ಬುಧವಾರ, ಡಿಸೆಂಬರ್ 11, 2019
16 °C

‘ಬ್ರಹ್ಮಾಸ್ತ್ರ’ದ ಬಬ್ಲಿ ಹುಡುಗಿ

Published:
Updated:
‘ಬ್ರಹ್ಮಾಸ್ತ್ರ’ದ ಬಬ್ಲಿ ಹುಡುಗಿ

ಮುದ್ದು ಕಂಗಳ ಈ ಬೆಡಗಿ ಚಿಕ್ಕಮಗಳೂರಿನ ರಶ್ಮಿತಾ ಜೆ. ಶೆಟ್ಟಿ. ಭರತನಾಟ್ಯ ಪ್ರವೀಣೆ, ರಾಷ್ಟ್ರಮಟ್ಟದ ಕರಾಟೆ ಪಟು. ಬಿ.ಸಿ.ಎ. ಪದವಿ ಮುಗಿಸಿ, ಸೀದಾ ನಟನೆಯ ಅಂಗಳಕ್ಕೆ ಬಂದವರು. ಆಡಿಷನ್‌ವೊಂದರಲ್ಲಿ ಭಾಗವಹಿಸುವ ಮೂಲಕ ಉದಯ ಟಿ.ವಿ.ಯ ‘ಬ್ರಹ್ಮಾಸ್ತ್ರ’ ಧಾರಾವಾಹಿಗೆ ಆಯ್ಕೆಯಾದರು.

ಧಾರಾವಾಹಿಯಲ್ಲಿ ಕಥಾ ನಾಯಕನ ತಂಗಿ ‘ಖುಷಿ’ ಹೆಸರಿನ ಪಾತ್ರಧಾರಿಯಾಗಿ ಮನೆ ಮಂದಿಗೆಲ್ಲಾ ಇಷ್ಟವಾಗುವ ಬಬ್ಲಿ ಹುಡುಗಿ ಆಗಿ ಅಭಿನಯಿಸುತ್ತಿದ್ದಾರೆ. ಸಹನೆ, ಪ್ರೀತಿ, ವಿಶ್ವಾಸ, ನಂಬಿಕೆಯ ಕುಟುಂಬದಲ್ಲಿ ಮುದ್ದಿನ ಮಗಳಾಗಿ, ಸೋದರರಿಗೆ ಪ್ರೀತಿಯ ತಂಗಿ ಆಗಿ ಮನೆ ಮಂದಿಗೆ ಕಚಗುಳಿ ಇಡುವ, ಅಣ್ಣಂದಿರೊಂದಿಗೆ ಕೋಳಿ ಜಗಳ ಮಾಡುವ ಕೀಟಲೆ ಸ್ವಭಾವದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಇನ್ನಷ್ಟು ಪಳಗುವ ಉಮೇದಿನಲ್ಲಿದ್ದಾರೆ.

ಅತ್ತೆ– ಸೊಸೆ ಕಲಹ, ತಾಯಿ-ಮಗಳ ಅನುಬಂಧ, ತ್ರಿಕೋನ ಪ್ರೇಮಕಥೆ, ಸವತಿ-ನಾದಿನಿ ಮತ್ಸರ ಇವೆಲ್ಲ ಅಂಶ ಇರುವ ಧಾರಾವಾಹಿಗಳು ಜನರ ಮೆಚ್ಚುಗೆ ಗಳಿಸಿವೆ ನಿಜ. ಆದರೆ, ‘ಬ್ರಹ್ಮಾಸ್ತ್ರ’ ಧಾರಾವಾಹಿ ಪ್ರೀತಿಗೆ... ಎನ್ನುವ ಟ್ಯಾಗ್‌ಲೈನ್ ಹೊತ್ತು ವಿಭಿನ್ನ ಚಿತ್ರಕಥೆ- ನಿರೂಪಣೆ, ಉತ್ತಮ ತಾಂತ್ರಿಕತೆ ಮೂಲಕ ಗಮನ ಸೆಳೆಯುತ್ತಿದೆ ಎನ್ನುತ್ತಾರೆ ರಶ್ಮಿತಾ.

