ಶುಕ್ರವಾರ, ಡಿಸೆಂಬರ್ 6, 2019
24 °C
₹ 40 ಸಾವಿರದ ಸ್ಟ್ಯಾಂಡರ್ಡ್‌ ಡಿಡಕ್ಷನ್‌; ಆದಾಯ ತೆರಿಗೆಯಲ್ಲಿ ಯಾವುದೇ ವಿನಾಯ್ತಿ ಇಲ್ಲ

ವೇತನ ವರ್ಗದವರ ಮೂಗಿಗೆ ತುಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೇತನ ವರ್ಗದವರ ಮೂಗಿಗೆ ತುಪ್ಪ

ನವದೆಹಲಿ (ಪಿಟಿಐ): ಆದಾಯ ತೆರಿಗೆಗಳಲ್ಲಿ ಯಾವುದೇ ಬಗೆಯ ವಿನಾಯ್ತಿ ನೀಡಲಾಗಿಲ್ಲ. ಆದರೆ, ₹ 40 ಸಾವಿರವರೆಗಿನ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೌಲಭ್ಯವನ್ನು ಮತ್ತೆ ಜಾರಿಗೆ ತಂದಿರುವುದಷ್ಟಕ್ಕೆ ಈ ವರ್ಗ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

ವೈಯಕ್ತಿಕ ಆದಾಯ ತೆರಿಗೆದಾರರಿಗೆ ಅನ್ವಯಿಸಿ ತೆರಿಗೆ ದರ ಅಥವಾ ತೆರಿಗೆ ಹಂತಗಳಲ್ಲಿ ಯಾವುದೇ ರಿಯಾಯ್ತಿ ನೀಡಲಾಗಿಲ್ಲ. ಸಾರಿಗೆ ಭತ್ಯೆ ಮತ್ತು ಇತರೇ ವೈದ್ಯಕೀಯ ವೆಚ್ಚದ ಮರುಪಾವತಿಯಲ್ಲಿ ₹ 40 ಸಾವಿರದ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೌಲಭ್ಯವನ್ನು ಮಾತ್ರ ಒದಗಿಸಲಾಗಿದೆ.

ತೆರಿಗೆ ವಿನಾಯ್ತಿ ಪಡೆಯಲು ಯಾವುದೇ ದಾಖಲೆಗಳನ್ನು ಸಲ್ಲಿಸದಿರುವುದಕ್ಕೆ ‘ಸ್ಟ್ಯಾಂಡರ್ಡ್‌ ಡಿಡಕ್ಷನ್‌’ ಎನ್ನುತ್ತಾರೆ.

‘ತೆರಿಗೆ ಪರಿಣತರ ಪ್ರಕಾರ, ಇದೊಂದು ಬರೀ ತೋರಿಕೆಯ ಲಾಭವಷ್ಟೇ ಆಗಿದೆ. ಸದ್ಯಕ್ಕೆ ವೈದ್ಯಕೀಯ ವೆಚ್ಚದ ಮರುಪಾವತಿ  ತೆರಿಗೆ ಮುಕ್ತ ಮಿತಿ ವರ್ಷಕ್ಕೆ ₹ 15,000ಕ್ಕೆ  ಮತ್ತು ಸಾರಿಗೆ ಭತ್ಯೆ ವಿನಾಯ್ತಿ ಮಿತಿ ಪ್ರತಿ ತಿಂಗಳಿಗೆ ₹ 1,600 ಇದೆ. ಇದರಿಂದ ಈ ಎರಡೂ ಬಾಬತ್ತುಗಳಲ್ಲಿ ತೆರಿಗೆ ಮುಕ್ತ ಸಂಬಳದ ಮೊತ್ತ ₹ 34,200 ಆಗುತ್ತದೆ’ ಎಂದು ಡೆಲಾಯ್ಟ್‌ ಇಂಡಿಯಾದ ಹಿರಿಯ ನಿರ್ದೇಶಕ ಅಲೋಕ್‌ ಅಗರ್‌ವಾಲ್‌ ಅವರು ವಿಶ್ಲೇಷಿಸಿದ್ದಾರೆ.

ವೇತನ ವರ್ಗಕ್ಕೆ ಮಾತ್ರ ಒದಗಿಸಲಾಗುತ್ತಿದ್ದ ಈ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೌಲಭ್ಯವನ್ನು 2006–07ನೇ ಅಂದಾಜು ವರ್ಷದಿಂದ ಕೈಬಿಡಲಾಗಿತ್ತು. 2.5 ಕೋಟಿ ವೇತನದಾರರು ಮತ್ತು ಪಿಂಚಣಿದಾರರಿಗೆ ಇದರ ಲಾಭ ದೊರೆಯಲಿದೆ.

ಈಗ ಮತ್ತೆ ಜಾರಿಗೆ ತಂದಿರುವುದರಿಂದ ಬೊಕ್ಕಸಕ್ಕೆ ₹ 8 ಸಾವಿರ ಕೋಟಿ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.

‘ಆದಾಯ ತೆರಿಗೆ ವಿಷಯದಲ್ಲಿ ಸರ್ಕಾರ ಮೂರು ವರ್ಷಗಳಲ್ಲಿ  ಹಲವಾರು ಸಕಾರಾತ್ಮಕ ಬದಲಾವಣೆ ಮಾಡಿದೆ. ಹೀಗಾಗಿ ಈ ಬಾರಿ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ’ ’ ಎಂದು ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ವೈಯಕ್ತಿಕ ನೆಲೆಯಲ್ಲಿ ಉದ್ದಿಮೆ ವಹಿವಾಟು ನಡೆಸುವವರು, ವೇತನ ವರ್ಗಕ್ಕಿಂತ ಹೆಚ್ಚಿನ ವರಮಾನ ಗಳಿಸುತ್ತಾರೆ ಎನ್ನುವ ಭಾವನೆ ಸಮಾಜದಲ್ಲಿ ಮನೆ ಮಾಡಿದೆ. ಆದರೆ,  ತೆರಿಗೆ ದತ್ತಾಂಶ ವಿಶ್ಲೇಷಿಸಿದರೆ ವೈಯಕ್ತಿಕ ಆದಾಯ ತೆರಿಗೆಯಲ್ಲಿ ವೇತನ ವರ್ಗದ ಕೊಡುಗೆಯೇ ಹೆಚ್ಚಿಗೆ ಇರುವುದು ದೃಢಪಟ್ಟಿದೆ’ ಎಂದು ಹೇಳಿದ್ದಾರೆ.

ಬಿಲ್‌ ಸಲ್ಲಿಕೆ ಅಗತ್ಯ ಇಲ್ಲ: ಆದಾಯ ತೆರಿಗೆ ಪಾವತಿಸುವ ವೇತನದಾರರು ಮತ್ತು ಪಿಂಚಣಿದಾರರು ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೌಲಭ್ಯ ಪಡೆಯಲು  ಯಾವುದೇ ಬಿಲ್‌ ಅಥವಾ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇಲ್ಲ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಮುಖ್ಯಸ್ಥ ಸುಶೀಲ್‌ ಚಂದ್ರ ಅವರು ಹೇಳಿದ್ದಾರೆ.

ಈ ಹಿಂದೆ ತೆರಿಗೆದಾರರು ಬಿಲ್‌ ಮಂಡಿಸಿ ಪ್ರಯಾಣ ಭತ್ಯೆ ಮತ್ತು ವೈದ್ಯಕೀಯ ಭತ್ಯೆ ವಿನಾಯ್ತಿ ಪಡೆಯುತ್ತಿದ್ದರು. ಆದರೆ, ಈಗ ವ್ಯಕ್ತಿಗಳು  ಪಡೆಯುವ ಎಲ್ಲ ಭತ್ಯೆಗಳಿಗೆ ಯಾವುದೇ ಬಿಲ್‌ ಸಲ್ಲಿಸುವ ಅಗತ್ಯ ಇರುವುದಿಲ್ಲ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ವಿವರ

ಅಂದಾಜು ವರ್ಷ 2016–17

1.89 ಕೋಟಿ: ರಿಟರ್ನ್ಸ್‌ ಸಲ್ಲಿಸಿದ ವೇತನ ವರ್ಗದವರ ಸಂಖ್ಯೆ

₹ 1.44 ಲಕ್ಷ ಕೋಟಿ: ವೇತನ ವರ್ಗ ಪಾವತಿಸಿದ ಒಟ್ಟು ತೆರಿಗೆ

₹ 76,306: ತೆರಿಗೆದಾರರು ಪಾವತಿಸಿದ ಸರಾಸರಿ ತೆರಿಗೆ

****

1.88 ಕೋಟಿ:ರಿಟರ್ನ್ಸ್‌ ಸಲ್ಲಿಸಿದ ವೈಯಕ್ತಿಕ ಉದ್ದಿಮೆದಾರರು / ವೃತ್ತಿನಿರತರು

₹ 48,000 ಕೋಟಿ: ಈ ವರ್ಗ ಪಾವತಿಸಿದ ತೆರಿಗೆ ಮೊತ್ತ

₹ 25,753: ಸರಾಸರಿ ತೆರಿಗೆ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು