ಮಂಗಳವಾರ, ಡಿಸೆಂಬರ್ 10, 2019
26 °C
ರಾಹುಲ್ ಗಾಂಧಿ ನೇತೃತ್ವದ ತಂಡದ ಮೇಲುಸ್ತುವಾರಿಯಲ್ಲಿ ಪ್ರಚಾರ ತಂತ್ರ

ಕಾಂಗ್ರೆಸ್‌ ಪ್ರಚಾರಕ್ಕೆ ತಂತ್ರಜ್ಞಾನದ ಹೊಸ ರಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಪ್ರಚಾರಕ್ಕೆ ತಂತ್ರಜ್ಞಾನದ ಹೊಸ ರಂಗು

ಬೆಂಗಳೂರು: ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಪ್ರಚಾರಕ್ಕೆ ಹೊಸ ರಂಗು ನೀಡಲು ಕಾಂಗ್ರೆಸ್ ಮುಂದಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ತಂಡದ ಮೇಲುಸ್ತುವಾರಿಯಲ್ಲಿ ಚುನಾವಣಾ ಪ್ರಚಾರದ ಕಾರ್ಯತಂತ್ರ ರೂಪಿಸಲಾಗಿದೆ. ಇದನ್ನು ಅನುಷ್ಠಾನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತಳಮಟ್ಟದ ಕಾರ್ಯಕರ್ತರವರೆಗೂ ವಿವಿಧ ಜವಾಬ್ದಾರಿ ನೀಡಲಾಗಿದೆ. ದತ್ತಾಂಶ ವಿಶ್ಲೇಷಣಾ ತಂತ್ರಜ್ಞಾನ, ಮೊಬೈಲ್‌ ಆ್ಯಪ್‌ಗಳನ್ನು ಬಳಸಿ ಪ್ರಚಾರ ಮಾಡುವ ಹೊಸ ಮಾದರಿಗಳನ್ನು ರೂಪಿಸಲಾಗಿದೆ.

ಆಕಾಂಕ್ಷಿ ಅಭ್ಯರ್ಥಿಯ ತಲಾ 10 ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಪಟ್ಟಿ ಮಾಡುವುದು ಹಾಗೂ ‘ಒಂದು ಕುಟುಂಬ, ಒಂದು ಪುಟ’ ಎಂಬ ಪರಿಕಲ್ಪನೆಯಡಿ ಮತದಾರರ ಪಟ್ಟಿಯ ಒಂದು ಪುಟದ ಜವಾಬ್ದಾರಿಯನ್ನು ಒಬ್ಬ ಕಾರ್ಯಕರ್ತನಿಗೆ ನೀಡಲಾಗಿದೆ. ಅಭ್ಯರ್ಥಿಯು ಮತದಾರರ ಮಧ್ಯೆ ಎಷ್ಟು ಪ್ರಭಾವಶಾಲಿ, ವಾಟ್ಸ್ ಆ್ಯಪ್‌ ಮತ್ತು ಸಾಮಾಜಿಕ ಜಾಲತಾಣಗಳನ್ನು ಎಷ್ಟು ಯಶಸ್ವಿಯಾಗಿ ಬಳಸಿಕೊಂಡಿದ್ದಾನೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ನೀಡುವಂತೆ ಕಾರ್ಯಕರ್ತನಿಗೆ ಸೂಚಿಸಲಾಗಿದೆ.

ಸಾಧನೆ, ಪ್ರಭಾವ ಕುರಿತು 15 ನಿಮಿಷ ಅವಧಿಯ ವಿಡಿಯೊ ಸಿದ್ಧಪಡಿಸಬೇಕು. ಪ್ರಚಾರ ಕಾರ್ಯಕ್ರಮಗಳನ್ನು ಚಿತ್ರೀಕರಿಸಿದ ಫೇಸ್‌ ಬುಕ್‌ ಲೈವ್‌ ವಿಡಿಯೊಗಳನ್ನು ಎಷ್ಟು ಸಂಖ್ಯೆಯಲ್ಲಿ ಅಪ್ ಲೋಡ್ ಮಾಡಿದ್ದೀರಿ, ಕಳುಹಿಸಿರುವ ಎಸ್‌ಎಂಎಸ್‌ ಹಾಗೂ ವಾಟ್ಸ್‌ ಆ್ಯಪ್ ಗ್ರೂಪ್‌ ಮಾಡಿರುವ ವಿವರಗಳನ್ನು ನೀಡಬೇಕು ಎಂದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗೆ ಸೂಚನೆ ನೀಡಲಾಗಿದೆ.‌

‘ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿ, ಹುಮ್ಮಸ್ಸಿನಿಂದ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದೇವೆ. ನಗರ ಪ್ರದೇಶಗಳ ಬಹುತೇಕ ಅಭ್ಯರ್ಥಿಗಳು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಅಭ್ಯರ್ಥಿಗಳು ಹಾಗೂ ಬೂತ್ ಮಟ್ಟದ ಕಾರ್ಯಕರ್ತರಿಗೆ ಸಮಿತಿ ಈ ಕಾರ್ಯಕ್ರಮಕ್ಕೆ ನೆರವು ನೀಡಲಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಹಾಗೂ ವಿಧಾನಪರಿಷತ್ತಿನ ಸದಸ್ಯರಾದ ರಿಜ್ವಾನ್ ಅರ್ಷದ್ ‘ಪ್ರಜಾವಾಣಿ’ಗೆ ತಿಳಿಸಿದರು.

***

ಮತದಾರರ ಬೇಕು ಬೇಡಗಳನ್ನು ಸಂಗ್ರಹಿಸಲು ಬೂತ್ ಮಟ್ಟದಲ್ಲಿ ಮೊಬೈಲ್ ಆ್ಯಪ್ ಬಳಸಲಾಗುತ್ತಿದೆ. ಕ್ಷೇತ್ರವಾರು ನಿರ್ದಿಷ್ಟ ಪ್ರಚಾರ ಕಾರ್ಯತಂತ್ರ ರೂಪಿಸಲು ಇದು ಸಹಕಾರಿ

- ಡಿ.ಕೆ. ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ

ಪ್ರತಿಕ್ರಿಯಿಸಿ (+)