ಮಂಗಳವಾರ, ಡಿಸೆಂಬರ್ 10, 2019
20 °C

ಬಡ್ತಿ

Published:
Updated:
ಬಡ್ತಿ

ಸುಜಿತ್ ಅವರು ರಿಸೈನ್ ಮಾಡಿದರಂತೆ! ಯಾವುದೋ ಎಂ.ಎನ್.ಸಿ ಕಂಪನಿಗೆ ಸೆಲೆಕ್ಟಾಗಿದ್ದಾರಂತೆ! ದುಪ್ಪಟ್ಟು ಸಂಬಳವಂತೆ... ಇವತ್ತೇ ಲಾಸ್ಟ್ ಡೇ ಅಂತ ನೋಡಿ!’ ಕಂಪನಿಯ ತುಂಬ ಹರಿದಾಡಿದ ಮಾತುಗಳಿವು. ನಾಗರಾಜನ ಕಿವಿಗೆ ಬಿದ್ದದ್ದೇ ಆತ ಮಂಕಾದ. ಮನ ಬಾಡಿತು. ಏನೇನೋ ವಿಚಾರ ಮಾಡುತ್ತಾ ಗೊಂದಲದ ಗೂಡಾಗಿ ಹೋದ.

ಏ...ಇದೆಲ್ಲಾ ಸುಳ್ಳು ಸುದ್ದಿ, ಅವ್ರೆಲ್ಲಿಗೂ ಹೋಗಲ್ಲ. ಅವ್ರೇ ಹೋಗ್ತೀನಿ ಅಂದ್ರೂ ಮ್ಯಾನೇಜ್‌ಮೆಂಟ್ ಅವ್ರನ್ನ ಕಳಸಲ್ಲ ಅಂತ ತನಗೆ ತಾನೆ ಧೈರ್ಯ ತಂದುಕೊಂಡ. ಇದಕ್ಕೂ ಮುಂಚೆಯೂ ಈ ತರಹದ ಸುದ್ದಿ ಹಬ್ಬಿತ್ತು. ಆಗ ಮ್ಯಾನೇಜ್‌ಮೆಂಟಿನವರೇ ಅವರನ್ನು ದುಪ್ಪಟ್ಟು ಸಂಬಳ ಕೊಟ್ಟು ಉಳಿಸಿಕೊಂಡರಂತೆ ಎನ್ನುವ ಸತ್ಯವೂ ಬಯಲಾಗಿತ್ತು. ಹಾಗಾಗಿ ಅದನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದಿದ್ದರೂ ಒಳಗೆ ಸಣ್ಣ ಅಳುಕು ಕಾಡುತ್ತಿತ್ತು. ಯಾವುದಕ್ಕೂ ಒಂದು ಸಲ ಮಾತಾಡ್ಸಿ ಕನ್‌ಫರ್ಮ್ ಮಾಡಿಕೊಂಡರಾಯಿತು ಅಂತ ಸುಜಿತ್ ಕ್ಯಾಬಿನ್ ಕಡೆ ನಡೆದ. ಆತನ ಚೇರ್ ಖಾಲಿಯೇ ಇತ್ತು. ಪ್ಲ್ಯಾಂಟ್ ಆಫೀಸಿನ ಸುತ್ತಲೂ ಕಣ್ಣಾಡಿಸಿದ. ಎಲ್ಲಿಯೂ ಕಾಣಲಿಲ್ಲ. ಇವನು ಹೋದರೆ ಹೋಗಲಿ ನನಗೇನು ಅಂತ ಅಂದುಕೊಂಡನಾದರೂ ಯಾವುದೋ ಸೆಳೆತ. ಹೋಗಿಯೇ ಬಿಟ್ಟರೆ ಹೇಗೆ? ಎಂಬ ಆತಂಕವೂ  ಸದ್ದಿಲ್ಲದೆ ಸಣ್ಣಗೆ ಕೊರೆಯುತ್ತಲೇ ಇತ್ತು. ಇನ್ನೂ ಬಂದಿಲ್ಲಂತ ಕಾಣುತ್ತದೆ ಅಂತ ಅಂದುಕೊಳ್ಳುತ್ತ ಮರಳಿ ಶಾಪ್ ಫ್ಲೋರ್ ಕಡೆ ಬಂದ. ತಾನು ಮಾಡಬೇಕಾದ ಕೆಲಸ ಕೈಬೀಸಿ ಕರೆದರೂ ಹೋಗಲು ಮನಸ್ಸಾಗಲಿಲ್ಲ. ಆಪರೇಟರ್‌ಗಳು ಯಾವುದೋ ಸಮಸ್ಯೆ ಹೇಳಲು ‘ನಾಗಣ್ಣೋ...ನಾಗಣ್ಣೋ...’ ಅಂತ ಕೂಗಿ ಕರೆದರೂ ಕಿವಿಗೊಡಲಿಲ್ಲ. ಸೂಪರ್‌ವೈಸರ್‌ಗಳು ಬಂದು ಏನೇನು ಹೇಳಿದರು ಅಂತ ಗಮನವೇ ಇರಲಿಲ್ಲ. ಹಣಮಂತದೇವರ ಗುಡಿ ಮುಂದಿನ ಆಲಗಂಬದಂತೆ ನಿಂತಿದ್ದ.

‘ಏನಣ್ಣೋ...ನಿಮ್ ಬಾಸ್ ಹೊಂಟಾರಂತಲ? ಇವತ್ತೇ ಕೊನೆ ಅಂತ. ಅದ್ಕ ಹಿಂಗ್ ನಿತ್ಗಂಡೇನ್?’ ಅಂತಂದು ನಿಂತ ಸೀನಿಯರ್ ಆಪರೇಟರ್ ಮಾದೇವನ ಮಾತಿಗೆ ಏನ್ ಹೇಳಬೇಕೋ ತಿಳಿಯದೆ ನಾಗರಾಜ ‘ಹೌದಂತಪ, ನನ್ಗೇನೂ ಗೊತ್ತಿಲ್ಲ, ಅವರಿವರು ಅನ್ನೋದೆ ಕೇಳಿನಿ’ ಅಂತ ಹೇಳಿ ಸುಮ್ಮನಾದ. ಅದರ ಬಗ್ಗೆ ಮಾತಾಡುವ ಮನಸ್ಸು ಇರಲಿಲ್ಲ. ‘ಹಾ...ಹ ಮಳ್ಳ, ನಿನಗ ಗೊತ್ತಿಲ್ದಂಗ ಇರ‍್ತಾದೇನು? ಎದಕ ಬಿಟ್ನ...ಬಿಡಿಸಿದರ?’ ಮಾದೇವ ವ್ಯಂಗ್ಯವಾಗಿ ಮಾತು ಮುಂದುವರಿಸಿದ. ಅವನಿಗೆ ನಾಗರಾಜನ ಕೆಣಕುವ ಉದ್ದೇಶವಿತ್ತು. ಯಾಕೆಂದರೆ ಅವರ ಆಪ್ತತೆಯನ್ನು ಕಂಡು ಸುಮಾರು ಸಲ ಒಳಗೊಳಗೇ ಉರಿದುಕೊಂಡಿದ್ದ. ನಾಗರಾಜನಿಂದಲೇ ತನಗೆ ಟೀಮ್ ಲೀಡರ್ ಪೋಸ್ಟ್ ತಪ್ಪಿತು ಅನ್ನುವ ನೋವು ಅವನನ್ನು ಆಗಾಗ ತಿವಿಯುತ್ತಿತ್ತು. ಅದೆಲ್ಲದರ ಸೇಡು ತೀರಿಸಿಕೊಳ್ಳುವಂತೆ ಇಂದು ಮಾತಿನ ಚಾಟಿ ಬೀಸುತ್ತಿದ್ದ. ಅದು ನಾಗರಾಜನಿಗೂ ಅರ್ಥವಾಗಿತ್ತು. ಮೊದಲೇ ಬೇಸರದಲ್ಲಿದ್ದವನೀಗ ಮತ್ತಷ್ಟು ನೊಂದುಕೊಂಡು ‘ನಡಿ ಮಾದೇವ. ನಿನ್ಗ ಆಮೇಲೆ ಸಿಗ್ತೀನಿ’ ಅಂತ ಯಾವುದೋ ಮೆಶೀನ್‌ನತ್ತ ನಡೆದು ಏನೋ ಮಾಡುತ್ತ ನಿಂತುಕೊಂಡ. ಮಾದೇವ ನಾಗರಾಜನಿಗೆ ಬೇಸರವಾದದ್ದನ್ನು ಖಚಿತಪಡಿಸಿಕೊಂಡು ಹುರುಪಿನಲ್ಲಿ ಮುಂದೆ ಸಾಗಿದ.

‘ಏ...ನಾಗ್ರಾಜ. ಬರ್ರೀ ಇಲ್ಲಿ! ಆ ಟೂಲ್ ಪ್ರಾಬ್ಲಮ್ ಇದೆ. ಅನ್‌ಲೋಡ್ ಮಾಡಿ ಅಂತ ಹೇಳಿ ಅರ್ಧ ಗಂಟೆಯಾಯ್ತು, ಇನ್ನೂ ಹಂಗೇ ಇದೆ. ಬರಿ ಕತೆ ಹೋಡಿಯೋದೇ ಆಯ್ತು’ ಸೂಪರ್‌ವೈಸರ್ ಪಾಂಡುರಂಗ ಕೂಗಾಡಿ ಆವೇಶದಲ್ಲಿ ಆಫೀಸಿನೊಳಗೆ ಹೋದ. ನಾಗರಾಜ ಮತ್ತಷ್ಟು ಕುಗ್ಗಿ ಈ ಪಾಂಡು ಯಾವತ್ತೂ ಇಷ್ಟೊಂದು ಬಿರುಸಾಗಿ ಯಾವ ಕೆಲ್ಸನೂ ಹೇಳಿರಲಿಲ್ಲವಲ್ಲ! ಸುಜಿತ್ತೇ ರಿಸೈನ್ ಮಾಡಿ ಹೋಗುತ್ತಿರಬೇಕಾದ್ರೆ ಇವನ ಸಪೋರ್ಟಿಗೆ ಯಾರಿದಾರೆ ಅಂತ ಧೈರ್ಯ ತಂದುಕೊಂಡನೇ? ಹಾಗಾದರೆ ಸುಜಿತ್ ರಿಸೈನ್ ಮಾಡಿದ್ದು ಪಕ್ಕಾ ಅನಿಸುತ್ತೆ. ಮೊದಲಿನ ಹಾಗೆ ಮ್ಯಾನೇಜ್‌ಮೆಂಟ್ ಅವರನ್ನ ಉಳಿಸಿಕೊಳ್ಳೋದು ಡೌಟೆ? ಅಂತ ಆತನ ಮನಸು ಲೆಕ್ಕ ಹಾಕಿ ಸೊರಗಿತು. ಇತ್ತೀಚೆಗೆ ಕಂಪನಿಯಲ್ಲಾಗುತ್ತಿರುವ ಬದಲಾವಣೆ ಗಮನಿಸಿಯೇ ಇಂಥದೊಂದು ಅನಿಸಿಕೆ ಮೂಡಿತ್ತು. ಆಗಾಗ ಬದಲಾಗುತ್ತಿದ್ದ ಪ್ಲ್ಯಾಂಟ್‌ಹೆಡ್‌ಗಳು, ಪ್ರೊಡಕ್ಷನ್ ಮ್ಯಾನೇಜರ್‌ಗಳು, ಬಂದವರೆಲ್ಲಾ ಮಾಡುತ್ತಿದ್ದ ಹೊಸ ನಿಯಮಗಳು, ಮ್ಯಾನ್‌ಪವರ್ ಅವಾಯ್ಡ್‌ ಸ್ಕೀಮ್‌ಗಳು, ಇಂಪ್ರೂವ್‌ಮೆಂಟ್ ಟಾಸ್ಕ್‌ಗಳು, ವ್ಯವಹಾರ ಸರಳೀಕರಣಕ್ಕೆ ನಡೆಯುತ್ತಿದ್ದ ಮೈಕ್ರೋ ಲೆವೆಲ್ಲಿನ ರಿವ್ಯೂಗಳಿಂದ ಸುಜಿತ್ ಅಳ್ಳಾಡಿ ಹೋಗಿದ್ದ. ದಿನವೂ ಪ್ರೊಡಕ್ಷನ್, ಪ್ಲ್ಯಾನಿಂಗ್, ಕಸ್ಟಮರ್ ಕಂಪ್ಲೇಂಟ್ ಅಂತೆಲ್ಲಾ ಮೀಟಿಂಗ್‌ನಲ್ಲಿ ಆಗುತ್ತಿದ್ದ ಮಂಗಳಾರತಿ ಬೇರೆ. ಹಗಲು ಹತ್ತು ಹನ್ನೊಂದು ತಾಸು ದುಡಿದಿದ್ದಲ್ಲದೆ ರಾತ್ರಿ ಹೊತ್ತು ಗೊತ್ತು ಇಲ್ಲದೆ ಫಾಲೋ ಮಾಡಿ ರೋಸಿಹೋಗಿದ್ದ. ಇಷ್ಟಾಗಿಯೂ ಪಾಸಿಟಿವ್ ರೆಸ್ಪಾನ್ಸ್‌ಗಿಂತ, ನೆಗೆಟಿವ್ ರೆಸ್ಪಾನ್ಸೇ ಜಾಸ್ತಿ ಬರುತ್ತಿತ್ತು. ಇದರಿಂದಲೂ ತತ್ತರಿಸಿ ಹೋಗಿದ್ದ. ಇದೆಲ್ಲದರ ಪರಿಣಾಮವೋ ಸುಜಿತ್ ತಾನೂ ಒತ್ತಡಕ್ಕೆ ಒಳಗಾಗಿದ್ದಲ್ಲದೆ, ತನ್ನ ಟೀಮಿನ ಮೇಲೂ ಒತ್ತಡ ಹೇರತೊಡಗಿದ. ಆದರೆ ‘ಮಾಡಿ ಇಲ್ಲ ಬಿಟ್ಟು ಹೋಗಿ’ ಎಂಬ ಮಾತು ಹೇಳುವುದು- ಕೇಳುವುದು ಎಲ್ಲರಿಗೂ ಸಾಮಾನ್ಯವೆಂಬಂತೆ ಆಗಿತ್ತು. ಹೀಗಾಗಿ ಸುಜಿತ್‌ಗೆ ಕಂಪನಿ ಮೇಲಿನ ವ್ಯಾಮೋಹ; ಮ್ಯಾನೇಜ್‌ಮೆಂಟ್‌ಗೆ ಸುಜಿತ್‌ ಮೇಲಿನ ಆಸಕ್ತಿ ಕಳೆದು ಹೋಗಿರುವುದು ಮೇಲ್ನೋಟಕ್ಕೆ ದಟ್ಟವಾಗಿ ಕಾಣುತ್ತಿತ್ತು.

ಇದೆಲ್ಲವನ್ನೂ ತುಂಬ ಹತ್ತಿರದಿಂದ ಗಮನಿಸಿದ್ದ ನಾಗರಾಜ, ಸುಜಿತ್ ಕಂಪನಿ ಬಿಟ್ಟರೂ ಬಿಡಬಹುದು ಅಚ್ಚರಿಯೇನಿಲ್ಲ ಅಂತ ಅಂದುಕೊಂಡು ನೊಂದುಕೊಂಡ. ಮನಸ್ಸಿಲ್ಲದ ಮನಸ್ಸಿನಿಂದ ಆ ಕಡೆ ಈ ಕಡೆ ತಿರುಗತೊಡಗಿದ.

ವಾರದ ಹಿಂದೆ ನಾಗರಾಜ, ಸುಜಿತ್‌ನಿಗೆ ಬಾಸ್ ಅನ್ನುವುದನ್ನೂ ಮರೆತು ನಾಲಿಗೆ ಸಡಿಲ ಬಿಟ್ಟು ಮಾತಾಡಿದ್ದ. ನಿನ್ನ ಕೈಲಿ ಏನೂ ಆಗಲ್ಲ, ಬರೀ ಬಂಡಲ್! ಅಂತೆಲ್ಲಾ ಆತನನ್ನು ನೋಯಿಸಲು ಎಲ್ಲ ಅಸ್ತ್ರ ಉಪಯೋಗಿಸಿ ಸಿಟ್ಟಿಳಿಸಿಕೊಂಡಿದ್ದ. ಈಗ ಅದೇ ಮರುಗುವಂತೆ ಮಾಡಿತ್ತು. ಒಂದು ರೀತಿಯ ಅಭದ್ರತೆ ಆತನನ್ನು ಕಾಡುತ್ತಿತ್ತು.

ಈ ಕಂಪನಿಯಲ್ಲಿ ಸುಜಿತ್ ಇರೋವರೆಗೂ ನನಗೆ ಯಾವ್ ಭಯನೂ ಇಲ್ಲ; ಯಾರಿಂದಲೂ ಏನೂ ಕಿತ್ಕೊಳಕ್ಕಾಗಲ್ಲ; ನಾನು ಹೆಂಗ್‌ ಬೇಕಾದ್ರೂ ಆಟ ಆಡಬಹುದು ಎಂಬ ಭಾವನೆಯಲ್ಲಿ ನಾಗರಾಜ ಇರುತ್ತಿದ್ದ. ವಿಚಿತ್ರವೆಂದರೆ ಇದೇ ನಾಗರಾಜ ಅವರಿವರ ಮುಂದೆ ಸುಜಿತ್‌ನನ್ನು ಆಡಿಕೊಂಡಿದ್ದೂ ಇದೆ. ಸಣ್ಣದಾಗಿ ಸುರುವಾದ ಸುಜಿತ್‌ನ ಬಗೆಗಿನ ಅಸಮಾಧಾನ ಬರಬರುತ್ತಾ ಜಾಸ್ತಿಯಾಗುತ್ತಲೆ ಹೋಗಿತ್ತು. ಇತ್ತೀಚೆಗೆ ಸುಜಿತ್ ವರ್ಕ್‌ಫ್ಲೋರ್‌ಗೆ ಬಂದಾಗ ನಮಸ್ಕಾರ ಹೇಳೋದಾಗಲಿ, ಹಾಯ್ ಅನ್ನುವುದಾಗಲಿ, ಸಣ್ಣ ನಗು ಚೆಲ್ಲುವುದಾಗಲಿ ನಿಲ್ಲಿಸಿದ್ದ. ಸುಜಿತನೇ ಬಂದು ಕುಶಲೋಪಚಾರ ನಡೆಸಿ ಏನಾದರೂ ಕೇಳಿದರೆ ಅಷ್ಟಕ್ಕೆ ಮಾತ್ರ ಉತ್ತರಿಸಿ ಸುಮ್ಮನಾಗುತ್ತಿದ್ದ. ನೀವು ನಿಮ್ಮ ಕೆಲಸ ಸಾಧಿಸಿಕೊಳ್ಳಲು ಮಾತ್ರ ನಮ್ಮನ್ನ ಬಳಸಿಕೊಳ್ಳುತ್ತೀರಿ ಎನ್ನುವ ಧಾಟಿಯಲ್ಲಿ ಮಾತಾಡುವುದು; ಕರೆದರೂ ಕೇಳಿಸಿಕೊಳ್ಳದಂತೆ ನಿಲ್ಲುವುದು ಸುರು ಮಾಡಿದ್ದ. ಇದೆಲ್ಲದರಿಂದ ಬೇಸತ್ತು ಸುಜಿತನೇ ಖುದ್ದಾಗಿ ಮೀಟಿಂಗ್ ಕರೆದು ವಿಚಾರಿಸಿದ್ದ. ‘ನೋಡು ನಾಗ, ನಿನ್ನ ನೋವು ಏನಂತ ನನಗೆ ಅರ್ಥ ಆಗುತ್ತೆ. ಆದರೆ ಈಗ ನನ್ನ ಕೈಲಿ ಏನೂ ಇಲ್ಲ. ನಿನ್ಗೂ ಗೊತ್ತು.

ಒಂದೊಳ್ಳೆ ಟೈಮ್‌ ಬರೋವರೆಗೂ ಸುಮ್ನೆ ಕಾಯಬೇಕು. ಆಗ ಎಲ್ಲ ಆಗುತ್ತೆ. ಹಿಂಗೆ ಯಾವಾಗಲೂ ಬೇಜಾರ್ ಮಾಡಿಕೊಂಡು ನಮಗೂ ಬೇಜಾರ್ ಮಾಡಬೇಡ ಅಂತ ಸಮಾಧಾನ ಮಾಡಿದ್ದ. ಅದಕ್ಕೆ ಪ್ರತಿಯಾಗಿ ‘ನಾನು ಅದರ ಬಗ್ಗೆ ವಿಚಾರ ಮಾಡದೇ ಬಿಟ್ಟೀನಿ. ನಾನ್ ಹೆಂಗಿದ್ರ ನಿಮ್ಗೇನ್?!‘ ಅಂತ ಕೇಳಿಬಿಟ್ಟಿದ್ದ. ಕೋಪಗೊಂಡ ಸುಜಿತ್ ಇಷ್ಟು ಹೇಳಿದ್ಮೇಲೂ ನಿನ್ಗರ್ಥಾಗ್ಲಿಲ್ಲಂದ್ರ ನಾನೇನ್ ಮಾಡಕ್ಕಾಗಲ್ಲ ಅಂತ ಅಂದು ಜೋರಾಗಿ ಕಿಟಕಿ ತೆಗೆದು, ರಪ್ ಅಂತ ಎ.ಸಿ ಆಫ್ ಮಾಡಿ, ದಢಾರ್ ಅಂತ ಬಾಗಿಲು ತೆರೆದು ಕಾನ್ಪರೆನ್ಸ್ ರೂಮಿನಿಂದ ಹೊರಬಂದಿದ್ದ. ಇದರಿಂದ ನಾಗರಾಜನೇನೂ ಬೇಸರ ಪಟ್ಟುಕೊಂಡಂತೆ ಕಾಣಲಿಲ್ಲ. ಈಗೀಗ ಸುಜಿತ್ ಬೇಸರ ಪಟ್ಟುಕೊಂಡರೆ; ಆತನಿಗೆ ಅಹಿತ ಅನ್ನುವ ಘಟನೆ ಏನಾದರೂ ನಡೆದರೆ ನಾಗರಾಜನಿಗೆ ವಿಲಕ್ಷಣ ನೆಮ್ಮದಿ ಸಿಗುತ್ತಿತ್ತು!

***

ಇವರಿಬ್ಬರದು ಈ ಕಂಪನಿಯಲ್ಲಿ ಏನಿಲ್ಲವೆಂದರೂ ಹತ್ತು- ಹನ್ನೊಂದು ವರ್ಷಗಳ ಒಡನಾಟ. ಅವರ ಆತ್ಮೀಯತೆಯ ಸೇತುವೆಗೆ ಬಿರುಕು ಕಂಡದ್ದು: ಒಂದು-ಒಂದೂವರೆ ವರ್ಷದ ಹಿಂದೆ. ನೋಡಿದವರು ಹೊಟ್ಟೆ ಉರಿದುಕೊಳ್ಳುವಂಥ ಆತ್ಮೀಯತೆ ಅವರಿಬ್ಬರದು. ಒಬ್ಬರ ಸಹಾಯದಿಂದ ಒಬ್ಬರು ವೃತ್ತಿಯಲ್ಲಿ ಏಳಿಗೆ ಕಂಡವರು. ಒಬ್ಬರ ನೆರವಿನಿಂದ ಒಬ್ಬರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡವರು. ಆದರೆ ಅದೆಲ್ಲಾ ಒಂದು ನೆನಪು ಎಂಬುವಂತೆ ಅವರ ಮನಸು ಮುರಿದು ಹೋಗಿದೆ. ಅವರು ದೂರವಾಗಲು ಅವರ ಆತ್ಮೀಯತೆ ಮೆರುಗು ಕಳೆದುಕೊಳ್ಳಲು ಸುಜಿತ್ ನಾಗರಾಜನಿಗಾಗಿ ಮಾಡಲಾಗದೇ ಉಳಿದ ಸಹಾಯವೊಂದು ಕಾರಣವಾಗಿತ್ತು.

ನಾಗರಾಜ ಎಸ್.ಎಸ್.ಎಲ್.ಸಿ ಗೆ ಓದು ನಿಲ್ಲಿಸಿದ್ದ. ಮುಂದೆ ಓದಲು ಆತನಿಗೆ ಆಸಕ್ತಿ ಇರಲಿಲ್ಲ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು, ಅಲ್ಲಲ್ಲಿ ಒಂದಿಷ್ಟು ವರ್ಷ ದುಡಿದು ಈ ಕಂಪನಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ. ಯಾವುದೋ ಕಾಂಟ್ರ್ಯಾಕ್ಟರ್ ಮೂಲಕ ಹೆಲ್ಪರ್ ಆಗಿ ಸೇರಿಕೊಂಡವನು ಒಂದೇ ವರ್ಷದಲ್ಲಿ ಚೆನ್ನಾಗಿ ಕೆಲಸ ಮಾಡಿ ಆಪರೇಟರ್ ಆಗಿ ಬಡ್ತಿ ಪಡೆದುಕೊಂಡಿದ್ದ.

ಆಗ ತಾನೆ ಎಂಜಿನಿಯರಿಂಗ್ ಮುಗಿಸಿದ್ದ ಸುಜಿತ್ ಅದೇ ಕಂಪನಿಗೆ ಕ್ಯಾಂಪಸ್ ಸೆಲೆಕ್ಟ್ ಆಗಿ; ಪ್ರೊಡಕ್ಷನ್ ಸೂಪರ್‌ವೈಸರ್ ಹುದ್ದೆಗೆ ನೇಮಕಗೊಂಡಿದ್ದ. ಕೆಲಸದ ಅನುಭವ ಇಲ್ಲದ ಸುಜಿತ್ ಪ್ರೊಡಕ್ಷನ್ ಏರಿಯಾ ಸುತ್ತಲೂ ಅಮಾಯಕನಂತೆ ಓಡಾಡಿಕೊಂಡಿದ್ದ. ಆಪರೇಟಿಂಗ್ ಮಾಡುತ್ತಿದ್ದ ನಾಗರಾಜ ಈತನನ್ನು ನೋಡಿ ಹತ್ತಿರ ಕರೆದು ಅದು ಇದು ಅಂತ ಮಾತಾಡಿ ತುಸು ಆಪ್ತನೆನಿಸಿಕೊಂಡ. ಉಳಿದವರಾರೂ ಸುಜಿತನ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಹಾಗಾಗಿ ಬೆಳಗ್ಗೆ ಬೇಗ ಬಂದವನೇ ನಾಗರಾಜನ ಹತ್ತಿರ ಒಂದಷ್ಟು ಮಾತಾಡಿ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದ. ನಾಗರಾಜನಿಂದ ತನಗೆ ತಿಳಿಯದೇ ಇದ್ದ ವಿಷಯದ ಬಗ್ಗೆ ತಿಳಿದುಕೊಳ್ಳುತ್ತಿದ್ದ. ಆತನೂ ತುಂಬ ಆತ್ಮೀಯವಾಗಿ ಹೇಳಿಕೊಡುತ್ತಿದ್ದ. ಸುಜಿತ್‌ಗೆ ಥೆರಾಟಿಕಲ್ ಜ್ಞಾನವಿತ್ತೆ ಹೊರತು ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿರಲಿಲ್ಲ. ನಾಗರಾಜ ಹೇಳಿದ ಅಂಶಗಳನ್ನು ನೀಟಾಗಿ ಬರೆದು ನೋಟ್ಸ್ ಮಾಡಿಕೊಳ್ಳುತ್ತಿದ್ದ.

ಸುಜಿತ್ ತಾನು ಎಂಜಿನಿಯರ್‌ ಆದರೂ ದರ್ಪದಲ್ಲಿ ಯಾವತ್ತೂ ನಾಗರಾಜನನ್ನು ಏಕವಚನದಲ್ಲಿ ಕರೆಯುತ್ತಿರಲಿಲ್ಲ. ಇವನಿಗೆ ಕೆಲಸ ಹೇಳಿಕೊಟ್ಟಿದ್ದೇ ನಾನು ಎನ್ನುವ ಕಾರಣಕ್ಕೋ ಏನೋ ನಾಗರಾಜ ಸುಜಿತನಿಗೆ ಸರ್ ಅನ್ನುವ ಪದವೇ ಬಳಸಲಿಲ್ಲ. ಹೆಸರಿಟ್ಟೇ ಕರೆಯುತ್ತಿದ್ದ. ಅದರ ಬಗ್ಗೆ ಸುಜಿತ್ ಎಂದೂ ವಿಚಾರ ಮಾಡಿದವನಲ್ಲ. ನಾಗರಾಜ ಹೇಳಿಕೊಟ್ಟ ಬೇಸಿಕ್ ವಿಷಯಗಳಿಂದ ತನ್ನ ಜ್ಞಾನ ವೃದ್ಧಿಸಿಕೊಂಡ. ಅವನ ಚುರುಕುತನ ಮತ್ತು ಆಸಕ್ತಿ ಕಂಡು ಡಿಪಾರ್ಟ್‌ಮೆಂಟ್ ಹೆಡ್‌ಗಳು ಪ್ರೊಡಕ್ಷನ್ ಇನ್‌ಚಾರ್ಜ್ ಆಗಿ ನೇಮಕ ಮಾಡಿದರು.

ಅದೇ ವೇಳೆಗೆ ಟೀಮ್ ಲೀಡರ್ ಆಗಿದ್ದ ಸೀನಿಯರ್ ಆಪರೇಟರ್ ಒಬ್ಬರು ಯಾವುದೋ ಕಾರಣಕ್ಕೆ ಕೆಲಸ ಬಿಟ್ಟು ಹೋದಾಗ ಆ ಕೆಲಸಕ್ಕೆ ಇನ್ನೊಬ್ಬರನ್ನು ನೇಮಿಸುವ ಜವಬ್ದಾರಿ ಸುಜಿತನ ಹೆಗಲಿಗಿತ್ತು. ಆಗ ಅನಾಯಸವಾಗಿ ಆಪ್ತನಾಗಿದ್ದ ನಾಗರಾಜನನ್ನೇ ನೇಮಕ ಮಾಡಿದ. ಇದರಿಂದ ಅದೇ ಹುದ್ದೆಯ ಆಕಾಂಕ್ಷಿಯಾಗಿದ್ದ ಮಾದೇವ ಇನ್ನಿತರ ಸೀನಿಯರ್ ಆಪರೇಟರ್‌ಗಳು ಗುಂಪು ಕಟ್ಟಿಕೊಂಡು ಬಂಡಾಯವೆದ್ದು ಪ್ರೊಡಕ್ಷನ್ ಮ್ಯಾನೇಜರ್‌ಗೆ ದೂರು ಸಲ್ಲಿಸಿದರು. ಆಗ ಸುಜಿತ್ ಹಿರಿಯ ಅಧಿಕಾರಿಗಳ ಮನವೊಲಿಸಿ ನಾಗರಾಜನ ಆಯ್ಕೆಯನ್ನು ಅಂತಿಮಗೊಳಿಸಿದ. ಇದರಿಂದ ಅವರಿಬ್ಬರ ಆತ್ಮೀಯತೆ ಇನ್ನಷ್ಟು ಗಟ್ಟಿಯಾಯಿತು.  ಟೀಮ್ ಲೀಡರ್ ಆಗಿ ನೇಮಕವಾದಾಗಿನಿಂದ ನಾಗರಾಜ ಸುಜಿತ್‌ನ ಬಲಗೈ ಬಂಟನಂತೆ ಇರತೊಡಗಿದ.

ಸುಜಿತ್‌ನ ಪ್ರೊಡಕ್ಷನ್ ಇಂಪ್ರೂವ್‌ಮೆಂಟ್ಸ್‌ನ ವಿಭಿನ್ನ ಆಲೋಚನೆಗಳೆಲ್ಲ ಜಾರಿಗೆ ಬರುತ್ತಿದ್ದದ್ದು ನಾಗರಾಜನ ಮೂಲಕವೇ. ದಿನಗಳೆದಂತೆ ಸುಜಿತ್: ಎಂಜಿನಿಯರ್, ಸೀನಿಯರ್ ಎಂಜಿನಿಯರ್, ಅಸಿಸ್ಟಂಟ್ ಮ್ಯಾನೇಜರ್ ಅಂತ ಬೆಳೆಯುತ್ತಲೇ ಹೋದ. ಇತ್ತ ಜಾಸ್ತಿ ಓದಿಕೊಂಡಿರದೇ ಇದ್ದ ನಾಗರಾಜ ಬರೀ ಟೀಮ್ ಲೀಡರ್ ಪೋಸ್ಟಿಗೆ ಸೀಮಿತವಾದ. ಆದರೆ ಪ್ರತಿ ವರ್ಷದ ಇನ್‌ಕ್ರಿಮೆಂಟ್‌ನಲ್ಲಿ ನಾಗರಾಜನಿಗೆ ಜಾಸ್ತಿಯೇ ಸಿಗುವಂತೆ ಸುಜಿತ್ ತುಂಬ ಮುತುವರ್ಜಿ ವಹಿಸುತ್ತಿದ್ದ.

ಸುಜಿತ್ ಹಂತ ಹಂತವಾಗಿ ಬೆಳೆದದ್ದು ಕಂಡು ಹೆಚ್ಚು ಖುಷಿ ಪಟ್ಟವರಲ್ಲಿ ನಾಗರಾಜ ಮೊದಲಿಗ. ಯಾಕಂದರೆ ಅವನು ಬೆಳೆದಷ್ಟೂ ತನ್ನ ಕೆಲಸದ ಭದ್ರತೆ ಮತ್ತು ಹೆಚ್ಚು ಆದಾಯದ ನಿರೀಕ್ಷೆ. ಇನ್ನೊಂದು ಕಡೆ ಹೊಸಬರ ಎದುರು ಸುಜಿತನ ಆಪ್ತ ಎಂದು ಗೌರವವೂ ಸಿಗುತ್ತಿತ್ತು.

ಮುಂದೆ ನಾಗರಾಜನಿಗೆ ಸುಜಿತ್ ಮೇಲಿನ ಅಭಿಮಾನ, ಗೌರವ ಕಡಿಮೆಯಾಗುತ್ತ ಬರುತ್ತದೆ. ಆತನನ್ನು ಸಂಶಯದಿಂದ ಕಾಣಲು ಶುರುಮಾಡುತ್ತಾನೆ. ಇದಕ್ಕೆ ಕಾರಣ ನಾಗರಾಜ ಸುಜಿತ್‌ನ ಮೇಲೆ ಇಟ್ಟುಕೊಂಡಿದ್ದ ದೊಡ್ಡ ನಿರೀಕ್ಷೆಯೊಂದು ಹುಸಿಯಾಗಿತ್ತು.

ಈಗೀಗ ಕಂಪನಿಯಲ್ಲಿ ಅವರ ಬಗ್ಗೆ ಬಗೆಬಗೆಯಾಗಿ ಮಾತುಗಳು ಕೇಳಿಬರುತ್ತಿವೆ. ಅವರಿಬ್ಬರ ಆತ್ಮೀಯತೆಯ ವ್ಯಾಖ್ಯಾನವು ಬರಿ ಸ್ವಾರ್ಥದ ನೆಲೆಯಲ್ಲಿ ಎಂದು ಮಾತಾಡಿಕೊಳ್ಳುತ್ತಾರೆ. ಯಾವುದು ಸತ್ಯ ಯಾವುದು ಸುಳ್ಳು...

ನಾಗರಾಜ ಒಳ್ಳೇ ಕೆಲಸಗಾರ ಆಗಿರಲಿಲ್ಲವಂತೆ, ದೊಡ್ಡ ಓತ್ಲ ಅಂತೆ, ತಾನೂ ಕೆಲಸ ಮಾಡುತ್ತಿರಲಿಲ್ಲ ಬೇರೆಯವರಿಗೂ ಮಾಡಲು ಬಿಡುತ್ತಿರಲಿಲ್ಲವಂತೆ, ಹೊಸದಾಗಿ ಸೇರಿಕೊಂಡವರ ಜೊತೆ ಕತೆ ಹೊಡಿಯೋದು ಈತನ ಖಯಾಲಿಯಂತೆ, ಸೂಪರ್‌ವೈಸರ್‌ಗಳ ಜತೆ ಆಪ್ತನಾದರೆ; ಕಡಿಮೆ ಕೆಲಸ ಮಾಡಿದರೂ ನಡಿಯುತ್ತದೆ ಎನ್ನುವ ಮನೋಭಾವದವನಂತೆ, ಸೂಪರ್‌ವೈಸರ್‌ಗಳೇನಾದರೂ ಬೈದರೆ ಹುಡುಗರನ್ನೆಲ್ಲ ಎತ್ತಿಕಟ್ಟಿ ಗುಂಪುಗಾರಿಕೆ ಮಾಡುತ್ತಿದ್ದನಂತೆ, ಬೇಕಂತಲೇ ತಪ್ಪು ಮಾಡಿ ಆ ತಪ್ಪುಗಳನ್ನು ಸೂಪರ್‌ವೈಸರ್‌ಗಳ ಮೇಲೆ ಹಾಕಿ ತಮಾಷೆ ನೋಡುತ್ತಿದ್ದನಂತೆ.

ರಾತ್ರಿ ಪಾಳಿಯಲ್ಲಿ ನಿದ್ದೆ ಮಾಡಲು ಚೆನ್ನಾಗಿರುವ ಟೂಲ್‌ಅನ್ನು, ಮೆಶೀನನ್ನು ಹಾಳು ಮಾಡುತ್ತಿದ್ದನಂತೆ, ಕ್ರಿಮಿನಲ್ ಮೈಂಡಿನ ನಾಗರಾಜನನ್ನು ಹ್ಯಾಂಡಲ್ ಮಾಡಲು ಸೂಪರ್‌ವೈಸರ್‌ಗಳು ಹೆಣಗಾಡುತ್ತಿದ್ದರಂತೆ, ಇವೆಲ್ಲವುಗಳನ್ನು ಸುಜಿತ್ ತಾನು ಹೊಸದಾಗಿ ಸೇರಿಕೊಂಡಾಗಲೇ ರಿಲೀವರ್‌ನಿಂದ ತಿಳಿದುಕೊಂಡಿದ್ದನಂತೆ. ಆತನನ್ನು ನಯವಾಗಿ ದಾರಿಗೆ ತರಲು ಪ್ರಯತ್ನಪಟ್ಟು ಸೋತು ಟೀಮ್ ಲೀಡರ್ ಅಂತ ಮಾಡಿ ಕೈ ತೊಳೆದುಕೊಂಡನಂತೆ. ಹೀಗೆಲ್ಲಾ ಜನ ಇನ್ನೊಂದು ಮಗ್ಗಲಲ್ಲಿ ಮಾತಾಡಿಕೊಳ್ಳುವುದು ಕೇಳಿ ಅದು ನಿಜವಿರಬಹುದೆ?! ಎನ್ನುವ ಸಂಶಯ ಮೂಡದೆ ಇರುತ್ತಿರಲಿಲ್ಲ.

ನಾಗರಾಜ ಹಾಗೆ ಮಾತಾಡಿಕೊಂಡವರ ಮೇಲೆ ಉರಿ ಕಾರುತ್ತಾನೆ. ಕಟ್ಟುಕತೆ ಎನ್ನುತ್ತಾನೆ. ಸುಜಿತ್ ನನ್ನ ಬಗ್ಗೆ ಹಾಗೆ ಯೋಚಿಸಲು ಸಾಧ್ಯವಿಲ್ಲ ಎಂದು ವಾದಿಸುತ್ತಾನೆ. ತಾನು ಕಂಪನಿಗಾಗಿ ಬೆವರು ಸುರಿಸಿದ್ದು, ಕೆಲಸದಲ್ಲಿ ಮೈಮರೆತು ಏಟು ಮಾಡಿಕೊಂಡಿದ್ದು ಕಣ್ಣು ತುಂಬಿಕೊಂಡು ವಿವರಿಸುತ್ತಾನೆ. ಆಗ ಕೇಳುಗರ ಮನಸ್ಸು ಅನುಕಂಪದ ಅಲೆಯಲ್ಲಿ ತೇಲಿಹೋಗುತ್ತದೆ.

ಯಾವಾಗ ತನ್ನ ನಿರೀಕ್ಷೆ ಹುಸಿಯಾಯಿತೋ; ಜನ ಆಡಿಕೊಂಡಂತೆ ಸುಜಿತ್‌ಗೆ ತನ್ನ ಬಗ್ಗೆ ನಕಾರಾತ್ಮಕ ಭಾವನೆಗಳಿದ್ದವೆ? ಎಂದು ತನಗೆ ತಾನೇ ಕೇಳಿಕೊಂಡು ಗೊಂದಲಕ್ಕೀಡಾಗುತ್ತಾನೆ.

ಹೀಗೆ ಎರಡು ವರ್ಷಗಳ ಹಿಂದೆ ಕಂಪನಿ ಮ್ಯಾನೇಜ್‌ಮೆಂಟ್ ಮಹತ್ತರ ಯೋಜನೆಯೊಂದನ್ನು ಜಾರಿಗೆ ತಂದಿತ್ತು. ಅದು ಹತ್ತು ವರ್ಷಗಳಿಂದ ದುಡಿಯುತ್ತಿರುವ ಪ್ರತಿಭಾವಂತ ಕಾರ್ಮಿಕರನ್ನು ಕಂಪನಿಯ ಅಪಾಯಿಂಟ್‌ ಜೊತೆ ಅಸಿಸ್ಟಂಟ್ ಸೂಪರ್‌ವೈಸರ್ ಆಗಿ ಬಡ್ತಿ ಕೊಡಬೇಕೆನ್ನುವುದು. ಆ ಜವಾಬ್ದಾರಿಯನ್ನು ಆಯಾ ಡಿಪಾರ್ಟ್‌ಮೆಂಟ್ ಮುಖ್ಯಸ್ಥರಿಗೆ ವಹಿಸಲಾಗಿತ್ತು. ಇದನ್ನು ತಿಳಿದುಕೊಂಡ ನಾಗರಾಜ ಲಾಟರಿ ಹೊಡೆದಷ್ಟೇ ಸಂಭ್ರಮಿಸಿದ. ಸುಜಿತನೇ ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್‌ನ ಉನ್ನತ ಸ್ಥಾನದಲ್ಲಿರುವಾಗ ತನಗೆ ಕಾಯಂ ಜೊತೆ ಬಡ್ತಿ ಪಕ್ಕಾ ಅಂತ ತೀರ್ಮಾನಿಸಿದ. ಆಗಲೇ ಆತನಿಗೆ ಕಂಪನಿಯ ಐಡಿ ಕಾರ್ಡ್, ಷೂ, ಯೂನಿಫಾರ್ಮ್ ಮೇಲೆಲ್ಲ ವ್ಯಾಮೋಹ ಹುಟ್ಟಿಕೊಂಡವು. ಪರ್ಮನೆಂಟ್ ಆಗಿಬಿಟ್ಟರೆ ಕೆಲಸ ಕಳೆದುಕೊಳ್ಳೋ ಭಯಾನೇ ಇರಲ್ಲ ಅಂತ ಹಗುರವಾದ.

