ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್ 2018: ಮಧ್ಯಮ ವರ್ಗದವರಿಗೆ ಸಿಕ್ಕಿದ್ದೇನು?

Last Updated 1 ಫೆಬ್ರುವರಿ 2018, 13:28 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ, ಗ್ರಾಮೀಣ ಅಭಿವೃದ್ದಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಂಎಸ್ಎಂಇ)  ಮತ್ತು ಮೂಲ ಸೌಕರ್ಯ ವಲಯಕ್ಕೆ ಉತ್ತೇಜನ ನೀಡುವಂತ ಬಜೆಟ್‍ನ್ನು  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ದೇಶದ ಆರ್ಥಿಕತೆಯನ್ನು ಸದೃಢಗೊಳಿಸಲು ಈ ಬಜೆಟ್‍‍ನಲ್ಲಿ ಒತ್ತು ನೀಡಲಾಗಿದೆ ಎಂದು ಜೇಟ್ಲಿ ಹೇಳಿದ್ದು ಬಜೆಟ್ ಬಗ್ಗೆ ಪ್ರಧಾನಿ ಮೋದಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

ನೋಟು ರದ್ದತಿ ನಿರ್ಧಾರದಿಂದಾಗಿ ನಗದು ವಹಿವಾಟು ಕಡಿಮೆಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ. ನೋಟು ರದ್ದತಿಯಿಂದಾಗಿ ದೇಶದಲ್ಲಿ ಡಿಜಿಟಲ್ ವ್ಯವಸ್ಥೆ ಸುಧಾರಣೆಯಾಗಿದೆ, ವಿದೇಶಿ ನೇರ ಹೂಡಿಕೆ ಏರಿಕೆಯಾಗಿದ್ದು, ಜಿಡಿಪಿ ಶೇ. 6.3 ರಷ್ಟಿದೆ. ಈಗಾಗಲೇ ರಫ್ತು ವಲಯದಲ್ಲಿ ಶೇ.8ರಷ್ಟು ಅಭಿವೃದ್ಧಿ ಹೊಂದಿದ್ದು, 2018-19ರ ಅವಧಿಯಲ್ಲಿ ಶೇ 15 ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದೆ ಎಂದಿದ್ದಾರೆ ಜೇಟ್ಲಿ.

ಮಧ್ಯಮ ವರ್ಗಕ್ಕೆ ಸಿಕ್ಕಿದ್ದೇನು?

ಈ ಬಜೆಟ್ ಲೆಕ್ಕಾಚಾರದ ಪ್ರಕಾರ ಮುಂಬರುವ ದಿನಗಳಲ್ಲಿ ಮೊಬೈಲ್‌ ಫೋನ್,  ಟಿ.ವಿ, ವಾಚ್,  ಪಾದರಕ್ಷೆ,  ಕಾರು,  ಚಿನ್ನ, ಬೆಳ್ಳಿ, ಕ್ರೀಡಾ ಸಾಮಗ್ರಿಗಳು,  ತರಕಾರಿ ಮೊದಲಾದವುಗಳು ದುಬಾರಿಯಾಗಲಿವೆ. ಅದೇ ವೇಳೆ ಕಚ್ಚಾ ಗೋಡಂಬಿ, ಎಲೆಕ್ಟ್ರಾನಿಕ್ ವಸ್ತುಗಳು, ಸೌರ ಫಲಕಕ್ಕೆ ಬಳಸುವ ಗಾಜು ಮೊದಲಾದುದು ಅಗ್ಗವಾಗಲಿದೆ.

2022ರಲ್ಲಿ ಎಲ್ಲರಿಗೂ ಸೂರು ಎಂಬ ಗುರಿಯನ್ನಿರಿಸಿ ಆರಂಭಗೊಂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ವಾಸಯೋಗ್ಯ ಮನೆ ಹೊಂದಿರದ ಜನರಿಗೆ ಹೊಸ ಮನೆ ನಿರ್ಮಾಣ ಮತ್ತು ಪೂರ್ಣಗೊಂಡ ಮನೆ ಅಥವಾ ಫ್ಲಾಟ್‍ಗಳನ್ನು ಖರೀದಿಸಲು ಸಬ್ಸಿಡಿಯೊಂದಿಗೆ ವಸತಿ ಸಾಲ ನೀಡಲಾಗುವುದು.

2018-19 ಆರ್ಥಿಕ ವರ್ಷದಲ್ಲಿ 51 ಲಕ್ಷ  ವಸತಿಗಳನ್ನು  ಮನೆರಹಿತರಿಗೆ ನೀಡುವುದಾಗಿ ಬಜೆಟ್‍ನಲ್ಲಿ ಹೇಳಲಾಗಿದೆ.
ವಸತಿ ರಹಿತರಿಗೆ ವಸತಿ ನಿರ್ಮಾಣಕ್ಕೆ ಬೇಕಾಗಿರುವ ಧನ ಸಹಾಯಕ್ಕಾಗಿ ಮಾತ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ (ಪಿಎಸ್‌ಯು) ಸರ್ಕಾರವೇ ಅಫೋರ್ಡೇಬಲ್ ಹೌಸಿಂಗ್ ಫಂಡ್ (ಎಎಚ್‍ಎಫ್) ಆರಂಭಿಸಲಿದೆ ಎಂದು ಜೇಟ್ಲಿ ಹೇಳಿದ್ದಾರೆ. ಅದೇ ವೇಳೆ ಸಿಮೆಂಟ್, ಕಬ್ಬಿಣ, ಲೋಹದ ವಸ್ತುಗಳಿಗೆ ಬೆಲೆ ಏರಿಕೆ ಉಂಟಾಗುವುದರಿಂದ ನಿರ್ಮಾಣ ವಲಯಕ್ಕೆ ಭಾರಿ ಹೊಡೆತ ಬೀಳಲಿದೆ.

ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ ಯಾಕೆ?
ಈ ಬಜೆಟ್‍ನಲ್ಲಿ ಜೇಟ್ಲಿ ಅವರು ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಮಾಡಿಲ್ಲ. ಅಂದಹಾಗೆ 2016-17ರ ಅವಧಿಯಲ್ಲಿ ವೇತನ ಪಡೆಯುವ 1.89 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ಈ ಮೂಲಕ ಬೊಕ್ಕಸಕ್ಕೆ  ಬಂದ ತೆರಿಗೆ ಹಣ ₹1.44 ಲಕ್ಷ ಕೋಟಿ. ಹಾಗಾದರೆ ಒಬ್ಬ ವ್ಯಕ್ತಿ ಪಾವತಿ ಮಾಡಿದ ತೆರಿಗೆ ಸರಾಸರಿ ₹76,306 ಆಗಿದೆ.

ಅದೇ ವೇಳೆ ಉದ್ಯಮಿಗಳಲ್ಲಿ 1.88 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ಸ್  ಸಲ್ಲಿಸಿದ್ದಾರೆ. ಇವರಿಂದ ಲಭಿಸಿದ ತೆರಿಗೆ ₹48,000 ಕೋಟಿ. ಹಾಗಾದರೆ ಇಲ್ಲಿ ಒಬ್ಬ ಉದ್ಯಮಿ ಪಾವತಿ ಮಾಡಿದ ಸರಾಸರಿ ಆದಾಯ ತೆರಿಗೆ ₹25,753 ಆಗಿದೆ.

ಉದ್ಯಮಿಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಚ್ಚಿನ ಮಟ್ಟದ ಆದಾಯ ತೆರಿಗೆ ಸಂಗ್ರಹವಾಗುವುದು ಸಂಬಳ ಪಡೆಯುವ ವ್ಯಕ್ತಿಗಳಿಂದಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

10 ಕೋಟಿ ಕುಟುಂಬಗಳಿಗೆ  ₹5 ಲಕ್ಷದ ವರೆಗೆ ಚಿಕಿತ್ಸಾ ಸಹಾಯ

10 ಕೋಟಿ ಕುಟುಂಬಗಳಿಗೆ ಚಿಕಿತ್ಸಾ ಸಹಾಯ ನೀಡುವುದಾಗಿ ಜೇಟ್ಲಿ ಬಜೆಟ್‍ನಲ್ಲಿ ಹೇಳಿದ್ದಾರೆ. ಬಡ ಕುಟುಂಬಗಳಿಗೆ ₹5 ಲಕ್ಷದ ವರೆಗೆ ಆರೋಗ್ಯ ಸುರಕ್ಷೆ  ಲಭಿಸಲಿರುವ ಈ ಯೋಜನೆಯಲ್ಲಿ 50 ಕೋಟಿ ಜನರಿಗೆ ಸಹಾಯ ಮಾಡಲಾಗುವುದು.

ಬಜೆಟ್‍ನಲ್ಲಿ ಆರೋಗ್ಯ ವಲಯಕ್ಕೆ ಆದ್ಯತೆ ನೀಡಿದ್ದು, ಒಂದೂವರೆ ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಚಿಂತಿಸಿದೆ. ಇದಕ್ಕಾಗಿ ₹1200 ಕೋಟಿ ಮೀಸಲಿಡಲಾಗಿದೆ. ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಪೂರೈಸುವುದಕ್ಕಾಗಿ ₹600 ಕೋಟಿ ಅನುದಾನ ನೀಡಲಾಗಿದೆ. ದೇಶದ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ಎಂಬಂತೆ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ವೈದ್ಯಕೀಯ ವೆಚ್ಚದ ತೆರಿಗೆ ವಿನಾಯಿತಿ ₹40,000ಕ್ಕೆ ಹೆಚ್ಚಳ ಮಾಡಲಾಗಿದೆ.

ಆದಾಗ್ಯೂ, ಕೆಳ ವರ್ಗ ಮತ್ತು ಮೇಲ್ವರ್ಗದ ಜನರಿಗೆ ಅನುಕೂಲವಾಗುವ ಬಜೆಟ್‍ನ್ನು ಜೇಟ್ಲಿ ಮಂಡಿಸಿದ್ದಾರೆ ಎಂಬುದು ಜನಾಭಿಪ್ರಾಯ. ಬಜೆಟ್‍ನಲ್ಲಿ ಮಧ್ಯಮ ವರ್ಗದವರಿಗೆ ಏನೂ ಸಿಕ್ಕಿಲ್ಲ ಎಂಬ ಅಭಿಪ್ರಾಯಗಳು ಜನರಿಂದ ವ್ಯಕ್ತವಾಗಿದ್ದು, ಟ್ವಿಟರ್‍‍ನಲ್ಲಿ ಪಕೋಡಾ ಬಜೆಟ್ ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT