇಕ ಬಡ ಹಾಗೂ ಮಧ್ಯಮವರ್ಗಕ್ಕೆ ನೆರವಾಗಿದ್ದಲ್ಲದೇ, ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೂ ಬಹುದೊಡ್ಡ ಬಲತಂದುಕೊಟ್ಟಿತ್ತು. ಕಟ್ಟಡ ನಿರ್ಮಾಣ ಖರ್ಚು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಈ ಮೊತ್ತವನ್ನು ಏರಿಸಬೇಕು’ ಎಂದು ಬ್ರಿಗೇಡ್‌ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಕೆ.ಪಿ. ಪ್ರದೀಪ್‌ ಅಭಿಪ್ರಾಯಪಡುತ್ತಾರೆ.

‘ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನೂ ಮೂಲಸೌಕರ್ಯ ಕ್ಷೇತ್ರವೆಂದು ಪರಿಗಣಿಸಬೇಕು, ಸಾಧ್ಯವಾದರೆ, ಅದಕ್ಕೆ ತಕ್ಕಂತಹ ಮಾನ್ಯತೆ ನೀಡಬೇಕು  ಇದು ಸಾಧ್ಯವಾದರೆ, ಡೆವಲಪ‍್‌ರ್‌ಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಪ್ರಸಕ್ತ ಬಜೆಟ್‌ನಲ್ಲಿ ಇದಕ್ಕೆ ಆದ್ಯತೆ ನೀಡಿದರೆ, ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಕಡಿಮೆ ಆದಾಯ ಹೊಂದಿದ ವರ್ಗಕ್ಕೂ ಇದರ ಲಾಭ ದೊರಕಲಿದೆ. ಇದರಿಂದ ಸರ್ಕಾರ ಪ್ರತಿಪಾದಿಸುವ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಮನೆ ನಿರ್ಮಿಸಲು ಸಾಧ್ಯವಾಗಲಿದೆ’ ಎಂಬುದು ಇವರ ಪ್ರತಿಪಾದನೆ.

‘ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಯಾವುದೇ ಯೋಜನೆಯನ್ನು ನಿರ್ಮಾಣ ಪೂರ್ತಿಗೊಳಿಸಿ, ಗ್ರಾಹಕರ ಕೈ ಸೇರುವ ತನಕ ಅನೇಕ ಅನುಮೋದನೆಗಳನ್ನು ಪಡೆದುಕೊಳ್ಳುವುದು ಕಡ್ಡಾಯ. ಈಗಿರುವ ವ್ಯವಸ್ಥೆಯಲ್ಲಿ ಇಲಾಖಾವಾರು ಅನುಮೋದನೆ ಪಡೆಯಲು ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸಲು ಏಕಗವಾಕ್ಷಿ ಪದ್ಧತಿಯನ್ನು ಜಾರಿಗೊಳಿಸಬೇಕು’ ಎಂದು ಪ್ರದೀಪ್‌ ತಿಳಿಸುತ್ತಾರೆ.

‘ಹೊಸ ಪ್ರಾಜೆಕ್ಟ್‌ಗಳಿಗೆ ಅನುಮೋದನೆ ಪಡೆಯಲು ಸಮಯ ನಿಗದಿ ಮಾಡಬೇಕು. ನಿರ್ದಿಷ್ಟ ಅವಧಿಯ ಒಳಗೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ದೊರೆಯದಿದ್ದರೆ, ಉನ್ನತ ಅಧಿಕಾರಿಗಳಿಂದ ಪರಿಣಿತ ಅನುಮೋದನೆ ದೊರಕುವ ವ್ಯವಸ್ಥೆ ಜಾರಿ ಮಾಡಬೇಕಿದೆ. ಇದು ಸಾಧ್ಯವಾದರೆ ಮಾತ್ರ, 2022ರ ವೇಳೆಗೆ ಎಲ್ಲರಿಗೂ ಮನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೂ ಸಾಕಾರವಾಗಲಿದೆ’ ಎಂಬುದು ಅವರ ಅಭಿಪ್ರಾಯ.

