ಮಂಗಳವಾರ, ಡಿಸೆಂಬರ್ 10, 2019
21 °C

ಪ್ರಧಾನಿ ‘ಪಕೋಡಾ’ ಹೇಳಿಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ‘ಪಕೋಡಾ’ ಹೇಳಿಕೆಗೆ ಖಂಡನೆ

ತುಮಕೂರು: 'ಪಕೋಡಾ ಕರಿದು ಮಾರಾಟ ಮಾಡುವುದು ಒಂದು ಉದ್ಯೋಗವಲ್ಲವೇ?’ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ವಿರೋಧಿಸಿ, ‘ಉದ್ಯೋಗಕ್ಕಾಗಿ ಯುವಜನರು’ ವೇದಿಕೆ ವತಿಯಿಂದ ಶುಕ್ರವಾರ ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಬೋಂಡ ತಯಾರಿಸಿ ಮಾರಾಟ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು.

ವೇದಿಕೆಯ ಸಂಚಾಲಕ ಅನಿಲ್‌ಕುಮಾರ್ ಚಿಕ್ಕದಾಳವಾಟ ಅವರ ನೇತೃತ್ವದಲ್ಲಿ ಪದವೀಧರ ಯುವಕರು, ಸ್ವಾಭಿಮಾನಿ ಪಕೋಡಾ ಸ್ಟಾಲ್ ತೆರೆದು, ಈರುಳ್ಳಿ ಬೋಂಡಾ, ಪಕೋಡಾ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ವಿದ್ಯಾವಂತ ನಿರುದ್ಯೋಗಿಗಳನ್ನು ಅಣಕಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.

ಭಾರತೀಯ ಕಲ್ಯಾಣ ಪಕ್ಷದ (ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ) ಜಿಲ್ಲಾ ಘಟಕದ ಅಧ್ಯಕ್ಷ ತಾಜುದ್ದೀನ್ ಷರೀಫ್ ಮಾತನಾಡಿ, ‘ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ, ಹೊಟ್ಟೆ ಪಾಡಿಗಾಗಿ ಬೀದಿ ಬದಿಯಲ್ಲಿ ಪಕೋಡಾ ಮಾರಾಟ ಮಾಡುವುದನ್ನು ಉದ್ಯೋಗವೆಂದು ಬಿಂಬಿಸಲು ಹೊರಟಿದೆ’ ಎಂದು ಹೇಳಿದರು.

ಅನಿಲ್‌ಕುಮಾರ್ ಮಾತನಾಡಿ, ‘ಟೀ ಮಾರುವುದು, ಪಕೋಡಾ ಮಾಡುವುದು ಹಾಗೂ ಕೃಷಿಯನ್ನು ಉದ್ಯೋಗವೆಂದು ಗುರುತಿಸಿದ್ದಾರೆ. ಇಂತಹ ಬದುಕು ನಡೆಸುತ್ತಿರುವ ಜನರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕು. ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮೋದಿ ಅಸಂಘಟಿತ ವಲಯದಲ್ಲಿರುವ ರೈತರು, ಟೀ, ಪಕೋಡಾ ಮಾರಾಟ ಮಾಡುವವರಿಗೂ ಸಾಮಾಜಿಕ ಭದ್ರತೆ ಒದಗಿಸುವ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಬೇರೆ ಪಕ್ಷದ ಹೇಳಿಕೆಗಳನ್ನು ಟೀಕಿಸುವುದರ ಜೊತೆಗೆ, ಈ ಸಮುದಾಯಕ್ಕೆ ನಮ್ಮ ಪಕ್ಷದ ಕೊಡುಗೆ ಏನು ಎನ್ನುವುದನ್ನು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ಘೋಷಿಸಬೇಕು. ಇಲ್ಲದಿದ್ದರೆ ಯುವಜನರು ನಿಮ್ಮದೂ ಕೇವಲ ಬೂಟಾಟಿಕೆ ಎಂದುಕೊಳ್ಳಬೇಕಾಗುತ್ತದೆ’ ಎಂದರು.

ಫೆಬ್ರುವರಿ 18ರಂದು ಎಲ್ಲ ಪಕ್ಷದ ಮುಖಂಡರನ್ನು ಒಳಗೊಂಡ ಯುವ ಅಧಿವೇಶನವನ್ನು ಕರೆಯಲಾಗುತ್ತಿದೆ. ಅಲ್ಲಿ ಯುವಜನರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಉಪನ್ಯಾಸಕ ಕೊಟ್ಟಶಂಕರ್, ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಶೆಟ್ಟಾಳಯ್ಯ, ರಿಯಾಜ್ ಮಂಗಳೂರು, ಚಂದನ್‌ಕುಮಾರ್, ದರ್ಶನ್, ಕೆಂಪರಾಜು, ಜಮೀರ್ ಉದ್ದೀನ್, ದಿನೇಶ್, ರಾಮಯ್ಯ, ವೆಂಕಟೇಶ್ ಇದ್ದರು.

ಸಾಮಾಜಿಕ ಭದ್ರತೆ ಒದಗಿಸಿ

ಶಿರಾ: ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ಶುಕ್ರವಾರ ಸ್ವಾಭಿಮಾನಿ ಪಕೋಡಾ ಸ್ಟಾಲ್ ತೆರೆಯುವ ಮೂಲಕ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಒತ್ತಾಯಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

‘ಚುನಾವಣೆ ಸಮಯದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿ ಮಾಡಲು ವಿಫಲರಾಗಿದ್ದಾರೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದ್ದ ಪ್ರಧಾನಿಯವರು ಪಕೋಡ ಮಾರುವುದು ಉದ್ಯೋಗವಲ್ಲವೇ ಎಂದು ಪ್ರಶ್ನಿಸಿ ನಿರುದ್ಯೋಗಿ ಯುವಕರನ್ನು ಅಣಕಿಸಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ವಯಂ ಉದ್ಯೋಗಸ್ಥರಿಗೆ ಸಾಮಾಜಿಕ ಭದ್ರತೆಯನ್ನು ರೂಪಿಸುವ ಯೋಜನೆಯನ್ನು ರೂಪಿಸಲು 100 ದಿನಗಳ ಕಾಲಾವಕಾಶ ತೆಗೆದುಕೊಳ್ಳಿ. ಆದರೆ ರಾಜ್ಯಕ್ಕೆ ಭೇಟಿ ಮಾಡುವ ಸಂದರ್ಭದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)