ಭಾರತೀಯ ಪುರಾಣಗಳಲ್ಲಿ ‘ಬ್ರಹ್ಮಾಸ್ತ್ರ’ ಅಸ್ತ್ರ ಸಂಕುಲದಲ್ಲಿಯೇ ಅತ್ಯಂತ ಬಲಿಷ್ಠ ಮತ್ತು ಕೊನೆಯ ಅಸ್ತ್ರವಾಗಿರುತ್ತದೆಂದು ಪರಿಗಣಿಸಲಾಗಿದೆ. ಇದೇ ರೀತಿ ಕಥಾ ನಾಯಕಿ ಆಂಧ್ರಪ್ರದೇಶದ ತೆಲುಗು ಹುಡುಗಿ ಶಿವರಂಜನಿ ಮನೆಯವರು ಪ್ರೀತಿಯ ಬದ್ಧ ವೈರಿಗಳಾಗಿದ್ದು, ಪ್ರೀತಿಸುವ ಪ್ರೇಮಿಗಳಿಗೆ ‘ಬ್ರಹ್ಮಾಸ್ತ್ರ’ ಹೂಡುವ ಕಟುಕರಂತಿರುತ್ತಾರೆ. ಆದರೆ, ನಾಯಕ ಕನ್ನಡದ ಹುಡುಗ ಸಂತೋಷನ ಮನೆಯವರು ಪ್ರೀತಿಯಿಂದಲೇ ಎಲ್ಲರ ಮನ ಗೆಲ್ಲುವ ಗುಣದವರಾಗಿದ್ದು, ಪ್ರೀತಿಸುವ ಪ್ರೇಮಿಗಳಿಗೆ ಆಶ್ರಯ ನೀಡುವವರಾಗಿರುತ್ತಾರೆ. ಇಂತಹ ಎರಡು ರೀತಿಯ ವೈಮನಸ್ಸುಗಳ ನಡುವೆ ನಾಯಕ –ನಾಯಕಿ ಪ್ರೀತಿಯ ರೋಚಕತೆಯಲ್ಲಿ ಕಥೆ ಸಾಗುತ್ತದೆ.

ರಾಯಲಸೀಮೆಯ ರಕ್ತಸಿಕ್ತ ಕ್ರೌರ್ಯದ ಕುಟುಂಬದ ಎದುರು ಜರುಗುವ ಅನ್ಯಾಯ, ಅನಾಹುತ ಇತ್ಯಾದಿಗಳೆಲ್ಲದರ ಎದುರು ನಾಯಕ ತನ್ನ ಪ್ರೀತಿಯ ಅಸ್ತ್ರದಿಂದ ಕಟು ಹೃದಯಗಳನ್ನು ಗೆಲ್ಲುವ ಘಟನೆಗಳ ಸಾಹಸಪೂರ್ಣ, ಸ್ವಾರಸ್ಯಕರ ಮನರಂಜನೆ ಇದೆ. ಮಾಮೂಲಿ ಧಾರಾವಾಹಿಗಳನ್ನು ಮೀರಿದ ಹೊಸ ಪ್ರಯತ್ನದ ತುಡಿತ ಇದರಲ್ಲಿದೆ. ಕರ್ನಾಟಕದ ಕಿರುತೆರೆಯಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿದ್ದು, ಬಹಳ ಶ್ರಮವಹಿಸಿ ಈ ಧಾರಾವಾಹಿಯ ಚಿತ್ರೀಕರಣ ಮಾಡಲಾಗುತ್ತಿದೆ. ವೀಕ್ಷಕರಿಗೆ ಶ್ರಮ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ರಶ್ಮಿತಾ.

ನಗರ, ಗ್ರಾಮೀಣ ಪ್ರದೇಶಗಳಲ್ಲದೇ ಗಡಿನಾಡಿನ ವೀಕ್ಷಕರಿಗೂ ಈ ಧಾರಾವಾಹಿ ಭರಪೂರ ಮನರಂಜನೆ ನೀಡಲಿದೆ ಎಂಬ ವಿಶ್ವಾಸ ಅವರದ್ದು. ‌ ಸದ್ಯಕ್ಕೆ ಬೆಂಗಳೂರಿನ ನಾಗರಬಾವಿ ಅಕ್ಕನ ಮನೆಯಲ್ಲಿ ವಾಸವಾಗಿದ್ದು, ಆಗಾಗ ಫಿಶ್ ಕರಿ ಸವಿಯುವ, ಬಿಡುವಿನ ಸಮಯದಲ್ಲಿ ವಿವಿಧ ಪ್ರಕಾರದ ನೃತ್ಯದ ಅಲ್ಬಂ ವೀಕ್ಷಣೆಯಂತಹ ಹವ್ಯಾಸದೊಂದಿಗೆ ದಿನಚರಿ ಕಳೆಯುವ ಅಭ್ಯಾಸ ಅವರದ್ದು. ಓದಿಗೆ ವಿರಾಮ ನೀಡಿ, ಧಾರಾವಾಹಿ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯವ ಕನಸು ಹೊಂದಿದ್ದಾರೆ.

ಮಗಳ ಕನಸಿಗೆ ಅವರ ತಾಯಿ ಲೀಲಾವತಿ ಕೂಡ ನೀರೆರೆದು ಪೋಷಿಸುತ್ತಿದ್ದಾರೆ. ಸ್ವರಕ್ಷಣೆಗಾಗಿ ಕರಾಟೆ ಪಟುವಾಗಿಯೂ ಬೆಳೆಸಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಹಲವು ವೇದಿಕೆಗಳಲ್ಲಿ ರಶ್ಮಿತಾ ನೃತ್ಯ ಪ್ರದರ್ಶನ ನೀಡಿದ್ದಾರೆ. ಕರಾಟೆಯ ಮೈನ‌ವರೇಳಿಸುವ ಸಾಹಸ ಪ್ರದರ್ಶನಗಳಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)