ಹಾಗಾಗಿ ದಿನಕ್ಕೆರಡು ಬಾರಿ ಸುಜಿತ್ ಕ್ಯಾಬಿನ್‌ಗೆ ಓಡಾಡುವುದು, ಹೇಗಾದರೂ ಮಾಡಿ ಅಪಾಯಿಂಟ್ ಕೊಡಿಸು ಮಾರಾಯ ಅಂತ ಪದೆ, ಪದೆ ಗಮನಕ್ಕೆ ತರುವುದು; ನೀನು ಈ ಹಂತಕ್ಕೆ ಬರಲು ನಾನು ಹೇಗೆಲ್ಲಾ ಸಹಾಯ ಮಾಡಿದ್ದೀನಿ ಅಂತ ನೆನಪಿಸುವುದು ನಾಗರಾಜನ ದಿನಚರಿಯ ಭಾಗವೇ ಆಗಿ ಹೋಗಿತ್ತು. ಸುಜಿತ್ ವರ್ಕ್‌ಫ್ಲೋರ್‌ಗೆ ಬಂದರೆ ಇದ್ದ ಬದ್ದ ಕೆಲಸ ಬಿಟ್ಟು ಓಡಿಹೋಗಿ ಆತನ ಮುಂದೆ ಹಾಜರಾಗುವುದು; ಕೆಲಸದ ಬಗ್ಗೆ ಸೂಪರ್‌ವೈಸರ್‌ಗಳಿಗೇನಾದರೂ ಕೇಳಿದರೆ ತಾನೇ ಮೊದಲು ಪಟಪಟ ಅಂತ ಹೇಳಿ ಹಲ್ಲು ಕಿರಿದು ನಿಂತುಕೊಳ್ಳುತ್ತಿದ್ದ. ಇದರಿಂದ ಸೂಪರ್‌ವೈಸರ್‌ಗಳಿಗೆ ಇರುಸು ಮುರುಸು ಆದರೂ ಆತ ಲೆಕ್ಕಿಸುತ್ತಿರಲಿಲ್ಲ. ಸೂಪರ್‌ವೈಸರ್‌ಗಳು ‘ಬಕಿಟ್ ನನ್‌ಮಗ’ ಅಂತ ಮನಸ್ಸಿನಲ್ಲಿ ಬೈದುಕೊಂಡು ಸುಮ್ಮನಾಗುತ್ತಿದ್ದರು.

ಹೀಗೆ ಸುಜಿತ್‌ನನ್ನು ಮೆಚ್ಚಿಸಲು ಆತ ಸರ್ಕಸ್ ಮಾಡುವುದು ನೋಡಿ ವರ್ಕ್‌ಫ್ಲೋರಿನಲ್ಲಿ ಜನ ಮುಸಿ ಮುಸಿ ನಗುತ್ತಿದ್ದರು. ಇನ್ನು ಕೆಲವರು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. ಅದಾವುದನ್ನೂನಾಗರಾಜ ಕೇರ್ ಮಾಡುತ್ತಿರಲಿಲ್ಲ. ಇನ್ನೇನು ಅಪಾಯಿಂಟ್ ಸಿಕ್ಕೇ ಬಿಟ್ಟಿತು ಎನ್ನುವಂತೆ ಅವನು ಓಡಾಡುವ, ಮಾತಾಡುವ ಶೈಲಿ ಬದಲಾಯಿತು. ಸೂಪರ್‌ವೈಸರ್‌ಗಳು ಯಾವ ಲೆಕ್ಕ ಅನ್ನುವಂತೆ ಬೀಗತೊಡಗಿದ. ಸೆಕ್ಯೂರಿಟಿಗಳು ಮೈಮುಟ್ಟಿ ತಪಾಸಣೆ ಮಾಡುವಾಗ ಇನ್ನೇಸು ದಿನ, ಅಪಾಯಿಂಟ್ ಒಂದು ಬರಲಿ ಆಗ ನನ್ನ ಮೈಮುಟ್ಟಿ ನೋಡೋಣ ಎಂಬಂತೆ ಎದೆ ಉಬ್ಬಿಸಿ ನಿಲ್ಲುತ್ತಿದ್ದ. ಅಪಾಯಿಂಟ್ ಸಿಕ್ಕ ಮೇಲೆ ಜಾಸ್ತಿ ಸಂಬಳ, ಇನ್‌ಕ್ರಿಮೆಂಟ್‌ ಸಿಗುತ್ತೆ ತುಸು ಐಷಾರಾಮಿಯಾಗಿ ಬದುಕಬೇಕು ಎಂಬ ಕನಸುಗಳು ಚಿಗುರಿದವು. ಇನ್ಸೆಂಟಿವ್, ಬೋನಸ್, ಅಲೌವನ್ಸ್ ಅಂತ ದುಡ್ಡು ಬರುತ್ತಾ ಇರುತ್ತೆ. ಸೈಡಿಗೆ ಬಡ್ಡಿ ವ್ಯವಹಾರ ಮಾಡಬೇಕಂತಲೂ ಯೋಜನೆ ರೂಪಿಸಿಕೊಂಡಿದ್ದ.

ಆದರೆ ನಾಗರಾಜನ ಇವೆಲ್ಲಾ ಕನಸುಗಳು ಕನಸಾಗಿಯೇ ಉಳಿದದ್ದು; ಎಂ.ಡಿ ಕಡೆಯಿಂದ ಎಲ್ಲ ಶಿಫಾರಸುಗಳು ಅಪ್ರೂವ್ ಆಗಿ ಬಂದಾಗ. ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್‌ಅನ್ನು ಹೊರತುಪಡಿಸಿ ಬೇರೆಲ್ಲಾ ವಿಭಾಗಕ್ಕೂ ಒಬ್ಬರಿಗೆ ಕಾಯಂ ಜೊತೆ ಬಡ್ತಿಯನ್ನೂ ನೀಡಿದ್ದರು. ಇದರಿಂದ ಕುಪಿತನಾದ ನಾಗರಾಜ ಸುಜಿತನ ಮುಂದೆ ಮುಖ ಊದಿಸಿಕೊಂಡು ಕುಂತುಬಿಟ್ಟ. ‘ನಿರಾಶೆ ಬೇಡ ನಾಗರಾಜ. ಯಾಕೋ ಲೆಟರ್ ಡಿಲೇ ಆಗಿದೆ ಅನ್ಸುತ್ತೆ! ಖಂಡಿತ ನಿನ್ ಕೆಲಸ ಆಗುತ್ತೆ ತಲೆ ಕೆಡಿಸ್ಕೋಬೇಡ ನಾನ್ ಗ್ಯಾರಂಟಿ ಕೊಡ್ತಿನಿ’ ಅಂತ ಸಮಾಧಾನ ಮಾಡಿದರೂ ನಾಗರಾಜನ ಚಡಪಡಿಕೆ ಹೇಳತೀರದು. ಸುಜಿತನೇ ನೇರವಾಗಿ ಎಚ್.ಆರ್ ಗೆ ಸಂಪರ್ಕಿಸಿ ವಿಚಾರಿಸಿದಕ್ಕೆ ‘ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್ ಟಾರ್ಗೆಟ್ ರೀಚ್ ಮಾಡುವಲ್ಲಿ ವಿಫಲವಾಗಿದೆ ಮತ್ತು ಹೇಳಿಕೊಳ್ಳುವಂತ ಇಂಪ್ರೂವ್‌ಮೆಂಟ್ಸ್ ಏನೂ ಇಲ್ಲ. ಹಾಗಾಗಿ ಎಂ.ಡಿ ತಿರಸ್ಕರಿಸಿದರಂತೆ’ ಎನ್ನುವ ಸುಳಿವು ಕೊಟ್ಟರು.

ಅದಾಗಿಯೂ ಸುಜಿತ್ ಬೇರೆ ಬೇರೆ ಬಗೆಯಲ್ಲಿ ಪ್ರಯತ್ನ ಪಟ್ಟನಾದರೂ ಯಾವುದೇ ಫಲ ಸಿಗುವ ಸೂಚನೆ ಸಿಗಲಿಲ್ಲವಾದುದರಿಂದ ಕೈಚೆಲ್ಲಿ ಸುಮ್ಮನಾಗಿದ್ದ. ಇತ್ತ ನಾಗರಾಜ ಇದೇ ವಿಷಯವನ್ನು ಪದೆಪದೆ ಪ್ರಸ್ತಾಪಿಸಿ ರೋಸಿಹೋಗಿದ್ದ. ವರ್ಕ್‌ಫ್ಲೋರಿನಲ್ಲಿ ಈತನ ನಿರೀಕ್ಷೆ ಹುಸಿಯಾಗಿದ್ದಕ್ಕೆ ಗೇಲಿ ಮಾಡಿ ನಗುವುದು, ಮಾತಾಡಿಕೊಳ್ಳುವುದು ಕಂಡು ಮುಜುಗರದಿಂದ ಮರುಗಿದ. ಅಲ್ಲದೆ ಕೆಲವರು ‘ಏ...ಸುಜಿತ್ ಅವರು ನಾಗರಾಜನ ಹೆಸರು ಮ್ಯಾನೇಜ್‌ಮೆಂಟ್‌ಗೆ ಶಿಫಾರಸ್ಸೇ ಮಾಡಿರಲಿಲ್ಲವಂತೆ! ಈತನೇ ಖುದ್ದಾಗಿ ಎಂ.ಡಿ ಗೆ ಮೀಟ್‌ ಆಗಿ ನಮ್ಮ ಡಿಪಾರ್ಟ್‌ಮೆಂಟ್‌ನಲ್ಲಿ ಕಾಯಂ ಮಾಡುವಂತ, ಬಡ್ತಿ ಕೊಡುವಂತ ಕೆಲಸಗಾರರು ಯಾರೂ ಇಲ್ಲ ಅಂತ ಹೇಳಿ ನಾಗರಾಜನ ಬಾಯಿಗೆ ಮಣ್ಣು ಹಾಕಿದನಂತೆ’ ಎಂಬೆಲ್ಲಾ ಉಪ್ಪು– ಖಾರ ಬೆರೆಸಿದ ಮಾತುಗಳು ಚಲಾವಣೆ ಪಡೆದುಕೊಂಡವು. ಅವು ನಾಗರಾಜನಿಗೆ ಸುಳ್ಳು ಎನಿಸಿದರೂ ನಂಬತೊಡಗಿದ.

ಇಡೀ ದಿನ ಸುಜಿತನಿಗಾಗಿ ನಾಗರಾಜನ ಕಣ್ಣುಗಳು ಹುಡುಕುತ್ತಲೇ ಇದ್ದವು. ಆತ ಬಡ್ತಿ ಕೊಡಿಸದಿದ್ದರೂ, ಕಾಯಂ ಮಾಡಿಸದಿದ್ರೂರು ಪರವಾಗಿಲ್ಲ. ಇಲ್ಲೇ ಉಳಿದುಕೊಂಡರೆ ಸಾಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದ. ಅದೇಕೋ ಆತನಿಗೆ ಆರಂಭದ ದಿನಗಳು ಕಣ್ಣಮುಂದೆ ಬಂದವು. ಬೇರೆಯವರ ಮಾತಿಗೆ ಬೆಲೆ ಕೊಟ್ಟು ಸುಜಿತ್‌ನಿಗೆ ಹಾಗೆ ಮಾತಾಡಬಾರದಿತ್ತು ಅಂತ ಅನಿಸಿತು. ನಾನು ಏನೆಲ್ಲ ಮಾತಾಡಿದರೂ ತಿರುಗಿ ಒಂದು ಮಾತೂ ಆತ ಆಡಲಿಲ್ಲ. ನಾನು ಒಬ್ಬ ಸಾಮಾನ್ಯ ಕೆಲಸಗಾರ. ಆತ ಉನ್ನತ ಹುದ್ದೆಯಲ್ಲಿದ್ದರೂ ಅಂದಿದ್ದೆಲ್ಲ ಅನಿಸಿಕೊಂಡು ಸುಮ್ಮನಿದ್ದ ನನ್ನ ನೋವಿಗೆ ಬೆಲೆ ಕೊಟ್ಟು. ಎಂಥ ದೊಡ್ಡ ಮನುಷ್ಯ ಅಂತ ಆತ ಒಳಗೇ ಕುಗ್ಗಿ ಹೋದ. ಆತನ ಆತ್ಮೀಯತೆಯೋ, ಸ್ನೇಹವೊ, ಮಾನವೀಯತೆಯೋ... ನಾನು ನನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಬಯಸಿದ್ದೇ ತಪ್ಪು ಅಂತ ಅಂದುಕೊಂಡ. ಅವನಿಗರಿವಿರದೇ ಆತನ ಹೆಜ್ಜೆಗಳು ಸುಜಿತನ ಕ್ಯಾಬಿನಿನತ್ತ ಹೋಗಿ ನಿಲ್ಲುತ್ತಿದ್ದವು. ಆತ ಕಾಣದೆ ಏನೋ ಒಂಥರ ಕಸಿವಿಸಿಗೊಂಡು ಹಿಂತಿರುಗಿ ಬರುತ್ತಿದ್ದ.

ಸಂಜೆ ಆಗುತ್ತಿದ್ದಂತೆ ಸುಜಿತನ ಸೆಂಡಾಫ್‌ಗೆ ಜನ ಸೇರತೊಡಗಿದರು.

ಸೂಪರ್‌ವೈಸರ್‌ಗಳು, ಸಹೋದ್ಯೋಗಿಗಳು ಸಿಹಿ, ಹೂವಿನ ಹಾರ, ಶಾಲು, ಉಡುಗೊರೆ ತೆಗೆದುಕೊಂಡು ಹೋದರು. ಟೀಮ್ ಲೀಡರ್ ಆಗಿದ್ದ ನಾಗರಾಜನಿಗೂ ಆಹ್ವಾನವಿತ್ತು. ತಾನೂ ಆ ಜನರ ನಡುವೆ ಹೋಗಿ ಸೇರಿಕೊಂಡ. ಬೆಳಗ್ಗೆಯಿಂದ ಕಾಣದ ಸುಜಿತ್ ಅದಾಗಲೇ ಜನರ ಮಧ್ಯೆ ಬಿಳಿ ಅಂಗಿ, ಕಪ್ಪು ಪ್ಯಾಂಟ್ ಧರಿಸಿ ನಿಂತಿದ್ದ! ಇಂಗ್ಲಿಷ್‌ನಲ್ಲಿ ಏನೇನೋ ಹೇಳುವುದನ್ನು ಅರ್ಥವಾಗದಿದ್ದರೂ ಆಲಿಸಿದ. ಮಧ್ಯೆ ಮಧ್ಯೆ ನಾಗರಾಜ ತನಗೆ ಸಹಕರಿಸಿದ್ದನ್ನು ನೆನಪಿಸಿಕೊಂಡು ಭಾವುಕನಾದ. ಆಗ ನೆರೆದವರೆಲ್ಲಾ ನಾಗರಾಜನನ್ನು ನೋಡಿದರು. ಆತನಿಗೆ ಆತಂಕ, ಮುಜುಗರ, ಹೆಮ್ಮೆ ಒಮ್ಮೆಲೇ ಆವರಿಸಿ ಋಣಿ ಭಾವದಲ್ಲಿ ಮುಳುಗಿಹೋದ.

ಅಲ್ಲಿ ಹೆಚ್ಚು ನಿಲ್ಲಲಾಗದೆ ಹೊರ ಬಂದು ಕಂಪನಿಯ ಗಾರ್ಡನ್‌ ಕಡೆ ನಡೆದ. ಯಾಕೋ ಅವನಿಗೆ ಹೊರಗಿನ ಬಯಲು ಅಪರಿಚಿತವೆನಿಸಿತು.

ಪ್ರತಿಕ್ರಿಯಿಸಿ (+)