ಶುಕ್ರವಾರ, ಡಿಸೆಂಬರ್ 6, 2019
26 °C

ಏಕ ಸಂಸ್ಕೃತಿ ಏಕಚಕ್ರಾಧಿಪತ್ಯ ಬಹಳ ಅಪಾಯಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕ ಸಂಸ್ಕೃತಿ ಏಕಚಕ್ರಾಧಿಪತ್ಯ ಬಹಳ ಅಪಾಯಕಾರಿ

ಪ್ರೊ.ಎಸ್.ಜಿ.ಸಣ್ಣಗುಡ್ಡಯ್ಯ ವೇದಿಕೆ (ತುಮಕೂರಿನ ಗಾಜಿನಮನೆ): ಏಕ ದೇಶ, ಏಕ ಭಾಷೆ, ಏಕ ಸಂಸ್ಕೃತಿ, ಏಕ ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ಅಶಾಂತಿ ಬಿತ್ತುತ್ತಿರುವ ರಾಜಕೀಯ ಬೆಳವಣಿಗೆ ಒಕ್ಕೂಟ ವ್ಯವಸ್ಥೆ ಅಪಾಯದಂಚಿಗೆ ತಳ್ಳುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ

ನದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತವು ಹಲವು ರಾಜ್ಯಗಳನ್ನೊಳಗೊಂಡ ಗಣತಂತ್ರ ವ್ಯವಸ್ಥೆಯ ಒಕ್ಕೂಟವಾಗಿದೆ. ಇದಕ್ಕೆ ಅನುಸಾರವಾಗಿ ಸಂವಿಧಾನ ಎಲ್ಲ ರಾಜ್ಯಗಳಿಗೂ ರಾಜ್ಯ ಭಾಷೆಗಳಿಗೂ ಸಮಾನ ಅವಕಾಶ ನೀಡಿದಂತೆ ಅವುಗಳ ಅಸ್ಮಿತೆಯನ್ನು ಗೌರವಿಸಿದೆ ಎಂದರು.

ಬಹುತ್ವಗಳನ್ನು ಅಮಾನ್ಯಗೊಳಿಸುತ್ತಾ ಏಕ ಸಂಸ್ಕೃತಿಯ ಏಕಚಕ್ರಾಧಿಪತ್ಯವನ್ನು ಸ್ಥಾಪಿಸುವ ಸರ್ವಾಧಿಕಾರಿ ಧೋರಣೆಯ ಬೆಳವಣಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವೇಗ ಪಡೆದಿದೆ. ಇದಕ್ಕೆ ಉದಾಹರಣೆಗಳೆಂದರೆ ಬ್ಯಾಂಕುಗಳಿಗೆ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶ ನೀಡಿರುವುದು ಎಂದು ಹೇಳಿದರು.

2015ರಲ್ಲಿ ಕರೆದ 700 ಹುದ್ದೆಗಳಲ್ಲಿ ಕನ್ನಡಿಗರಿಗೆ ಧಕ್ಕಿದ್ದು ಕೇವಲ 380, 2ನೇ ಕಂತಿನಲ್ಲಿ 2017ರಲ್ಲಿ ನಡೆದ 9000 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಕನ್ನಡಿಗರು ಆಯ್ಕೆಯಾಗಿದ್ದು ಕೇವಲ 440 ಅಭ್ಯರ್ಥಿಗಳು ಮಾತ್ರ. ಬ್ಯಾಂಕುಗಳ ತವರುಮನೆ ಎಂದೆ ಕರೆಸಿಕೊಂಡ ಕರ್ನಾಟಕದಲ್ಲಿಯೇ ಕನ್ನಡಿಗರಿಗೇ ಅವಕಾಶವಿಲ್ಲದೇ ಉದ್ಯೋಗ ವಂಚಿತರಾಗಬೇಕಾದ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಲವಂತದ ಹಿಂದಿ ಹೇರಿಕೆಯ ಪರಿಣಾಮದಲ್ಲಿ ವಿದ್ಯೆ, ಉದ್ಯೋಗಗಳಿಂದ ಕರ್ನಾಟಕ, ತಮಿಳು ನಾಡು, ಆಂಧ್ರಪ್ರದೇಶ, ಒರಿಸ್ಸಾ, ತೆಲಂಗಾಣ, ಕೇರಳ ಹೀಗೆ ದಕ್ಷಿಣದ ರಾಜ್ಯಗಳು ತಮ್ಮ ಭಾಷೆಯ ಬದುಕಿನ ಉಳುವಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ದ್ರಾವಿಡ ಭಾಷೆಗಳ ಒಕ್ಕೂಟವೊಂದರ ಅಗತ್ಯತೆ ಹಿಂದೆಂದಿಗಿಂತ ಇಂದು ತುರ್ತಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಜನಪ್ರತಿನಿಧಿಗಳ ಕೀಳು ಭಾಷೆ; ಜನಪದ ತಾಯಿ ತನ್ನ ಮಗುವಿಗೆ ‘ಮಾತಿನಲಿ ಚೂಡಾಮಣಿಯಾಗು’ ಎಂಬ ಮಾತು ಮಾತಿನ ಮಹತ್ವ ಹೇಳುತ್ತದೆ. ಆದರೆ, ಇಂದು ಮಾತು ಸಂವಾದದ ಭಾಷೆಯಾಗಿ ಉಳಿದಿಲ್ಲ: ದ್ವೇಷದ ಪ್ರತೀಕಾರದ ವಿಚಾರವಾಗಿ ರಾಚುತ್ತಿದೆ. ಸಮಾಜವನ್ನು ಮುನ್ನಡೆ