ಸುಧಾರಣಾ ಕ್ರಮಕ್ಕೆ ಬೆಂಬಲ

‘2017ರಲ್ಲಿ ಬಂದ ರೇರಾ ಹಾಗೂ ಜಿಎಸ್‌ಟಿಯಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೂ ಸ್ವಲ್ಪ ಮಟ್ಟಿನ ಸಹಾಯ ಮಾಡಿತು, ಹೀಗಾಗಿ ವರ್ಷಾಂತ್ಯದಲ್ಲಿ ಖರೀದಿದಾರರು ಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸಿದರು’ ಎಂಬುದು ಕ್ರೆಡೈನ ಬೆಂಗಳೂರು ವಿಭಾಗದ ಅಧ್ಯಕ್ಷ ಹಾಗೂ ಪುರವಂಕರ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆಶೀಶ್‌ ಆರ್‌. ಪುರವಂಕರ ಅವರ ಮಾತು.

(ಆಶೀಶ್‌ ಆರ್‌. ಪುರವಂಕರ)

‘ಈ ಸಲದ ಬಜೆಟ್‌ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗಲಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರವೂ ದೇಶದ ಎರಡನೇ ಅತೀದೊಡ್ಡ ಉದ್ಯೋಗದಾತ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ. ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವ ನಿಯಮಗಳನ್ನು ಜಾರಿಗೊಳಿಸಿದರೆ, ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವೂ ಹೊಸ ನಿಯಮ ಜಾರಿಗೊಳಿಸಬಹುದು’ ಎಂಬುದು ಅವರ ವಿವರಣೆ.

‘ಕೇಂದ್ರ ಸರ್ಕಾರವೂ ರೇರಾ ಕಾಯ್ದೆಯನ್ನು ಜಾರಿಮಾಡುವ ಮೂಲಕ ಅತ್ಯುತ್ತಮ ಹೆಜ್ಜೆಯಿಟ್ಟಿದೆ. ಆದರೆ ಇದರ ಜಾರಿ ವಿಚಾರದಲ್ಲಿ ರಾಜ್ಯವಾರು ಒಂದಿಷ್ಟು ಭಿನ್ನತೆಯಿದೆ. ಈ ಕಾನೂನು ಒಂದೇ ತರಹ ಆಗುವಂತೆ ನೋಡಿಕೊಳ್ಳಬೇಕು, ನಿಯಮ ಪಾಲನೆಯಲ್ಲಿ ಸ್ಪಷ್ಟತೆ ಜತೆಗೆ ಸುಲಭವಾಗಿದ್ದರೆ ಹೆಚ್ಚು ಸಹಕಾರಿ’ ಎಂದು ಸುಧಾರಣಾ ಕ್ರಮವನ್ನು ಬೆಂಬಲಿಸುತ್ತಾರೆ ಬ್ರಿಗೇಡ್‌ ಗ್ರೂಪ್‌ನ ಸಿಎಫ್‌ಒ ಕೆ.ಪಿ.ಪ್ರದೀಪ್‌.

ಮೊದಲ ಮನೆಗೆ ಪ್ರೋತ್ಸಾಹ

2016ರ ಏಪ್ರಿಲ್‌ 1ರಿಂದ ಮಾರ್ಚ್ 2017ರ ತನಕ ಮೊದಲ ಬಾರಿ ಮನೆ ಖರೀದಿಸುವವರಿಗೆ ಸೆಕ್ಷನ್‌ 80ಇಇ ಪ್ರಕಾರ, ಹೆಚ್ಚುವರಿ ₹ 50 ಸಾವಿರ ರೂ. ವಿನಾಯಿತಿ ನೀಡಲಾಗುತ್ತಿದೆ. ಯಾವುದೇ ಗಾತ್ರ ಹಾಗೂ ಸ್ಥಳವನ್ನು ಪರಿಗಣಿಸಿದರೂ, ಖರೀದಿದಾರರು ಖರೀದಿಸುವ ಕಟ್ಟಡದ ಮೊತ್ತವೂ ₹50 ಲಕ್ಷಕ್ಕಿಂತ ಹೆಚ್ಚಿರಬಾರದು ಎಂದು ಕಾನೂನಿನಲ್ಲಿ ಇದೆ.

‘ಮೊದಲ ದರ್ಜೆ (ಮೆಟ್ರೊ) ನಗರಗಳಲ್ಲಿ ಖರೀದಿದಾರರು ಕಟ್ಟಡ ಖರೀದಿಗೆ ಮುಂದಾದರೆ, ಕಟ್ಟಡದ ಮೌಲ್ಯವೂ ನಿಗದಿಪಡಿಸಿದಕ್ಕಿಂತ ಹೆಚ್ಚಿರುತ್ತದೆ. ಇದರಿಂದ ಮೊದಲ ಬಾರಿಗೆ ಖರೀದಿದಾರರಿಗೂ ಯಾವುದೇ ಲಾಭ ಸಿಗುವುದಿಲ್ಲ. ಇದನ್ನು ₹ 50 ಸಾವಿರದಿಂದ ₹1 ಲಕ್ಷಕ್ಕೆ ಏರಿಸಬೇಕು. ಇದರ ಬದಲಾಗಿ ಸ್ಥಳ ಹಾಗೂ ಜಾಗದ ಮೌಲ್ಯ ಆಧರಿಸಿ, ತೆರಿಗೆ ವಿನಾಯಿತಿ ನೀಡಿದರೆ ಇನ್ನಷ್ಟು ನೆರವಾಗುತ್ತದೆ. ಸದ್ಯಕ್ಕೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇರುವ ತೆರಿಗೆ ನಿಯಮಗಳಲ್ಲಿ ಬದಲಾವಣೆ ಅಗತ್ಯ ಇದೆ. ಹೆಚ್ಚಾಗಿರುವ ದರದ ಜೊತೆಗೆ ಅನೇಕ ಹೊಸ ತೆರಿಗೆಗಳು, ತೆರಿಗೆ ಮೇಲೆ ತೆರಿಗೆಯಂಥ (ಡಬಲ್ ಟ್ಯಾಕ್ಸ್) ಅವೈಜ್ಞಾನಿಕ ಕ್ರಮಗಳು ಸಮಸ್ಯೆ ತಂದೊಡ್ಡಿವೆ’ ಎನ್ನುತ್ತಾರೆ ಸಿಲ್ವರ್ ರಿಯಾಲ್ಟಿಯ ವ್ಯವಸ್ಥಾಪಕ ನಿರ್ದೇಶಕ ಫಾರೂಕ್ ಮೊಹಮದ್.

‘ಈಗಾಗಲೇ ಕಟ್ಟಿರುವ ಫ್ಲಾಟ್‍ಗಳ ಮಾರಾಟ ಕಾರ್ಯದಲ್ಲಿ ಡೆವಲಪರ್‌ಗಳು ನಿರತರಾಗಿದ್ದಾರೆ. ಕೆಲ ಹೊಸ ನಿಮಯಗಳು ಕಚ್ಚಾ ಸಾಮಗ್ರಿ ವೆಚ್ಚವನ್ನು ಹೆಚ್ಚಿಸಿವೆ. ಈ ಬಾರಿಯ ಬಜೆಟ್‍ನಲ್ಲಿ ಕ್ಷೇತ್ರದ ಬಗ್ಗೆ ಸರ್ಕಾರ ಹೆಚ್ಚಿನ ಜಾಗ್ರತೆ ವಹಿಸಬೇಕು. ಜನರಿಗೆ ಸುಲಭವಾಗಿ ಮುಟ್ಟುವ ದರ ನಿಗದಿಪಡಿಸಬೇಕು. ಕೈಗೆಟುಕುವ ದರದ ಮನೆಗಳನ್ನು (ಅಫೋರ್ಡಬಲ್ ಹೌಸಸ್) ಎದುರು ನೋಡುತ್ತಿರುವವರಿಗೆ ಮತ್ತು ಮೊದಲ ಬಾರಿಗೆ ಮನೆ ಕೊಳ್ಳುವವರಿಗೆ ಪ್ರೋತ್ಸಾಹ ನೀಡಬೇಕು’ ಎನ್ನುವುದು ಅವರ ಅಭಿಪ್ರಾಯ.

‘ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಉದ್ಯಮದ ಮಾನ್ಯತೆ ನೀಡಬೇಕು. ಇದು ಡೆವಲಪರ್‌ಗಳಿಗೆ ಕಡಿಮೆ ದರದಲ್ಲಿ ಬಂಡವಾಳ ಸಂಗ್ರಹಿಸಲು ಸಹಾಯ ಮಾಡುತ್ತದೆ. ಇದರಿಂದ ದರಗಳು ಕಡಿಮೆಯಾಗಿ ಬೇಡಿಕೆ ಹೆಚ್ಚುತ್ತದೆ. ಉದ್ಯೋಗಾವಕಾಶವನ್ನೂ ಹೆಚ್ಚು ಮಾಡುತ್ತದೆ’ ಎನ್ನುತ್ತಾರೆ ಪಿಡಬ್ಲ್ಯೂಸಿ ಕಂಪೆನಿಯ ಪಾಲುದಾರರಾದ ಅಭಿಷೇಕ್ ಗೋಯಂಕಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry