ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇತಿಹಾಸದ ಸತ್ಯಗಳ ಸಾಕ್ಷಿ’

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಸಾಕ್ಷ್ಯಚಿತ್ರದ ಬಗ್ಗೆ ತಿಳಿಸಿ...

ಮಲೇಷ್ಯಾದಲ್ಲಿ ಸುಭಾಷ್‌ ಚಂದ್ರ ಬೋಸ್‌ ಹೆಸರಿನ ಭಾರತ ಸಂಸ್ಕೃತಿ ಕೇಂದ್ರವಿದೆ. ಇಂಡಿಯನ್‌ ನ್ಯಾಷನಲ್‌ ಆರ್ಮಿ (ಐಎನ್‌ಎ) ಸೈನಿಕರು, ‘ದಿ ರಾಣಿ ಆಫ್‌ ಝಾನ್ಸಿ ರೆಜಿಮೆಂಟ್‌’ನ ಮಹಿಳೆಯರು ಆ ಕೇಂದ್ರದ ಸದಸ್ಯರು ಎಂಬ ವಿಷಯ ಮಲೇಷ್ಯಾದಲ್ಲಿನ ಭಾರತದ ಹೈಕಮಿಷನರ್‌ ತಿರುಮೂರ್ತಿ ಅವರ ಮೂಲಕ ತಿಳಿಯಿತು. ಈ ಸಾಕ್ಷ್ಯಚಿತ್ರದಲ್ಲಿ ನೇತಾಜಿ ಒಡನಾಟವನ್ನು ಅವರ ಒಡನಾಡಿಗಳು ನೆನಪಿಸಿಕೊಂಡಿದ್ದಾರೆ.

ಇಂಥದ್ದೊಂದು ಸಾಕ್ಷ್ಯಚಿತ್ರದ ಅಗತ್ಯ ಏನಿತ್ತು?

ಈ ಯೋಧರು 90ರ ಅಸುಪಾಸಿನವರು. ಒಬ್ಬೊಬ್ಬರಾಗಿ ನಮ್ಮಿಂದ ದೂರವಾಗುತ್ತಿದ್ದಾರೆ. ಅವರು ಇತಿಹಾಸದ ಜೀವಂತ ಕೊಂಡಿಗಳು. ಇತಿಹಾಸದ ಬಹುಮುಖ್ಯ ದಾಖಲೆಗಳು ಅವರಲ್ಲಿತ್ತು. ನಮ್ಮ ದೇಶದಲ್ಲಿ ಬ್ರಿಟಿಷರೇ ಬರೆದ ಇತಿಹಾಸ ಹೆಚ್ಚಿದೆ. ಅವೆಲ್ಲ ಇತಿಹಾಸದ ಒಂದು ಮುಖವನ್ನು ಮಾತ್ರ ದಾಖಲು ಮಾಡಿದಂಥವು. 2ನೇ ವಿಶ್ವಯುದ್ಧದ ಬಳಿಕ ರಷ್ಯಾ, ಜಪಾನ್‌ಗಳು ನೇತಾಜಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಸುಟ್ಟುಹಾಕಿವೆ. ಹೀಗಾಗಿ ನೇತಾಜಿ ಒಡನಾಡಿಗಳ ಅನುಭವಗಳು ಮಹತ್ವದ ದಾಖಲೆಗಳು ಎನಿಸುತ್ತವೆ.

ಸಾಕ್ಷ್ಯಚಿತ್ರ ನಿರ್ಮಾಣ ಪ್ರಕ್ರಿಯೆ ಬಗ್ಗೆ ಹೇಳಿ...

ಮಲೇಷ್ಯಾಕ್ಕೆ ನಾನು 2016ನಲ್ಲಿ ಹೋಗಿ ಮಾತನಾಡಿಸಿಕೊಂಡು ಬಂದೆ. 2017ರಲ್ಲಿ ಚೆನ್ನೈನಲ್ಲಿ ಎಡಿಟಿಂಗ್‌ ಕೆಲಸ ಮುಗಿಸಿದೆ. ಮಲೇಷ್ಯಾ ಹೈಕಮಿಷನ್‌ ವಿಡಿಯೊ ಹಾಗೂ ಚಿತ್ರಗಳನ್ನು ಒದಗಿಸಿತು. ಕೆಲವೊಂದು ವಿಡಿಯೊಗಳನ್ನು ನೇತಾಜಿ ರಿಸರ್ಚ್‌ ಸೆಂಟರ್‌,
ಶ್ಯಾಮ್ ಬೆನಗಲ್‌ ಅವರ ಚಿತ್ರಗಳಿಂದ ಪಡೆದುಕೊಂಡೆ.

ನೇತಾಜಿ ಬಗ್ಗೆ ನಿಮಗೇಕೆ ಇಷ್ಟು ಆಸಕ್ತಿ?

ನೇತಾಜಿ ದೇಶಪ್ರೇಮಿ. ಅವರನ್ನು ಫ್ಯಾಸಿಸ್ಟ್‌, ತೀವ್ರಗಾಮಿ ಎಂದು ಹೇಳುವವರೂ ಇದ್ದಾರೆ. ಆದರೆ ಅವರು ಜಾತಿವಾದವನ್ನು ಖಂಡಿಸಿದ್ದರು. ದೇಶವಿಭಜನೆಯನ್ನು ವಿರೋಧಿಸಿದ್ದರು. ಸದ್ಯದ ರಾಜಕೀಯದಿಂದಾಗಿ ಅವರ ಧ್ಯೇಯಗಳು ಗೌಣವಾಗಿವೆ. ನೇತಾಜಿ ಅವರು ‘ನನ್ನನ್ನು ಸಾಯಿಸುವ ಬಾಂಬ್‌ ಇನ್ನೂ ಬಂದಿಲ್ಲ’ ಎಂದು ಹೇಳುತ್ತಿದ್ದರಂತೆ. ಭಯವೇ ಇಲ್ಲದ ವ್ಯಕ್ತಿ ಅವರು. ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

ನಮ್ಮ ದೇಶದ ಐಎನ್‌ಎ ಯೋಧರ ಬಗ್ಗೆಯೂ ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತೀರಾ?

ಭಾರತದಲ್ಲಿ ಐಎನ್‌ಎ ಸೈನಿಕರ ಯೋಧರ ಕುರಿತು ಕೆಲ ಸಾಕ್ಷ್ಯಚಿತ್ರಗಳು ಈಗಾಗಲೇ ಬಂದಿವೆ. ಅನೇಕ ಯೋಧರನ್ನು ನಾನು ಮಾತನಾಡಿಸಿದ್ದೇನೆ. ಮಾಹಿತಿ ದಾಖಲಿಸಿಕೊಂಡಿದ್ದೇನೆ. ಸಾಕ್ಷ್ಯಚಿತ್ರ ಮಾಡುವ ಬಗ್ಗೆ ಇನ್ನೂ ಆಲೋಚಿಸಿಲ್ಲ.

ಭಾರತ ಹಾಗೂ ಮಲೇಷ್ಯಾದಲ್ಲಿರು ಐಎನ್‌ಎ ಯೋಧರ ಪರಿಸ್ಥಿತಿ ಬಗ್ಗೆ ಹೇಳಿ...

ನಾನು ಎರಡೂ ದೇಶಗಳಲ್ಲಿ ನೇತಾಜಿ ಬಗ್ಗೆ ಅಧ್ಯಯನ ಮಾಡಿದ್ದೇನೆ. ಭಾರತದಲ್ಲಿ ಐಎನ್‌ಎ ಯೋಧರನ್ನು ಸ್ವಾತಂತ್ರ್ಯಯೋಧರೆಂದು ಗುರುತಿಸಲಿಲ್ಲ. ಪಿಂಚಣಿಗಾಗಿ ವರ್ಷಾನುಗಟ್ಟಲೆ ಹೋರಾಟ ಮಾಡಿದರು. ರಾಜಕೀಯದಲ್ಲಿ ಸಿಲುಕಿಕೊಂಡು, ತಬ್ಬಲಿಗಳಾದರು. ಆದರೆ ಮಲೇಷ್ಯಾದಲ್ಲಿ ಐಎನ್‌ಎ ಯೋಧರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರಸಮಾನ್‌ ಎಂಬ ಐಎನ್‌ಎ ಯೋಧರು ಮಹಿಳೆಯರಿಗೆ ಸಮಾನ ವೇತನ ನೀಡಬೇಕು ಎಂದು ಹೋರಾಡಿ ಜಯಗಳಿಸಿದರು. ಅಲ್ಲಿ ಐಎನ್‌ಎ ಸೈನಿಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ್ದಾರೆ. ಸಿನಿಮಾ ನಿರ್ದೇಶಕರು, ಉದ್ಯಮಿಗಳಾಗಿದ್ದಾರೆ.

ದಟ್ಟೈಸಿದೆ ನೇತಾಜಿ ನೆನಪು

ಸಾಕ್ಷ್ಯಚಿತ್ರದಲ್ಲಿ ನೇತಾಜಿ ನೆನಪು ದಟ್ಟೈಸಿದೆ. ದಟ್ಟ ಕಾಡುಗಳಲ್ಲಿ ನಡೆಯುತ್ತಿದ್ದ ಐಎನ್‌ಎ ತರಬೇತಿ ಶಿಬಿರಗಳು, ಝಾನ್ಸಿ ರೆಜಿಮೆಂಟ್‌ನ ಹೆಣ್ಣುಮಕ್ಕಳ ಸಾಹಸ, ಕಾಲ್ನಡಿಗೆಯಲ್ಲಿ ಯುದ್ಧಕ್ಕೆ ಹೊರಟ ಯೋಧರು... ಹೀಗೆ ಮಲೇಷ್ಯಾದಲ್ಲಿ ನೆಲೆಸಿರುವ ಐಎನ್‌ಎ ಯೋಧರು ತಮ್ಮ ಬದುಕಿನ ಜೊತೆಜೊತೆಗೆ ನೇತಾಜಿ ಅವರ ಬದುಕಿನ ಪುಟಗಳಿಗೂ ಬೆಳಕು ಚೆಲ್ಲಿದ್ದಾರೆ.

‘ನಮ್ಮ ತರಬೇತಿ ನಡೆಯುತ್ತಿತ್ತು. ಜಪಾನಿ ಯೋಧನೊಬ್ಬ ಭಾರತೀಯ ಸೈನಿಕನ ಮೇಲೆ ಕೈ ಮಾಡಿದ. ಅಲ್ಲಿಯೇ ಇದ್ದ ಸುಭಾಷರು ಏನೊಂದೂ ಪ್ರತಿಕ್ರಿಯಿಸಲಿಲ್ಲ. ನಾನು ನೇರವಾಗಿ ಅವರನ್ನು ಪ್ರಶ್ನಿಸಿದೆ. ಆಗ ಅವರು, ‘ನಿನಗೆ ಒಂದು ರಾಷ್ಟ್ರಧ್ವಜ ಇಲ್ಲ, ದೇಶ ಇಲ್ಲ. ಅದಕ್ಕೆ ಅವನು ನಿನ್ನ ಮೇಲೆ ಕೈ ಮಾಡಿದ’ ಎಂದು ಉತ್ತರಿಸಿದರು. ಈ ಉತ್ತರ ನಮ್ಮಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಿತ್ತು. ಐಎನ್‌ಎ ಪಡೆಯಲ್ಲಿ ಸಾಮಾನ್ಯ ಸೈನಿಕರಿಗೂ ಮಹಾದಂಡನಾಯಕನನ್ನು ಪ್ರಶ್ನಿಸುವ ಹಕ್ಕು ಇತ್ತು. ಇದು ನೇತಾಜಿ ಕಟ್ಟಿದ್ದ ಪಡೆಯ ವೈಶಿಷ್ಟ್ಯ’ ಎಂದು ಯೋಧರೊಬ್ಬರು ನೆನಪಿಸಿಕೊಂಡಿದ್ದಾರೆ. ಇಂಥ ಹಲವು ನೆನಪಿನ ತುಣುಕುಗಳು ಸಾಕ್ಷ್ಯಚಿತ್ರದಲ್ಲಿವೆ. ಸಾಕ್ಷ್ಯಚಿತ್ರ ನೋಡಲು ಇಚ್ಛಿಸುವವರು ಚೂಡಿ ಶಿವರಾಂ ಅವರನ್ನು ಸಂಪರ್ಕಿಸಬಹುದು. ಇಮೇಲ್– choodieshivram@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT