‘ಶೃಂಗಾರ್‌ ಕಾಂಪ್ಲೆಕ್ಸ್‌’ ಇನ್ನು ನೆನಪು ಮಾತ್ರ

7

‘ಶೃಂಗಾರ್‌ ಕಾಂಪ್ಲೆಕ್ಸ್‌’ ಇನ್ನು ನೆನಪು ಮಾತ್ರ

Published:
Updated:
‘ಶೃಂಗಾರ್‌ ಕಾಂಪ್ಲೆಕ್ಸ್‌’ ಇನ್ನು ನೆನಪು ಮಾತ್ರ

ಬೆಂಗಳೂರು: ಎಂ.ಜಿ.ರಸ್ತೆಯ ಹಳೆಯ ಸಂಭ್ರಮವನ್ನು ತನ್ನೊಳಗೆ ಹುದುಗಿಸಿಕೊಟ್ಟುಕೊಂಡಿದ್ದ ‘ಶೃಂಗಾರ್‌ ಕಾಂಪ್ಲೆಕ್ಸ್‌’ ಇನ್ನು ನೆನಪು ಮಾತ್ರ.

1968ರಿಂದ ಇತ್ತೀಚಿನ ವರ್ಷಗಳವರೆಗೂ ವಾಣಿಜ್ಯ ಚಟುವಟಿಕೆಯ ಪ್ರಮುಖ ತಾಣವಾಗಿ ಗುರುತಿಸಿಕೊಂಡಿದ್ದ ಕಾಂಪ್ಲೆಕ್‌ ಇತಿಹಾಸದ ಪುಟ ಸೇರಿದೆ. ಕೆಲವು ವರ್ಷಗಳಿಂದಲೇ ಈ ವಾಣಿಜ್ಯ ಸಂಕೀರ್ಣ ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿತ್ತು. ವ್ಯಾಜ್ಯ ಪ್ರಾರಂಭವಾದ ದಿನದಿಂದ ಬಣ್ಣ ಹೊಡೆಸುವವರಿಲ್ಲದೆ, ಕಾಂಪ್ಲೆಕ್ಸ್‌ ಅಂದ ಕಳೆದುಕೊಂಡಿತ್ತು.

ವಾಣಿಜ್ಯ ಸಂಕೀರ್ಣದ ಅಂಗಡಿಗಳ ಮಾಲೀಕರು ಹಾಗೂ ಭೂಮಾಲೀಕರ ನಡುವಿನ ವ್ಯಾಜ್ಯವನ್ನು ಹೈಕೋರ್ಟ್‌ ಇತ್ತೀಚೆಗಷ್ಟೇ ಇತ್ಯರ್ಥಪಡಿಸಿತ್ತು. ಜನವರಿ 31ರ ಒಳಗೆ ಮಳಿಗೆಗಳನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ಇಲ್ಲಿರುವ ಒಂದು ಹೋಟೆಲ್‌ ಹಾಗೂ ಜವಳಿ ಅಂಗಡಿ ಸೇರಿದಂತೆ ಮೂರು ಮಳಿಗೆಗಳ ತೆರವಿಗೆ ಒಂದು ವರ್ಷ ಕಾಲಾವಕಾಶ ನೀಡಲಾಗಿದೆ. ಇವುಗಳನ್ನು ಹೊರತುಪಡಿಸಿ, ಎಲ್ಲಾ ಮಳಿಗೆದಾರರು ಮಂಗಳವಾರ ಅಂಗಡಿಗಳನ್ನು ತೆರವುಗೊಳಿಸಿದರು. 

‘ಈ ಜಾಗವನ್ನು ಡಿಎನ್‌ಎಲ್‌ ಎಂಟರ್‌ಪ್ರೈಸಸ್‌ ಸಂಸ್ಥೆಯವರು ತುಂಬು ಚೆಟ್ಟಿ ಅವರಿಂದ 32 ವರ್ಷಗಳ ಗುತ್ತಿಗೆಗೆ ಪಡೆದು ಕಾಂಪ್ಲೆಕ್ಸ್‌ ನಿರ್ಮಿಸಿದ್ದರು. ಮಳಿಗೆಗಳನ್ನು ಬಾಡಿಗೆಗೆ ನೀಡಿದ್ದರು. 2000ರಲ್ಲಿ ಗುತ್ತಿಗೆ ಅವಧಿ ಮುಗಿದಿತ್ತು. ಅದನ್ನು ಮತ್ತೆ 10 ವರ್ಷಕ್ಕೆ ವಿಸ್ತರಿಸಲಾಗಿತ್ತು’ ಎಂದು ಅಂಗಡಿಗಳನ್ನು ತೆರವುಗೊಳಿಸುವುದರಲ್ಲಿ ನಿರತರಾಗಿದ್ದ ವ್ಯಾಪಾರಿಗಳು ತಿಳಿಸಿದರು.

‘ಭೂಮಾಲೀಕರು 2010ರಲ್ಲೇ ಮಳಿಗೆಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ಆಗ ಈ ಸಂಕೀರ್ಣದಲ್ಲಿ ಬಾಡಿಗೆಗಿದ್ದ ಮಳಿಗೆಗಳ ಮಾಲೀಕರು ಸೇರಿ ದಾವೆ ಹೂಡಿದ್ದರು’ ಎಂದರು.

ಏಳು ವರ್ಷಗಳಿಂದ ನಷ್ಟದಲ್ಲಿ ಸಾಗಿತ್ತು ವ್ಯಾಪಾರ:  ‘ನನ್ನ ತಂದೆ ಹಾಗೂ ಒಂದಿಷ್ಟು ಜನ ಸೇರಿ ಇಲ್ಲಿ ಅಂಗಡಿಗಳನ್ನು ಪ್ರಾರಂಭಿಸಿದ್ದರು. ಮೊದಲು ಎಲ್ಲಾ ರೀತಿಯ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದೆವು. 25 ವರ್ಷಗಳಿಂದ ಪೀಠೋಪಕರಣಗಳ ಮಾರಾಟ ಮಾಡು

ತ್ತಿದ್ದೇನೆ. 2010ರವರೆಗೂ ಉತ್ತಮ ವ್ಯಾಪಾರವಿತ್ತು. ವ್ಯಾಜ್ಯದ ಕಾರಣದಿಂದಾಗಿ ಮಳಿಗೆಯಲ್ಲಿ ವ್ಯಾಪಾರ ಮುಂದುವರಿಸುವ ಬಗ್ಗೆ ಅನಿಶ್ಚಿತತೆ ಇತ್ತು. ಹಾಗಾಗಿ ಹೆಚ್ಚಿನ ಹೂಡಿಕೆ ಮಾಡಲಿಲ್ಲ’ ಎಂದು ಕ್ವಾಲಿಟಿ ಫರ್ನೀಚರ್ಸ್‌ನ ಮಾಲೀಕರು ತಿಳಿಸಿದರು.

‘ನಾಲ್ಕು ದಶಕಗಳು ಇಲ್ಲಿ ಉತ್ತಮ ವ್ಯಾಪಾರ ನಡೆಸಿದ್ದೇವೆ. ಒಂದಲ್ಲ ಒಂದು ದಿನ ಇಲ್ಲಿ ವ್ಯಾಪಾರ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ತಿಳಿದಿತ್ತು. ನಾವೀಗ ವಿಶ್ರಾಂತ ಜೀವನ ನಡೆಸುವ ಹಂತ ತಲುಪಿದ್ದೇವೆ. ಹಾಗಾಗಿ ಮಳಿಗೆಗಳನ್ನು ತೆರವುಗೊಳಿಸಲು ತುಂಬಾ ಬೇಸರವೇನೂ ಇಲ್ಲ’ ಎಂದು ಮಳಿಗೆ‌ಯ ಮಾಲೀಕರೊಬ್ಬರು ತಿಳಿಸಿದರು.

***

‘ಚಿತ್ರನಟರ ನೆಚ್ಚಿನ ತಾಣವಾಗಿತ್ತು...’

‘ನಾನು ಚಿಕ್ಕವನಿದ್ದಾಗ ನಮ್ಮ ಅಂಗಡಿಗೆ ಹಾಗೂ ಎದುರಿಗಿರುವ ಅವನಾಶಿ ಬಟ್ಟೆ ಅಂಗಡಿಗೆ ಅನೇಕ ನಟರು ಬರುತ್ತಿದ್ದರು. ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಇಲ್ಲಿಗೆ ಸಾಕಷ್ಟು ಬಾರಿ ಬಂದಿದ್ದಾರೆ. ಅವರನ್ನು ನೋಡಲು ನಾವೆಲ್ಲ ಓಡಿ ಹೋಗುತ್ತಿದ್ದೆವು. ಅವರ ಮಕ್ಕಳಾದ ಶಿವರಾಜ್‌ಕುಮಾರ್‌ ಹಾಗೂ ಪುನಿತ್‌ ರಾಜ್‌ಕುಮಾರ್‌ ಸಹ ಇಲ್ಲಿನ ಅನೇಕ ಅಂಗಡಿಗಳಿಗೆ ಭೇಟಿ ನೀಡಿದ್ದಾರೆ. ಇವರಲ್ಲದೆ ಹಳೆಯ ಸಿನಿಮಾ ತಾರೆಯರು ಪುರಾತನ ಆಭರಣಗಳನ್ನು ಪಡೆಯಲು ಇಲ್ಲಿಗೆ ಬರುತ್ತಿದ್ದರು. ಅನೇಕರು ಸ್ನೇಹಿತರನ್ನು ಬಿಟ್ಟು ಬೇರೆಡೆಗೆ ಹೋಗುವುದಕ್ಕೆ ನೋವಾಗುತ್ತದೆ. ಆದರೆ, ಅನಿವಾರ್ಯ’ ಎಂದು ನೊಬೆಲ್ಸ್‌ ಆರ್ಟ್‌ ಎಕ್ಸ್‌ಪೋಸಿಷನ್ ಮಳಿಗೆಯ ಸುಬೇರ್‌ ನೆನಪುಗಳನ್ನು ಬಿಚ್ಚಿಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry