ಕಬಡ್ಡಿ ಗಲಾಟೆ; ನಟ ಭರತ್‌ ಮೇಲೆ ಹಲ್ಲೆ

7

ಕಬಡ್ಡಿ ಗಲಾಟೆ; ನಟ ಭರತ್‌ ಮೇಲೆ ಹಲ್ಲೆ

Published:
Updated:
ಕಬಡ್ಡಿ ಗಲಾಟೆ; ನಟ ಭರತ್‌ ಮೇಲೆ ಹಲ್ಲೆ

ಬೆಂಗಳೂರು: ಕಬಡ್ಡಿ ಟೂರ್ನಿ ವೇಳೆ ಎರಡು ತಂಡಗಳ ಆಟಗಾರರ ನಡುವೆ ಗಲಾಟೆ ನಡೆದು ಚಿತ್ರನಟ ಭರತ್ (20) ಮೇಲೆ ಎದುರಾಳಿ ಗುಂಪಿನವರು ಹಲ್ಲೆ ನಡೆಸಿದ್ದಾರೆ.

ಅನ್ನಪೂರ್ಣೇಶ್ವರಿನಗರದ ಬಿಬಿಎಂಪಿ ಪಾರ್ಕ್‌ನಲ್ಲಿ ಜ.28ರಂದು ಸ್ಥಳೀಯ ಯುವಕರು ಕಬಡ್ಡಿ ಟೂರ್ನಿ ಆಯೋಜಿಸಿದ್ದರು. ಭರತ್ ‘ಸೆವೆನ್‌ ಸ್ಟಾರ್ಸ್‌’ ಎಂಬ ತಂಡದಲ್ಲಿ ಆಡುತ್ತಿದ್ದರು.

ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಭರತ್ ತಂಡ, ಫೈನಲ್‌ನಲ್ಲಿ ಆಯೋಜಕರ ತಂಡದ ವಿರುದ್ಧವೂ ವಿಜೇತವಾಯಿತು. ಆಗ ಎದುರಾಳಿ ತಂಡದವರು, ‘ಆಟ ಸರಿಯಾಗಿ ನಡೆಯಲಿಲ್ಲ.

ಅಂಪೈರ್ ತಪ್ಪು ನಿರ್ಣಯಗಳನ್ನು ನೀಡಿದ್ದಾರೆ. ಹೀಗಾಗಿ, ಹೊಸದಾಗಿ ಪಂದ್ಯ ನಡೆಯಬೇಕು’ ಎಂದು ಜಗಳ ಪ್ರಾರಂಭಿಸಿದ್ದಾರೆ.

ಈ ವಿಚಾರವಾಗಿ ಎರಡು ತಂಡಗಳ ನಡುವೆ ವಾಗ್ವಾದ ಶುರುವಾಗಿ, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಆಗ ಕೃಷ್ಣ ಅಲಿಯಾಸ್ ಕಿಟ್ಟಿ, ನಂದನ್ ಹಾಗೂ ಪ್ರೇಮ್ ಎಂಬುವರು ಭರತ್‌ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.

‘ಭರತ್ ತಾಯಿ ಜೆ.ಚಂದ್ರಕಲಾ ದೂರು ಕೊಟ್ಟಿದ್ದು, ಕೊಲೆಯತ್ನ (ಐಪಿಸಿ 307), ಹಲ್ಲೆ (323), ಅಕ್ರಮ ಬಂಧನ (341), ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (504), ಜೀವ ಬೆದರಿಕೆ (506ಬಿ) ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಅನ್ನಪೂರ್ಣೇಶ್ವರಿನಗರ ಪೊಲೀಸರು ತಿಳಿಸಿದ್ದಾರೆ.

ಎರಡು ಚಿತ್ರಗಳಲ್ಲಿ ನಾಯಕ: ಕೆಲ ಚಿತ್ರಗಳಲ್ಲಿ ಸಹ ಕಲಾವಿದರಾಗಿ ನಟಿಸಿದ್ದ ಭರತ್, ಈಗ ತಮ್ಮ ತಾಯಿ ನಿರ್ದೇಶಿಸುತ್ತಿರುವ ‘18 ಪ್ಲಸ್‌’ ಹಾಗೂ ‘ಚಿಲಮ್’ ಎಂಬ ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಚಂದ್ರಕಲಾ, ‘ಭರತ್‌ಗೆ ಹಾಕಿ ಬ್ಯಾಟ್‌ಗಳಿಂದ ಹೊಡೆದಿದ್ದಾರೆ. ಮುಖ ಊದಿಕೊಂಡಿದೆ. ಹಲ್ಲೆಕೋರರು ಬೈಕ್‌ಗಳಲ್ಲಿ ಮಚ್ಚುಲಾಂಗುಗಳನ್ನೂ ಇಟ್ಟುಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಮುಂದೆ ಏನಾಗುತ್ತದೋ ಎಂಬ ಆತಂಕದಲ್ಲೇ ದಿನ ದೂಡುತ್ತಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry