ಸೋಮವಾರ, ಡಿಸೆಂಬರ್ 9, 2019
21 °C

ಬಾಲಭವನ ಉದ್ಯಾನಕ್ಕೆ ಹೊಸ ಪೋಷಾಕು

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಬಾಲಭವನ ಉದ್ಯಾನಕ್ಕೆ ಹೊಸ ಪೋಷಾಕು

ಚಿತ್ರದುರ್ಗ: ನಗರದ ಬಾಲಭವನದ ಆವರಣದಲ್ಲಿ ಹೊಸ ಉಯ್ಯಾಲೆ, ಮಕ್ಕಳು ಹತ್ತಿ– ಇಳಿಯುವ ಎಬಿಸಿಡಿ ಆಟಿಕೆಗಳು, ಬಂಡೆಗಳ ರಾಶಿಗೆ ಬಣ್ಣದ ಮೆರುಗು... ವೃತ್ತಾಕಾರದ ಪೈಪುಗಳಲ್ಲಿ ಚಿಮ್ಮುವ ನೀರು...

ಹೌದು, ಬಾಲಭವನದ ಅಂಗಳದಲ್ಲಿ ಮಕ್ಕಳ ಉದ್ಯಾನಕ್ಕೆ ‘ಹೊಸ ಪೋಷಾಕು’ ತೊಡಿಸಲಾಗಿದೆ. ಮುರಿದು ಹೋಗಿದ್ದ ಹಳೆಯ ಆಟಿಕೆಗಳನ್ನು ತೆಗೆದು, ಹೊಸ ಆಟಿಕೆಗಳನ್ನು ಜೋಡಿಸಲಾಗಿದೆ. ಗೋಡೆಯ ಮೇಲೆ ಬಣ್ಣದ ಬಣ್ಣದ ಮಕ್ಕಳ ಚಿತ್ರಗಳು ಅವತರಿಸಿವೆ. ಉದ್ಯಾನದ ನಡುವಿನ ಪುಟ್ಟ ಪುಟ್ಟ ಬಂಡೆಗಳ ರಾಶಿಯೂ ಬಣ್ಣದಲ್ಲಿ ಮಿಂದೆದ್ದಿವೆ. ಅವುಗಳ ಮೇಲೆ ಹೊಸ ಹೊಸ ಶೀರ್ಷಿಕೆಗಳನ್ನು ಬರೆಸಲಾಗಿದೆ.

ಉದ್ಯಾನದ ನಡುವಿನ ನೀರಿನ ಕಾರಂಜಿಯಿಂದ ಬಣ್ಣದ ಬೆಳಕಿನಲ್ಲಿ ನೀರು ಚಿಮ್ಮುತ್ತಿದೆ. ಜತೆಗೆ ಸಂಗೀತವೂ ಸಂಯೋಜನೆಗೊಂಡಿದೆ. ಮೀನು ಸಾಕಣೆಯ ಅಕ್ವೇರಿಯಂ, ಲೋಟಸ್ ಪಾಂಡ್ ಉದ್ಯಾನದ ಅಂದ ಹೆಚ್ಚಿಸಿದೆ.

ಉದ್ಯಾನದ ತುದಿಯಲ್ಲಿ ಪುಟ್ಟದೊಂದು ಪ್ರಾಣಿ ಸಂಗ್ರಹಾಲಯವಿದೆ. ಲವ್ ಬರ್ಡ್ಸ್, ಗಿಳಿ, ಮೊಲ, ಪಾರಿವಾಳದಂತಹ ಪಕ್ಷಿಗಳನ್ನ ಬಿಡಲಾಗಿದೆ. ಪೋಷಕರು

ಸಂಜೆಯ ವಿಹಾರದೊಂದಿಗೆ ಮಕ್ಕಳೊಂದಿಗೆ ಈ ಉದ್ಯಾನಕ್ಕೆ ಬಂದು ವಿಹರಿಸಬಹುದು. ಮಕ್ಕಳನ್ನೂ ಆಟವಾಡಿಸಬಹುದು.

ನವೀಕೃತಗೊಂಡ, ಹೊಸ ಪೋಷಾಕಿನೊಂದಿಗೆ ಕಂಗೊಳಿಸುತ್ತಿರುವ ಉದ್ಯಾನದಲ್ಲಿ ಆಟವಾಡಲು ಪ್ರತಿ ವ್ಯಕ್ತಿಗೆ ₹ 5 ಶುಲ್ಕ ನಿಗದಿಪಡಿಸಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಟಿಕೆಟ್ ಕೇಂದ್ರವನ್ನು ತೆರಯಲಾಗಿದೆ. ’ಬಾಲಭವನದ ನಿರ್ವಹಣೆಗೆ ಪ್ರತ್ಯೇಕ ಅನುದಾನವಿಲ್ಲ. ಪ್ರವೇಶ ಶುಲ್ಕದಿಂದಲೇ ಆವರಣದ ನಿರ್ವಹಣೆ ಮಾಡುತ್ತೇವೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ್.

ಸಿಬ್ಬಂದಿಯ ಆಸಕ್ತಿಯಿಂದ ಅರಳಿದೆ: ಉದ್ಯಾನ ನವೀಕರಣಕ್ಕೆ ₹5.30 ಲಕ್ಷ ವೆಚ್ಚವಾಗಿದೆ. ಸರ್ಕಾರದ ಅನುದಾನ ವಾಗಿ ₹2.67 ಲಕ್ಷ ದೊರೆತಿದೆ. ಉಳಿದ ಹಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 105 ಸಿಬ್ಬಂದಿ ಒಂದೊಂದು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.

’ಒಬ್ಬೊಬ್ಬರು ಒಂದೊಂದು ಕೊಡುಗೆ ನೀಡಿದ್ದಾರೆ. ಸಿಡಿಪಿಒಗಳು ಉದ್ಯಾನದಲ್ಲಿ ದೀಪಗಳನ್ನು ಹಾಕಿಸಿದ್ದಾರೆ. ನಾನು ಈ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಸಿದ್ದೇನೆ. ಹೀಗೆ ನಮ್ಮ ಇಲಾಖೆಯ ಎಲ್ಲ ಸಿಬ್ಬಂದಿಯೂ ಈ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸಿಬ್ಬಂದಿಯ ಆಸಕ್ತಿಯಿಂದಲೇ ಈ ಉದ್ಯಾನದಲ್ಲಿ ಇಷ್ಟು ಅಭಿವೃದ್ದಿ ಕಾರ್ಯಗಳಾಗಿದೆ’ ಎಂದು ರಾಜಾನಾಯ್ಕ್ ವಿವರಿಸುತ್ತಾರೆ.

ಬಾಲಭವನದ ಆವರಣದಲ್ಲಿ ಸರ್ಕಾರದ ‘ಸಖಿ’ ಯೋಜನೆಯಡಿ 5 ಹಾಸಿಗೆಯ ವಿಶೇಷ ಚಿಕಿತ್ಸಾಲಯ ತೆರೆಯ ಲಾಗುತ್ತಿದೆ. ಈ ಕೇಂದ್ರ ಈಗ ಜಿಲ್ಲಾ ಆಸ್ಪತ್ರೆ ಯಲ್ಲಿದ್ದು, ಅದನ್ನು ಇಲ್ಲಿಗೆ ವರ್ಗಾಯಿಸಲಾಗುತ್ತಿದೆ ಎನ್ನುತ್ತಾರೆ ರಾಜಾನಾಯ್ಕ.

ಉದ್ಯಾನವನ್ನು ಬಾಲಭವನದ ಇಬ್ಬರು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಇದನ್ನು ಮತ್ತಷ್ಟು ಮಕ್ಕಳ ಸ್ನೇಹಿಯಾಗಿ ಮಾಡಬೇಕು ಎಂಬ ಉದ್ದೇಶವಿದೆ ಎನ್ನುತ್ತಾರೆ ಇಲಾಖೆಯ ಸಿಬ್ಬಂದಿ.

ಚಿತ್ರದುರ್ಗ: ಬಾಲಭವನದ ಆವರಣದಲ್ಲಿ ನವೀಕೃತಗೊಂಡಿರುವ ಉದ್ಯಾನವನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಉದ್ಘಾಟಿಸಿದರು.

ಬಾಲಭವನದ ಮಕ್ಕಳು ಸಚಿವರಿಗೆ ಸ್ವಾಗತ ಕೋರಿದರು. ನಂತರ ಸಚಿವರು, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸಂಸದ ಬಿ.ಎನ್. ಚಂದ್ರಪ್ಪ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್. ರವೀಂದ್ರ ಗಿಡ ನೆಟ್ಟು ನೀರೆರೆದರು. ನಂತರ ನೀರಿನ ಕಾರಂಜಿ, ಲೋಟಸ್ ಪಾಂಡ್, ಪ್ರಾಣಿ ಸಂಗ್ರಹಾಲಯ ಮತ್ತು ಆಟಿಕೆಗಳನ್ನು ವೀಕ್ಷಿಸಿದರು. ಅಂಗವಿಕಲ ಕಲ್ಯಾಣಾಧಿಕಾರಿ ವೈಶಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)