ಬುಧವಾರ, ಡಿಸೆಂಬರ್ 11, 2019
20 °C

ದೊಡ್ಡರಸಿನಕೆರೆ: ಸಪ್ತ ದೇಗುಲ ಉದ್ಘಾಟನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡರಸಿನಕೆರೆ: ಸಪ್ತ ದೇಗುಲ ಉದ್ಘಾಟನೆ ಇಂದು

ಭಾರತಿನಗರ: ಸಮೀಪದ ದೊಡ್ಡರಸಿನಕೆರೆ ‘ದೇವಾಲಯಗಳ ತವರೂರು’ ಎಂದೇ ಖ್ಯಾತಿ ಹೊಂದಿದೆ. ಗ್ರಾಮದಲ್ಲಿ 25ಕ್ಕೂ ಹೆಚ್ಚು ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯಗಳಿರುವುದೇ ಇದಕ್ಕೆ ಕಾರಣ.

ಸರ್ವ ಜನಾಂಗದ ಭಾವೈಕ್ಯಕ್ಕೆ ಗ್ರಾಮದ ದೇವಾಲಯಗಳು ನಾಂದಿ ಹಾಡಿವೆ ಎಂದರೆ ತಪ್ಪಾಗಲಾರದು. ಗ್ರಾಮದ ಕೀರ್ತಿಯನ್ನು ಮತ್ತಷ್ಟು ಬೆಳಗಿಸಲು ಗ್ರಾಮದ ಅಂಗಳದಲ್ಲಿ ಜೀರ್ಣೋದ್ಧಾರ ಗೊಂಡು ಕಂಗೊಳಿಸುತ್ತಿರುವ ಪುರಾತನ ಇತಿಹಾಸವುಳ್ಳ ಸಪ್ತ ದೇಗುಲಗಳು ಫೆ. 2ರಂದು ಲೋಕಾರ್ಪಣೆಗೊಳ್ಳುತ್ತಿವೆ.

ಗ್ರಾಮ ದೇವತೆ ಕಾಳಿಕಾಂಬಾದೇವಿ, ಆಂಜನೇಯ, ಈಶ್ವರ, ಶನಿಮಹಾತ್ಮ, ರಾಮಮಂದಿರ, ವೀರಭದ್ರ ಹಾಗೂ ನವಗ್ರಹ ದೇವಾಲಯಗಳು ಪುರಾತನ ಇತಿಹಾಸವುಳ್ಳ ಸಪ್ತ ದೇವಾಲಯಗಳು. ಈ ದೇವಾಲಯಗಳನ್ನು ಸರ್ಕಾರದ ಅನುದಾನದ ಜತೆ ಶಾಸಕ ಡಿ.ಸಿ.ತಮ್ಮಣ್ಣ ತಮ್ಮ ಸ್ವಂತ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿಸಿದ್ದಾರೆ.

ಜೀರ್ಣೋದ್ಧಾರ ಗೊಂಡಿರುವ ದೇವಾಲಯಗಳು ಹಲವು ವೈಶಿಷ್ಟ್ಯ ಗಳನ್ನು ಹೊಂದಿವೆ. ದೇಗುಲಗಳನ್ನು ಗ್ರಾನೈಟ್‌ನಿಂದ ಮರು ನಿರ್ಮಾಣ ಮಾಡಲಾಗಿದೆ. ವಿಶಾಲವಾದ ಪ್ರಾಂಗಣಗಳನ್ನು ದೇವಾಲಯಗಳು ಹೊಂದಿವೆ.

ಕಲ್ಲಿನ ಕಂಬಗಳು, ಆಕರ್ಷಕ ಗರ್ಭಗುಡಿ, ನೆಲಹಾಸು ಗಮನ ಸೆಳೆಯುತ್ತವೆ. ಕಲ್ಲಿನಿಂದ ಕೂಡಿರುವ ಅಪರೂಪದ ಕೆತ್ತನೆಯುಳ್ಳ ಮೂರ್ತಿಗಳು, ಶಿಲ್ಪಕಲಾಕೃತಿಗಳು ದೇವಾಲಯದ ಸೌಂದರ್ಯ ಹೆಚ್ಚಿಸಿವೆ. ದೇವಾಲಯಗಳಿಗೆ ಅತ್ಯುತ್ತಮ ಗುಣಮಟ್ಟದ, ಬಿಸಿಲು ಮಳೆಗೆ ಮಾಸದ ಪೇಂಟ್‌ ಮಾಡಿಸಲಾಗಿದೆ. ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತವೆ.

‘ದೇವಾಲಯಗಳ ಜೀರ್ಣೋ ದ್ಧಾರಕ್ಕೆ ನನ್ನ ಮಾತೃಶ್ರೀ ಕಾಡಮ್ಮ ಅವರ ಪ್ರೇರಣೆ, ಗ್ರಾಮಸ್ಥರ ಸಹಕಾರ ಇದೆ. ಗ್ರಾಮದ ದೇವಾಲಯಗಳು ಹಲವು ಗ್ರಾಮಗಳ ಜನರ ಆರಾಧ್ಯ ದೈವವೂ ಆಗಿದೆ. ಜನರ ಸಾಮರಸ್ಯಕ್ಕೆ ನಾಂದಿ ಹಾಡಿದೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳುತ್ತಾರೆ.

ದೇಗುಲಗಳ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದೆ. 30 ಸಾವಿರಕ್ಕೂ ಹೆಚ್ಚು ಮಂದಿ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಯಕ್ರಮ ಉದ್ಘಾಟನೆ

ಶುಕ್ರವಾರ ಬೆಳಿಗ್ಗೆ 11ಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜೀರ್ಣೋದ್ಧಾರಗೊಂಡಿರುವ ದೇಗುಲಗಳನ್ನು ಉದ್ಘಾಟಿಸಿ, ಕಳಸ ಪ್ರತಿಷ್ಠಾಪನೆ ನೆರವೇರಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ, ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಚಿವ ಅಂಬರೀಷ್, ವಿಧಾನ ಪರಿಷತ್ ಉಪಾಸಭಾಪತಿ ಮರಿತಿಬ್ಬೇಗೌಡ, ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಭಾಗವಹಿಸುವರು.

ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ಶಾಸಕ ಡಿ.ಸಿ.ತಮ್ಮಣ್ಣ ಅಧ್ಯಕ್ಷತೆ ವಹಿಸುವರು.

* * 

ದೇವಾಲಯಗಳು ಜನರಲ್ಲಿ ಶಾಂತಿ, ನೆಮ್ಮದಿ, ಪರಸ್ಪರ ಬಾಂಧವ್ಯ, ಸಾಮರಸ್ಯ ತರುವ ತಾಣ. ದೇವರಲ್ಲಿನ ಭಕ್ತಿ ಭಾವನೆಗಳು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತವೆ

ಡಿ.ಸಿ.ತಮ್ಮಣ್ಣ, ಶಾಸಕ

ಪ್ರತಿಕ್ರಿಯಿಸಿ (+)