ಸುವ ಜವಾಬ್ದಾರಿ ಹೊತ್ತ ಜನರ ಬಾಯಲ್ಲಿ ಮಾತಿನ ಘನತೆ ಉಳಿದಿಲ್ಲ. ಇಡೀ ಕನ್ನಡ ಸಮುದಾಯ ವಿಶ್ವದೆದುರು ನಾಚುವಂತೆ ಪದಪ್ರಯೋಗ ಮಾಡುತ್ತಾ ಕನ್ನಡ ಭಾಷೆಯ ಭಾಷಾ ಮರ್ಯಾದೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವ್ಯಕ್ತಿ ಸ್ವಾತಂತ್ರ್ಯ ಹತ್ಯೆ: ರಾಜ್ಯದ ಕೆಲವು ಭಾಗಗಳಲ್ಲಿ ಕೋಮು ದ್ವೇಷದ ಜ್ವಾಲೆ ಹತ್ತಿ ಉರಿಯುತ್ತಿದೆ. ಕೋಮು ದ್ವೇಷದಲ್ಲಿ ಗಂಡು ಹೆಣ್ಣಿನ ನಡುವಿನ ಸೋದರತ್ವ, ಸ್ನೇಹಪರತೆ, ವಾತ್ಸಲ್ಯಭಾವದಂತಹ ಮಾನವೀಯ ಮೌಲ್ಯಗಳನ್ನು ಅನುಮಾನದಿಂದ ನೋಡುವ, ಅವಮಾನಿಸುವುದು ನಡೆ

ಯುತ್ತಿದೆ. ನೈತಿಕ ಪೊಲೀಸ್ ಗಿರಿಯಲ್ಲಿ ವ್ಯಕ್ತಿಯ ಸ್ವಾತಂತ್ರ್ಯ ಹತ್ಯೆಯಾಗುತ್ತಿದೆ. ಇದನ್ನು ಕಂಡಾಗ ಹಿರಿಯರಾದ ನಮ್ಮಂತಹವರಿಗೆ ಮುಂದಿನ ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಆತಂಕವಾಗುತ್ತಿದೆ. ಸಾಕಷ್ಟು ಭಯ ಹುಟ್ಟಿಸುತ್ತಿದೆ ಎಂದು ನುಡಿದರು.

ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ: ಜಿಲ್ಲೆಯಲ್ಲಿ ಬೆಳೆಯುವ ತೆಂಗಿಗೆ ಅದರದೇ ಆದ ಸ್ವಾದ ಇದೆ. ಇಲ್ಲಿನ ಎಳನೀರು ’ಗಂಗಾಪಾನಿ’ ಎಂದೇ ಖ್ಯಾತವಾಗಿದೆ. ಆದರೆ, ತೆಂಗು ಬೆಳೆಗಾರರು ಈಗ ಎದುರಿಸುತ್ತಿರುವ ಸಂಕಷ್ಟ ನೋಡಿದಾಗ ಕರುಳು ಚುರುಗುಟ್ಟುತ್ತದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಈ ರೈತರ ನೆರವಿಗೆ ಸ್ಪಂದಿಸದಿರುವುದು ಶೋಚನೀಯ ಸಂಗತಿಯಾಗಿದೆ. ಇನ್ನಾದರೂ ರೈತರು ಸಂಘಟಿತರಾಗಿ ಹೋರಾಡುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಕೊಬ್ಬರಿ ಮಾರುಕಟ್ಟೆಯಲ್ಲಿ ವಿಪರೀತವಾಗಿ ರೈತರ ಶೋಷಣೆಯಾಗುತ್ತಿದೆ. ಆನ್‌ಲೈನ್ ಖರೀದಿ ವ್ಯವಸ್ಥೆಯನ್ನೂ ಭ್ರಷ್ಟ ಮಾಡಬಲ್ಲ ತಂತ್ರಗಾರಿಕೆಯಲ್ಲಿ ಪಳಗಿದ ಖರೀದಿದಾರರು ಕೊಬ್ಬರಿ ಬೆಲೆ ನೆಲಕಚ್ಚಲು ಕಾರಣರಾಗಿದ್ದಾರೆ. ಮಾರುಕಟ್ಟೆಯಲ್ಲಿ ಕುಳಿತು  ಕೇವಲ ಕೈ ಬದಲಾಯಿಸುವ ವ್ಯಾಪಾರಿ ಏಜೆಂಟ್ ಅದರ ಲಾಭವನ್ನೆಲ್ಲ ಲಪಟಾಯಿಸುತ್ತಿದ್ದಾನೆ. ಇಂತಹ ವ್ಯವಸ್ಥೆ ವಿರುದ್ಧ ಎಷ್ಟು ದನಿ ಎತ್ತಿದರೂ ಅರಣ್ಯ ರೋದನವಾಗಿದೆ. ಕಾರಣ ವ್ಯಾಪಾರಿ ಏಜೆಂಟರು ಬಹುತೇಕ ರಾಜಕಾರಣಿಗಳೇ ಆಗಿದ್ದಾರೆ ಎಂದು ಆರೋಪಿಸಿದರು.

ಮಹಿಷಿ ಪರಿಷ್ಕೃತ ವರದಿ: ಡಾ.ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯು ರೂಪಗೊಂಡಿದೆ. ಇದರಲ್ಲಿ ರಾಜ್ಯ ಸರ್ಕಾರವೇ ಯಾರ ಅನುಮತಿಯನ್ನು ಪಡೆಯದೆ ನೇರವಾಗಿ ಅನುಷ್ಠಾನಕ್ಕೆ ತರಬಹುದಾದ  9 ಶಿಫಾರಸುಗಳಿವೆ. ಇವುಗಳನ್ನು ತಕ್ಷಣ ಜಾರಿಗೆ ತರುವುದಕ್ಕೆ ಸರ್ಕಾರ ಮುಂದಾಗಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಆಶಯ ನುಡಿಗಳನ್ನಾಡಿದರು. ಕಾರ್ಯದರ್ಶಿ ಕೆ.ರವಿಕುಮಾರ್ ಸ್ವಾಗತಿಸಿದರು. ಕೋಶಾ

ಧ್ಯಕ್ಷ ಬಿ.ಮರುಳಯ್ಯ ನಿರೂಪಿಸಿದರು. ಎಚ್.ಗೋವಿಂದಯ್ಯ ವಂದಿಸಿದರು.

ಶಾಸಕ ಡಾ.ರಫೀಕ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರ ಪತ್ನಿ ಪ್ರೇಮಲೀಲಾ, ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಮುಖಂಡ ಪಿ.ಎನ್.ಕೃಷ್ಣಮೂರ್ತಿ, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ, ಪತ್ರಕರ್ತ ಎಸ್.ನಾಗಣ್ಣ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ವೇದಿಕೆಯಲ್ಲಿದ್ದರು.

ದೀಪ ಹಚ್ಚಿದರೆ ಬೆಳಕು; ಬೆಂಕಿ ಹಚ್ಚಿದರೆ ಕೇಡು

ದೀಪ ಹಚ್ಚುವುದು ಕಷ್ಟದ ಕೆಲಸ. ಬೆಂಕಿ ಹಚ್ಚುವುದು ಸರಳ. ಈ ಬೆಂಕಿ ಹಚ್ಚುವುದೇ ಈಚೆಗೆ ಎಲ್ಲ ಕಡೆ ಕಾಣುತ್ತಿದ್ದೇವೆ. ಇಂತಹ ಕೆಲಸಗಳು ಆಗಬಾರದು ಎಂದು ಸಮ್ಮೇಳನ ಉದ್ಘಾಟಿಸಿದ ಹಿರಿಯ ಲೇಖಕ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಹೇಳಿದರು.

ಕನ್ನಡಕ್ಕಾಗಿ ಕನ್ನಡಿಗರೇ ಕೆಲಸ ಮಾಡಬೇಕು. ಕನ್ನಡ ಶಾಲೆಗಳು ಮುಚ್ಚಬಾರದು. ಇನ್ನಷ್ಟು ಅವುಗಳನ್ನು ಉತ್ತಮಪಡಿಸಬೇಕು. ಕನ್ನಡ ಭಾಷೆ ಬದುಕಿದ್ದರೆ ನಾವು ಬದುಕಿದ್ದ ಹಾಗೆ. ಒಂದು ಜನಾಂಗವನ್ನು ಕೊಲ್ಲಬೇಕಾದರೆ ಅವರ ಭಾಷೆಯನ್ನು ಕೊಂದು ಬಿಟ್ಟರೆ ಸಾಕಂತೆ ಎಂಬ ಮಾತಿದೆ. ಅಂತಹ ಪರಿಸ್ಥಿತಿ ಕನ್ನಡ ಭಾಷೆಗೆ ಬರಬಾರದು ಎಂದು ಮನವಿ ಮಾಡಿದರು.

ಅಧ್ಯಕ್ಷರ ಸಲಹೆಗೆ ಸ್ಪಂದನೆ

‘ಕನ್ನಡ ನಾಡು, ನುಡಿ, ಭಾಷೆಗೆ ಸಂಬಂಧಪಟ್ಟಂತೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ ನಿಸ್ಪೃಹ ಅಭಿಪ್ರಾಯ, ಕಾಳಜಿಯ ನುಡಿಗಳು ನನಗೆ ಅರ್ಥವಾಗಿದೆ. ಸರ್ಕಾರವು ಈ ವಿಚಾರದಲ್ಲಿ ಉಪೇಕ್ಷೆ ಮಾಡುವುದಿಲ್ಲ. ಬದ್ಧತೆಯಿಂದ ಕೆಲಸ ಮಾಡಿಕೊಂಡು ಬರುತ್ತಿದೆ. ಇಲ್ಲಿ ಅವರು ನೀಡಿರುವ ಸಲಹೆಗಳನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ಸ್ಪಂದಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.

ಕನ್ನಡ ಧ್ವಜ ಸ್ಥಾಪನೆ ಮಾಡಲಿ

ನಮ್ಮ ಭಾಷೆ, ಸಂಸ್ಕೃತಿ ಬಿಂಬಿಸುವ ಧ್ವಜ ಸ್ಥಾಪನೆಯಾಗಲೇಬೇಕು. ಧ್ವಜ ರೂಪಿಸಿಕೊಳ್ಳಲು ಸಂವಿಧಾನಬದ್ಧವಾದ ಹಕ್ಕು ಇದೆ. ಸರ್ಕಾರ ಈ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದು ನಿಕಟಪೂರ್ವ ಅಧ್ಯಕ್ಷ ಕವಿ ಕೆ.ಬಿ.ಸಿದ್ದಯ್ಯ ಒತ್ತಾಯಿಸಿದರು.

ಈಚೆಗೆ, ರಾಷ್ಟ್ರಧ್ವಜಕ್ಕೆ ಪರ್ಯಾಯ ಎಂಬುವಷ್ಟರ ಮಟ್ಟಿಗೆ ಭಗವಾ ಧ್ವಜ ಹಾರಿಸುವ ಪ್ರಯತ್ನ ನಡೆಯುತ್ತಿದೆ. ಆ ಧ್ವಜದ ಸಂಕೇತ ಅರಿಯದೇ ಹೋದರೆ ದುಷ್ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

’ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕೆಲ ಪದಗಳನ್ನು ಬಳಸುತ್ತಿದ್ದಾರೆ. ಆತ ಬಳಸುತ್ತಿರುವ ರೀತಿಗೆ ಪದಗಳೇ ಮುಜುಗರಪಟ್ಟುಕೊಳ್ಳುತ್ತಿವೆ’ ಎಂದು ಲೇವಡಿ ಮಾಡಿದರು.

ಪ್ರತಿಕ್ರಿಯಿಸಿ (+)