ಹಲಸೂರು ಕೆರೆಗೆ ಹೊಳಪು: ಪ್ರೆಸ್ಟೀಜ್‌ ಆಸಕ್ತಿ

7
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ‌ ನಿಧಿಯಡಿ ಅಭಿವೃದ್ಧಿಪಡಿಸಲು ನಿರ್ಧಾರ

ಹಲಸೂರು ಕೆರೆಗೆ ಹೊಳಪು: ಪ್ರೆಸ್ಟೀಜ್‌ ಆಸಕ್ತಿ

Published:
Updated:
ಹಲಸೂರು ಕೆರೆಗೆ ಹೊಳಪು: ಪ್ರೆಸ್ಟೀಜ್‌ ಆಸಕ್ತಿ

ಬೆಂಗಳೂರು: ಕೊಳಚೆ ನೀರು ಮತ್ತು ತ್ಯಾಜ್ಯ ಸೇರ್ಪಡೆಯಿಂದ ಮಲೀನಗೊಂಡಿರುವ ಹಲಸೂರು ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಪ್ರೆಸ್ಟೀಜ್ ಕಂಪನಿ ಆಸಕ್ತಿ ತೋರಿದೆ.

ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ‌ ನಿಧಿಯಿಂದ ಸುಮಾರು 126 ಎಕರೆ ವಿಸ್ತೀರ್ಣದ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಅನುಮತಿ ನೀಡುವಂತೆ ಬಿಬಿಎಂಪಿ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಿದೆ.

ಕೊಳಚೆ ನೀರು ಕೆರೆಗೆ ಹರಿಯದಂತೆ ತಡೆಗಟ್ಟುವುದು, ಸುತ್ತಲೂ ವಿಹಾರ ಪಥ, ಸೈಕಲ್ ಪಥ, ಬಯಲು ವ್ಯಾಯಾಮ ಶಾಲೆ, ಬಯಲು ರಂಗಮಂದಿರ, ಕಾಫಿ ಶಾಪ್‌, ವಿಹಾರಿಗಳಿಗೆ ಕುಳಿತುಕೊಳ್ಳಲು ಆಸನ, ಸಾರ್ವಜನಿಕ ಶೌಚಾಲಯ, ವಿದ್ಯುತ್‌ ದೀಪ ಹಾಗೂ ಸಂಗೀತ ವ್ಯವಸ್ಥೆ ಕಲ್ಪಿಸುವುದು ಯೋಜನೆಯಲ್ಲಿ ಒಳಗೊಂಡಿದೆ ಎಂದು ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.

‘ಪ್ರೆಸ್ಟೀಜ್ ಕಂಪನಿಯು ಸಮ್ಮತಿ ಪತ್ರ ಸಲ್ಲಿಸಿದೆ. ಈ ಪ್ರಸ್ತಾವವನ್ನು ಡಿಸೆಂಬರ್ 23ರಂದು ಪ್ರಾಧಿಕಾರದ ತಾಂತ್ರಿಕ ಸಮಿತಿಯ ಪರಿಶೀಲನೆಗೆ ಕಳುಹಿಸಿದ್ದೇವೆ. ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಸೀಮಾ ಗರ್ಗ್ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

₹15 ಕೋಟಿ ಯೋಜನೆ: ₹15 ಕೋಟಿ ವೆಚ್ಚದಲ್ಲಿ ಕೆರೆ ಸಮಗ್ರವಾಗಿ ಅಭಿವೃದ್ಧಿಪಡಿಸಿ, ನಿರ್ವಹಣೆ ಮಾಡಲು  ಕಂಪನಿ ಆಸಕ್ತಿ ತೋರಿಸಿದೆ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

ಕಂಪನಿ ಪ್ರತಿನಿಧಿಗಳು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್‌ ಸಮ್ಮುಖದಲ್ಲಿ ಕೆರೆ ಅಭಿವೃದ್ಧಿ ರೂಪರೇಷೆಯ ಪ್ರಾತ್ಯಕ್ಷಿಕೆಯನ್ನುಪ್ರದರ್ಶಿಸಿದರು. ಎಲ್ಲರಿಗೂ ಯೋಜನೆ ಇಷ್ಟವಾಗಿದೆ. ಕೌನ್ಸಿಲ್‌ ಒಪ್ಪಿಗೆ

ಪಡೆದು, ಕಂಪನಿ ಜತೆಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಕೆರೆಯಲ್ಲಿ ಪ್ಲಾಸ್ಟಿಕ್, ಬಳಸಿದ ಸಿರಿಂಜ್‌ಗಳು, ಔಷಧ ಸಾಮಗ್ರಿಗಳು ಮತ್ತು ಇತರೆ ತ್ಯಾಜ್ಯ ಈಗಲೂ ತೇಲುತ್ತಿವೆ. ಕಳೆದ ವರ್ಷವಷ್ಟೇ

32 ಟ್ರ್ಯಾಕ್ಟರ್‌ಗಳಷ್ಟು ತ್ಯಾಜ್ಯ ಹೊರತೆಗೆಯಲಾಗಿತ್ತು. ಕೊಳಚೆ ನೀರಿನಿಂದ ದುರ್ನಾತ ಬೀರುತ್ತಿರುವ ಕೆರೆ ನೀರಿಗೆ ಇಎಂ ದ್ರಾವಣ ಸಿಂಪಡಿಸಿ

ಸ್ವಚ್ಛಗೊಳಿಸುವ ಪ್ರಯತ್ನಗಳು ಬಿಬಿಎಂಪಿ ನೇತೃತ್ವದಲ್ಲಿ ನಡೆದಿದ್ದವು. ಆದರೆ, ಜಲಮೂಲದ ನೀರಿನ ಹಸಿರು ಬಣ್ಣ ಮಾತ್ರ ಬದಲಾಗಿಲ್ಲ, ದುರ್ನಾತವೂ ನಿವಾರಣೆಯಾಗಿಲ್ಲ ಎನ್ನುತ್ತಾರೆ ಯುನೈಟೆಡ್‌ ಬೆಂಗಳೂರು ಸಂಘಟನೆಯ ಸಂಚಾಲಕ ಎನ್‌.ಆರ್‌.ಸುರೇಶ್‌.

ಜಲಮೂಲಕ್ಕೆ ದೇವರಜೀವನಹಳ್ಳಿ, ಶಿವಾಜಿನಗರ, ಹಲಸೂರು ಸೇರಿದಂತೆ ಹಲವು ಕಡೆಯಿಂದ ಕೊಳಚೆ ನೀರು ರಾಜಕಾಲುವೆ

ಮೂಲಕ ಹರಿದುಬರುತ್ತಿದೆ. ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ಒಳಚರಂಡಿ ಕೊಳಚೆ ನೀರು ನೇರವಾಗಿ ಕೆರೆ ಸೇರುತ್ತಿದೆ. ಜಲಮಂಡಳಿಯು ಒಳಚರಂಡಿ ಕೊಳಚೆ ನೀರನ್ನು ಸಂಸ್ಕರಿಸಿ ಬಿಡದ ಪರಿಣಾಮ ಜಲಮೂಲ ಸಂಪೂರ್ಣ ಕಲುಷಿತಗೊಂಡಿದೆ.ಆಮ್ಲಜನಕ ಕೊರತೆ ಕಾಣಿಸಿಕೊಂಡು 2016ರಲ್ಲಿ ಮೀನು ಮತ್ತು ಜಲಚರಗಳ ಮಾರಣಹೋಮ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry