ನಾವಿದ್ದಂಗೆ ಜಗತ್ತು!

7

ನಾವಿದ್ದಂಗೆ ಜಗತ್ತು!

Published:
Updated:
ನಾವಿದ್ದಂಗೆ ಜಗತ್ತು!

‘ಕ್ಯಾಸ್ಟಿಂಗ್‌ ಕೌಚ್‌’ ವಿಷಯಕ್ಕೆ ಸಂಬಂಧಿಸಿದಂತೆ ನಾನು ಯಾವಾಗಲೂ ನಂಬಿರುವ ಒಂದು ಮಾತಿದೆ. ನಾವು ಹೇಗೆ ವರ್ತಿಸುತ್ತೇವೆಯೇ, ಉಳಿದವರೂ ನಮ್ಮ ಜತೆ ಹಾಗೆಯೇ ವರ್ತಿಸುತ್ತಾರೆ’

ಹೀಗೆಂದು ತುಸು ಗಂಭೀರವಾಗಿಯೇ ಹೇಳಿದರು ಹರಿಪ್ರಿಯಾ. ಮತ್ತೆ ತಕ್ಷಣವೇ ‘ಹಾಗೆಂದು ನನ್ನ ಈ ಮಾತನ್ನು ಶ್ರುತಿ ಹರಿಹರನ್‌ ಅವರ ಮಾತಿಗೆ ವಿರುದ್ಧ ಎಂದು ದಯವಿಟ್ಟು ಅಂದುಕೊಳ್ಳಬೇಡಿ’ ಎಂದೂ ಅವರು ಸ್ಪಷ್ಟನೆ ನೀಡಿದರು.

‘ನನಗೆ ಚಿತ್ರರಂಗದಲ್ಲಿ ಯಾವತ್ತೂ ಕೆಟ್ಟ ಅನುಭವ ಆಗಿಲ್ಲ. ಯಾಕೆಂದರೆ ನಾನು ಯಾರೊಂದಿಗೂ ಹಾಗೆ ಕೆಟ್ಟದಾಗಿ ನಡೆದುಕೊಂಡಿಲ್ಲ’ ಎಂದು ಹೇಳುವುದು ಅವರ ಉದ್ದೇಶವಾಗಿತ್ತು. ಇಷ್ಟೇ ಅಲ್ಲ, ‘ಈ ರೀತಿಯ ಶೋಷಣೆಗಳಿಗೆ ಬರೀ ಗಂಡಸರನ್ನೇ ದೂಷಿಸುವುದೂ ಸರಿಯಲ್ಲ’ ಎಂದೂ ಹರಿಪ್ರಿಯಾ ಅನಿಸಿಕೆ. ‘ಇಂಥ ವಿಷಯಗಳಲ್ಲಿ ಬರೀ ಹುಡುಗರನ್ನೇ ದೂಷಿಸುವುದು ಸಂಪೂರ್ಣ ತಪ್ಪು. ನಾನು ಸಂಪ್ರದಾಯಸ್ಥ ವಾತಾವರಣದಲ್ಲಿ ಬೆಳೆದವರು. ಕೆಲವು ಹುಡುಗಿಯರು ತುಂಬ ವಿಶಾಲ ಮನೋಧರ್ಮದವರು, ಪಾಶ್ವಾತ್ಯ ಸಂಸ್ಕೃತಿಯಲ್ಲಿ ಬೆಳೆದವರು ಇರುತ್ತಾರೆ. ಅವರಿಗೆ ಉಳಿದೆಲ್ಲದಕ್ಕಿಂತ ಪಾತ್ರ ಗಿಟ್ಟಿಸಿಕೊಳ್ಳುವುದೇ ಮುಖ್ಯವಾಗಿರುತ್ತದೆ. ಆಗ ಎರಡೂ ಕಡೆಯ ಒಪ್ಪಿಗೆಯ ಮೇರೆಗೇ ಸಂಬಂಧ ಇಂಥ ಸಂಗತಿಗಳು ನಡೆಯಬಹುದು. ಅಂಥವರನ್ನು ನೋಡಿ ಎಲ್ಲರೂ ಹಾಗೆಯೇ ಇರುತ್ತಾರೆ ಎಂದು ಭಾವಿಸುವ ಹುಡುಗರು ಎಲ್ಲರಿಂದಲೂ ಅದನ್ನೇ ನಿರೀಕ್ಷಿಸಬಹುದು’ ಎನ್ನುವ ಅವರು ’ಕೆಲವರು’ ಎಂದು ಮತ್ತೆ ಮತ್ತೆ ಒತ್ತಿಹೇಳುತ್ತಾರೆ.

ಕ್ಯಾಸ್ಟಿಂಗ್‌ ಕೌಚ್‌ ಕುರಿತ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದ ಹರಿಪ್ರಿಯಾ, ತಮ್ಮ ಸಿನಿಮಾಗಳ ಬಗ್ಗೆ ಮಾತು ಹೊರಳಿಸಿದರು. ‘ನೀರ್‌ ದೋಸೆ’ ಸಿನಿಮಾದಲ್ಲಿ ನಟಿಸಿದ ನಂತರ ಮೂರು ತಿಂಗಳು ಅವರು ಯಾವ ಸಿನಿಮಾವನ್ನೂ ಒಪ್ಪಿಕೊಳ್ಳದೇ ಮನೆಯಲ್ಲಿ ಖಾಲಿ ಕೂತಿದ್ದರಂತೆ. ‘ಅದು ನನ್ನ ಬದುಕಿನ ಖಿನ್ನತೆಯ ಕಾಲ’ ಎಂದು ನೆನಪಿಸಿಕೊಳ್ಳುತ್ತಾರೆ. ‘ಅವಕಾಶಗಳು ಬರುತ್ತಿವೆ. ಆದರೆ ಒಪ್ಪಿಕೊಳ್ಳಲಾಗುತ್ತಿಲ್ಲ. ಯಾಕೆಂದರೆ ಎಲ್ಲ ಅವಕಾಶಗಳೂ ನೀರ್‌ ದೋಸೆ ಸಿನಿಮಾದ ಪಾತ್ರದ ಮಾದರಿಯಲ್ಲಿಯೇ ಇರುತ್ತಿದ್ದವು. ನನಗೆ ಆ ಇಮೇಜ್‌ ಅನ್ನು ಮುರಿಯಬೇಕಾಗಿತ್ತು. ಆದ್ದರಿಂದ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳಲಿಲ್ಲ’ ಎನ್ನುತ್ತಾರೆ.

ಈಗ ಅವರಿಷ್ಟದ ಪಾತ್ರಗಳು ಸಾಲು ಸಾಲಾಗಿ ಅವರನ್ನು ಅರಸಿಕೊಂಡು ಬರುತ್ತಿವೆ. ‘ನೀರ್‌ ದೋಸೆಯ ಗ್ಲಾಮರ್‌ ಪಾತ್ರವನ್ನು ಕನಕದ ಹಳ್ಳಿ ಹುಡುಗಿಯ ಪಾತ್ರ ಬ್ರೇಕ್‌ ಮಾಡಿದೆ. ಈಗ ತೆರೆಗೆ ಬರಲು ಸಜ್ಜಾಗಿರುವ ‘ಸಂಹಾರ’ದ ಪಾತ್ರದ ಮೇಲೂ ನನಗೆ ಸಾಕಷ್ಟು ನಿರೀಕ್ಷೆಗಳಿವೆ. ‘ಮಹಾಭಾರತ’ದಲ್ಲಿ ಒಂದು ಅದ್ಭುತವಾದ ನೃತ್ಯ ಮಾಡಿದ್ದೇನೆ. ‘ಸೂಜಿದಾರ’ದಲ್ಲಿ ಮಧ್ಯಮವರ್ಗದ ಹೆಣ್ಣುಮಗಳು, ‘ಲೈಫ್‌ ಜತೆ ಒಂದ್ ಸೆಲ್ಫಿ’ ಮತ್ತೊಂದು ಭಿನ್ನ ಪಾತ್ರ. ಈಗ ಒಪ್ಪಿಕೊಂಡಿರುವ ‘ಬೆಲ್‌ ಬಾಟಂ’ ಎಂಬತ್ತರ ದಶಕದ ಪತ್ತೇದಾರಿ ಕಥೆ..’’ ಹೀಗೆ ತಾವು ಗ್ಲ್ಯಾಮರ್‌ ಇಮೇಜ್‌ ಕಳಚಿಕೊಂಡು, ಮತ್ಯಾವುದೇ ಚೌಕಟ್ಟಿಗೆ ಸಿಲುಕದಷ್ಟು ಪಾತ್ರವೈವಿಧ್ಯ ಕಾಪಾಡಿಕೊಂಡಿರುವುದಕ್ಕೆ ಉದಾಹರಣೆಗಳನ್ನು ನೀಡುತ್ತಲೇ ಹೋದರು.

‘ಜನರು ನನ್ನನ್ನು ನನ್ನ ಪಾತ್ರಗಳ ಮೂಲಕ ಗುರ್ತಿಸಬೇಕು. ಒಂದೇ ರೀತಿಯ ಪಾತ್ರಗಳಿಂದಲ್ಲ, ಭಿನ್ನ ಬಗೆಯ ಪಾತ್ರಗಳಿಂದ ಗುರ್ತಿಸಬೇಕು’ ಎನ್ನುವುದು ಅವರ ಅಂತರಂಗದ ಅಭೀಪ್ಸೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry