ಕೊರತೆ ನಡುವೆ ಗುಣಾತ್ಮಕ ಶಿಕ್ಷಣ

7

ಕೊರತೆ ನಡುವೆ ಗುಣಾತ್ಮಕ ಶಿಕ್ಷಣ

Published:
Updated:
ಕೊರತೆ ನಡುವೆ ಗುಣಾತ್ಮಕ ಶಿಕ್ಷಣ

ಭಾಲ್ಕಿ: ತಾಲ್ಲೂಕಿನಿಂದ 9 ಕಿ.ಮೀ ದೂರದಲ್ಲಿರುವ ಭಾಗ್ಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಲವು ಕೊರತೆಗಳ ನಡುವೆಯೂ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದ್ದು, ಪಾಲಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಮೀಪದ ಕಪಲಾಪುರ, ನಾವದಗಿ ತಾಂಡಾ ಗ್ರಾಮಗಳಿಂದ ಶಾಲೆಗೆ ಮಕ್ಕಳು ಬರುತ್ತಾರೆ. 1ರಿಂದ 8ನೇ ತರಗತಿವರೆಗೆ 95 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸಮಾಜ ವಿಜ್ಞಾನ, ಇಂಗ್ಲಿಷ್‌ ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ದೈಹಿಕ ಸದೃಢತೆಗೆ ಅಗತ್ಯವಾಗಿರುವ ಆಟದ ಮೈದಾನ ಇದೆ. ಆದರೆ, ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಮಕ್ಕಳಿಗೆ ವಿಜ್ಞಾನ ವಿಷಯದ ಪ್ರಾಯೋಗಿಕ ಜ್ಞಾನ ನೀಡಲು ಪ್ರಯೋಗಾಲಯ ಇಲ್ಲ. ಕಂಪ್ಯೂಟರ್‌ ಶಿಕ್ಷಣ ನೀಡಲು ಕಂಪ್ಯೂಟರ್‌ಗಳಿಲ್ಲ. ಇಷ್ಟೆಲ್ಲಾ ಕೊರತೆ ಇದ್ದರೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಮಸ್ಯೆಯಾಗದಂತೆ ಇರುವ ಶಿಕ್ಷಕರೇ  ಇತರ ವಿಷಯಗಳನ್ನೂ ಬೋಧಿಸುತ್ತಿದ್ದೇವೆ ಎನ್ನುತ್ತಾರೆ ಮುಖ್ಯಶಿಕ್ಷಕ ಷಡಕ್ಷರಿ ಹಿರೇಮಠ.

ಇಲ್ಲಿ ಮಾಡುತ್ತಾ ಕಲಿ ಎಂಬ ಮಹಾತ್ಮ ಗಾಂಧೀಜಿ ಅವರ ತತ್ವ ಅಕ್ಷರಶಃ ಪಾಲನೆ ಆಗುತ್ತಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ವಯಸ್ಸಿಗೆ ಮೀರಿ ಭಾರದ ಶಾಲಾ ಬ್ಯಾಗ್‌ನ್ನು ಹೊತ್ತುಕೊಂಡು ಶಾಲೆಗೆ ಬರುವಷ್ಟರಲ್ಲಿ ಸುಸ್ತಾಗುತ್ತಾರೆ. ಇದಕ್ಕೆ ಅಪವಾದ ಎಂಬಂತೆ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ಭಾರವನ್ನು ಹೊರಿಸದೆ ಸಂತಸ, ಸ್ವ–ವೇಗ, ಬಹುವರ್ಗ, ಬಹುಹಂತದ ಕಲಿಕೆ, ಸ್ವಕಲಿಕೆ ಎಂಬ ಐದು ತತ್ವಗಳನ್ನು ಆಧಾರವಾಗಿಟ್ಟುಕೊಂಡು ಗುಣಾತ್ಮಕ ಶಿಕ್ಷಣದ ಅಡಿ ನಲಿ–ಕಲಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ನಲಿ–ಕಲಿಯಲ್ಲಿ 27 ಮಕ್ಕಳು ಇದ್ದಾರೆ. ನಲಿ–ಕಲಿ ಶಿಶು ಮತ್ತು ಶಿಕ್ಷಕ ಸ್ನೇಹಿಯಾಗಿದೆ. ಮಕ್ಕಳಿಗೆ ಚಟುವಟಿಕೆ ಆಧಾರಿತವಾಗಿ, ಅವರ ಕಲಿಕಾ ವೇಗಕ್ಕನುಗುಣವಾಗಿ ಕಲಿಸಲು ಸಹಕಾರಿಯಾಗಿದೆ ಎಂದು ಶಿಕ್ಷಕಿಯರಾದ ಸುಮಾವತಿ ಭುಸಗುಂಡೆ, ಕಮಲಾ ಕರುಣೆ ವಿವರಿಸಿದರು.

ಗ್ರಾಮಸ್ಥರ ಸಹಕಾರದಿಂದ ಶಾಲೆ ಆವರಣದಲ್ಲಿ ಉದ್ಯಾನ ನಿರ್ಮಿಸಿದ್ದೇವೆ. ಪ್ರತಿನಿತ್ಯ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ಗ್ರಾಮದ ಜನರು ಶಾಲೆಗೆ ಒಂದು ಎಕರೆ ಭೂಮಿ ದಾನ ಮಾಡಿದ್ದಾರೆ. ಶಾಲೆ ಆವರಣದಲ್ಲಿ ವೇದಿಕೆ ನಿರ್ಮಿಸಿ ಕೊಟ್ಟಿದ್ದಾರೆ.  2004–05ನೇ ಸಾಲಿನಲ್ಲಿ ಶೇ 100 ರಷ್ಟು ಹಾಜರಾತಿ, ಕಲಿಕೆಗಾಗಿ ಕಲಿಕಾ ಖಾತ್ರಿ ಪ್ರಶಸ್ತಿ, 2016ರಲ್ಲಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕಣ ಅಂಗೀಕರಣ ಪರಿಷತ್‌ ವತಿಯಿಂದ ‘ಬಿ’ ಗ್ರೇಡ್‌ ಲಭಿಸಿದೆ. 2016 ರಲ್ಲಿ ಬೆಳಕಿನ ಆವರ್ತಕ ಪ್ರತಿಫಲನ ವಿಷಯ ಕುರಿತು ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನ ಮಾದರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು. ಮಕ್ಕಳ ಓದುವ ಹವ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವರ್ಗಕೋಣೆ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಶಿಕ್ಷಕರು ಹೇಳುತ್ತಾರೆ.

ಶಿಕ್ಷಕರು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸಂಬಂಧಪಟ್ಟವರು ಶೀಘ್ರ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗುವ ನಿಟ್ಟಿನಲ್ಲಿ ಶಿಕ್ಷಕರು, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್‌ ಕೊರತೆ ನೀಗಿಸಬೇಕು. ಬಿರುಕು ಬಿಟ್ಟಿರುವ ಬಿಸಿಯೂಟದ ಕೋಣೆ ನೆಲ ದುರಸ್ತಿ ಮಾಡಬೇಕು ಎಂದು ಪಾಲಕರು ಒತ್ತಾಯಿಸುತ್ತಾರೆ.

* * 

ಮಕ್ಕಳ ಸಂಖ್ಯೆ ಹೆಚ್ಚಿಸಲು ಗ್ರಾಮಸ್ಥರ ಸಹಕಾರದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಅಕ್ಕಪಕ್ಕದ ಹಳ್ಳಿಗಳ್ಳಿಗೆ ಶಾಲಾ ವಾಹನ ಕಳುಹಿಸಲಾಗುವುದು ಷಡಕ್ಷರಿ ಹಿರೇಮಠ, ಮುಖ್ಯಶಿಕ್ಷಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry