ಬುಧವಾರ, ಡಿಸೆಂಬರ್ 11, 2019
15 °C

ಕನ್ನಡ ತಾಯಿ ಹಾಲು; ಇಂಗ್ಲಿಷ್‌ ಡಬ್ಬಿ ಹಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ತಾಯಿ ಹಾಲು; ಇಂಗ್ಲಿಷ್‌ ಡಬ್ಬಿ ಹಾಲು

ತುಮಕೂರು: ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಇಂದ್ರನ ಪದವಿ ಸಿಗಲ್ಲ. ಕನ್ನಡ ಎಂಬುದು ತಾಯಿ ಹಾಲು. ಇಂಗ್ಲಿಷ್ ಎಂಬುದು ಡಬ್ಬದ ಹಾಲು. ಕನ್ನಡ ಬೇಡ ಎನ್ನುವವರು ತಾಯಿಯನ್ನೇ ಬೇಡ ಎಂದಂತೆ ಎಂದು ಹಿರಿಯ ಚಲನಚಿತ್ರ ನಟ, ಲೇಖಕರಾದ ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದರು. ಶುಕ್ರವಾರ ಅಮಾನಿಕೆರೆ ಗಾಜಿನಮನೆಯಲ್ಲಿ ನಡೆದ ತುಮಕೂರು ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು.

ತಾಯಿ ಹಾಲು ಕುಡಿದರೆ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆ. ಡಬ್ಬದ ಹಾಲನ್ನು  6–7 ವರ್ಷದವರಾದ ಬಳಿಕ ಕುಡಿಸಬಹುದು. ತಾಯಿಯ ಹಾಲೇ ಕುಡಿಯದ ಮಗು ಗಟ್ಟಿಯಾಗಿ ಬೆಳೆದು ಬದುಕುವುದಾದರೂ ಹೇಗೆ? ಕನ್ನಡಿಗರೆಲ್ಲ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಂತಹ ಸೂಕ್ಷ್ಮತೆಯನ್ನು ಗಮನಿಸಬೇಕು. ಇಂತಹ ಸಮ್ಮೇಳನಗಳು ಕನ್ನಡ ಜಾಗೃತಿಯ ಕೆಲಸ ಮಾಡುತ್ತವೆ. ತಾಲ್ಲೂಕು, ಗ್ರಾಮಾಂತರ ಮಟ್ಟದಲ್ಲೂ ಇಂತಹ ಕೆಲಸಗಳು ಆಗಬೇಕು ಎಂದು ಕರೆ ನೀಡಿದರು.

ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕು. ಸಂಗೀತದ ಬಗ್ಗೆ ಅಭಿರುಚಿ ಬೆಳೆಸಬೇಕು.  ಬರುವ ಸಂಬಳದಲ್ಲಿ ಶೇ 5ರಷ್ಟನ್ನಾದರೂ ಪುಸ್ತಕ ಖರೀದಿಗೆ ಬಳಸಬೇಕು. ಹಿರಿಯರೇ ಪುಸ್ತಕಗಳನ್ನು ಓದದೇ ಇದ್ದರೆ ಮಕ್ಕಳು ಹೇಗೆ ಓದುತ್ತಾರೆ. ಹಿರಿಯರೂ ಓದಿ ಮಕ್ಕಳಿಗೂ ತಿಳಿಸಿಕೊಡಬೇಕು. ಅಂದಾಗ ಮುಂದಿನ ಪೀಳಿಗೆಗೆ ನಮ್ಮ ಸಾಹಿತ್ಯ, ಸಂಸ್ಕೃತಿ ತಿಳಿಸಿಕೊಡಲು ಸಾಧ್ಯ ಎಂದು ಹೇಳಿದರು.

ಮಕ್ಕಳನ್ನು ಬೆಳೆಸುವುದು ಎಂದರೆ ಮಕ್ಕಳೊಂದಿಗೆ ನೀವು ಬೆಳೆಯುವುದು ಎಂದೇ ಅರ್ಥ. ಮತ್ತೆ ಮಗುವಾಗಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ, ಹೆಚ್ಚಿನ ಜ್ಞಾನ ಪಡೆಯುವ ಪ್ರಯತ್ನ ಮಾಡುವುದಾಗಿದೆ ಎಂದರು.

ಪ್ರಜಾತಂತ್ರ ದುರ್ಬಳಕೆ ಬೇಡ: ಧರ್ಮವನ್ನು ಮಠ ಧರ್ಮವನ್ನಾಗಿ ಮಾಡಲಾಗಿದೆ. ಹಾಗೆಯೇ ಪ್ರಜಾತಂತ್ರ ಎಂಬ ಧರ್ಮವನ್ನು ಕೀಳುಮಟ್ಟಕ್ಕೆ ತಳ್ಳಲಾಗುತ್ತಿದೆ. ಪ್ರಜಾತಂತ್ರವನ್ನು ದುರ್ಬಳಕೆ ಮಾಡಿಕೊಳ್ಳುವುದು ನಿಲ್ಲಬೇಕು. ಮಾನಸಿಕ ಅನಾಗರಿಕತೆಯಿಂದ ನಮ್ಮ ಜನರು ದೂರವಾಗಬೇಕಾಗಿದೆ. ಚುನಾವಣೆ ಬಂದಾಗ ನನ್ನ ಜಾತಿಯವ, ನಮ್ಮವ ಎಂಬ ಸಂಕುಚಿತ ಭಾವನೆಯಿಂದ ಹೊರಬರಬೇಕು. ಬಸವಣ್ಣನವರು ಹೇಳಿದಂತೆ ’ಇವ ನಮ್ಮವ’ ಎಂಬ ತತ್ವ ಪರಿಪಾಲಿಸಬೇಕು ಎಂದು ಅವರು ತಿಳಿಸಿದರು.

ಮುತ್ಸದ್ಧಿ ಬೇರೆ, ರಾಜಕಾರಣಿ ಬೇರೆ: ಮುತ್ಸದ್ದಿ(ಸ್ಟೇಟ್ಸ್ ಮನ್), ರಾಜಕಾರಣಿ( ಪೊಲಿಟಿಷಿಯನ್) ಬೇರೆ ಬೇರೆ. ರಾಜಕಾರಣಿಗೆ ತಾನು, ತನ್ನ ಕೆಲಸ, ತನ್ನವರು ಎಂಬುದಷ್ಟೇ ಮುಖ್ಯ. ಮುತ್ಸದ್ಧಿಗೆ ತಾನು ಇದ್ದಾಗ, ಹೋದ ಬಳಿಕವೂ ಜಗತ್ತಿಗೆ ಒಳಿತಾಗುತ್ತಿರಬೇಕು ಎಂಬ ದಿಶೆಯಲ್ಲಿ ಕೆಲಸ ಮಾಡುವಂತಹವರು. ಇಂತಹವರ ಸಾಲಿಗೆ ಡಾ.ಅಂಬೇಡ್ಕರ್, ಗಾಂಧೀಜಿ, ಲೋಹಿಯಾ ಅವರಂತಹವರು ಸೇರುತ್ತಾರೆ ಎಂದು ಬಣ್ಣಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆವಹಿಸಿದ್ದರು. ಸಮ್ಮೇಳನ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ,  ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ವೇದಿಕೆಯಲ್ಲಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.

ನಿಸರ್ಗದ ಬಗ್ಗೆ ಪ್ರೀತಿ ಇರಲಿ

ನಾವು ನಿಸರ್ಗದ ಬಗ್ಗೆ ಪ್ರೀತಿ ಹೊಂದಿರಬೇಕು. ಮನೆಯ ಆವರಣದಲ್ಲಿನ ಗರಿಕೆ  ಆಕರ್ಷಿಸದೇ ಇದ್ದರೂ ನಿಮ್ಮ ಬದುಕು ಯಾಂತ್ರಿಕ, ಶುಷ್ಕವಾಗುತ್ತಿದೆ ಎಂದೇ ಅರ್ಥ. ಬರೀ ಬ್ಯಾಂಕ್ ಪಾಸ್ ಬುಕ್, ದುಡ್ಡಿನ ಲೆಕ್ಕಾಚಾರದಲ್ಲೇ ಬದುಕು ಕಳೆದು ಹೋದರೆ ಬದುಕನ್ನು ಅನುಭವಿಸುವುದು ಹೇಗೆ ಎಂದು ಜಿಕೆವಿ ಪ್ರಶ್ನಿಸಿದರು.

ಜಾತಿ ಬಲ ಇಲ್ಲದ ಗಾಂಧೀಜಿ ಈಗ ಲೆಕ್ಕಕ್ಕಿಲ್ಲ

ಈಗ ಎಲ್ಲೆಡೆ ದರಿದ್ರ ರಾಜಕಾರಣ ಆವರಿಸಿದೆ.  ಜಾತಿ ಬಲವಿಲ್ಲದ ಮಹಾತ್ಮ ಗಾಂಧೀಜಿ ಈಗ ಲೆಕ್ಕಕ್ಕಿಲ್ಲ. ವ್ಯವಸ್ಥೆಯಲ್ಲಿ ಅವರ ತತ್ವ, ಚಿಂತನೆಗಳಿಂದ ಜನರು ದೂರವಾಗುವ ಮೂಲಕ ಅವರನ್ನು ಹೊರಹಾಕಿದ್ದಾರೆ(ಔಟ್) ಎಂದು ಜಿ.ಕೆ.ಗೋವಿಂದರಾವ್ ವಿಷಾದಿಸಿದರು.

ಸಮ್ಮೇಳನದಲ್ಲಿ ನಿರ್ಣಯ ಇಲ್ಲ

13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳಲಿಲ್ಲ. ಹಿಂದಿನ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ಒತ್ತುಕೊಡುವ ಉದ್ದೇಶದಿಂದ ಈ ಬಾರಿ ನಿರ್ಣಯ ಕೈಗೊಂಡಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ತಿಳಿಸಿದರು.

ಪ್ರತಿಕ್ರಿಯಿಸಿ (+)