ಮಂಗಳವಾರ, ಡಿಸೆಂಬರ್ 10, 2019
20 °C

ಜೀವನ ದೃಷ್ಟಿ ಬದಲಿಸಿದ ‘ಅತಿಥಿ’

Published:
Updated:
ಜೀವನ ದೃಷ್ಟಿ ಬದಲಿಸಿದ ‘ಅತಿಥಿ’

ಮುಮ್ತಾಜ್‌

ಒಂದು ಕಾಲದಲ್ಲಿ ಬಾಲಿವುಡ್‌ ಸಿನಿಮಾ ರಂಗವನ್ನು ಆಳಿದ ನಟಿ ಮುಮ್ತಾಜ್‌. ’ಸೋನೆ ಕಿ ಚಾಂದಿ’ ಚಿತ್ರದ ಮೂಲಕ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶ ಪಡೆದವರು. ಹಲವಾರು ಪ್ರಮುಖ ನಟರ, ನಿರ್ದೇಶಕರ ಜತೆ ಕೆಲಸ ಮಾಡಿ ‘ಬಾಲಿವುಡ್‌ ದಿವಾ’ ಎನಿಸಿಕೊಂಡವರು. 2000ರಲ್ಲಿ ‘ಬ್ರೆಸ್ಟ್‌ ಕ್ಯಾನ್ಸರ್‌’ ಇವರನ್ನು ಬಾಧಿಸಿತು. ತಮ್ಮ 54ನೇ ವಯಸ್ಸಿನಲ್ಲೂ ಜೀವನೋತ್ಸಾಹ ಕುಗ್ಗಿಸಿಕೊಳ್ಳದ ಮುಮ್ತಾಜ್‌, ಧೈರ್ಯವಾಗಿ ತಮ್ಮನ್ನು ಬಾಧಿಸುತ್ತಿರುವ ರೋಗಕ್ಕೆ ಸವಾಲೆಸೆದರು. ಇವರ ಧೈರ್ಯ ಮತ್ತು ಆತ್ಮ ವಿಶ್ವಾಸ ಇವರನ್ನು ಸೋಲಿಸಲಿಲ್ಲ. ಫಲವಾಗಿ ಗುಣಮುಖರಾದರೂ. ಈ ಎಲ್ಲಾ ಬಳಲಿಕೆಯ ನಂತರದ ಒಂದು ಸಂದರ್ಶನದಲ್ಲಿ, ‘ನಾನು ಸುಲಭವಾಗಿ ಸೋಲುವಳಲ್ಲ. ಸಾವೂ ಸಹ ನನ್ನೊಂದಿಗೆ ಕಾದಾಡಬೇಕು’ ಎಂದು ಹೇಳಿದ್ದರು.      

ಮನಿಷಾ ಕೊಯಿರಾಲ

‘ದಿಲ್‌ ಸೇ’ ಚಿತ್ರ ಇವರಿಗೆ ಪ್ರಸಿದ್ಧಿ ತಂದುಕೊಟ್ಟ ಬಾಲಿವುಡ್‌ ಚಿತ್ರ. ತಮ್ಮ ಮುಗ್ಧ ನಟನೆ ಹಾಗೂ ನಗುವಿನೊಂದಿಗೆ ಚಿತ್ರರಸಿಕರ ಸೆಳೆದವರು. 2012ರಲ್ಲಿ ಒಮ್ಮೆ ಪ್ರಜ್ಞಾಹೀನವಾಗಿ ಬಿದ್ದ ಅವರನ್ನ ನಂತರ ನಗರ ಆಸ್ಪತ್ರೆಗೆ ಕರೆದೊಯ್ಯಲಾಗಿ ಹಲವು ವೈದ್ಯಕೀಯ ಪರೀಕ್ಷೆಗಳ ಮೂಲಕ ಅವರಿಗೆ ‘ಅಂಡಾಶಯ ಕ್ಯಾನ್ಸರ್‌’ ಇರುವುದು ತಿಳಿಯಿತು. ಈ ರೋಗದ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಅವರಿಗೆ ಹಲವು ವರ್ಷಗಳೇ ತಗುಲಿದವು. ಅವರ ಚಿಕಿತ್ಸೆ ನಡೆದಿದ್ದು ನ್ಯೂಯಾರ್ಕ್‌ನಲ್ಲಿ. ಉಳುವಿಗಾಗಿ ಹೋರಾಡಿ ಗೆದ್ದ ಅವರು ಸದ್ಯ ಬೆಳ್ಳಿ ಪರದೆಯೊಂದಿಗೆ ತಮ್ಮ ನಟನಾ ಜೀವನವನ್ನು ಮುಂದುವರೆಸಿದ್ದಾರೆ. 2016ರಲ್ಲಿ ಬಿಡುಗಡೆಗೊಂಡ ಕನ್ನಡದ ’ಗೇಮ್‌’ ಚಿತ್ರದಲ್ಲೂ ಅಭಿನಯಿಸಿದ್ದಾರೆ. ’ನಾವು ಆಮೂಲಾಗ್ರವಾಗಿ ಬದಲಾಗಲು ಕ್ಯಾನ್ಸರ್‌ ಸಹಾಯಕ ಅನ್ನಿಸುತ್ತೆ. ಇದಾದ ನಂತರ ನಾನು ನನ್ನ ಜೀವನd ಬಗ್ಗೆ ಮೆಚ್ಚುಗೆ ಮತ್ತು ನನ್ನ ದೇಹದ ಬಗ್ಗೆ ಗೌರವ ಹುಟ್ಟಲು ಕಾರಣವಾಯಿತು’ ಇದು ಮನಿಷಾ ಅವರ ಮಾತು.

ಅನುರಾಗ್‌ ಬಸು

ಬಾಲಿವುಡ್‌ ಹಾಗೂ ಹಿಂದಿ ಟಿ.ವಿ ಜಗತ್ತಿನಲ್ಲಿ ತಮ್ಮದೆ ವಿಭಿನ್ನ ಶೈಲಿಯಿಂದ ಗುರುತಿಸಿಕೊಂಡವರು, ನಿರ್ದೆಶಕ,ನಿರ್ಮಾಪಕ, ಚಿತ್ರಕಥೆಗಾರ, ಹಲವಾರು ರಿಯಾಲಿಟಿ ಶೋಗಳ ತೀರ್ಪುಗಾರ ಅನುರಾಗ್‌ ಬಸು. ಇವರ ‘ಲೈಫ್‌ ಇನ್‌ ಅ ಮೆಟ್ರೊ’, ‘ಮರ್ಡರ್‌’, ‘ಬರ್ಫಿ’ ಮುಂತಾದವು ಇವರ ಪ್ರಸಿದ್ಧ ಚಿತ್ರಗಳು. 2004ರಲ್ಲಿ ಇವರಿಗೆ ರಕ್ತದ ಕ್ಯಾನ್ಸರ್‌ ಇರುವುದ ಗೊತ್ತಾಗುತ್ತದೆ. ವೈದ್ಯರೂ ಕೇವಲ ಎರಡು ತಿಂಗಳು ಮಾತ್ರ ನೀವು ಬದುಕುಳಿಯುವ ಭರವಸೆ ನೀಡುತ್ತಾರೆ. ಇಂತಿದ್ದರೂ ಅವರು ಇಂದು ನಮ್ಮೊಂದಿಗಿದ್ದಾರೆ. ಇತ್ತೀಚೆಗೆ ‘ಜಗ್ಗಾ ಜಾಸೂಸ್‌’ ಚಿತ್ರವನ್ನು ನಿರ್ದೇಶಿಸಿ ಕ್ಯಾನ್ಸರ್‌ ಅನ್ನು ಸೋಲಿಸಿದ್ದಾರೆ. ‘ಕ್ಯಾನ್ಸರ್‌ ನನ್ನೊಂದಿಗೆ ಯುದ್ಧ ಮಾಡಬೇಕು, ನಾನು ಅದರೊಂದಿಗಲ್ಲ’(“Cancer had to fight me, I didn’t have to fight it.”) ಇದು ಇವರ ಮಾತು.

ಗೌತಮಿ ತಡಿಮಲ್ಲಾ

ದಕ್ಷಿಣ ಭಾರತದ ಪ್ರಮುಖ ನಟಿ ಗೌತಮಿ ತಡಿಮಲ್ಲಾ. ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಕನ್ನಡದಲ್ಲಿ ‘ಏಳು ಸುತ್ತಿನ ಕೋಟೆ’, ‘ಚಿಕ್ಕೆಜಮಾನ್ರು’ ಮುಂತಾದವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ 35ನೇ ವಯಸ್ಸಿಗೆ ‘ಬ್ರೆಸ್ಟ್‌ ಕ್ಯಾನ್ಸರ್‌’ನಿಂದ ಬಳಲುವ ಇವರು ಈಗ ಗುಣಮುಖಾಗಿದ್ದಾರೆ. ‘ಕ್ಯಾನ್ಸರ್‌ ಜೀವನದ ಕುರಿತಾದ ನನ್ನ ದೃಷ್ಟಿಕೋನವನ್ನೇ ಬದಲಿಸಿತು. ಪ್ರತಿದಿನವೂ ಕ್ಷೀಣಿಸುತ್ತದೆ ಮತ್ತು ಆ ದಿನವನ್ನು ನಾವು ಪೂರ್ತಿಯಾಗಿ ಜೀವಿಸಬೇಕು’ ಎನ್ನುವುದು ಅವರ ಮಾತು.  ಕ್ಯಾನ್ಸರ್‌ ಕುರಿತ ಜಾಗೃತಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು, ತಮ್ಮ ಅನುಭವಗಳನ್ನು ಅಲ್ಲಿ ಹಂಚಿಕೊಳ್ಳುತ್ತಾರೆ.

ಪ್ರತಿಕ್ರಿಯಿಸಿ (+)