ಚುನಾವಣೆಯಲ್ಲಿ ಧರ್ಮ ತಂದರೆ ಓಡಿಸಿ

7

ಚುನಾವಣೆಯಲ್ಲಿ ಧರ್ಮ ತಂದರೆ ಓಡಿಸಿ

Published:
Updated:
ಚುನಾವಣೆಯಲ್ಲಿ ಧರ್ಮ ತಂದರೆ ಓಡಿಸಿ

ಮಂಗಳೂರು: ‘ಚುನಾವಣೆಯ ಸಮಯದಲ್ಲಿ ದೇವರುಗಳ ಪೋಸ್ಟರ್‌ ಹಿಡಿದು, ಧರ್ಮದ ಹೆಸರಿನಲ್ಲಿ ಮತ ಕೇಳಲು ಬರುವವರನ್ನು ದೊಣ್ಣೆ ಹಿಡಿದು ಓಡಿಸಿ’ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸಲಹೆ ನೀಡಿದರು.

‘ಸೌಹಾರ್ದತೆಗಾಗಿ ಕರ್ನಾಟಕ’ ವತಿಯಿಂದ ಮಂಗಳವಾರ ಆಯೋಜಿ ಸಿದ್ದ ಸೌಹಾರ್ದಕ್ಕಾಗಿ ಮಾನವ ಸರಪಳಿಯಲ್ಲಿ ಭಾಗಿಯಾದ ಬಳಿಕ ನೆಹರೂ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ದೇವರು ಮನೆಯ ಒಳಗೆ ಇರಬೇಕು. ರಾಮ, ಕೃಷ್ಣರನ್ನು ಬೀದಿಗೆ ತಂದು ರಾಜಕಾರಣ ಮಾಡುವವರು ಧರ್ಮದ್ರೋಹಿಗಳು’ ಎಂದರು.

ಚುನಾವಣೆಯಲ್ಲಿ ಅಭಿವೃದ್ಧಿ ಮತ್ತು ಸ್ವಚ್ಛ ಆಡಳಿತದ ವಿಚಾರ ಚರ್ಚೆಯ ಮುನ್ನೆಲೆಗೆ ಬಂದರೆ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ. ಎರಡನ್ನೂ ಬದಿಗಿಟ್ಟು ಧರ್ಮದ ವಿಚಾರವನ್ನು ಮುನ್ನೆಲೆಗೆ ತಂದರೆ ಮತದಾರರು ತಮಗೆ ತಾವೇ ದ್ರೋಹಿಗಳಾಗುತ್ತಾರೆ ಎಂದು ಹೇಳಿದರು.

ಗಾಂಧಿ ಕೊಂದವರ ವಿಜೃಂಭಣೆ: ಮಹಾತ್ಮ ಗಾಂಧಿಯವರನ್ನು ಕೊಂದವರನ್ನು ವಿಜೃಂಭಿಸುವ ಕೆಲಸ ನಿರಂತರವಾಗಿ ಮುಂದುವರಿದಿದೆ. ಗಾಂಧಿಯ ಹತ್ಯೆಯನ್ನು ಸಮರ್ಥಿಸಿಕೊಂಡ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಅಳುಕಿಲ್ಲದೇ ಓಡಾಡಿಕೊಂಡು ಇದ್ದಾರೆ. ಕೊಂದ ನಾಥೂರಾಮ ಗೋಡ್ಸೆಗೆ ದೇವಸ್ಥಾನ ಕಟ್ಟುವ ಯತ್ನಗಳೂ ನಡೆಯುತ್ತಲೇ ಇವೆ ಎಂದರು.

‘ಗಾಂಧಿ ಮುಸ್ಲಿಮರ ಪರ ಇದ್ದಾರೆ ಎಂದು ಹಿಂದೂಗಳು ಆರೋಪಿಸಿದ್ದರು. ಅದೇ ರೀತಿ ಮುಸ್ಲಿಮರು ಆರೋಪ ಮಾಡಿದ್ದರು. ದಲಿತರು ಕೂಡ ಗಾಂಧಿ ನಮ್ಮ ವಿರುದ್ಧ ಇದ್ದಾರೆ ಎಂದು ಭಾವಿಸಿದ್ದರು. ಅದೆಲ್ಲವನ್ನೂ ಮೀರಿ ಹಿಂದೂ– ಮುಸ್ಲಿಮರ ನಡುವೆ ಸೌಹಾರ್ದ ಸ್ಥಾಪನೆ, ದಲಿತರ ಅಭಿವೃದ್ಧಿಗೆ ಗಾಂಧಿ ಶ್ರಮಿಸಿದ್ದರು. ಪೂರ್ಣ ವಾಗಿ ಜಾತ್ಯತೀತರಾಗಿ ಉಳಿದಾಗ ಈ ಬಗೆಯಲ್ಲಿ ಸಂಶಯಕ್ಕೆ ಒಳಗಾ ಗಬೇಕಾಗುತ್ತದೆ’ ಎಂದು ಹೇಳಿದರು.

ಮೂರು ವರ್ಷಗಳಿಂದ ದೇಶದ ಜನತೆ ಒಂದು ಬಗೆಯ ಭ್ರಮೆಯಲ್ಲಿ ಮುಳುಗಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗದ ಪ್ರಧಾನಿ ನರೇಂದ್ರ ಮೋದಿ ದಿನಕ್ಕೊಂದು ಕತೆಗಳನ್ನು ಹರಿಯಬಿಡುತ್ತಿದ್ದಾರೆ. ‘ತಲಾಖ್‌’ ಮುಸ್ಲಿಮರ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಅವರ ನೈಜ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ ರಾಜೇಂದ್ರ ಸಾಚಾರ್ ಆಯೋಗದ ವರದಿ ಶಿಫಾರಸುಗಳ ಜಾರಿಗೆ ಏಕೆ ಕೇಂದ್ರ ಸರ್ಕಾರ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದರು.

ಲಾಲ್‌ ಕೃಷ್ಣ ಅಡ್ವಾಣಿ ಆರಂಭಿಸಿದ ರಥಯಾತ್ರೆ, ಬಾಬರಿ ಮಸೀದಿ ಧ್ವಂಸದ ನಂತರ ಹೊತ್ತಿಕೊಂಡ ಕೋಮುದ್ವೇಷದ ವಿಷ ಜ್ವಾಲೆ ಇನ್ನೂ ಪ್ರವಹಿಸುತ್ತಲೇ ಇದೆ. ಅದು ಮತ್ತೆ ಸ್ಫೋಟಗೊಳ್ಳಲು ಬಿಡದಂತೆ ಎಚ್ಚರದಿಂದ ಕೆಲಸ ಮಾಡುವುದು ಈ ಹೊತ್ತಿನ ತುರ್ತು ಎಂದರು.

‘ಸೌಹಾರ್ದತೆಗಾಗಿ ಕರ್ನಾಟಕ’ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ವಿಲ್ಫ್ರೆಡ್ ಡಿಸೋಜ, ಸಾಹಿತಿ ಚಂದ್ರಕಲಾ ನಂದಾವರ, ಫಾದರ್ ಓನಿಲ್ ಡಿಸೋಜ, ಮುಸ್ಲಿಂ ಸಂಘಟನೆಗಳ ಒಕ್ಕೂಡದ ಅಧ್ಯಕ್ಷ ಕೆ.ಅಶ್ರಫ್, ಮೇಯರ್ ಕವಿತಾ ಸನಿಲ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್, ಅಹಿಂದ ಮುಖಂಡ ವಾಸುದೇವ ಬೋಳೂರು, ಮಾನವ ಬಂಧುತ್ವ ವೇದಿಕೆಯ ಕೇಶವ ಧರಣಿ, ದಲಿತ ಮುಖಂಡ ಎಂ. ದೇವದಾಸ್, ಸಿಪಿಐ ಮುಖಂಡ ಕೆ.ಆರ್. ಶ್ರೀಯಾನ್, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry